Saturday, 30 June 2018

ಹೊಟೆಲ್ ರವಾಂಡ(Hotel Rwanda)


IMDb:  https://www.imdb.com/title/tt0395169/?ref_=nv_sr_1


  ಆಫ್ರಿಕಾ ಎಂದ ಕೂಡಲೆ ನಮಗೆ ಥಟ್ಟನೆ ನೆನಪಾಗುವುದು ಎರಡು. ಕಾಡಿನ ಸಫಾರಿ ಮತ್ತು ಅಲ್ಲಿನ ಜನರ ಬಡತನ, ಹಸಿವು. ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನೋಡುವ ಹವ್ಯಾಸ ಉಳ್ಳವರಿಗೆ ಅಲ್ಲಿನ ಕೆಲವು ಆಂತರಿಕ ಸಮಸ್ಯೆಗಳ ಬಗ್ಗೆ ಸ್ಥೂಲವಾಗಿ ಒಂದು ಚಿತ್ರಣವೂ ಇರಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳು ಅಬ್ಬರದಿಂದ ವರದಿಯಾಗುವಂತೆ, ಆಫ್ರಿಕಾದ ದೇಶಗಳ ಬಗ್ಗೆಯೂ ವರದಿ ಆದರೆ ಎಷ್ಟೋ ಜೀವಹಾನಿ ತಪ್ಪಿಸಬಹುದು. ಆದರೆ ಅದೊಂದು ಶಾಪಗ್ರಸ್ತ ನಾಡು ಎನಿಸುತ್ತದೆ. ಅಲ್ಲಿರುವ ಜನರು ಮನುಷ್ಯರೇ ಅಲ್ಲವೇನೋ ಎಂಬ ಉದಾಸೀನದ ಭಾವನೆ ಹೊರಗಿನ ಜಗತ್ತಿಗೆ ಮೇಲ್ನೋಟಕ್ಕಲ್ಲದಿದ್ದರೂ ಇದ್ದೇ ಇದೆ. ಯಾರೂ ಅಲ್ಲಿನ ದೇಶಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

  ಜಗತ್ತಿನ, ಅದರಲ್ಲೂ ವಿಶ್ವಸಂಸ್ಥೆಯ ನಿರ್ಲಕ್ಷ್ಯದಿಂದ, ತಪ್ಪಿಸಬಹುದಾಗಿದ್ದಂತ ಒಂದು ದುರಂತ 1994ರಲ್ಲಿ ನಡೆದೇ ಹೋಯಿತು. ಆಫ್ರಿಕಾದಲ್ಲಿ ಉಗಾಂಡದ ದಕ್ಷಿಣಕ್ಕೆ ಇರುವ ಈ ಪುಟ್ಟ ದೇಶದಲ್ಲಿ 1994ರಲ್ಲಿ ನಡೆದ ಜನಾಂಗೀಯ ಘರ್ಷಣೆಯಿಂದ ಸುಮಾರು 8 ಲಕ್ಷ ಜನರ ಬಲಿಯಾಯಿತು. ರವಾಂಡದಲ್ಲಿ ಎರಡು ಪಂಗಡಗಳು- ಹುಟು ಮತ್ತು ತೂಟ್ಸಿ(Hutu and Tutsi). ಐತಿಹಾಸಿಕವಾಗಿ ತೂಟ್ಸಿ ಜನಗಳು ಅಲ್ಪಸಂಖ್ಯಾತರಾಗಿದ್ದರೂ, ಆಳುವ ಪಂಗಡವಾಗಿತ್ತು. ಹುಟು ಜನರು ಬಹುಸಂಖ್ಯಾತರಾಗಿದ್ದು ರೈತರು, ಕೂಲಿ ಕಾರ್ಮಿಕರು ಮತ್ತು ಇತರೆ ಆರ್ಥಿಕವಾಗಿ ದುರ್ಬಲ ಜನರನ್ನು ಒಳಗೊಂಡಿತ್ತು. ಈ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಆಳುವವರು ಮತ್ತು ಆಳಲ್ಪಡುವವರು ಎಂದಷ್ಟೇ ಆಗಿತ್ತು. ಹಾಗಾಗಿ ಯಾರಾದರೂ ಹುಟುವೊಬ್ಬ ಆರ್ಥಿಕವಾಗಿ ಬೆಳೆದರೆ ಅವನು ನಿಧಾನವಾಗಿ ಸಾಮಾಜಿಕ ಸ್ಥಾನಮಾನ ಗಳಿಸುತ್ತ ತೂಟ್ಸಿ ಗುಂಪಿಗೆ ಸೇರಿಕೊಳ್ಳುತ್ತಿದ್ದ. ಇಷ್ಟು ಸರಳವಾಗಿದ್ದ ಈ ಒಂದು ವ್ಯತ್ಯಾಸವನ್ನು ಜಟಿಲಗೊಳಿಸಿದ್ದು, ಜರ್ಮನ್ ಮತ್ತು ಬೆಲ್ಜಿಯನ್ ರಾಜಾಡಳಿತ. ಸ್ವಾತಂತ್ರ್ಯ ಪೂರ್ವದಲ್ಲಿ ರವಾಂಡ ಬೆಲ್ಜಿಯಂ ದೇಶದ ವಸಾಹತಾಗಿತ್ತು. ಮೊದಲನೆ ವಿಶ್ವಯುದ್ಧ ಮುಗಿದ ಮೇಲೆ ವರ್ಸೆಯ ಒಪ್ಪಂದದಂತೆ(Treaty of Versaille), ಜರ್ಮನಿಯ ಆಡಳಿತದಲ್ಲಿದ್ದ ರವಾಂಡ-ಉರುಂಡಿ(Rwanda-Urundi) ಎಂಬ ವಸಾಹತನ್ನು ಬೆಲ್ಜಿಯಂ ದೇಶಕ್ಕೆ ಒಪ್ಪಿಸಲಾಗುತ್ತದೆ. ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಮತ್ತು ಹೆಚ್ಚಿನ ಜನರ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ಬೆಲ್ಜಿಯನ್ ರಾಜಾಡಳಿತ ತೂಟ್ಸಿ ರಾಜಮನೆತನಗಳಿಗೆ ಮಣೆಹಾಕಿ ಅವರಿಗೆ ಪಾಶ್ಚಾತ್ಯ ಶಿಕ್ಷಣ, ಉಡುಗೆ-ತೊಡುಗೆ ಎಲ್ಲವನ್ನೂ ಕೊಟ್ಟಿತು. ಇದು ಸಾಲದೆಂಬಂತೆ 1926ರಲ್ಲಿ ಹುಟು ಮತ್ತು ತೂಟ್ಸಿ ಜನಗಳನ್ನು ಗುರುತಿಸಲು ಗುರುತಿನ ಚೀಟಿಗಳನ್ನು ವಿತರಿಸಲು ಆರಂಭಿಸಿತು. ಬೆಲ್ಜಿಯನ್ ರಾಜಾಡಳಿತ ಒಬ್ಬನನ್ನು ಹುಟು ಅಥವಾ ತೂತ್ಸಿಯೆಂದು ದೃಢಪಡಿಸಲು ಮೂಗಿನ ಅಳತೆ, ಮುಖದ ಉದ್ದ ಹೀಗೆ ಏನೇನೋ ಮಾನದಂಡಗಳನ್ನು ತಂದಿತು. ಈ ಒಂದು ಘಟನೆ ಅಲ್ಲಿಯ ತನಕ ಎರಡೂ ಗುಂಪುಗಳ ನಡುವೆ ಇದ್ದ ಸರಳ ಆರ್ಥಿಕ ವ್ಯತ್ಯಾಸವನ್ನು ಸಂಕೀರ್ಣಗೊಳಿಸಿ ಅವರ ನಡುವೆ ಇದ್ದ ಗೆರೆಯನ್ನು ಗೋಡೆಯಾಗಿ ಬದಲಿಸಿತು. ಇದರಿಂದ ಹುಟುಗಳಿಗೆ ತೂಟ್ಸಿ ರಾಜಮನೆತನಗಳ ಮೇಲಿದ್ದ ಸಿಟ್ಟು, ಅಸಹನೆ ಜನಾಂಗಿಯ ದ್ವೇಷಕ್ಕೆ ತಿರುಗಿ ತಲೆತಲಾಂತರಗಳವರೆಗೂ ಮುಂದುವರೆಯುವಂತೆ ಮಾಡಿತು. ಸ್ವಾತಂತ್ರ್ಯ ಸಿಕ್ಕ ನಂತರ(1961-62) ರವಾಂಡ ಮತ್ತು ಬುರುಂಡಿ ಎಂದು ಎರಡು ದೇಶಗಳಾಗಿ, ರವಾಂಡದಲ್ಲಿ ಹುಟು ಕ್ರಾಂತಿಯಾಗಿ ಹುಟು ಬಹುಸಂಖ್ಯಾತ ಆಡಳಿತ ಸ್ಥಾಪಿತವಾಯಿತು ಮತ್ತು ಬುರುಂಡಿಯಲ್ಲಿ ತೂಟ್ಸಿ ಆಡಳಿತ ಉಳಿಯಿತು. ಸ್ವಾತಂತ್ರ್ಯಾನಂತರ ಹಲವಾರು ತೂಟ್ಸಿಗಳು(ಹೆಚ್ಚಾಗಿ ರಾಜಮನೆತನದವರು ಮತ್ತು ಇತರ ಪ್ರಭಾವಿ ಕುಟುಂಬಗಳು) ರವಾಂಡ ದೇಶವನ್ನು ತೊರೆದು ಉಗಾಂಡ ದೇಶ ಸೇರಿ ಅಲ್ಲಿಂದ ಮತ್ತೆ ರವಾಂಡದ ಮೇಲೆ ನಿಯಂತ್ರಣ ಪಡೆಯಲು ಹೋರಾಟ ಮುಂದುವರೆಸುತ್ತಾರೆ. 

ರವಾಂಡ ದೇಶದಲ್ಲಿ ಕೊಡಲಾಗುತ್ತಿದ್ದ ಗುರುತಿನ ಚೀಟಿ

  ಸುಮಾರು ಮೂವತ್ತು ವರ್ಷಗಳ ಕಾಲ ಈ ಎರಡೂ ಗುಂಪುಗಳ ನಡುವೆ ಸಂಘರ್ಷ ಆಗುತ್ತಲೇ ಇರುತ್ತದೆ. 90ರ ದಶಕದ ಹೊತ್ತಿಗೆ ತೂಟ್ಸಿ ಗುಂಪಿನ ರವಾಂಡನ್ ಪೇಟ್ರಿಯಾಟಿಕ್ ಫ್ರಂಟ್(FPR- Front Patriotique Rwandais/ Rwandan Patriotic Front) ರವಾಂಡ ದೇಶದ ಮೇಳೆ ದಾಳಿ ಮಾಡಿ ಉತ್ತರದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾರೆ. ಫ್ರೆಂಚ್ ಮತ್ತು ಜೈರಿಯನ್(ಈಗಿನ ಕಾಂಗೋ) ಪಡೆಗಳ ಸಹಾಯದೊಂದಿಗೆ ರವಾಂಡ ಸರ್ಕಾರ ಮತ್ತು RPF ನಡುವೆ ಕದನ ವಿರಾಮ ಘೋಷಣೆಯಾಗುತ್ತದೆ. ಅಲ್ಲಿಂದ 93ರವರೆಗೆ ರವಾಂಡ ಅಧ್ಯಕ್ಷ ಜುವೆನಿಲ್ ಹಬ್ಯಾರಿಮಾನ ತೂಟ್ಸಿ RPF ಬಂಡುಕೋರರನ್ನು ಹತ್ತಿಕ್ಕಲು ಇಂಟರ್ ಹಾಮ್ವೆ(Interhamve- “Those who stand together”) ಎಂಬ ಸಶಸ್ತ್ರ ನಾಗರೀಕ ಪಡೆಯನ್ನು ಸೃಷ್ಟಿಸಿ ತರಬೇತಿ ಕೊಡುತ್ತಾನೆ. ಇದರ ಜೊತೆಜೊತೆಯಲ್ಲೇ ರವಾಂಡದಲ್ಲಿ ಬಹುಪಕ್ಷೀಯ(ಹುಟು-ತೂಟ್ಸಿ ಒಳಗೊಂಡ) ಸರ್ಕಾರದ ಸೃಷ್ಟಿಯನ್ನು ತಡೆಯುತ್ತಾನೆ. ಫೆಬ್ರವರಿ 93ರ ಅವಧಿಗೆ RPF ಪಡೆ ರಾಜಧಾನಿ ಕಿಗಾಲಿಯ ಹೊರವಲಯಕ್ಕೆ ತಲುಪಿದಾಗ ಹಲವಾರು ತಿಂಗಳ ಮಾತುಕತೆ ನಡೆಸಿ ಆಗಸ್ಟ್ 93ರಲ್ಲಿ ಅಧ್ಯಕ್ಷ ಹಬ್ಯಾರಿಮಾನ ಮತ್ತು RPF ನಡುವೆ ಶಾಂತಿ ಒಪ್ಪಂದ ಸಹಿ ಹಾಕಲಾಗುತ್ತದೆ. ಇದರನ್ವಯ ರವಾಂಡದಿಂದ ವಲಸೆ ಹೋಗಿದ್ದ ಜನರಿಗೆ(ಹುಟು ಮತ್ತು ತೂಟ್ಸಿ) ಮರಳಿ ಬರಲು ಅವಕಾಶ ಮಾಡಿಕೊಡಲಾಗುತ್ತದೆ. ಇದೆಲ್ಲವನ್ನೂ ವಿಶ್ವಸಂಸ್ಥೆಯ ಪಡೆಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ. ಇಷ್ಟಾದರೂ ಹಬ್ಯಾರಿಮಾನ ಬಹುಪಕ್ಷೀಯ ಸರ್ಕಾರ ರಚನೆಯಾಗುವುದನ್ನು ಮಾರ್ಚ್ 94ರವರೆಗೆ ತಡೆಯುತ್ತಾನೆ. ಇನ್ನೇನು ಅಂತರ್ಯುದ್ಧ ಆರಂಭವಾಗುತ್ತದೆ ಎಂದು ಸೂಚನೆ ಸಿಕ್ಕ ಹಲವಾರು ಮಾನವ ಹಕ್ಕು ಹೋರಾಟಗಾರರು ರವಾಂಡ ಬಿಟ್ಟು ವಲಸೆ ಹೋಗುತ್ತಾರೆ. ಏಪ್ರಿಲ್ 6, 1994ರಲ್ಲಿ ಕಿಗಾಲಿ ಏರ್ಪೋರ್ಟ್ ನ ಬಳಿ ಹಬ್ಯಾರಿಮಾನ ಮತ್ತು ಬುರುಂಡಿಯ ಅಧ್ಯಕ್ಷ ಸಿಪ್ರಿಯೆನ್ ಎಂಟಾರ್ಯಮಿರ(Cyprien Ntaryamira) ಇದ್ದ ವಿಮಾನವನ್ನು ಹೊಡೆದುರುಳಿಸಲಾಗುತ್ತದೆ. ಈ ಒಂದು ಘಟನೆಯಿಂದ ಮದ್ದಿನ ರಾಶಿಗೆ ಕಿಡಿ ಹಾರಿಸಿದಂತಾಗುತ್ತದೆ. ವಿಮಾನದ ಮೇಲೆ ದಾಳಿ ಮಾಡಿದವರು ಯಾರು ಎಂದು ತಿಳಿಯದಿದ್ದರೂ, ಒಂದು ಗುಂಪು ಇನ್ನೊಂದನ್ನು ದೂಷಿಸಿ ಯುದ್ಧ ಪ್ರಾರಂಭವಾಗಲು ಅವಕಾಶ ಮಾಡಿಕೊಡುತ್ತದೆ. ತೂಟ್ಸಿ ಮತ್ತು ಮಧ್ಯಮಾರ್ಗಗಾಮಿ(moderate) ಹುಟುಗಳನ್ನು ಕೊಲ್ಲಲು ರೇಡಿಯೋದಲ್ಲಿ ಹುಟು ತೀವ್ರವಾದಿಗಳು ಜನಗಳಿಗೆ ಸಂದೇಶ ಕೊಡುತ್ತಾರೆ. ಏಪ್ರಿಲ್ 7, 1994ರಿಂದ ರವಾಂಡದಲ್ಲಿ ಜನಾಂಗಿಯ ಅಂತರ್ಯುದ್ಧ ಪ್ರಾರಂಭವಾಗುತ್ತದೆ. ಇಂಟರ್ ಹಾಮ್ವೆ ಮತ್ತು ರವಾಂಡ ಸಶಸ್ತ್ರ ಪಡೆ(FAR- Forces armées rwandaises/ Rwandan Armed Forces) ಸೇರಿ ರೋಡ್ ಬ್ಲಾಕ್ ಗಳನ್ನು ನಿರ್ಮಿಸಿ ಮನೆ ಮನೆಗೂ ಹೋಗಿ ತೂಟ್ಸಿ ಮತ್ತು ಮಧ್ಯಮಾರ್ಗಗಾಮಿ ಹುಟುಗಳನ್ನು ಕೊಲ್ಲಲು ಪ್ರಾರಂಭಿಸುತ್ತಾರೆ. ಇಲ್ಲಿ ಶುರುವಾಗುವುದೇ ಹೊಟೆಲ್ ರವಾಂಡ ಸಿನೆಮಾದ ಕಥೆ. 


  ಈ ಸಿನೆಮಾದ ಬಗ್ಗೆ ನನಗೆ ಇಷ್ಟವಾದ ವಿಷಯವೆಂದರೆ, ಹಾಲಿವುಡ್ ನವರು ಆಫ್ರಿಕಾದ ಒಂದು ಪುಟ್ಟ ದೇಶದ ಸಮಸ್ಯೆಯೊಂದರ ಬಗ್ಗೆ ಇಷ್ಟು ದೊಡ್ಡ ಸಿನೆಮಾ ಮಾಡಿ, ಈ ದೇಶದ ಬಗ್ಗೆಯೇ ಗೊತ್ತಿರದ ಜನಗಳಿಗೆ(ನನ್ನನ್ನೂ ಒಳಗೊಂಡಂತೆ) ಈ ಜನಾಂಗೀಯ ಘರ್ಷಣೆಯ ಪರಿಚಯ ಮಾಡಿಸಿದ್ದು. ಈ ಚಿತ್ರ ಹೊಟೆಲ್ ಮಿ ಕೊಲ್ಲೀನ್(Hotel Mille Colline) ನ ಮ್ಯಾನೇಜರ್ ಆಗಿದ್ದ ಪಾಲ್ ರುಸೆಸಬಗಿನ(Paul Rusesabagina) ಬರೆದಿರುವ “An Ordinary Man” ಪುಸ್ತಕದ ಮೇಲೆ ಆಧರಿಸಿದೆ. ಸ್ವತಃ ತಾನು ಹುಟುವಾಗಿದ್ದರೂ ಆಶ್ರಯ ಬೇಡಿ ಬಂದ ಸುಮಾರು 1268 ತೂಟ್ಸಿ ಮತ್ತು ಇತರ ಜನಗಳಿಗೆ ಪಾಲ್ ಹೊಟೆಲ್ ನಲ್ಲಿ ಬಚ್ಚಿಟ್ಟು ಕಾಪಾಡಿದ ಕಥೆ. ಹಾಲಿವುಡ್ ನ ‘ಸಹಜ’ ಶೈಲಿಯಲ್ಲಿ ಒಬ್ಬ ನಾಯಕನನ್ನು ಸೃಷ್ಟಿಸಿ(ಪಾಲ್ ರುಸೆಸಬಗಿನ ಪಾತ್ರದಲ್ಲಿ ಡಾನ್ ಕೀಡಲ್), ಆತ ಅಸಾಧ್ಯ ಪರಿಸ್ಥಿತಿಗಳಲ್ಲೂ ಎಲ್ಲವನ್ನು ಮೀರಿ ಗೆದ್ದು ಬರುವಂತೆ ಚಿತ್ರಿಸಲಾಗಿದೆ. ಹಾಗಾಗಿ ನೈಜತೆಯನ್ನು ನಿಖರವಾಗಿ ತೋರಿಸುವಲ್ಲಿ ಸ್ವಲ್ಪ ಎಡವಿರಬಹುದು(eg., ಪಾಲ್ ಈ ಗಲಭೆ ಆರಂಭವಾದನಂತರ ಹೊಟೆಲ್ ಮಿ ಕೊಲ್ಲೀನ್ ಗೆ ಸೇರಿಕೊಳ್ಳುವುದು. ಆದರೆ ಚಿತ್ರದಲ್ಲಿ ಆತ ಗಲಭೆಗೂ ಮುಂಚಿನಿಂದಲೇ ಅಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂದು ತೋರಿಸಲಾಗಿದೆ.) ಮತ್ತು ಈ ಚಿತ್ರ ಕೇವಲ ಪಾಲ್ ನ ದೃಷ್ಟಿಕೋನದಿಂದಷ್ಟೇ ಚಿತ್ರಿಸಿಲಾಗಿರುವುದರಿಂದ ಈ ಸಂಘರ್ಷದಲ್ಲಿ ಪಾಲ್ ನ ಹೊರತಾಗಿ ಬೇರೆಯವರ ಅನುಭವ ಹೇಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಅಸ್ಪಷ್ಟತೆಯನ್ನು ಗೊಂದಲಮಯವಾಗಿಸುವ, ಪಾಲ್ ನ ಕಥೆಯ ಸಂಪೂರ್ಣ ವಿರುದ್ಧದ ದೃಷ್ಟಿಕೋನದ, ಅದೇ ಹೊಟೆಲ್ ನಲ್ಲಿ ಆಶ್ರಯ ಪಡೆದ ತೂಟ್ಸಿಯೊಬ್ಬನ ಪುಸ್ತಕವೂ ಉಂಟು(Inside The Hotel Rwanda – Edouard Kayihura). ಮತ್ತು ವಿಶ್ವಸಂಸ್ಥೆಯ ಪರವಾಗಿ ನಿಯೋಜಿತಗೊಂಡ, ರವಾಂಡದ ಅಂತರ್ಯುದ್ಧದ ಅವಧಿಯಲ್ಲಿ ಎಲ್ಲವನ್ನೂ ಅಸಹಾಯಕರಾಗಿ ನಿಂತು ನೋಡಿದ, ಕೆನೆಡಾದ ಜನರಲ್ ರೋಮಿಯೋ ಡಲೈರ್(Lt.Gen. Romeo Dallaire) ರ ಪುಸ್ತಕ “Shake Hands With The Devil” ಕೂಡ ಈ ಘಟನೆಯ ಮೇಲೆ ಅವರದೇ ದೃಷ್ಟಿಕೋನದಿಂದ ಬೆಳಕು ಚೆಲ್ಲುತ್ತದೆ. ಅದೇನೇ ಇದ್ದರೂ ಜನಾಂಗೀಯ ಯುದ್ಧ ನಡೆದದ್ದು ಮತ್ತು ಅದರ ಬಗ್ಗೆ ಸರಿಯಾದ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದ್ದು ಮಾತ್ರ ನಿಜ. ಇದಿಷ್ಟನ್ನು ಈ ಚಿತ್ರ ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದೆ. 


  ಚಿತ್ರ RTLM ರೇಡಿಯೋದಲ್ಲಿ ತೂಟ್ಸಿಗಳನ್ನು ದೇಶ ಬಿಟ್ಟು ಕಳಿಸಬೇಕು ಎನ್ನುವ ಸಂದೇಶ ಬಿತ್ತರವಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ನಿಧಾನವಾಗಿ ದೃಶ್ಯ 1994ರ ಕಿಗಾಲಿಯ ರಸ್ತೆಗಳ ದೃಶ್ಯದೊಂದಿಗೆ ತೆರೆದುಕೊಳ್ಳುತ್ತದೆ. ನಮ್ಮ ಭಾರತದ ಮಾರುಕಟ್ಟೆ ಬೀದಿಗಳಲ್ಲಿ ಇರುವಂತೆಯೇ ಇಕ್ಕಟ್ಟು, ಟ್ರಾಫಿಕ್ಕು. ಪಾಲ್ ತನ್ನ ಸಹಾಯಕ ದೂಬೆನೊಂದಿಗೆ ಕಿಗಾಲಿ ಏರ್ಪೋರ್ಟ್ ಗೆ ತೆರಳಿ ಅಲ್ಲಿ ತನ್ನ ಹೊಟೆಲ್ಲಿಗಾಗಿ ಬಂದಂತ ಕೆಲವು ವಸ್ತುಗಳನ್ನು ತರಲು ಹೊರಟಿರುತ್ತಾನೆ. ಏರ್ಪೋರ್ಟ್ ತಲುಪುತ್ತಿದ್ದಂತೆ ಅಲ್ಲಿನ ಕಾವಲುಪಡೆಯ ಅಧಿಕಾರಿ ಪಾಲ್ ನತ್ತ ತಿರುಗಿ ನಗುತ್ತಲೇ, ಪಾಲ್ ಅವನಿಗೆ ಸ್ವಲ್ಪ ಹಣ ಕೊಟ್ಟು ಮೆಚ್ಚಿಸುತ್ತ ಮುಂದೆ ಸಾಗುತ್ತಾನೆ. ಮತ್ತೆ ವಿಮಾನದಿಂದ ಸಾಮಾನು ಇಳಿಸಿಕೊಟ್ಟವನಿಗೂ ಕೈ ಬೆಚ್ಚಗೆ ಮಾಡಿ ದೂಬೆನೊಂದಿಗೆ ಹೊರಡುತ್ತಾನೆ. ಕಾರಿನಲ್ಲಿ ತಾನು ಕ್ಯೂಬಾದಿಂದ ತರಿಸಿದ ಸಿಗಾರ್ ಗಳಿಗೆ ಒಂದಕ್ಕೆ 10000 ಫ್ರಾಂಕ್ ಗಳ ಬೆಲೆಯಿದ್ದು ಆದರೆ ತನಗೆ ಅವು ಇನ್ನೂ ಬೆಳೆಬಾಳುವಂತವು ಎಂದಾಗ ಪಾಲ್ ಸಹಾಯಕ ಬೆರಗಾಗಿ ಯಾಕೆ ಎಂದು ಕೇಳುತ್ತಾನೆ. ಶ್ರೀಮಂತರಿಗೆ ಸುಮ್ಮನೆ 10000 ಫ್ರಾಂಕ್ ಬೆಲೆಬಾಳುವ ಸಿಗಾರ್ ಎಂದರೆ ಅವರಿಗೆ ಅದು ದೊಡ್ದದೆನಿಸುವುದಿಲ್ಲ. ಆದರೆ ಅದೇ ಆ ಸಿಗಾರ್ ಜಗತ್ತಿನ ಅತ್ಯುತ್ತಮ ಕೊಹಿಬಾ ಸಿಗಾರ್ ಎಂದು ಹೇಳಿ ಕೊಟ್ಟರೆ ಮೆಚ್ಚಿ ಅದನ್ನು ಸೇದುತ್ತಾರೆ. ಆಗ ಅದನ್ನು ತಮ್ಮ ಸ್ಟೈಲ್ ಎನ್ನುವಂತೆ ಶ್ರೀಮಂತರು ಭಾವಿಸಿ ಬಳಸುತ್ತಾರೆ ಎಂದು ಪಾಲ್ ತನ್ನ ಹೊಟೆಲ್ ವ್ಯಾಪಾರದ ಚತುರತೆಯನ್ನು ತೋರಿಕೊಳ್ಳುತ್ತಾನೆ. ಅಲ್ಲಿಂದ ಇಬ್ಬರೂ ತಮ್ಮ ಹೊಟೆಲ್ಲಿಗೆ ಬೇಕಾದ ಇನ್ನಷ್ಟು ಸಾಮಾನು ತರಲು ವ್ಯಾಪಾರಿ ಜಾರ್ಜ್ ರುಟಗಾಂಡ ಬಳಿಗೆ ಹೋಗುತ್ತಾರೆ. ಜಾರ್ಜ್ ಮಾತನಾಡುತ್ತ ಪಾಲ್ ಗೆ ಪಾಲಿಟಿಕ್ಸ್ ಸೇರಲು ಅದು ಒಳ್ಳೆಯ ಕಾಲವೆಂದೂ, ಪಾಲ್ ಗೂ ಅವನೊಡನೆ ಇಂಟರ್ ಹಾಮ್ವೆಯ ಪ್ರಚಾರ ಮೆರವಣಿಗೆಗಳಿಗೆ ಬರಬೇಕು ಎಂದು ಹೇಳುತ್ತಾನೆ. ಅದಕ್ಕೆ ಪಾಲ್ ತನಗೆ ಹೊಟೆಲಿನಲ್ಲಿ ಬಹಳ ಕೆಲಸವಿದ್ದು ಇಂತಹ ವಿಷಯಗಳಿಗೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ಜಾರ್ಜ್ ನ ಸಲಹೆಯನ್ನು ಸೂಕ್ಷ್ಮವಾಗಿ ತಳ್ಳಿಹಾಕುತ್ತಾನೆ. ಹೊಟೆಲ್ಲಿಗೆ ಬೇಕಾದ ಬಿಯರ್ ಅನ್ನು ಗಾಡಿಗೆ ಲೋಡ್ ಮಾಡಲು ಹುಡುಗರೆಲ್ಲ ಕೆಲಸ ಮಾಡುತ್ತಿದ್ದಾಗ ಒಬ್ಬ ಒಂದು ದೊಡ್ಡ ಡಬ್ಬ ಬೀಳಿಸಿ ಅದರಲ್ಲಿ ಇದ್ದ ಮಚ್ಚುಗಳೆಲ್ಲ ಹೊರೆಗೆ ಬೀಳುತ್ತದೆ. ಅದನ್ನು ನೋಡಿ ಗಾಬರಿಯಾದರೂ ತೋರಿಕೊಳ್ಳದ ಪಾಲ್ ಇದೆಲ್ಲ ಏನು ಎಂಬಂತೆ ಜಾರ್ಜ್ ಕಡೆಗೆ ನೋಡಿದಾಗ, ಜಾರ್ಜ್ ಇವನ್ನು ಚೀನಾದಿಂದ ಬಹಳ ಕಡಿಮೆ ದರಕ್ಕೆ ತರಿಸಿದ್ದು, ಇವನ್ನು ಮುಂದಾಗಲಿರುವ ಕ್ರಾಂತಿಯಲ್ಲಿ ಬಳಸುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಲ್ಲಿಂದ ಹೊರಟ ಮೇಲೆ ದೂಬೆ ಜಾರ್ಜ್ ಒಬ್ಬ ಕೆಟ್ಟ ಮನುಷ್ಯ ಎಂದಾಗ ಪಾಲ್ ಇಂತವರು ಬಹಳ ದಿನ ಹೀಗೆ ಮುಂದುವರೆಯಲು ಸಾಧ್ಯವಿಲ್ಲ, ಇವೆಲ್ಲಕ್ಕೂ ಒಂದು ಮುಕ್ತಾಯ ಬೇಗ ಬರಲಿದೆ ಎಂದು ಹೇಳಿ ಏನಿದ್ದರೂ ಅವನೊಡನೆ ನಮ್ಮದು ವ್ಯಾಪರವಷ್ಟೇ ಎಂದು ಹೇಳುತ್ತಾನೆ. ಬೀದಿಯಲ್ಲಿ ಇಂಟರ್ ಹಾಮ್ವೆ ಮೆರವಣಿಗೆ ನೋಡಿ ದೂಬೆ ಗಾಬರಿಗೊಂಡು ಆ ಮೆರವಣಿಗೆಯಲ್ಲಿ ತನ್ನ ಅಕ್ಕ ಪಕ್ಕದ ಮನೆಯವರೂ ಇದ್ದು ಅವರಿಗೆ ತಾನು ಒಬ್ಬ ತೂಟ್ಸಿ ಎಂದು ಗೊತ್ತು, ಹಾಗಾಗಿ ತನಗೆ ಏನಾದರೂ ಮಾಡಿಯಾರು ಎಂದು ಹೆದರಿ ಕಾರಿನಲ್ಲೇ ಅಡಗಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಪಾಲ್ ಅವನಿಗೆ ಧೈರ್ಯ ಹೇಳಿ ಬಚ್ಚಿಟ್ಟು ಕೊಂಡರೆ ಅವರಿಗೆ ಅನುಮಾನ ಬರುತ್ತದೆ, ಹಾಗಾಗಿ ಸುಮ್ಮನೆ ಅವರತ್ತ ನಗುತ್ತ ಕೂರು, ಅವರೆಲ್ಲ ಹೊರಟುಹೋಗುತ್ತಾರೆ ಎಂದು ಸಮಾಧಾನ ಹೇಳಿ ಮೆರವಣಿಗೆ ಮುಗಿದ ಮೇಲೆ ಅಲ್ಲಿಂದ ಹೊರಟು ಹೊಟೆಲ್ ತಲುಪುತ್ತಾರೆ. ಅಲ್ಲಿ ಪಾಲ್ ಹೊಟೆಲ್ ಗೆ ಬಂದ ಜನರಲ್ ಬಿಜಿಮನ್ಗು ಮತ್ತು ವಿಶ್ವಸಂಸ್ಥೆಯ ಕರ್ನಲ್ ಆಲಿವರ್(ಜನರಲ್ ರೋಮಿಯೋ ಡಲೈರ್ ರನ್ನು ಕರ್ನಲ್ ಆಲಿವರ್ ಎಂಬ ಕಾಲ್ಪನಿಕ ಪಾತ್ರದಲ್ಲಿ ತೋರಿಸಲಾಗಿದೆ) ಅವರನ್ನು ವಿಚಾರಿಸಿಕೊಂಡು ಜನರಲ್ ಬಿಜಿಮನ್ಗುಗಾಗಿ ಎರಡು ಸ್ಕಾಚ್ ಬಾಟಲಿಗಳನ್ನು ತೆಗೆದಿಟ್ಟು ಮನೆಗೆ ತೆರಳುತ್ತಾನೆ. 


  ಮನೆಗೆ ಬಂದು ತನ್ನ ಹೆಂಡತಿ, ಮಕ್ಕಳು ಮತ್ತು ಮನೆಗೆ ಬಂದಿದ್ದ ಹೆಂಡತಿಯ ತಮ್ಮನ ಕುಟುಂಬ ಎಲ್ಲರನ್ನೂ ಮಾತನಾಡಿಸುತ್ತಾನೆ. ರಾತ್ರಿ ಊಟ ಮುಗಿದ ನಂತರ ಪಾಲ್ ತನ್ನ ಹೆಂಡತಿ ತಾತಿಯಾನ ಮತ್ತು ಆಕೆಯ ಸಹೋದರ ಮತ್ತು ಆತನ ಹೆಂಡತಿಯ ಜೊತೆ ಕುಳಿತಿದ್ದಾಗ ಪಾಲ್ ನ ಮಗ ಬಂದು ಹೊರಗೆ ಸೈನಿಕರು ಬಂದಿದ್ದಾರೆ ಎಂದು ಭಯದಿಂದ ಬಂದು ಹೇಳುತ್ತಾನೆ. ಎಲ್ಲರೂ ಗಾಬರಿಗೊಂಡು ಹೋಗಿ ಮೆಲ್ಲಗೆ ಗೇಟ್ ತೆರೆದು ಹೊರಗೆ ನಡೆಯುತ್ತಿರುವುದನ್ನು ಇಣುಕಿ ನೋಡುತ್ತಾರೆ. ಎದುರು ಮನೆಯ ವಿಕ್ಟರ್ ಒಬ್ಬ ತೂಟ್ಸಿಯಾಗಿದ್ದು, ತೂಟ್ಸಿ ಬಂಡುಕೋರರಿಗೆ ಗೂಢಚಾರಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವನನ್ನು ಮನೆಯಿಂದ ಹೊರಗೆಳೆದು ಸೈನಿಕರು ಹೊಡೆಯುತ್ತಿರುತ್ತಾರೆ. ಇದನ್ನು ನೋಡಿ ಎಲ್ಲರೂ ಗಾಬರಿಯಾಗಿ ಒಳಬಂದು ಸೇರಿಕೊಳ್ಳುತ್ತಾರೆ. ವಿಕ್ಟರ್ ನನ್ನು ತನಗೆ ಗೊತ್ತಿರುವ ಆರ್ಮಿಯ ಅಧಿಕಾರಿಗಳ ಸಹಾಯ ಕೇಳಿ ಬಿಡಿಸಲಾಗುವುದಿಲ್ಲವೇ ಎಂದು ಹೆಂಡತಿ ಕೇಳಿದಾಗ ಪಾಲ್ ಇಂತಹ ವಿಷಯಗಳಲ್ಲಿ ತಾನು ಅಸಹಾಯಕ ಎಂದು ಹೇಳುತ್ತಾನೆ. ತಾನು ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳನ್ನು ಮೆಚ್ಚಿಸುವುದು ನಾಳೆ ತನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ಅವರ ಸಹಾಯ ಕೇಳಲು. ಬೇರೆಯವರಿಗಾಗಿ ಸಹಾಯ ಕೇಳಿದರೆ ನನ್ನ ಕುಟುಂಬಕ್ಕೆ ನಾಳೆ ಸಹಾಯ ಸಿಗದಿರಬಹುದು. ತನಗೆ ತನ್ನ ಕುಟುಂಬದ ಸುರಕ್ಷತೆ ಬಹಳ ಮುಖ್ಯ ಎಂದು ಹೆಂಡತಿಯನ್ನು ಸಮಾಧಾನಪಡಿಸುತ್ತಾನೆ. 


  ಎರಡೂ ಗುಂಪುಗಳ ನಡುವೆ ಶಾಂತಿ ಏರ್ಪಟ್ಟಿದ್ದು, ಈ ಶಾಂತಿ ಒಪ್ಪಂದವನ್ನು ಅಧ್ಯಕ್ಷ ಹಬ್ಯಾರಿಮಾನ ತಾನ್ಜೆನಿಯ ದೇಶದಲ್ಲಿ ಸಹಿ ಹಾಕುತ್ತಿದ್ದಾರೆ ಎಂದು ಕರ್ನಲ್ ಆಲಿವರ್ ಮಿ ಕೊಲ್ಲೀನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳುತ್ತಾರೆ. ವಿಶ್ವಸಂಸ್ಥೆಯ ಪರಿಶ್ರಮದಿಂದ ರವಾಂಡದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದು ಹೇಳುತ್ತಾರೆ. ತೂಟ್ಸಿಗಳನ್ನು ಹತ್ಯೆ ಮಾಡಲಾಗುತ್ತದೆ ಎಂಬ ವದಂತಿಗಳಿಗೆ ಹೆದರಿ ಪಾಲ್ ಹೆಂಡತಿಯ ಸಹೋದರ ಥಾಮಸ್ ಮತ್ತು ಆತನ ಹೆಂಡತಿ ಪಾಲ್ ಗೆ ತಾವು ಊರು ಬಿಟ್ಟು ಹೋಗುತ್ತಿರುವುದಾಗಿಯೂ, ತಮ್ಮೊಡನೆ ಪಾಲ್ ತನ್ನ ಹೆಂಡತಿ ತಾತಿಯಾನಳನ್ನೂ ಕಳಿಸುವಂತೆ ಕೇಳಿಕೊಳ್ಳುತ್ತಾರೆ. ಹುಟುವಾದ ಪಾಲ್ ಗೆ ಏನೂ ಆಗದು ಆದರೆ ತೂಟ್ಸಿಗಳಾದ ತಮಗೆ ಏನಾದರು ಅಪಾಯ ಆಗಬಹುದು ಎಂದು ಹೇಳಿದಾಗ ಅದನ್ನೆಲ್ಲ ಅಲ್ಲಗಳೆದು ಪಾಲ್ ಈಗ ವಿಶ್ವಸಂಸ್ಥೆ ಮತ್ತು ವಿಶ್ವ ಪತ್ರಿಕಾ ಸಮೂಹ ನೋಡುತ್ತಿರುವಾಗ ಇಂತಹ ಘಟನೆಗಳು ಆಗುವುದಿಲ್ಲ ಎಂದು ಸಮಾಧಾನ ಹೇಳಿ ಅವರನ್ನು ಊರು ಬಿಡದಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿ ಅವರಿಬ್ಬರೂ ಮನೆಗೆ ತೆರಳುತ್ತಾರೆ. ರಾತ್ರಿ ಕೆಲಸ ಮುಗಿಸಿ ವಿದ್ಯುತ್ ಇಲ್ಲದೆ ಕತ್ತಲೆಯಾಗಿದ್ದ ರಸ್ತೆಯಲ್ಲಿ ಮನೆಗೆ ಬರುವಾಗ ರೇಡಿಯೋ ಸಂಪೂರ್ಣ ಮೌನವಾಗಿದ್ದು ಕೆಲವು ಹುಟು ತೀವ್ರವಾದಿಗಳು ಎಲ್ಲರಿಗೂ ಮನೆಯೊಳಗಡೆಯೇ ಇರುವಂತೆ ಮೈಕ್ ನಲ್ಲಿ ಕೂಗುತ್ತ ಹೋಗುತ್ತಿರುತ್ತಾರೆ ಮತ್ತು ಕೆಲವು ಮನೆಗೆ ಬೆಂಕಿ ಹಾಕಲಾಗಿರುತ್ತದೆ. ಹೆದರಿ ಪಾಲ್ ಮನೆ ಸೇರಿ ಮೆಲ್ಲಗೆ ತನ್ನ ಟಾರ್ಚ್ ತೆಗೆದು ಮನೆಯೊಳಗೆ ನಡೆದು ನೋಡಿದಾಗ ಒಂದು ಕೋಣೆಯಲ್ಲಿ ಹೆಂಡತಿಯ ಜೊತೆ ಅಕ್ಕ ಪಕ್ಕದ ಮನೆಯವರೆಲ್ಲರೂ ಸೇರಿ ಮೂಲೆಯಲ್ಲಿ ಕುಳಿತಿರುತ್ತಾರೆ. ಯಾಕೆ ಹೀಗೆ ಎಲ್ಲಾ ಕುಳಿತಿದ್ದೀರಿ ಎಂದು ಪಾಲ್ ಕೇಳಿದಾಗ ನ್ಯೂಸ್ ನಲ್ಲಿ ಯಾರೋ ಅಧ್ಯಕ್ಷರ ವಿಮಾನ ಹೊಡೆದುರುಳಿಸಿದರು ಎಂದು ಪ್ರಸಾರವಾಯಿತು ಎಂದಾಗ ಎಲ್ಲ ಹೆದರಿ ಇಲ್ಲಿ ಸೇರಿದೆವು ಎಂದು ಹೇಳುತ್ತಾರೆ. ಎಲ್ಲರನ್ನೂ ಹೊರೆಗಿನ ಕೋಣೆಯಲ್ಲಿ ಕೂರಲು ಹೇಳಿ ಪಾಲ್ ಹೆಂಡತಿಗೆ ಯಾಕೆ ಇವರೆಲ್ಲ ಹೀಗೆ ನನ್ನ ಬಳಿ ಓಡಿಬರುತ್ತಾರೆ ಎಂದು ಕೇಳಿದಾಗ ಆಕೆ ಇವರೆಲ್ಲ ನಂಬುವ ಏಕೈಕ ಹುಟು ನೀನೊಬ್ಬನೇ ಎಂದು ಹೇಳಿ ಸಮಾಧಾನಪಡಿಸುತ್ತಾಳೆ. ಮಾರನೆ ದಿನ ಆರ್ಮಿಯ ಕೆಲ ಸೈನಿಕರು ಒಬ್ಬ ಕ್ಯಾಪ್ಟನ್ ನೇತೃತ್ವದಲ್ಲಿ ಪಾಲ್ ಮನೆಗೆ ಬಂದು ಒಳಗಿದ್ದವರೆನ್ನೆಲ್ಲ ಹೊರಗೆ ಕರೆದಾಗ, ಎಲ್ಲರೂ ಇನ್ನೂ ತಮ್ಮ ಕಥೆ ಮುಗಿದೇಹೋಯಿತು ಎಂದು ಹೆದರುತ್ತಾರೆ. ಆಗ ಪಾಲ್ ಹೊರ ಬಂದು ಆ ಕ್ಯಾಪ್ಟನ್ ನನ್ನು ಏನೆಂದು ವಿಚಾರಿಸಿದಾಗ, ಪಾಲ್ ನ ಗುರುತಿನ ಚೀಟಿ ನೋಡಿ ಆತ ಈ ಮುಂಚೆ ಹೊಟೆಲ್ ಡಿಪ್ಲೋಮ್ಯಾಟ್ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ತನಗೆ ಅಲ್ಲಿನ ಸೇಫ್ ನಲ್ಲಿ ಇಟ್ಟಿರುವ ಎಲ್ಲಾ ರೂಮ್ ಕೀಲಿಕೈ ತೆಗೆದುಕೊಡಲು ತನ್ನೊಡನೆ ಬರುವಂತೆ ಹೇಳುತ್ತಾನೆ. ಅದಕ್ಕೆ ಪಾಲ್ ತನ್ನ ಕುಟುಂಬ ಬಿಟ್ಟು ಬರಲು ಸಾಧ್ಯವಿಲ್ಲ ಎಂದಾಗ ಅವರನ್ನೂ ಒಂದು ಕಾರಿನಲ್ಲಿ ಕರೆತರಲು ಅಪ್ಪಣೆ ಕೊಡುತ್ತಾನೆ. ಹೊಟೆಲ್ ನಲ್ಲಿ ತನಗೆ ಬೇಕಾದ್ದು ಸಿಕ್ಕ ನಂತರ ಕ್ಯಾಪ್ಟನ್ ಪಾಲ್ ಜೊತೆಗೆ ಬಂದವರಲ್ಲಿ ತೂಟ್ಸಿಗಳು ಇದ್ದಾರೆಂದೂ, ಪಾಲ್ ಅವರಿಗೆ ಆಶ್ರಯ ಕೊಟ್ಟು ದೇಶದ್ರೋಹದ ಕೆಲಸ ಮಾಡುತ್ತಿದ್ದಾನೆಂದು ಹೊಡೆಯುತ್ತಾನೆ. ಪಾಲ್ ಏನೇನೋ ಹೇಳಿ ಕಡೆಗೆ ಅವರನ್ನೆಲ್ಲ ಉಳಿಸಿದರೆ ದುಡ್ಡು ಕೊಡುವುದಾಗಿ ಹೇಳಿ, ಹೇಳಿದಂತೆ ದುಡ್ಡು ಕೊಟ್ಟು ಅವರನ್ನೆಲ್ಲ ಬಿಡಿಸಿಕೊಂಡು ಹೊಟೆಲ್ ಮಿ ಕೊಲ್ಲೀನ್ ಗೆ ಕರೆದೊಯ್ಯುತ್ತಾನೆ. ತನಗೆ ಇಷ್ಟವಿಲ್ಲದಿದ್ದರೂ ಹೆಂಡತಿ ಇವರನ್ನೆಲ್ಲ ತನ್ನೊಡನೆ ಕರೆದುಕೊಂಡು ಬಂದಳಲ್ಲ ಎಂದು ಪಾಲ್ ಕಣ್ ಸಂಜ್ಞೆಯಲ್ಲೇ ಹೆಂಡತಿಗೆ ಬಯ್ಯುತ್ತಾನೆ.


  ಹೊಟೆಲ್ ತಲುಪಿ ತನ್ನ ಕುಟುಂಬಕ್ಕೆ ಮತ್ತು ಜೊತೆಗೆ ಬಂದ ನೆರೆಹೊರೆಯವರಿಗೆ ರೂಮುಗಳನ್ನು ಕೊಡಿಸಿ ಹೊಟೆಲ್ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಒಬ್ಬ ಕೆಲಸಗಾರ ಗ್ರೆಗ್ವಾರ್ (Gregoire), ಹೊಟೆಲ್ ಉಸ್ತುವಾರಿ ವಹಿಸಿದ್ದ ಯುರೋಪಿಯನ್ ಮ್ಯಾನೇಜರ್ ಬೇರೊಂದು ಹೊಟೆಲ್ ನೋಡಿಕೊಳ್ಳಲು ಹೋದನಂತರ ಎಲ್ಲ ಕೆಲಸ ಬಿಟ್ಟು ಪ್ರೆಸಿಡೆನ್ಶಿಯಲ್ ಸ್ವೀಟ್ ಗೆ ಹೋಗಿ ಸೇರಿಕೊಂಡಿರುತ್ತಾನೆ. ಇದನ್ನು ತಿಳಿದ ಪಾಲ್ ವಿಚಾರಿಸಲು ಹೋದಾಗ ಗ್ರೆಗ್ವಾರ್ ಪಾಲ್ ಹೊಟೆಲಿನಲ್ಲಿ ತೂಟ್ಸಿ ‘ಜಿರಳೆ’ಗಳನ್ನ ಬಚ್ಚಿಟ್ಟಿರುವುದನ್ನ ಹೊರಗೆ ಹೇಳಬೇಕಾಗುತ್ತದೆ ಎಂದ ಮೇಲೆ ಪಾಲ್ ಸುಮ್ಮನೆ ವಾಪಸ್ಸಾಗುತ್ತಾನೆ. ಇಷ್ಟರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಮೇಡಂ ಆರ್ಚರ್ ಒಂದು ಅನಾಥಾಶ್ರಮದಿಂದ ಕೆಲವು ಮಕ್ಕಳನ್ನು ಕರೆತಂದು ಪಾಲ್ ಸುಪರ್ದಿಗೆ ಒಪ್ಪಿಸಿ ಅವರನ್ನು ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾಳೆ. ಇನ್ನೂ ಹತ್ತಾರು ಮಕ್ಕಳಿದ್ದು, ಅವರನ್ನು ಕರೆತರಲು ಮತ್ತೆ ಹೋಗುತ್ತಿರುವುದಾಗಿ ಹೇಳುತ್ತಾಳೆ. ಆಗ ಪಾಲ್ ಆಕೆಗೆ ಸಾಧ್ಯವಾದರೆ, ದಾರಿಯಲ್ಲಿ ಹಾಗೆ ತನ್ನ ಭಾಮೈದ ಥಾಮಸ್ ಮತ್ತು ಅವನ ಕುಟುಂಬದ ಬಗ್ಗೆ ವಿಚಾರಿಸಿ ಅವರು ಸಿಕ್ಕರೆ ತನ್ನೊಡನೆ ಕರೆತರಲು ಕೇಳಿಕೊಳ್ಳುತ್ತಾನೆ. ಪಾಲ್ ಮಕ್ಕಳನ್ನೆಲ್ಲ ಒಂದು ಕೋಣೆಯಲ್ಲಿರಿಸಿ ಅವರಿಗೆ ಸ್ನಾನಮಾಡಿಸಿ ಉಪಚರಿಸಲು ಕೆಲವು ಕೆಲಸಗಾರರನ್ನು ನೇಮಿಸುತ್ತಾನೆ. 

  ಹೊರಗೆ ಕರ್ನಲ್ ಆಲಿವರ್ ನ ಇಂಟರ್ವ್ಯೂ ಮಾಡಿದ ನಂತರ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಜ್ಯಾಕ್ ದಗ್ಲಿಶ್ (Joaquin Phoenix) ಹೊಟೆಲ್ ಹೊರಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬರುವ ಎಂದು ತನ್ನ ರಿಪೋರ್ಟರ್ ಸಹೋದ್ಯೋಗಿಯನ್ನು ಕೇಳಿದಾಗ ಆತ, ಹೊರಗೆ ಬಹಳ ಅಪಾಯಕಾರಿಯಾಗಿದ್ದು ವಿಶ್ವಸಂಸ್ಥೆಯವರು ಹೊರಗೆ ಸುರಕ್ಷಿತ ಎಂದು ಹೇಳುವವರೆಗೂ ಹೋಗುವುದು ಬೇಡ ಎಂದು ಹೇಳುತ್ತಾನೆ. ಆದರೆ ಇದನ್ನು ಕೇಳದ ಜ್ಯಾಕ್ ತನ್ನ ಸಹಾಯಕನೊಂದಿಗೆ ಹೊಟೆಲ್ ಹೊರಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ರೆಕಾರ್ಡ್ ಮಾಡಿತರಲು ಹೋಗುತ್ತಾನೆ. ಪಾಲ್ ಕರ್ನಲ್ ಆಲಿವರ್ ಗೆ ಹೊಟೆಲಿಗೆ ಈಗ ಬಂದಿರುವ ನಿರಾಶ್ರಿತರನ್ನೆಲ್ಲ ಕರೆದುಕೊಂಡು ತನ್ನ ನಿರಾಶ್ರಿತರ ಶಿಬಿರಗಳಿಗೆ ಕರೆದೊಯ್ಯುವಂತೆ ಕೇಳಿಕೊಳ್ಳುತ್ತಾನೆ. ಆದರೆ ಅದಕ್ಕೊಪ್ಪದ ಕರ್ನಲ್ ಅಲ್ಲಿ ಎಲ್ಲೂ ಜಾಗವಿಲ್ಲವೆಂದೂ, ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಿರಾಶ್ರಿತರನ್ನು ಕರೆದೊಯ್ಯುವುದಾಗಿ ಭರವಸೆ ಕೊಡುತ್ತಾನೆ. ಕೆಲಸ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಕೆಲಸಗಾರರಿಗೆ ಹೋಗಿ ಕೆಲಸ ಮಾಡಲು ಪಾಲ್ ದಬಾಯಿಸಿದಾಗ ಯಾರೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆಗ ಪಾಲ್ ಬೆಲ್ಜಿಯಂನಲ್ಲಿದ್ದ ಹೊಟೆಲ್ ಮುಖ್ಯಸ್ಥರಿಗೆ ಕರೆ ಮಾಡಿ ಸಧ್ಯದ ಪರಿಸ್ಥಿತಿಯನ್ನೆಲ್ಲಾ ವಿವರಿಸಿ ಹೊಟೆಲ್ ಜವಾಬ್ದಾರಿ ತನಗೊಪ್ಪಿಸಿರುವುದಕ್ಕೆ ಒಂದು ಅಧಿಪತ್ರ ಕಳಿಸಿಕೊಡಲು ಕೇಳಿಕೊಳ್ಳುತ್ತಾನೆ. ಈ ಗಲಭೆ ಉಂಟಾಗಿರುವುದಕ್ಕೆ ಹೊಟೆಲ್ ಮಂಡಳಿ ಹೊಟೆಲನ್ನು ತಾತ್ಕಾಲಿಕವಾಗಿ ಮುಚ್ಚಿಬಿಡಲು ಯೋಚಿಸಿತ್ತಿರುವುದಾಗಿ ಹೊಟೆಲ್ ಮುಖ್ಯಸ್ಥ ಹೇಳಿದಾಗ, ಪಾಲ್ ಅವರಿಗೆ ಹಾಗೆ ಮಾಡುವುದು ಹೊಟೆಲ್ ಹೆಸರಿಗೆ ಧಕ್ಕೆ ತರುವುದು ಎಂದು ಹೇಳಿ ಹೊಟೆಲ್ ಮುಚ್ಚದಿರಲು ಕೇಳಿಕೊಳ್ಳುತ್ತಾನೆ. ಪಾಲ್ ಮಾತನ್ನು ಒಪ್ಪಿ ಹೊಟೆಲ್ ಮುಖ್ಯಸ್ಥ ಅವನಿಗೆ ಮತ್ತೇನಾದರೂ ಬೇಕಿದ್ದಲ್ಲಿ ಕರೆ ಮಾಡುವಂತೆ ಹೇಳುತ್ತಾರೆ. ಪಾಲ್ ಪಡೆದ ಅಧಿಪತ್ರ ನೋಡಿದ ನಂತರ ಎಲ್ಲರೂ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. 

  ಒಂದು ದಿನ ಇದ್ದಕ್ಕಿದ್ದಂತೆ ಮತ್ತೊಂದಿಷ್ಟು ನಿರಾಶ್ರಿತರು ಗುಂಡೇಟು ತಪ್ಪಿಸಿಕೊಂಡು ವಿಶ್ವಸಂಸ್ಥೆಯ ಯೋಧರ ಸಹಾಯದೊಂದಿಗೆ ಹೊಟೆಲ್ ಮಿ ಕೊಲ್ಲೀನ್ ಗೆ ಓಡಿಬರುತ್ತಾರೆ. ಈಗಾಗಲೇ ಹೊಟೆಲ್ ತುಂಬಿಹೋಗಿದ್ದು, ಇವರನ್ನು ಇಟ್ಟುಕೊಳ್ಳುವುದು ಕಷ್ಟ ಎಂದು ಪಾಲ್ ಕರ್ನಲ್ ಗೆ ಹೇಳಿದಾಗ, ಹುಟು ತೀವ್ರವಾದಿಗಳು ಪ್ರೈಮ್ ಮಿನಿಸ್ಟರ್ ಜೊತೆಗೆ ಹತ್ತು ಬೆಲ್ಜಿಯನ್ ಸೈನಿಕರನ್ನೂ ಕೊಂದಿದ್ದಾರೆಂದು ಕರ್ನಲ್ ಹೇಳುತ್ತಾನೆ. ಹಾಗಾಗಿ ಇದನ್ನು ಹತ್ತಿಕ್ಕಲು ಹಲವು ದೇಶಗಳ ಒಂದು ಪಡೆ ರಚನೆಯಾಗುತ್ತಿದ್ದು, ಅವರು ಬರುವ ತನಕ ಈ ನಿರಾಶ್ರಿತರನ್ನು ಕಾಪಾಡಲು ಪಾಲ್ ಗೆ ಕರ್ನಲ್ ಕೇಳಿಕೊಳ್ಳುತ್ತಾನೆ. ಪಾಲ್ ಭೇಟಿಯಾಗಲು ಬಂದ ಮೇಡಂ ಆರ್ಚರ್ ಪಾಲ್ ಹೇಳಿದ ಮನೆಯಲ್ಲಿ ಯಾರೂ ಇಲ್ಲವೆಂದು, ಪಕ್ಕದ ಮನೆಯ ಹೆಂಗಸೊಬ್ಬಳು ಅವರಿಬ್ಬರ ಮಕ್ಕಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿರುವುದಾಗಿ ಹೇಳುತ್ತಾಳೆ. ಅವರನ್ನು ಹೇಗಾದರೂ ಹೊಟೆಲಿಗೆ ಕರೆತರಲು ಸಾಧ್ಯವೇ ಎಂದು ಕೇಳಿದಾಗ, ಮೇಡಂ ಆರ್ಚರ್, ಎಲ್ಲ ಕಡೆ ಇಂಟರ್ ಹಾಮ್ವೆ ರೋಡ್ ಬ್ಲಾಕ್ ನಿರ್ಮಿಸಿದ್ದು ಅವರನ್ನು ಕರೆತರುವುದು ತುಂಬಾ ಕಷ್ಟವಾಗಿದೆ ಎಂದು ಹೇಳುತ್ತಾಳೆ. ತಾನು ಎರಡನೇ ಬಾರಿ ಅನಾಥಾಶ್ರಮದಿಂದ ಮಕ್ಕಳನ್ನು ಕರೆತರಲು ಹೋದಾಗ ಅಲ್ಲಿಗೆ ಆಗಲೇ ಬಂದಿದ್ದ ಇಂಟರ್ ಹಾಮ್ವೆ ಗುಂಪು ಮಕ್ಕಳನ್ನೂ ಕೊಲ್ಲಲು ಪ್ರಾರಂಭಿಸಿದ್ದರಲ್ಲದೆ, ತನ್ನನ್ನು ಅಲ್ಲಿಯೇ ತಡೆದು ಆ ಕೊಲೆಯನ್ನು ನೋಡುವಂತೆ ಮಾಡಿದರು ಎಂದು ಅಳುತ್ತಾಳೆ. 

  ಹತ್ತು ಜನ ಬೆಲ್ಜಿಯನ್ ಸೈನಿಕರು ಸಾಯುವಷ್ಟು ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದು, ಪಾಶ್ಚಾತ್ಯ ದೇಶಗಳ ಒಕ್ಕೂಟ ಒಂದು ಪಡೆಯನ್ನು ಕಳಿಸಿದ್ದು ನೋಡಿ ಎಲ್ಲರೂ ಸಂತೋಷಪಡುತ್ತಾರೆ. ಆದರೆ ಆ ಸಂತೋಷ ಕೇವಲ ಅಲ್ಪಕಾಲ ಮಾತ್ರ, ಏಕೆಂದರೆ ಅವರು ಬಂದದ್ದು, ರವಾಂಡದಲ್ಲಿ ನೆಲೆಸಿದ್ದ ಬಿಳಿಯರನ್ನೆಲ್ಲ ಆ ದೇಶದಿಂದ ಸುರಕ್ಷಿತವಾಗಿ ಮರಳಿ ಕರೆದೊಯ್ಯಲು ಮಾತ್ರ. ಇದನ್ನು ತಿಳಿದ ಪಾಲ್ ಅಲ್ಲಿಯ ತನಕ ತನ್ನನ್ನು ತಮ್ಮೊಳಗೊಬ್ಬ ಎಂದು ಬಿಳಿಯರು ಹೇಳುತಿದ್ದನ್ನು ಕೇಳಿ ತಾನು ತನ್ನತನವನ್ನೇ ಮರೆತು ಅವರಂತೆಯೇ ತಾನೂ ಎಂದು ತಿಳಿದಿದ್ದೆನಲ್ಲ ಎಂದು ಬೇಸರಪಟ್ಟುಕೊಳ್ಳುತ್ತಾನೆ. ಕರ್ನಲ್ ಆಲಿವರ್ ಕೂಡ ತೀವ್ರ ಬೇಸರದಿಂದ ಹೇಗೆ ಪಾಶ್ಚಾತ್ಯ ದೇಶಗಳು ಆಫ್ರಿಕನ್ನರನ್ನು ಧೂಳಿಗಿಂತ ಕಡೆಯಾಗಿ ಕಾಣುತ್ತಾರೆ ಎಂದು ಪಾಲ್ ನ ಬಳಿ ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾನೆ. ಬಿಳಿಯರೆಲ್ಲ ದೇಶ ಬಿಟ್ಟು ಹೋಗುತ್ತಿದ್ದಂತೆ, ಆರ್ಮಿಯ ಸೈನಿಕರು ಮತ್ತೆ ಹೊಟೆಲಿಗೆ ಬಂದು ಅಲ್ಲಿ ನೆಲೆಸಿರುವ ತೂಟ್ಸಿ ಜಿರಲೆಗಳ ಹೆಸರು ಕೊಡುವಂತೆಯೂ, ಇಲ್ಲದಿದ್ದರೆ ಎಲ್ಲರನ್ನೂ ಕೊಲ್ಲುವುದಾಗಿ ಪಾಲ್ ಗೆ ಹೆದರಿಸುತ್ತಾರೆ. ಆದರೆ ಅವರನ್ನು ಹೇಗೋ ಪುಸಲಾಯಿಸಿ, ಸ್ವಲ್ಪ ಸಮಯ ಕೇಳಿ ತನ್ನ ಹೊಟೆಲ್ ಮುಖ್ಯಸ್ಥನಿಗೆ ಕರೆ ಮಾಡಿ ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಹೊಟೆಲ್ ಮುಖ್ಯಸ್ಥ ತನ್ನ ಪ್ರಭಾವ ಬಳಸಿ ಆರ್ಮಿಯ ಸೈನಿಕರು ಅಲ್ಲಿಂದ ಹೊರಡುವಂತೆ ಮಾಡುತ್ತಾನೆ. ಪಾಲ್ ತನ್ನ ಹೊಟೆಲಿನಲ್ಲಿ ಇದ್ದ ಎಲ್ಲ ಪ್ರಭಾವಿ ನಿರಾಶ್ರಿತ ವ್ಯಕ್ತಿಗಳಿಗೆ ತಮಗೆ ಬೇರೆ ದೇಶದಲ್ಲಿ ಗೊತ್ತಿರುವ ಎಲ್ಲರಿಗೂ ಕರೆ ಮಾಡಿ ತಮ್ಮನ್ನು ಕಾಪಾಡಲು ಸಹಾಯ ಕೇಳಲು ಹೇಳುತ್ತಾನೆ. ಪಾಲ್ ಭೇಟಿಯಾಗಲು ಬಂದ ಜನರಲ್ ಬಿಜಿಮನ್ಗುವಿಗೆ ಉಪಚರಿಸಿ ಹೊಟೆಲ್ ಕಾವಲಿಗೆ ಕೆಲವು ಪೋಲಿಸ್ ಪೇದೆಗಳನ್ನು ನಿಯೋಜಿಸುವಂತೆ ಕೇಳುತ್ತಾನೆ. ಬೆಲ್ಜಿಯನ್ ಆಸ್ತಿಗಳನ್ನು ಕಾಪಾಡುವುದರಲ್ಲಿ ಸಹಾಯ ಮಾಡಿದವರಿಗೆ ಹೊಟೆಲ್ ಮ್ಯಾನೇಜ್ಮೆಂಟ್ ಬಹುಮಾನ ಕೊಡುವುದಾಗಿಯೂ ಪಾಲ್ ಬಿಜಿಮನ್ಗುವಿಗೆ ಹೇಳುತ್ತಾನೆ. ತಾನು ಅಮೇರಿಕ ರಾಜತಾಂತ್ರಿಕ ಮತ್ತು ಕರ್ನಲ್ ನಡುವೆ ನಡೆದ ಸಂಭಾಷಣೆಯ ರಹಸ್ಯ ಮಾಹಿತಿ ಕೊಡುವವನಂತೆ ಪಾಲ್ ಬಿಜಿಮನ್ಗುವಿಗೆ ಅಮೆರಿಕಾದ ಸ್ಯಾಟಲೈಟ್ ಗಳು ಆತನನ್ನು ಗಮನಿಸುತ್ತಿದ್ದು, ಹುಷಾರಾಗಿರಲು ಹೇಳುತ್ತಾನೆ. ಇದನ್ನ ನಂಬುವ ಬಿಜಿಮನ್ಗು ಅದಕ್ಕಾಗಿ ಪಾಲ್ ಗೆ ಧನ್ಯವಾದ ಹೇಳಿ ಪಾಲ್ ಕೋರಿಕೆಯಂತೆ ಹೊಟೆಲ್ ಕೆಲಸಗಾರ ಗ್ರೆಗ್ವಾರ್ ಗೆ ಚಳಿ ಬಿಡಿಸಿ ಕೆಲಸಕ್ಕೆ ಮರಳಲು ಕಳುಹಿಸಿ ಹೊರಡುತ್ತಾನೆ. ಪಾಲ್ ಹೊಟೆಲಿಗೆ ಬೇಕಾದ ಸಾಮಾನು ತರಲು ಮತ್ತೆ ಜಾರ್ಜ್ ಬಳಿ ಹೋದಾಗ ಜಾರ್ಜ್ ಪಾಲ್ ಗೆ ಈ ವ್ಯವಹಾರ ಕೇವಲ ಪಾಲ್ ಹೊಟೆಲಿನಲ್ಲಿ ಇರುವ ತೂಟ್ಸಿಗಳ ದುಡ್ಡು ಖಾಲಿಯಾಗುವವರೆಗೂ ಮಾತ್ರ ಎಂದು ಹೇಳುತ್ತಾನೆ. ಆನಂತರ ಕೊಬ್ಬಿದ ಕುರಿಯನ್ನು ಕೊಚ್ಚುವಂತೆ ಅವರನ್ನೆಲ್ಲ ಸಾಯಿಸಲು ಇಂಟರ್ ಹಾಮ್ವೆ ಬರುವುದಾಗಿ ಜಾರ್ಜ್ ಹೇಳುತ್ತಾನೆ. ತನಗೆ ಹೊಟೆಲಿನಲ್ಲಿರುವ ಕೆಲವು ದೇಶದ್ರೋಹಿಗಳನ್ನು ಹಿಡಿದುಕೊಡುವುದಾದರೆ ಪಾಲ್ ಗೆ ತನಗೆ ಬೇಕಾದ ಕೆಲವರನ್ನು ಉಳಿಸಿಕೊಳ್ಳಲು ಬಿಡುವುದಾಗಿ ಜಾರ್ಜ್ ಹೇಳುತ್ತಾನೆ. ಅದಕ್ಕೆ ನಯವಾಗಿ ಪಾಲ್ ನಿರಾಕರಿಸಿ ಹೊರಡುತ್ತಾನೆ. ಜಾರ್ಜ್ ಪಾಲ್ ಗೆ ಹೊಟೆಲಿಗೆ ಹಿಂದಿರುಗಿಹೋಗಲು ನದಿ ಪಕ್ಕದ ದಾರಿ ಸುರಕ್ಷಿತವಾಗಿದ್ದು ಆ ಮಾರ್ಗವಾಗಿ ಹೊಟೆಲ್ ತಲುಪುವಂತೆ ಹೇಳುತ್ತಾನೆ. ಅದರಂತೆ ಬೆಳಗಿನ ಮಂಜಿನಲ್ಲಿ ಪಾಲ್ ಗ್ರೆಗ್ವಾರ್ ಜೊತೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರು ಎಲ್ಲೋ ಕಾಡು ದಾರಿ ಹಿಡಿದಂತೆ ಅಡ್ಡಾದಿಡ್ಡಿ ಚಲಿಸತೊಡಗುತ್ತದೆ. ಮಂಜಿನಲ್ಲಿ ದಾರಿ ಕಾಣದೆ ನದಿಯೊಳಕ್ಕೆ ಕಾರು ಹೊರಟಿದೆಯೇ ಎಂದು ನೋಡಲು ಕಾರು ನಿಲ್ಲಿಸಿ ಕೆಳಗಿಳಿದು ನೋಡಿದಾಗ, ಕಾರು ದಾರಿಯಲ್ಲೇ ಬರುತ್ತಿದ್ದು, ಅಲ್ಲಿ ಬಿದ್ದಿದ್ದ ಹೆಣಗಳ ಮೇಲೆ ಕಾರು ಚಲಿಸಿ ಹೀಗಾಯಿತು ಎಂದು ತಿಳಿದಾಗ ಪಾಲ್ ಗೆ ಹೊಟ್ಟೆ ಕಿವುಚಿದಂತಾಗುತ್ತದೆ. ನೋಡಿದ್ದನ್ನು ಯಾರಿಗೂ ಹೇಳದಂತೆ ಗ್ರೆಗ್ವಾರ್ ಗೆ ತಾಕೀತು ಮಾಡಿ ಹೊಟೆಲ್ ತಲುಪಿ ಕೋಣೆಯಲ್ಲಿ ಒಬ್ಬನೇ ಕುಳಿತು ಅಳತೊಡಗುತ್ತಾನೆ. 

  ಈ ಹಿಂದೆ ಹೊಟೆಲಿನಲ್ಲಿ ಇದ್ದ ಪ್ರಭಾವಿ ನಿರಾಶ್ರಿತರು ಮಾಡಿದ ಕರೆಗಳು ಫಲಿಸಿ, ಅನೇಕರಿಗೆ ರವಾಂಡ ಬಿಟ್ಟು ತೆರಳಲು ವೀಸಾ ಸಿಕ್ಕಿ ಕರ್ನಲ್ ಆಲಿವರ್ ಅವರನ್ನೆಲ್ಲ ಕರೆದೊಯ್ಯಲು ಬರುತ್ತಾನೆ. ಇದರಲ್ಲಿ ಪಾಲ್ ಕುಟುಂಬವೂ ಸೇರಿರುತ್ತದೆ. ವೀಸಾ ಸಿಕ್ಕವರನ್ನು ಲಾರಿಗಳಿಗೆ ಹತ್ತಿಸಿ ಪಾಲ್ ತಾನೂ ತನ್ನ ಕುಟುಂಬದವರೊಡನೆ ಹೋಗುವುದು ಬಿಟ್ಟು, ಹೆಂಡತಿ ಮಕ್ಕಳನ್ನು ಮಾತ್ರ ಕಳಿಸಿ, ಹೊಟೆಲಿನಲ್ಲಿ ಉಳಿದುಕೊಂಡ ಇತರರ ಜೊತೆ ಉಳಿದುಕೊಳ್ಳುತ್ತಾನೆ. ಇದೆಲ್ಲ ನಡೆಯುತ್ತಿರುವಾಗಲೇ ಗ್ರೆಗ್ವಾರ್ ಹೊರ ಹೋಗಿ ಇಂಟರ್ ಹಾಮ್ವೆ ಸದಸ್ಯರಿಗೆ ಹೀಗೆ ವಿಶ್ವಸಂಸ್ಥೆಯ ಲಾರಿಗಳಲ್ಲಿ ಕೆಲವು ತೂಟ್ಸಿಗಳನ್ನು ಏರ್ಪೋರ್ಟ್ ಗೆ ಕರೆದೊಯ್ಯಲಾಗುತ್ತಿದೆ ಎಂದು ಸುದ್ದಿ ಮುಟ್ಟಿಸುತ್ತಾನೆ. ಇಂಟರ್ ಹಾಮ್ವೆ ಈ ಸುದ್ದಿಯನ್ನು ರೇಡಿಯೋದಲ್ಲಿ ಬಿತ್ತರಿಸಿ ಆ ಗಾಡಿಗಳನ್ನು ತಡೆದು ಅವರನ್ನೆಲ್ಲ ಸಾಯಿಸುವಂತೆ ಸಂದೇಶ ಕೊಡುತ್ತದೆ. ಇದೇ ಸುದ್ದಿಯನ್ನು ಪಾಲ್ ಕೇಳಿಸಿಕೊಂಡು ತಕ್ಷಣವೇ ಜನರಲ್ ಬಿಜಿಮನ್ಗುವಿಗೆ ಕರೆ ಮಾಡಿ ಅವರನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಅಷ್ಟರಲ್ಲಿ ವಿಶ್ವಸಂಸ್ಥೆಯ ಗಾಡಿಗಳನ್ನು ಇಂಟರ್ ಹಾಮ್ವೆ ಸದಸ್ಯರು ಮುತ್ತಿಕೊಂಡು ಒಳಗಿದ್ದ ತೂಟ್ಸಿಗಳನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ತಲುಪುವ ಆರ್ಮಿಯ ಸೈನಿಕರು ಪರಿಸ್ಥಿತಿಯನ್ನು ಹತೋಟಿಗೆ ತಂದು ಗಾಡಿಗಳನ್ನು ಮತ್ತೆ ಹೊಟೆಲಿಗೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾರೆ. ಬೇರೆ ಮಾರ್ಗ ಕಾಣದೆ ಕರ್ನಲ್ ಆಲಿವರ್ ಮತ್ತೆ ಹೊಟೆಲಿಗೆ ಅವರನ್ನು ಕರೆದೊಯ್ಯುತ್ತಾನೆ. ಸುರಕ್ಷಿತವಾಗಿ ಮರಳಿದ ಹೆಂಡತಿ ಮಕ್ಕಳನ್ನು ನೋಡಿ ಪಾಲ್ ಸಮಾಧಾನವಾದರೂ, ದಿನವೂ ಆಗುತಿದ್ದ ಈ ದಾಳಿಗಳನ್ನು ತಡೆಯಲು ಕೆಲವು ಪೋಲಿಸರನ್ನು ನಿಯೋಜಿಸಲು ಜನರಲ್ ಬಿಜಿಮನ್ಗುವಿಗೆ ಪಾಲ್ ಕೇಳಿಕೊಳ್ಳುತ್ತಾನೆ. ಆದರೆ ಲಂಚದ ರುಚಿ ಹತ್ತಿದ್ದ ಬಿಜಿಮನ್ಗು ಪಾಲ್ ತನಗೆ ಬೇಕಾದ್ದು ಕೊಡುವವರೆಗೂ ಏನೂ ಮಾಡುವುದಿಲ್ಲ ಎಂದು ಹೇಳಿ ಪಾಲ್ ನೊಡನೆ ದಿಪ್ಲೋಮ್ಯಾಟ್ ಹೊಟೆಲಿಗೆ ಹೋಗಿ ಅಲ್ಲಿನ ಸೇಫ್ ನಲ್ಲಿದ್ದ ಹಲವಾರು ದುಬಾರಿ ಮದ್ಯಗಳನ್ನು ಬಿಜಿಮನ್ಗು ಪಾಲ್ ನಿಂದ ಪಡೆಯುತ್ತಾನೆ. ಆದರೆ ಬಿಜಿಮನ್ಗು ಪಾಲ್ ಮರಳಿ ಹೊಟೆಲಿಗೆ ಹೋಗದಿರುವುದೇ ಒಳಿತೆಂದು ಹೇಳುತ್ತಾನೆ. ತಾವು ಅಲ್ಲಿಗೆ ತಲುಪುವುದರಲ್ಲಿ ಇಂಟರ್ ಹಾಮ್ವೆ ಅಲ್ಲಿರುವ ಜನರನ್ನೆಲ್ಲ ಕೊಂದುಹಾಕಿರುತ್ತಾರೆ ಎಂದು ಹೇಳುತ್ತಾನೆ ಮತ್ತು ತನ್ನೊಡನೆ ಗಿಟರಾಮದಲ್ಲಿನ ಆರ್ಮಿ ಹೆಡ್ ಕ್ವಾರ್ಟರ್ಸ್ ಗೆ ಬರುವಂತೆ ಹೇಳುತ್ತಾನೆ. ಅದಕ್ಕೊಪ್ಪದ ಪಾಲ್ ತನ್ನ ಜೊತೆ ಬಂದು ಅವರನ್ನೆಲ್ಲ ರಕ್ಷಿಸಲು ಸಹಾಯ ಮಾಡದಿದ್ದರೆ, ಬಿಜಿಮನ್ಗು ಒಬ್ಬ ವಾರ್ ಕ್ರಿಮಿನಲ್ ಎಂದೂ ಆದ ಹತ್ಯಾಕಾಂಡಕ್ಕೆಲ್ಲ ಅವನೇ ಕಾರಣಕರ್ತ ಎಂದು ಅಮೆರಿಕನ್ನರಿಗೆ ಹೇಳುವುದಾಗಿ ಹೆದರಿಸಿ ಬಿಜಿಮನ್ಗುವನ್ನು ಹೊಟೆಲಿಗೆ ಕರೆದೊಯ್ಯುತ್ತಾನೆ. ಇಷ್ಟವಿಲ್ಲದಿದ್ದರೂ ಪಾಲ್ ನ ಈ ಬೆದರಿಕೆಗೆ ಮಣಿದು ಬಿಜಿಮನ್ಗು ಹೊಟೆಲಿಗೆ ಬಂದು ಅಲ್ಲಿದ್ದ ಇಂಟರ್ ಹಾಮ್ವೆ ದಾಳಿಕೋರರನ್ನು ಓಡಿಸುತ್ತಾನೆ. 

  ಕಡೆಗೂ ಎಲ್ಲರನ್ನು ಒಟ್ಟುಮಾಡಿ ಹೊಟೆಲಿಗೆ ಬೀಗ ಹಾಕಿ ಪಾಲ್, ಕರ್ನಲ್ ಆಲಿವರ್ ಸಹಾಯದೊಂದಿಗೆ ಮತ್ತೆ ವಿಶ್ವಸಂಸ್ಥೆಯ ಲಾರಿ ಹತ್ತಿ ಎಲ್ಲರೊಡನೆ ನಿರಾಶ್ರಿತ ಶಿಬಿರ ತಲುಪುತ್ತಾನೆ. ಮತ್ತೆ ದಾರಿಯಲ್ಲಿ ಇಂಟರ್ ಹಾಮ್ವೆ ಎದುರಾದರೂ ಅಲ್ಲಿಗಾಗಲೇ ಧಾವಿಸಿದ್ದ ತೂಟ್ಸಿ ಬಂಡುಕೋರ ಪಡೆಯ ನೆರವಿನಿಂದ ಎಲ್ಲರೂ ಸುರಕ್ಷಿತವಾಗಿ ಶಿಬಿರ ಸೇರುತ್ತಾರೆ. ಕರ್ನಲ್ ಆಲಿವರ್, ಹೊಟೆಲಿನ ಎಲ್ಲರಿಗೂ ತಾನ್ಜೆನಿಯ ತಲುಪಲು ಶಿಬಿರದ ಇನ್ನೊಂದು ತುದಿಯಲ್ಲಿ ಬಸ್ಸುಗಳನ್ನು ಏರ್ಪಾಡು ಮಾಡಿರುವುದಾಗಿ ಪಾಲ್ ಗೆ ಹೇಳಿ ತನ್ನ ಕೆಲಸಗಳಿಗೆ ಮರಳುತ್ತಾನೆ. ಪಾಲ್ ಮತ್ತು ಆತನ ಹೆಂಡತಿ, ಭಾಮೈದ ಥಾಮಸನ ಕುಟುಂಬಕ್ಕಾಗಿ ಹುಡುಕಾಡಿದರೂ ಯಾರೂ ಸಿಗದೇ ಬಸ್ಸು ಹತ್ತಿ ಕೂರುತ್ತಾರೆ. ಅಷ್ಟರಲ್ಲಿ ಹೊಟೆಲ್ ಮಿ ಕೊಲ್ಲೀನ್ ನ ನಿರಾಶ್ರಿತರು ಅಲ್ಲಿಗೆ ಬಂದಿರುವುದನ್ನು ತಿಳಿದ ಮೇಡಂ ಆರ್ಚರ್ ಓಡಿ ಹೋಗಿ ಹೊರಟಿದ್ದ ಬಸ್ಸು ನಿಲ್ಲಿಸಿ ಪಾಲ್ ನನ್ನು ಕರೆತಂದು ಶಿಬಿರದಲ್ಲಿದ್ದ ಥಾಮಸನ ಮಕ್ಕಳನ್ನು ಹುಡುಕಿಕೊಡುತ್ತಾಳೆ. ಅಲ್ಲಿಗೆ ಎಲ್ಲರೂ ಒಂದಾಗಿ ಹೊಸ ಜೀವನ ಕಟ್ಟಿಕೊಳ್ಳಲು ತಾನ್ಜೆನಿಯ ಕಡೆಗೆ ಹೊರಡುತ್ತಾರೆ. 

  ಸರಿಯಾದ ಸಮಯದಲ್ಲಿ ವಿಶ್ವಸಂಸ್ಥೆ ಈ ಘರ್ಷಣೆಯನ್ನು “ಜೆನೊಸೈಡ್” ಎಂದು ಕರೆದಿದ್ದರೆ, ವಿಶ್ವಸಂಸ್ಥೆಗೆ ನಿಯಮಗಳ ಪ್ರಕಾರ ಶಾಂತಿ ಕಾಪಾಡಲು ಪಡೆಗಳನ್ನು ಕಳಿಸಲೇಬೇಕಾಗಿತ್ತು. ಆದರೆ ಯಾವ ಪಾಶ್ಚಾತ್ಯ ದೇಶಕ್ಕೂ ಇದರಲ್ಲಿ ಆಸಕ್ತಿಯಿರಲ್ಲಿಲ್ಲವಾದ್ದರಿಂದ ಮತ್ತು ಅಮೆರಿಕಾಗೆ ಸೋಮಾಲಿಯಾದಲ್ಲಿ ಅಷ್ಟು ಹೊತ್ತಿಗೆ ಸಾಕಷ್ಟು ಪೆಟ್ಟುಬಿದ್ದಿದ್ದರಿಂದ, ಶಾಂತಿ ಪಡೆಗಳನ್ನು ಕಳಿಸುವಲ್ಲಿ ಸಾಕಷ್ಟು ತಡ ಮಾಡಿದರು. ಅದನ್ನು “ಜೆನೊಸೈಡ್” ಎಂದು ಕರೆಯುವಷ್ಟರಲ್ಲಿ ಸಾಕಷ್ಟು ಅನಾಹುತ ಆಗಿಹೋಗಿತ್ತು. ಈಗಲೂ ಈ ಜಗಳ ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಲೇ ಇದೆ.




1. ಶೇಕ್ ಹ್ಯಾಂಡ್ಸ್ ವಿತ್ ದಿ ಡೆವಿಲ್ (ರೋಮಿಯೋ ಡಲೈರ್ ನ ಅನುಭವದ ಡಾಕ್ಯುಮೆಂಟರಿ) - https://www.youtube.com/watch?v=9CAOnJrxmKk

2. ಹುಟು ಮತ್ತು ತೂಟ್ಸಿ ನಡುವಿನ ವ್ಯತ್ಯಾಸದ ಬಗ್ಗೆ ಪತ್ರಿಕಾ ವರದಿ - https://www.independent.co.uk/news/world/guide-to-the-zaire-crisis-the-difference-between-a-hutu-and-a-tutsi-1352558.html

3. ರವಾಂಡದ ಇತಿಹಾಸದ ಮಹತ್ವದ ದಿನಗಳು - https://www.pbs.org/wgbh/pages/frontline/shows/rwanda/etc/cron.html




-ವಿಶ್ವನಾಥ್

Friday, 1 June 2018

ಇಕಿರು (ಜಪಾನ್)







  ನಮ್ಮ ಜೀವನ ಪರಿಪೂರ್ಣ ಎನ್ನಿಸುವುದು ಯಾವಾಗ? ಸಂಪತ್ತು ಗಳಿಸಿದಾಗ, ಕೀರ್ತಿ ಸಂಪಾದಿಸಿದಾಗ ಅಥವಾ ಬೇರಿನ್ನಾವುದಾದರೂ ವಸ್ತುವನ್ನು ಗಳಿಸಿದಾಗಲೋ? ಏನು ಗಳಿಸಿದರೂ ನಮಗೆ ಜೀವನದ ಕ್ಷಣಗಳನ್ನು ಅನುಭವಿಸಲು ಬರದಿದ್ದರೆ, ಜೀವನ ಎಷ್ಟು ದೀರ್ಘವಾಗಿದ್ದರೂ, ಎಷ್ಟು ಆರೋಗ್ಯಪುರ್ಣವಾಗಿದ್ದರೂ ವ್ಯರ್ಥವೇ. ಇಂದು ನಾ ಜೀವನದ ಬಗೆಗಿನ ದೃಷ್ಟಿಕೋನದ ಬಗ್ಗೆ ಇರುವ ಚಿತ್ರ ಅಕಿರಾ ಕುರೋಸಾವಾ ನಿರ್ದೇಶಿಸಿರುವ “ಇಕಿರು”. ಜಪಾನ್ ನ ಚಿತ್ರಗಳು ಹಾಲಿವುಡ್ ನಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗಳಿಸಲು ಕಾರಣರೆಂದೇ ಹೇಳಬಹುದಾದ ನಿರ್ದೇಶಕ ಅಕಿರಾ ಕುರೋಸಾವಾ. ಅವರ ಚಿತ್ರದಲ್ಲಿನ ಕ್ಯಾಮೆರಾ ಕೆಲಸ, ದೃಶ್ಯವನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತವೆ ಎಂದರೆ, ಕೆಲವು ಚಿತ್ರಗಳ ದೃಶ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲವೆನ್ನುವಷ್ಟು. ಅದರಲ್ಲೂ ಅವರ ಸಮುರಾಯ್ ಚಿತ್ರಗಳು ಚಿತ್ರ ವೀಕ್ಷಕರ ಅಚ್ಚುಮೆಚ್ಚು. ಅವರ ಇನ್ನಿತರ ಪ್ರಖ್ಯಾತ ಚಿತ್ರಗಳು, “ಶಿಚಿನಿನ್ ನೊ ಸಮುರಾಯ್”, ”ರಾಶೋಮಾನ್”, “ಯೊಜಿಂಬೊ”, “ರಾನ್” ಮತ್ತು ಇನ್ನೂ ಹಲವಾರು. ಜಪಾನಿ ಚಿತ್ರಗಳನ್ನು ನೋಡಬಯಸುವವರು ಅಕಿರಾ ಚಿತ್ರಗಳಿಂದ ಪ್ರಾರಂಭಿಸುವುದು ಒಳ್ಳೆಯದು.

  ಚಿತ್ರದ ಪ್ರಾರಂಭದಲ್ಲೇ ನಿರ್ದೇಶಕ ನಮಗೆ ಚಿತ್ರದ ಮುಖ್ಯ ಪಾತ್ರಧಾರಿ ಕಾಂಜಿ ವಾಟನಾಬೆಗೆ ಹೊಟ್ಟೆಯ ಕ್ಯಾನ್ಸರ್ ಇರುವುದರ ಬಗ್ಗೆ ತಿಳಿಸುತ್ತಾನೆ. ಆದರೆ ಅದು ಇನ್ನೂ ಆತನಿಗೆ ತಿಳಿದಿಲ್ಲವಷ್ಟೇ. ಕಾಂಜಿ ಸರ್ಕಾರಿ ಸಾರ್ವಜನಿಕ ವ್ಯವಹಾರಗಳ ಕಚೇರಿಯಲ್ಲಿ ಕೆಲಸಮಾಡುವ ಒಬ್ಬ ಅಧಿಕಾರಿ. ಯಾವ ಅಡಚಣೆಯೂ ಇಲ್ಲದೆ ಯಾರ ಸಂಗವೂ ಸೇರದೆ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಾ ದಿನವೂ ಆತ ಕಚೇರಿಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಕೆಲಸ ಮಾಡುತ್ತಿದ್ದ ಒಂದು ದಿನ, ಒಂದು ಕಾಲೋನಿಯ ಹೆಂಗಸರೆಲ್ಲ ಈತನ ಕಚೇರಿಗೆ ಬಂದು ತಮ್ಮ ಮನೆಗಳ ಬಳಿ ಆಗಿರುವ ಚರಂಡಿಯ ಗುಂಡಿಯಲ್ಲಿ ನೀರು ತುಂಬಿ ಓಡಾಡುವವರಿಗೂ ತೊಂದರೆಯಾಗಿ, ಕಾಲೋನಿಯಲ್ಲಿ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದ್ದರ ಬಗ್ಗೆ ದೂರು ಕೊಟ್ಟು ಆ ಗುಂಡಿಯನ್ನು ಮುಚ್ಚಿಕೊಡಲು ಕೇಳಿಕೊಳ್ಳಲು ಬಂದಿರುತ್ತಾರೆ. ಆ ಗುಂಡಿಯನ್ನು ಮುಚ್ಚಿ ಸಮ ಮಾಡಿದರೆ ಅಲ್ಲಿ ಒಂದು ಒಳ್ಳೆಯ ಮಕ್ಕಳ ಆಟದ ಮೈದಾನ/ ಉದ್ಯಾನವನವಾಗಬಹುದು ಎಂದು ಕೇಳಿಕೊಳ್ಳುತ್ತಾರೆ.  ಇವರ ದೂರು ಕೇಳಿದ ಒಬ್ಬ ಗುಮಾಸ್ತ ಕಾಂಜಿಯ ಬಳಿ ಬಂದು ಇದು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂದು ಕೇಳಿ ಆ ಹೆಂಗಸರನ್ನು ಆ ಇಲಾಖೆಗೇ ದೂರು ಕೊಡಲು ಕಳುಹಿಸುತ್ತಾನೆ. ಕಾಂಜಿ ಗುಮಾಸ್ತನಿಗೆ ನಿರ್ದೇಶನ ಕೊಟ್ಟು ಮತ್ತೆ ತನ್ನ ಕಡತಗಳಲ್ಲಿ ಮುಳುಗಿಹೋಗುತ್ತಾನೆ. ಆಗ ಆತನ ಕಿರಿಯ ಸಹೋದ್ಯೋಗಿಯೊಬ್ಬಳು ಜೋರಾಗಿ ಯಾವುದೊ ವಿಷಯಕ್ಕೆ ನಗಲು ಪ್ರಾರಂಭಿಸುತ್ತಾಳೆ. ಏಕೆ ಹೀಗೆ ನಗುತ್ತಿರುವುದಾಗಿ ಇನ್ನೊಬ್ಬ ಸಹೋದ್ಯೋಗಿ ಕೇಳಿದಾಗ ಆಕೆ ತಾನು ಓದಿದ ಒಂದು ಜೋಕನ್ನು ಎಲ್ಲರಿಗೂ ಓದಿ ಹೇಳುತ್ತಾಳೆ-
ಒಬ್ಬ- ಏಕೆ ನೀನು ಕಚೇರಿಗೆ ಎಂದೂ ರಜಾ ಹಾಕುವುದಿಲ್ಲ? ನಿನ್ನ ಕಚೇರಿ ನೀನಿಲ್ಲದೆ ನಡೆಯುವುದೇ ಇಲ್ಲವೇ?
ಇನ್ನೊಬ್ಬ- ಇಲ್ಲ ನಾನು ಒಂದು ದಿನ ರಜಾ ಹಾಕಿದರೆ, ನಾನಿಲ್ಲದೆಯೂ ಕಚೇರಿ ನಡೆಯಬಹುದು ಎಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ರಜಾ ಹಾಕುವುದಿಲ್ಲ.
ಇದನ್ನು ಕೇಳಿಯೂ ಕಾಂಜಿ ಏನೂ ಪರಿಣಾಮ ಬೀರದವನಂತೆ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತಾನೆ.

  ಇತ್ತ ಆ ಮಹಿಳೆಯರ ಗುಂಪು ಗುಮಾಸ್ತ ಹೇಳಿದ ಇಲಾಖೆಗೆ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ, ಅವರನ್ನು ಅಲ್ಲಿಂದ ಮತ್ತೆ ಇನ್ನೊಂದು ಇಲಾಖೆಗೆ ಕಳುಹಿಸಲಾಗುತ್ತದೆ. ಮತ್ತೆ ಅಲ್ಲಿಂದ ಇನ್ನೊಂದಕ್ಕೆ. ಹೀಗೆ ಅನೇಕ ಇಲಾಖೆಗಳನ್ನು ಸುತ್ತಾಡಿಕೊಂಡು ಕಡೆಗೆ ಉಪ ಮೇಯರ್ ಬಳಿಗೆ ಹೋದಾಗ ಆತ ಮತ್ತೆ ಅವರನ್ನು ಸಾರ್ವಜನಿಕ ವ್ಯವಹಾರಗಳ ಕಚೇರಿಗೆ ಕಳುಹಿಸುತ್ತಾನೆ. ಆ ಮಹಿಳೆಯರ ಗುಂಪು ಮತ್ತೆ ಕಾಂಜಿಯ ಕಚೇರಿಗೆ ಬಂದು ಕೇಳಿಕೊಂಡಾಗ ಮತ್ತೆ ಇನ್ನೊಂದು ಇಲಾಖೆಗೆ ಹೋಗುವಂತೆ ಗುಮಾಸ್ತ ಉತ್ತರ ಕೊಟ್ಟಾಗ, ಅವರೆಲ್ಲ ಸಿಟ್ಟಿಗೆದ್ದು ಆತನನ್ನು ಬಯ್ದು ಇನ್ನು ಆ ಕಚೇರಿಗೇ ತಾವು ಬರುವುದಿಲ್ಲವೆಂದು ಹೇಳಿ ಹೊರಡಲು ಮುಂದಾದಾಗ ಗುಮಾಸ್ತ ಅವರೆಲ್ಲ ಸಿಟ್ಟಾಗಿದ್ದನ್ನು ನೋಡಿ ಹೆದರಿ ಓಡಿಬಂದು ಸಮಾಧಾನಮಾಡಿ ತಮ್ಮ ದೂರನ್ನು ಲಿಖಿತ ರೂಪದಲ್ಲಿ ಕೊಡುವಂತೆಯೂ ತಮ್ಮ ಮೇಲಾಧಿಕಾರಿ ಕಾಂಜಿ ರಜೆಯಿಂದ ಮರಳಿ ಬಂದ ನಂತರ ಅದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿ ಕಳುಹಿಸುತ್ತಾನೆ. ಎಂದೂ ರಜೆ ತೆಗೆದುಕೊಳ್ಳದ ಕಾಂಜಿ ಹೀಗೆ ಯಾಕೆ ರಜೆ ಮೇಲೆ ತೆರಳಿದ್ದಾನೆ ಎಂದು ಕಚೇರಿಯ ಎಲ್ಲ ಸಹೋದ್ಯೋಗಿಗಳು ಚರ್ಚಿಸಿದ್ದೇ ಚರ್ಚಿಸಿದ್ದು. ಆತನಿಗೆ ಏನಾದರೂ ಆದರೆ ಮುಂದೆ ಯಾರು ಇಲಾಖೆಯ ಮುಖ್ಯಸ್ತರು ಆಗಬಹುದು ಎಂದು ಎಲ್ಲ ಚರ್ಚಿಸುತ್ತ ಕೂರುತ್ತಾರೆ.

  ರಜೆ ಮೇಲಿದ್ದ ಕಾಂಜಿ ಆಸ್ಪತ್ರೆಯಲ್ಲಿ ತನ್ನ ಹೊಟ್ಟೆ ನೋವಿನ ಮರ್ಮ ತಿಳಿಯಲು ಬಂದಿರುತ್ತಾನೆ. ತನಗೆ ಹೊಟ್ಟೆಯ ಕ್ಯಾನ್ಸರ್ ಆಗಿರುವುದಾಗಿಯೂ ತನ್ನ ಬಳಿ ಬಹಳ ಸಮಯ ಇಲ್ಲವೆಂದು ತಿಳಿದು ಜರ್ಜರಿತನಾಗುತ್ತಾನೆ. ಇದನ್ನು ಅರಗಿಸಿಕೊಳ್ಳಲಾಗದೆ ಇದಕ್ಕಿದ್ದಂತೆ ತಾನು ಈ ಜಗತ್ತಿನಲ್ಲಿ ಒಬ್ಬಂಟಿಗ ಎಂಬ ಭಾವನೆ ಆವರಿಸಿಕೊಳ್ಳುತ್ತದೆ. ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ ತನ್ನ ಜೀವನದ ಹಾದಿಯಲ್ಲಿ ಈ ಸಂಗತಿ ಒಂದು ದೊಡ್ಡ ಗೋಡೆಯಂತೆ ಎದ್ದುನಿಲ್ಲುತ್ತದೆ. ಆಗ ತನ್ನ ಅಲ್ಲಿಯತನಕದ ಜೀವನವನ್ನು ಅವಲೋಕಿಸುತ್ತ ಹೋಗುತ್ತಾನೆ. ಮನೆಗೆ ಬಂದಾಗ ಮಗ ಸೊಸೆ ತಾವು ಕಟ್ಟಿಕೊಳ್ಳಲು ಬಯಸಿರುವ ಹೊಸ ಮನೆಯ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆಯೇ ವಿನಾ ಈತನ ಬಗ್ಗೆ ಅಷ್ಟು ಗಮನಹರಿಸುವುದಿಲ್ಲ. ಹಾಗೂ ಕೇಳಿದಾಗ ಕಾಂಜಿಯೂ ಈ ಹೊಸ ಸಂಗತಿಯ ಬಗ್ಗೆ ಏನೂ ಹೇಳುವುದಿಲ್ಲ. ಮನೆಯಲ್ಲಿ ಒಬ್ಬನೇ ಕುಳಿತು ತಾನು ಮಗ ಮಿತ್ಸುಒ ಮೇಲೆ ತೋರಿದ ಪ್ರೀತಿ, ತಾಯಿ ಸತ್ತ ಮೇಲೆ ಮತ್ತೆ ಮದುವೆಯಾಗದೆ ಅವನಿಗಾಗಿ ಮಾಡಿದ ತ್ಯಾಗಗಳನ್ನು ನೆನೆಯುತ್ತ ಮಗನನ್ನು ಮನದಲ್ಲೇ, “ಮಿತ್ಸುಒ, ಮಿತ್ಸುಒ” ಎಂದು ಕೂಗಿ ಕರೆಯುತ್ತಾನೆ. ಆ ಕೂಗಿಗೆ ಮಗ ಓಗೊಡದದ್ದನ್ನು ನೋಡಿ ಬೇಸರಗೊಂಡು ಬಂದು ಹಾಸಿಗೆಯಲ್ಲಿ ಅಳುತ್ತ ಮಲಗುತ್ತಾನೆ.

  ರಜೆ ಮೇಲೆ ತೆರಳಿ ಐದು ದಿನವಾದರೂ ಕಾಂಜಿ ಬಾರದಿದ್ದನ್ನು ಗಮನಿಸಿ ಕಚೇರಿಯ ಒಬ್ಬ ಸಹೋದ್ಯೋಗಿ ಅವನ ಮನೆಯಲ್ಲಿ ವಿಚಾರಿಸಲು ಬಂದಾಗಲೇ ಅವನ ಮಗ ಸೊಸೆಗೆ ತಿಳಿಯುವುದು, ಕಾಂಜಿ ಕಚೇರಿಗೆ ಎಂದು ಹೇಳಿ ಬೇರೆಲ್ಲಿಯೋ ಹೋಗುತ್ತಿದ್ದಾನೆ ಎಂದು. ಇದು ಸಾಲದೆಂಬಂತೆ ಕಾಂಜಿ ತನ್ನ ಖಾತೆಯಿಂದ ೫೦೦೦೦ ಯೆನ್ ಗಳನ್ನು ಹಿಂತೆಗೆದುಕೊಂಡಿದ್ದು ಮಗನನ್ನು ಸ್ವಲ್ಪ ವಿಚಲಿತಗೊಳಿಸುತ್ತದೆ. ತಂದೆಯ ನಿವೃತ್ತಿಯ ಹಣದಿಂದ ಒಂದು ಮನೆಯನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದ ಮಿತ್ಸುಒ ತನ್ನ ತಂದೆ ಹೀಗೆ ಮನಸೋ ಇಚ್ಛೆ ತನ್ನ ದುಡ್ಡನ್ನು ಖರ್ಚು ಮಾಡಿದರೆ ಹೇಗೆ ಎಂದು ಆತಂಕಗೊಳ್ಳುತ್ತಾನೆ. ತನ್ನ ತಂದೆಯ ಬಗ್ಗೆ ತಿಳಿಯಲು ತನ್ನ ಅಂಕಲ್ ಬಳಿ ಬಂದಾಗಲೂ ಹೆಚ್ಚೇನೂ ತಿಳಿಯುವುದಿಲ್ಲ. ಇತ್ತ ಕಾಂಜಿ ಒಂದು ರಾತ್ರಿ ಬೇಸರದಿಂದ ಒಂದು ಸಾಕೆ(ಹೆಂಡದ) ಅಂಗಡಿಯಲ್ಲಿ ಕೂತು ಒಬ್ಬನೇ ಕುಡಿಯುತ್ತ ಕೂತಿದ್ದಾಗ ಒಬ್ಬ ಪತ್ರಕರ್ತನ ಜೊತೆ ಸ್ನೇಹವಾಗುತ್ತದೆ. ಅವನಿಗೆ ತನ್ನ ನೋವನ್ನೆಲ್ಲ ಹೇಳಿಕೊಂಡು ಜೀವನದಲ್ಲಿ ಅಲ್ಲಿಯ ತನಕ ತಾನು ಏನೂ ಮಾಡಿಲ್ಲವೆಂದೂ ಹಾಗಾಗಿ ತನ್ನ ನೋವನ್ನು ಸ್ವಲ್ಪ ಕಾಲವಾದರೂ ಮರೆಯಲು ಅಲ್ಲಿ ಕುಡಿಯುತ್ತಿರುವುದಾಗಿ ಹೇಳುತ್ತಾನೆ. ತನ್ನ ಬಳಿ ೫೦೦೦೦ಯೆನ್ ಇರುವುದಾಗಿಯೂ ಅದನ್ನು ಹೇಗೆ ಖರ್ಚು ಮಾಡಬೇಕೆಂದೇ ತಿಳಿಯುತ್ತಿಲ್ಲ ಎಂದು ಆ ಪತ್ರಕರ್ತನ ಬಳಿ ಹೇಳಿಕೊಳ್ಳುತ್ತಾನೆ. ಆಗ ಆ ಪತ್ರಕರ್ತನಿಗೆ ಕಾಂಜಿಯ ಮೇಲೆ ಮರುಕ ಹುಟ್ಟಿ ತನ್ನ ದುಡ್ಡಿನಲ್ಲೇ ಕಾಂಜಿಯನ್ನು ಊರಿನ ಜೂಜು ಅಡ್ಡೆ, ಕ್ಲಬ್, ಪಬ್, ಬಾರ್ ಮತ್ತು ಇನ್ನೂ ಅನೇಕ ಮೋಜಿನ ತಾಣಗಳಿಗೆ ಕರೆದೊಯ್ಯುತ್ತಾನೆ. ಇಷ್ಟೆಲ್ಲಾ ಮಾಡಿದರೂ ಇಡಿಯ ಜೀವನದಲ್ಲಿ ಪಡದ ಸಂತೋಷ ಈ ಒಂದು ರಾತ್ರಿಯ ಮೋಜು ಸರಿತೂಗದು ಎಂದು ನೆನೆದು ಮತ್ತೆ ದುಃಖಿಸುತ್ತ ಕೂರುತ್ತಾನೆ. ಆಗ ಆತ ಹಾಡುವ ಹಾಡು “ಜೀವನ ಚಿಕ್ಕದು” ಎನ್ನುವ ಹಾಡು ಬಹಳ ಮನಮುಟ್ಟುವಂತಿದೆ. ಇದೆಲ್ಲ ಅನುಭವಿಸಿ ಮಾರನೆಯ ದಿನ ಬೆಳಗ್ಗೆ ರಸ್ತೆಯಲ್ಲಿ ಒಬ್ಬನೇ ಸುಮ್ಮನೆ ನಡೆದು ಹೋಗುತ್ತಿರುವಾಗ ಕಚೇರಿಯ ಹುಡುಗಿ ಈತನನ್ನು ಕಂಡು ಓಡಿಬಂದು ಭೇಟಿಯಾಗುತ್ತಾಳೆ. ದಿನವೂ ಒಂದೇ ಬಗೆಯ ಕೆಲಸ ಮಾಡಿ ಬೇಸರವಾಗಿದೆ ಎಂದು ನೌಕರಿ ಬಿಡುತ್ತಿರುವುದಾಗಿ,  ತನ್ನ ರಾಜಿನಾಮೆ ಪತ್ರಕ್ಕೆ ಮುದ್ರೆ ಒತ್ತಿಸಿಕೊಂಡು ಹೋಗಲು ಕಾಂಜಿಯನ್ನು ಹುಡುಕಿ ಬಂದದ್ದಾಗಿ ಹೇಳುತ್ತಾಳೆ. ರಾಜಿನಾಮೆಗೆ ಮುದ್ರೆ ಹಾಕಿಕೊಡುವುದಾಗಿ ಹೇಳಿ ಕಾಂಜಿ ಆಕೆಯನ್ನು ಮನೆಗೆ ಕರೆದೊಯ್ಯುತ್ತಾನೆ. ಇತ್ತ ಕಾಂಜಿಯ ಮನೆಯಲ್ಲಿ ರಾತ್ರಿಯೆಲ್ಲ ಹೊರಗೆ ಇದ್ದ ಅಪ್ಪನನ್ನು ಅದರ ಬಗ್ಗೆ ಹೇಗೆ ವಿಚಾರಿಸುವುದು ಎಂದು ಮಗ, ಸೊಸೆ ಯೋಚಿಸುತ್ತಿರುವಾಗಲೇ, ಕಾಂಜಿ ಒಂದು ಹುಡುಗಿಯನ್ನು ಮನೆಗೆ ಕರೆತಂದದ್ದು ಇಬ್ಬರಿಗೂ ಆಶ್ಚರ್ಯಗೊಳಿಸುತ್ತದೆ.

  ಕಾಂಜಿ ಆ ಹುಡುಗಿಯನ್ನು ಕರೆದುಕೊಂಡು ಮತ್ತೆ ಹೊರನಡೆದು ಆಕೆಯ ಹರಿದ ಕಾಲುಚೀಲಗಳನ್ನು ನೋಡಿ ಹೊಸ ಜೊತೆಯೊಂದನ್ನು ಆಕೆಗೆ ಕೊಡಿಸುತ್ತಾನೆ. ಆಗ ಆಕೆಯ ಅರಳುವ ನಗು ನೋಡಿ ಕಾಂಜಿ ಆಕೆಯ ಸಂತೋಷದ ಸೋಂಕು ತಗುಲಿದಂತೆ ತಾನೂ ನಗಲು ಪ್ರಾರಂಭಿಸುತ್ತಾನೆ. ಆಕೆಯನ್ನು ತನ್ನೊಡನೆ ಹೋಟೆಲ್ ಗೆ ಕರೆದೊಯ್ದು ಆಕೆಗೆ ಇಷ್ಟವಾದ ತಿಂಡಿಯನ್ನೆಲ್ಲ ಕೊಡಿಸುತ್ತಾನೆ. ಈ ಮುಂಚೆ ಆಕೆ ಕಚೇರಿಯಲ್ಲಿ ಎಲ್ಲರಿಗೂ ಒಂದು ಅಡ್ಡಹೆಸರಿಟ್ಟಂತೆ ತನಗೆ “ಮಮ್ಮಿ”(ಅಥವಾ ಬೆದರು ಬೊಂಬೆ) ಎಂದು ಕರೆದಿದ್ದಕ್ಕೆ, ತಾನು ತನ್ನ ಮಗನ ಒಳಿತಿಗಾಗಿ ದುಡಿಯುತ್ತ ಸಂತೋಷಪಡುವುದನ್ನು ಮರೆತೆ ಹಾಗಾಗಿ ಹೀಗಿದ್ದೇನೆ ಎಂದು ವಿವರಿಸಲು ಮುಂದಾಗುತ್ತಾನೆ. ಆಗ ಆ ಹುಡುಗಿ ಕಾಂಜಿ ತನ್ನ ಸ್ಥಿತಿಗೆ ಮಗನನ್ನು ದೂಷಿಸುವುದು ಸರಿಯಲ್ಲ ಎಂದು ಹೇಳುತ್ತಾಳೆ. ಅಷ್ಟಕ್ಕೇ ಸುಮ್ಮನಾಗುವ ಕಾಂಜಿ ಆಕೆ ಹೇಳಿದ್ದೂ ಸತ್ಯ ಎಂದು ತಿಳಿದು ಮನೆಗೆ ಮರಳಿ ತನ್ನ ನೋವನ್ನೆಲ್ಲ ಮಗನ ಬಳಿ ಹೇಳಿಕೊಳ್ಳಲು ಮುಂದಾಗುತ್ತಾನೆ. ಆಗ ಮಗ ಮಧ್ಯದಲ್ಲೇ ತಡೆದು ಕಾಂಜಿಯ ಈ ಹೊಸ ವರ್ತನೆ ತಮ್ಮ ಮರ್ಯಾದೆ ಕಳಿಯುತ್ತಿದೆಯೆಂದು, ಈ ವಯಸ್ಸಿನಲ್ಲಿ ಕಾಂಜಿ ಒಂದು ಹುಡುಗಿಯ ಜೊತೆ ತಿರುಗುವುದು ಮತ್ತು ಆ ಹುಡುಗಿ ಆತನ ದುಡ್ಡನ್ನೆಲ್ಲ ಖರ್ಚುಮಾಡಿಸುತ್ತಿರುವುದು ಅಷ್ಟು ಚೆನ್ನಾಗಿಲ್ಲ ಎಂದು ತನ್ನ ಆಕ್ಷೇಪ ವ್ಯಕ್ತಪಡಿಸುತ್ತಾನೆ. ಇದನ್ನು ಕೇಳಿದ ಕಾಂಜಿ ಏನು ಹೇಳಲೂ ತಿಳಿಯದೆ ಸುಮ್ಮನೆ ತನ್ನ ಕೋಣೆ ಸೇರುತ್ತಾನೆ. ಅತ್ತ ಎರಡು ವಾರವಾದರೂ ಕೆಲಸಕ್ಕೆ ಕಾಂಜಿ ಬರದಿದ್ದನ್ನು ನೋಡಿ ಜನ ಆತನ ಬಗ್ಗೆ ತಮಗೆ ಬೇಕಾದಂತೆ ಕತೆ ಹುಟ್ಟಿಸಿಕೊಂಡು ಮಾತಾಡಲು ಪ್ರಾರಂಭಿಸುತ್ತಾರೆ.

  ಕಾಂಜಿ ಇದ್ಯಾವುದಕ್ಕೂ ಗಮನ ಕೊಡದೆ ಮತ್ತೆ ಆ ಹುಡುಗಿಯ, ಆಕೆ ಈಗ ಕೆಲಸ ಮಾಡುತ್ತಿದ್ದ, ಬೊಂಬೆ ತಯಾರಿಕಾ ಕಾರ್ಖಾನೆಯ ಬಳಿ ಹೋಗಿ ತನ್ನೊಡನೆ ಕಾಲ ಕಳೆಯಲು ಕೇಳಿಕೊಳ್ಳುತ್ತಾನೆ. ಆದರೆ ಆಕೆ ಇದ್ದ ಕೆಲಸ ಬಿಟ್ಟು ಹೀಗೆ ಸುತ್ತಿದರೆ ಹೊಟ್ಟೆಪಾಡು ನಡೆಯಬೇಕಲ್ಲ ಎಂದು ನಿರಾಕರಿಸಿರುತ್ತಾಳೆ. ಆದರೆ ಕಾಂಜಿಯ ಒತ್ತಡಕ್ಕೆ ಮಣಿದು ಆತನೊಡನೆ ಸಂಜೆ ಬರುವುದಕ್ಕೆ ಒಪ್ಪಿಕೊಳ್ಳುತ್ತಾಳೆ. ಹೊಟೆಲ್ಲೊಂದರಲ್ಲಿ ಮಾತನಾಡುತ್ತ ಆ ಹುಡುಗಿ ಕಾಂಜಿ ಯಾಕೆ ಹೀಗೆ ತನಗೆ ಉಪಚಾರ ಮಾಡುತ್ತಿದ್ದಾನೆ ಎಂದು ಕೇಳಿದಾಗ ಕಾಂಜಿ ತನ್ನ ಭಾವನೆಯನ್ನು ಬಗೆಬಗೆಯಾಗಿ ಹೇಳಲು ಪ್ರಯತ್ನಿಸಿ ಕಡೆಗೆ ತನ್ನ ಕ್ಯಾನ್ಸರ್ ಬಗ್ಗೆ ತಿಳಿಸುತ್ತಾನೆ. ತನಗೆ ಆ ಹುಡುಗಿಯಂತೆ ಒಂದು ದಿನವಾದರೂ ಸಂತೋಷದಿಂದ ಜೀವಿಸಬೇಕು ಎಂಬ ಆಸೆ ಎಂದು ಹೇಳಿಕೊಳ್ಳುತ್ತಾನೆ. ಆಕೆಯ ಆ ನಗು ಸಂತೋಷ ತನಗೆ ಅಸೂಯೆ ಹುಟ್ಟಿಸುತ್ತಿದೆಯೆಂದು, ತಾನೂ ಹಾಗಿರಲು ಏನು ಮಾಡಬೇಕು ಎಂದು ಕೇಳಿದಾಗ, ಆ ಹುಡುಗಿ ತಾನು ವಿಶೇಷವಾಗಿ ಏನೂ ಮಾಡುತ್ತಿಲ್ಲವೆಂದು ಆದರೆ ತಾನು ಮಾಡುವ ಬೊಂಬೆಯ ಕೆಲಸ ಬಹಳ ಸಂತೋಷ ಕೊಡುತ್ತದೆ, ಆತನೂ ಹಾಗೇನಾದರೂ ಮಾಡಬಾರದೇಕೆ ಎಂದು ಕೇಳುತ್ತಾಳೆ. ಅದು ಸರಿ ಎನಿಸಿದರೂ ತನ್ನ ಕಚೇರಿಯಲ್ಲಿ ಹಾಗೆ ಮಾಡಲು ಏನೂ ಸಾಧ್ಯವಿಲ್ಲವೆಂದು ಬೇಸರಪಟ್ಟುಕೊಳ್ಳುತ್ತಾನೆ. ಆದರೆ ಇದ್ದಕ್ಕಿದ್ದಂತೆ ಮಿಂಚು ಹರಿದಂತೆ ಏನೋ ಯೋಚಿಸಿ ಇನ್ನೂ ಕಾಲ ಮಿಂಚಿಲ್ಲ, ತಾನು ಕಚೇರಿಯಲ್ಲಿ ಏನಾದರೂ ಮಾಡಲು ಸಾಧ್ಯವಿದೆ ಎಂದು ಯೋಚಿಸಿ ಹೊಸ ಮನುಷ್ಯನಾದಂತೆ ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಆಗ ಹೊಟೆಲಿನಲ್ಲಿ ಹುಟ್ಟುಹಬ್ಬದ ಸ್ನೇಹಕೂಟವನ್ನು ಆಚರಿಸುತ್ತಿದ್ದ ಯಾರೋ “ಹ್ಯಾಪಿ ಬರ್ತ್ ಡೇ ಟು ಯೂ” ಎಂದು ಹಾಡಿದಾಗ ಕಾಂಜಿಯ ಮರುಜನ್ಮವನ್ನು ನೋಡಿಯೇ ಹಾಡಿದಂತೆ ಭಾಸವಾಗುತ್ತದೆ. ಮಾರನೆ ದಿನವೇ ಮಹಿಳೆಯರ ಗುಂಪು ಕೊಟ್ಟಿದ್ದ ದೂರಿನ ಮೇಲೆ ಕ್ರಮ ತೆಗೆದುಕೊಂಡು ಅವರಿಗೆ ಪರಿಹಾರ ಮಾಡಿಕೊಡಲು ಮುಂದಾಗುತ್ತಾನೆ. ಇದಾದ ಐದು ತಿಂಗಳ ನಂತರ ಕಾಂಜಿ ತನ್ನ ಖಾಯಿಲೆಗೆ ಬಲಿಯಾಗುತ್ತಾನೆ.

  ಸತ್ತ ನಂತರ ಆತನ ಸ್ಮರಣಾರ್ಥ ಮನೆಯಲ್ಲಿ ಏರ್ಪಡಿಸಿದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕಚೇರಿಯ ಎಲ್ಲ ಸಹೋದ್ಯೋಗಿಗಳು ಬಂದಿರುತ್ತಾರೆ. ಅಲ್ಲಿಗೆ ಡೆಪ್ಯುಟಿ ಮೇಯರ್ ಕೂಡ ಬಂದಿರುತ್ತಾರೆ. ಡೆಪ್ಯುಟಿ ಮೇಯರ್ ಅಲ್ಲಿಗೆ ಬಂದಿದ್ದಾರೆ ಎಂದು ತಿಳಿದ ಕೆಲ ಪತ್ರಕರ್ತರು ಅಲ್ಲಿಗೇ ಬಂದು ಅವರನ್ನು ಕೆಲ ಪ್ರಶ್ನೆ ಕೇಳಲು ಮುಂದಾಗುತ್ತಾರೆ. ಪತ್ರಕರ್ತರು, ಡೆಪ್ಯುಟಿ ಮೇಯರ್ ಉದ್ಯಾನವನದ ಉದ್ಘಾಟನೆ ಮಾಡಿದಾಗ ಅದೇಕೆ ಕಾಂಜಿ ವಾಟನಾಬೆಯ ಕೊಡುಗೆಯ ಬಗ್ಗೆ ಹೇಳಲಿಲ್ಲ ಎಂದು ಪ್ರಶ್ನಿಸುತ್ತಾರೆ. ಆಗ ಉಪ ಮೇಯರ್, ಕಾಂಜಿ ಸರ್ಕಾರವೆಂಬ ದೊಡ್ಡ ಯಂತ್ರದಲ್ಲಿ ಒಂದು ಚಿಕ್ಕ ಭಾಗವಾಗಿ ಮಾತ್ರ ಇದರಲ್ಲಿ ಕೆಲಸ ಮಾಡಿದ್ದು, ಎಲ್ಲಾ ಕೀರ್ತಿ ಅವರೊಬ್ಬರಿಗೇ ಸಲ್ಲುವುದು ನ್ಯಾಯವಲ್ಲ ಎನ್ನುತ್ತಾರೆ. ಆಗ ಪತ್ರಕರ್ತರು ಸಾರ್ವಜನಿಕ ಅಭಿಪ್ರಾಯ ಬೇರೆಯೇ ಇದ್ದು, ಮೊದಲಿನಿಂದಲೂ ಆ ಉದ್ಯಾನವನ ಪೂರ್ತಿ ನಿರ್ಮಾಣವಾಗುವವರೆಗೂ ಕಾಂಜಿ ಬಹಳ ಕಾಳಜಿ ವಹಿಸಿದ್ದಾರೆಂದೂ, ಅವರ ಕೆಲಸದ ಕೀರ್ತಿಯನ್ನೆಲ್ಲಾ ಉಪ ಮೇಯರ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿದೆ ಎಂದು ಹೇಳುತ್ತಾರೆ. ತಾವು ನಿರ್ಮಿಸಿದ ಉದ್ಯಾನವನದಲ್ಲೇ ಕಾಂಜಿ ಸತ್ತಿದ್ದು ವ್ಯವಸ್ಥೆಯ ವಿರುದ್ಧದ ಅವರ ಮೌನ ಪ್ರತಿಭಟನೆಯ ಪ್ರತೀಕ ಎಂದು ಮಾತಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ಉಪ ಮೇಯರ್ ಅವನ್ನೆಲ್ಲ ಅಲ್ಲಗಳೆದು ಅವರ ಸಾವಿಗೆ ಯಾರೂ ನೇರವಾಗೂ ಅಥವಾ ಪರೋಕ್ಷವಾಗೂ ಕಾರಣರಲ್ಲ, ಅವರು ಸತ್ತಿದ್ದು ಹೊಟ್ಟೆಯ ಕ್ಯಾನ್ಸರ್ ನಿಂದ ಎಂದು ಹೇಳಿದಾಗ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ತನ್ನ ಮೇಲೆ ಅಷ್ಟು ಅನುಮಾನವಿದ್ದರೆ ಅವರ ಸಾವಿನ ಬಗ್ಗೆ ದಾಖಲೆ ಕೊಟ್ಟ ಆಸ್ಪತ್ರೆಯಲ್ಲೇ ಕೇಳಬಹುದು ಎಂದು ಹೇಳಿ ಕಳಿಸುತ್ತಾನೆ. ಒಳಗೆ ಬಂದು ಕುಳಿತ ನಂತರ ಪತ್ರಕರ್ತರ ಈ ಅಭಿಪ್ರಾಯದಿಂದ ಸಿಟ್ಟಾಗಿದ್ದ ಉಪ ಮೇಯರ್ ತನ್ನನ್ನು ಸಮರ್ಥಿಸಿಕೊಳ್ಳುವಂತೆ ಮತ್ತೆ ಹೊರಗೆ ಹೇಳಿದ್ದನ್ನೇ ಹೇಳಿ ಈ ಕಾರ್ಯ, ಕಾಂಜಿ ಒಬ್ಬರಿಂದ ಆಗುವಂತದ್ದು ಅಲ್ಲವೆಂದು ಹೇಳುತ್ತಾರೆ. ಅದಕ್ಕೆ ಎಲ್ಲರೂ ಸುಮ್ಮನೆ ಹೌದೆಂದು ತಲೆ ಆಡಿಸುತ್ತಾರೆ. ಅಷ್ಟರಲ್ಲಿ ಉದ್ಯಾನವನದ ಅರ್ಜಿ ಕೊಟ್ಟ ಕುರೋಎ ಕಾಲೋನಿಯ ಹೆಂಗಸರು ಅಳುತ್ತಾ ಬಂದು ತಮ್ಮ ಶ್ರದ್ಧಾಂಜಲಿ ಅರ್ಪಿಸಿ ಉಪಮೇಯರ್ ಕಡೆ ತಿರುಗಿಯೂ ನೋಡದೆ ಹೊರಟು ಹೋಗುತ್ತಾರೆ. ಇದರಿಂದ ಇರುಸುಮುರುಸುಗೊಳ್ಳುವ ಉಪಮೇಯರ್ ಸ್ವಲ್ಪ ಸಮಯದ ನಂತರ ಹೊತ್ತಾಯಿತೆಂದು ಎದ್ದು ಹೊರಟುಹೋಗುತ್ತಾನೆ. ಉಪಮೇಯರ್ ಹೋದ ನಂತರ ಕಚೇರಿಯ ಎಲ್ಲ ಸಹೋದ್ಯೋಗಿಗಳು ಈ ಕಾರ್ಯದಲ್ಲಿ ಕಾಂಜಿಯ ಕೊಡುಗೆ ಎಷ್ಟು ಎಂದು ಚರ್ಚಿಸಲು ಪ್ರಾರಂಭಿಸುತ್ತಾರೆ. ಕೆಲವರು ಅದು ಚುನಾವಣೆ ಹತ್ತಿರವಾಯಿತೆಂದು ಮತ್ತು ಅಲ್ಲಿ ಒಂದು ಹೋಟೆಲ್ ನಿರ್ಮಿಸಬಹುದೆಂದು ಅನ್ನಿಸಿದ್ದರಿಂದ ನಗರಾಡಳಿತ ಇದಕ್ಕೆ ಸಮ್ಮತಿಸಿತು, ಇಲ್ಲದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು? ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ವೃತ್ತಿಜೀವನದ ಕೊನೆಯಲ್ಲಿ ಅವರಲ್ಲಿ ಆದ ಈ ಬದಲಾವಣೆಗೆ ಕಾರಣ ಏನು ಎಂದು ಯೋಚಿಸುತ್ತಾರೆ. ಅವರಿಗೆ ಮುಂಚಿತವಾಗೇ ಹೊಟ್ಟೆಯ ಕ್ಯಾನ್ಸರ್ ಬಗ್ಗೆ ಗೊತ್ತಿತ್ತೇ ಎಂದು ಮಗನನ್ನು ಕೇಳಿದಾಗ ಆತ ಹಾಗೇನಾದರೂ ಇದ್ದಿದ್ದರೆ ತನ್ನ ತಂದೆ ಹೇಳುತ್ತಿದ್ದರು ಎಂದು ಹೇಳುತ್ತಾನೆ. ಅದಕ್ಕೆ ಕಾಂಜಿಯ ಸಹೋದರ ಆತ ತನ್ನ ಇಳಿ ವಯಸ್ಸಿನಲ್ಲಿ ಒಂದು ಹೆಂಗಸಿನ ಸಂಬಂಧ ಮಾಡಿರಬೇಕು, ಹಾಗಾಗಿಯೇ ಈ ರೀತಿ ವರ್ತಿಸಿದ್ದ, ಒಂದು ಹೆಣ್ಣಿನ ಸಂಗ ಒಬ್ಬ ವಯಸ್ಸಾದ ಮನುಷ್ಯನಲ್ಲೂ ಉತ್ಸಾಹ ತುಂಬುತ್ತದೆ ಎಂದು ನಗೆಯಾಡುತ್ತಾನೆ. ಎಲ್ಲರೂ ಅದಕ್ಕೆ ನಗುತ್ತಲೇ ಸಮ್ಮತಿಸುತ್ತಾರೆ. ಆದರೂ ಕಾಂಜಿ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಈ ಉದ್ಯಾನವನದ ವಿಚಾರವಾಗಿ ಕಾಡಿದ್ದು ಬೇಡಿದ್ದು ಮತ್ತು ಅವರ ವಿಚಿತ್ರ ಸಂಕಲ್ಪ ನೋಡಿದರೆ ಬೇರೇನೋ ಇದ್ದಿರಲೇಬೇಕು ಎಂದು ಮತ್ತೆ ಚರ್ಚಿಸತೊಡಗುತ್ತಾರೆ. ಕಾಂಜಿ ಇದರಲ್ಲಿ ವಿಶೇಷ ಕಾಳಜಿ ವಹಿಸಿದ್ದರಿಂದಲೇ ಈ ಕಾರ್ಯವಾಯಿತೆಂದು ಹೇಳುವ ಒಬ್ಬನ ಮಾತಿಗೆ ಇನ್ನೊಬ್ಬ ಆತನನ್ನು ಅಲ್ಲಗಳೆಯುತ್ತಾನೆ. ಚುನಾವಣೆ ಇದ್ದದ್ದರಿಂದ ಮತ್ತು ಆ ಹೋಟೆಲ್ ಮಾಲೀಕರ ಒತ್ತಡದಿಂದ ಉಪ ಮೇಯರ್ ಅದನ್ನು ಆಗಲು ಬಿಟ್ಟದ್ದು ಎಂದಾಗ ಕಾಂಜಿಯ ಕಚೇರಿಯ ಉಪ ಮುಖ್ಯಸ್ಥ ಒನೋ ಅವನನ್ನು ತಡೆದು ಕಾಂಜಿ ಈ ಹಿಂದೆ ನಗರ ಪಾಲಿಕೆ ಕಚೇರಿಯಲ್ಲಿ ಯಾವ ಅಧಿಕಾರಿಯೂ ತೋರಿಲ್ಲದಷ್ಟು ಧೈರ್ಯ ತೋರಿಸಿ ಉಪ ಮೇಯರ್ ಮೇಲೆ ಒತ್ತಡ ತಂದರು ಮತ್ತು ಹೋಟೆಲ್ ಮಾಲಿಕರಿಗೆ ಅಲ್ಲಿ ಹೋಟೆಲ್ ಗಳಾಗುವುದು ಬೇಡವಾಗಿದ್ದರಿಂದ ಕಾಂಜಿಯ ಮೇಲೆ ಹಲ್ಲೆಗೂ ಮುಂದಾಗಿದ್ದರು ಎಂದು ಒಮ್ಮೆ ಆದದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಾನೆ. ಆಗ ಮತ್ತೆ ಎಲ್ಲರೂ ಹಾಗಾದರೆ ಕಾಂಜಿ ಹೀಗೆ ಮಾಡಲು ಏನು ಕಾರಣ ಎಂದು ಗೊಂದಲಗೊಳ್ಳುತ್ತಾರೆ. ಆಗ ಇದ್ದಕ್ಕಿದ್ದಂತೆ ಒನೋ ನೆನಪಿಸಿಕೊಳ್ಳುತ್ತಾನೆ- ಒಮ್ಮೆ ಹೀಗೆ ಉದ್ಯಾನವನದ ಅರ್ಜಿಯ ಬಗ್ಗೆ ಕೇಳಿಕೊಳ್ಳಲು ಹೋಗಿ ವಾಪಸ್ಸಾಗುತ್ತಿದ್ದಾಗ ಒನೋ ಅವರೆಲ್ಲರ ವರ್ತನೆಯಿಂದ ನಿಮಗೆ ಸಿಟ್ಟು ಬರುವುದಿಲ್ಲವೇ? ಎಂದು ಕೇಳಿದಾಗ ಕಾಂಜಿ ಅವರ ಜೊತೆ ದ್ವೇಷ ಕಟ್ಟಿಕೊಳ್ಳುವಷ್ಟು ಸಮಯ ನನ್ನ ಬಳಿ ಇಲ್ಲ ಎಂದು ಉತ್ತರಿಸುತ್ತಾನೆ. ಇದನ್ನು ಹೇಳಿ ಕಾಂಜಿಗೆ ತನ್ನ ಹೊಟ್ಟೆಯ ಕ್ಯಾನ್ಸರ್ ಬಗ್ಗೆ ತಿಳಿದಿರಲೇಬೇಕು ಎಂದು ಹೇಳುತ್ತಾನೆ. ಅದಕ್ಕೆ ಸಮ್ಮತಿಸುವ ಎಲ್ಲರೂ ತಾವು ಆ ಸ್ಥಾನದಲ್ಲಿದ್ದಿದ್ದರೆ ಹಾಗೇ ಮಾಡುತ್ತಿದ್ದೆವು ಎಂದು ಹೇಳುತ್ತಾರೆ. ಅದಕ್ಕೆ ಆಕ್ಷೇಪ ಎತ್ತುವ ಒಹಾರ, ತಮ್ಮನ್ನು ತಾವು ಕಾಂಜಿಗೆ ಹೋಲಿಸಿಕೊಳ್ಳಲು ತಮಗೆ ಆ ಯೋಗ್ಯತೆಯಿಲ್ಲ, ಕೆಲಸ ಮಾಡುವ ನೆಪ ಹೇಳಿ ಜನರ ಸಮಯ ಹಾಳು ಮಾಡುವ ತಾವೆಲ್ಲ ಸಮಾಜದ ಕೆಟ್ಟ ಹುಳುಗಳು ಎಂದು ಅಬ್ಬರಿಸುತ್ತಾನೆ. ಅವನ ಮಾತಿಗೆ ಮೊದಲು ಸಿಟ್ಟಾದರೂ, ಎಲ್ಲರೂ ಅದಕ್ಕೆ ಮತ್ತೆ ಸಮ್ಮತಿಸಿ ಹೇಗೆ ತಾವೆಲ್ಲ ಒಂದು ಸಣ್ಣ ಕೆಲಸಕ್ಕೂ ಎಷ್ಟೆಲ್ಲಾ ದಾಖಲೆ ಸೃಷ್ಟಿಸಿ ಕಡತಗಳ ಸುಳಿ ಸೃಷ್ಟಿಸುತ್ತಿದ್ದೇವೆ ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ.

  ಅಷ್ಟರಲ್ಲಿ ಅಲ್ಲಿಗೆ ಒಬ್ಬ ಪೋಲಿಸ್ ಪೇದೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬರುತ್ತಾನೆ. ಆತ ಅವರೆಲ್ಲರ ಜೊತೆ ಹಿಂದಿನ ರಾತ್ರಿ ಉದ್ಯಾನವನದಲ್ಲಿ ನಡೆದ ಘಟನೆ ಹಂಚಿಕೊಳ್ಳುತ್ತಾನೆ, “ಸುಮಾರು ಹನ್ನೊಂದು ಗಂಟೆಗೆ ಮಂಜು ಬೀಳುತ್ತಿದ್ದ ರಾತ್ರಿಯಲ್ಲಿ ಗಸ್ತು ತಿರುಗುತ್ತ ಆ ಉದ್ಯಾನವನಕ್ಕೆ ಬಂದಾಗ ಯಾರೋ ಜೋಕಾಲಿಯ ಮೇಲೆ ಕುಳಿತಿದ್ದು ಕಾಣಿಸಿತು. ಯಾರೆಂದು ನೋಡಿದಾಗ ಕಾಂಜಿ ವಾಟನಾಬೆ. ಅವರು ಅಷ್ಟು ಸಂತೋಷದಿಂದ ಇದ್ದದ್ದು ನೋಡಿ ಅವರನ್ನು ಅಲ್ಲಿಯೇ ಕುಳಿತುಕೊಳ್ಳಲು ಬಿಟ್ಟುಬಿಟ್ಟೆ. ಅವರು ಹಾಡುತ್ತಿದ್ದ ಆ ಹಾಡು ಮನದ ಆಳಕ್ಕೆ ತಲುಪುವಂತಿತ್ತು.” ಎಂದು ಆ ಪೇದೆ ನಡೆದ್ದನ್ನೆಲ್ಲಾ ಹಂಚಿಕೊಳ್ಳುತ್ತಾನೆ. ಎಲ್ಲರೂ ಇದನ್ನು ಕೇಳಿ ಆಶ್ಚರ್ಯಗೊಳ್ಳುತ್ತಾರೆ.  ಎಲ್ಲರ ಕಲ್ಪನೆಯೂ ಅವರ ಕೊನೆ ಕ್ಷಣದ ಕಡೆಗೆ ತಿರುಗಿದಾಗ, ಕಾಂಜಿ ಅಲ್ಲಿ ಜೋಕಾಲಿಯಲ್ಲಿ ಕುಳಿತು ನೆಮ್ಮದಿಯಿಂದ, ತೃಪ್ತಿಯಿಂದ “ಜೀವನ ಚಿಕ್ಕದು” ಹಾಡು ಹಾಡುತ್ತಿರುವಂತೆ ಕಾಣಿಸುತ್ತದೆ. ಆಗ ದುಃಖತಪ್ತನಾಗುವ ಮಗ ಅಳುತ್ತ ಕೋಣೆಯೊಂದಕ್ಕೆ ಹೋದಾಗ ಅವನ ಹಿಂಬಾಲಿಸುವ ಹೆಂಡತಿಗೆ, ತನ್ನ ತಂದೆ ಹಿಂದಿನ ದಿನ ಮೆಟ್ಟಿಲುಗಳ ಕೆಳಗೆ ತನಗಾಗಿ ನಿವೃತ್ತಿ ವೇತನದ ಎಲ್ಲ ಅರ್ಜಿಗಳು ಮತ್ತು ಮುದ್ರೆಗಳನ್ನು ಸಿದ್ಧಪಡಿಸಿ ಇಟ್ಟೇ ಉದ್ಯಾನವನಕ್ಕೆ ಹೋಗಿದ್ದರು ಎಂದು ಹೇಳುತ್ತಾನೆ. ಸಾಕಷ್ಟು ಕುಡಿದು ಮತ್ತೇರಿದ್ದ ಕಾಂಜಿಯ ಸಹೋದ್ಯೋಗಿಗಳು ತಾವೂ ಇನ್ನುಮುಂದೆ ಕಾಂಜಿಯಂತೆ ಬದುಕುತ್ತೇವೆ, ಅವರ ಸಾವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಉದ್ಗಾರವೆತ್ತಿ ಹೊರಡುತ್ತಾರೆ. ಮಾರನೆ ದಿನ ಕಾಂಜಿಯ ಸ್ಥಾನಕ್ಕೆ ಬಡ್ತಿ ಹೊಂದಿದ ಒನೋ ಈಗ ಕಾಂಜಿಯ ಕುರ್ಚಿಯಲ್ಲಿ ಕುಳಿತು ಕಡತಗಳನ್ನು ನೋಡುತ್ತಿರುತ್ತಾನೆ. ಒಬ್ಬ ಗುಮಾಸ್ತ ಬಂದು ಒಡೆದು ಹೋದ ಚರಂಡಿಯ ಕೊಳವೆಯ ಬಗ್ಗೆ ಯಾರೋ ದೂರು ತಂದಿರುವ ಬಗ್ಗೆ ಹೇಳಿದಾಗ ಅವರನ್ನು ಅಭಿಯಾಂತ್ರಿಕ(ಎಂಜಿನಿಯರಿಂಗ್) ವಿಭಾಗಕ್ಕೆ ಕಳುಹಿಸಲು ಹೇಳುತ್ತಾನೆ. ಇದನ್ನು ನೋಡಿದ ಇನ್ನೊಬ್ಬ ಗುಮಾಸ್ತ ಎದ್ದು ನಿಂತು ಹಿಂದಿನ ದಿನ ಅಷ್ಟು ಅಬ್ಬರಿಸಿದಿರಲ್ಲ, ಇದೇನಾ ನಿಮ್ಮ ಬದ್ಧತೆ ಎಂದು ಕೇಳುವಂತೆ ಒನೋ ಮತ್ತು ಉಳಿದೆಲ್ಲರತ್ತ ನೋಡುತ್ತಾನೆ. ಆದರೆ ತಾವೇ ರಚಿಸಿಕೊಂಡ ಈ ವ್ಯವಸ್ಥೆಯ ವ್ಯೂಹದಲ್ಲಿ ತಾವು ಅಸಹಾಯಕರು ಮತ್ತು ಎಲ್ಲರೂ ಕಾಂಜಿಯಂತಾಗಲು ಸಾಧ್ಯವಿಲ್ಲ ಎಂದು ಆತನಿಗನ್ನಿಸಿ ಸುಮ್ಮನೆ ಕೂರುತ್ತಾನೆ. ಸಂಜೆ ಅದೇ ಗುಮಾಸ್ತ ಕೆಲಸ ಮುಗಿದ ಮೇಲೆ ಕಾಂಜಿ ನಿರ್ಮಿಸಿದ ಆ ಉದ್ಯಾನವನದ ಬಳಿ ಹೋಗಿ ಅಲ್ಲಿ ಈಗ ಮಕ್ಕಳು ಆಡುತ್ತಿದ್ದನ್ನು ನೋಡಿ ಕಾಂಜಿಯ ಕೆಲಸದಿಂದ ಪ್ರೇರಣೆ ಪಡೆದವನಂತೆ ಮುಂದೆ ಸಾಗುತ್ತಾನೆ.

  ನಾವು ಜೀವನದಲ್ಲಿ ಏನೆಲ್ಲ ಮಾಡಬೇಕು ಎಂದುಕೊಳ್ಳುತ್ತೇವೆ. ಆದರೆ ಮುಂದೆ ಜೀವನದಲ್ಲಿ ಎಲ್ಲವೂ ತಿಳಿಗೊಂಡಾಗ ಮಾಡೋಣ ಎಂದು ಅದನ್ನೆಲ್ಲಾ ತಳ್ಳುತ್ತಾ, ಮುಂದಕ್ಕೆ ಹಾಕುತ್ತ ಸಾಗುತ್ತೇವೆ. ಆದರೆ ನಾವು ಗಮನಿಸದ ಒಂದು ವಿಷಯ ಕಾಂಜಿಯ ಜೀವನದಲ್ಲಿ ಬಂದಂತೆ ಸಾವು ಹೇಳಿ ಬರುವುದಿಲ್ಲ.

  ಅಂದಹಾಗೆ “ಇಕಿರು” ಎಂದರೆ ಜಪಾನಿ ಭಾಷೆಯಲ್ಲಿ “ಬದುಕುವುದು” ಎಂದರ್ಥ.

ಕಾಂಜಿ ಹಾಡುವ ಹಾಡು: https://www.youtube.com/watch?v=rDjmDHiSTm8

-ವಿಶ್ವನಾಥ್

Saturday, 24 February 2018

ದಿ ಜೆನರಲ್(1926)





  ಸ್ಲ್ಯಾಪ್ ಸ್ಟಿಕ್ ಕಾಮಿಡಿ ಚಿತ್ರಗಳ ಬಗ್ಗೆ ಯಾರಾದರೂ ಕೇಳಿದರೆ ಥಟ್ಟನೆ ಹೊಳೆಯುವುದು ಚಾರ್ಲಿ ಚ್ಯಾಪ್ಲಿನ್. ಆದರೆ ಆತನಷ್ಟೇ ಖ್ಯಾತಿ ಹೊಂದಿದ್ದ ಮತ್ತು ಅಷ್ಟೇ ಪ್ರತಿಭಾವಂತನಾಗಿದ್ದ ಮತ್ತೊಬ್ಬ ಕಲಾವಿದನೇ ಬಸ್ಟರ್ ಕೀಟನ್(Buster Keaton). ತನ್ನ ವೃತ್ತಿ ಜೀವನದಲ್ಲಿ ಮಾಡಿಕೊಂಡ ಕೆಲವು ತಪ್ಪು ನಿರ್ಧಾರಗಳಿಂದ ಚ್ಯಾಪ್ಲಿನ್ ನಷ್ಟು ಅವಕಾಶಗಳು ಸಿಗದೆ ಹಾಗೇ ಕಣ್ಮರೆಯಾದ ಕಲಾವಿದ ಈತ. ಚ್ಯಾಪ್ಲಿನ್ ತನ್ನ ಚಿತ್ರಗಳಲ್ಲಿ ತನ್ನ ಮುಖದಲ್ಲಿ ತೋರುತ್ತಿದ್ದ ಭಾವನೆಗಳಿಂದ ಎಲ್ಲರನ್ನೂ ನಗಿಸುತ್ತಿದ್ದರೆ, ಕೀಟನ್ ತನ್ನ ನಿರ್ಭಾವುಕ ಮುಖದಿಂದ ನಗಿಸುತ್ತಿದ್ದ. ಅದಕ್ಕಾಗಿಯೇ ಆತನ ಮುಖಕ್ಕೆ ಡೆಡ್ ಪ್ಯಾನ್ ಫೇಸ್ ಎಂದು ಕರೆಯುವುದುಂಟು. ಆತನು ನಟಿಸಿದ ಅನೇಕ ಚಿತ್ರಗಳಲ್ಲಿ ಮಾಡಿರುವ ಸಾಹಸ ದೃಶ್ಯಗಳು ನಿಜಕ್ಕೂ ಬಹಳ ಅಪಾಯಕಾರಿಯಾದವು. ಆದರೂ ಯಾವುದೇ ಸ್ಟಂಟ್ ಡಬಲ್ ಗಳನ್ನು ಉಪಯೋಗಿಸದೆ ತಾನೇ ಆ ಸಾಹಸಗಳನ್ನು ಮಾಡುತ್ತಿದ್ದುದು ಆಶ್ಚರ್ಯಕರ. ನೋಡುವವರಿಗೆ ನಗು ತರಿಸಿದರೂ ಆತ ಆ ದೃಶ್ಯಗಳಿಗಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಕೀಟನ್ ನ ಈ ದೃಶ್ಯಗಳ ವಿಶಿಷ್ಟತೆ ಮತ್ತು ಆತನಿಗೆ ಅವು ಹೇಗೆ ಮೂಡಿಬರಬೇಕು ಎನ್ನುವ ಬಗ್ಗೆ ಇದ್ದ ಕಲ್ಪನೆಯ ಬಗ್ಗೆ ವಿಸ್ತೃತವಾಗಿ ಈ ಕೆಳಗಿನ ಯುಟ್ಯೂಬ್ ವಿಡಿಯೋದಲ್ಲಿ ಬಹಳ ಚೆನ್ನಾಗಿ ವಿವರಿಸಲಾಗಿದೆ.

  ಆತನ ಚಿತ್ರಗಳಲ್ಲಿ ಇಂದಿಗೂ ಬಹಳ ಮಾತಾಡಲ್ಪಡುವ ಚಿತ್ರ ‘ದಿ ಜೆನರಲ್’. 1926ರಲ್ಲಿ ತೆರೆಕಂಡ ಈ ಚಿತ್ರ ಕೀಟನ್ ಗೆ ಲಾಭ ತರಲಿಲ್ಲ. ಯುದ್ಧ ಚಿತ್ರವನ್ನು ಹಾಸ್ಯಮಯವಾಗಿ ತೋರಿಸುವ ಬಗೆ ಅಂದಿಗೆ ಹೊಸದು. ಈ ಚಿತ್ರ ಇರುವುದು ಬೇರೆ ಅಮೆರಿಕನ್ ಸಿವಿಲ್ ವಾರ್ ನ ಬಗ್ಗೆ. ಅಮೆರಿಕನ್ ಸಿವಿಲ್ ವಾರ್ ಅಂದಿನ ಮಟ್ಟಿಗೆ ಬಹಳ ಸೂಕ್ಷ್ಮವಾದ ವಿಷಯ. ಕೀಟನ್ ಇದರಲ್ಲಿ ಯಾರನ್ನೂ ಗೇಲಿಮಾಡದಿದ್ದರೂ ಸಿವಿಲ್ ವಾರ್ ನಲ್ಲಿ ಗೆದ್ದ ಯೂನಿಯನ್ ಪಡೆಯನ್ನು ಖಳರಂತೆ ತೋರಿಸಿರುವುದೂ ಈ ಚಿತ್ರ ಸೋಲಲು ಕಾರಣವಿರಬಹುದು. ಅದೇನೇ ಇದ್ದರೂ ಇದೆಲ್ಲದರಿಂದ ಹೊರಗೆ ನಿಂತು ನೋಡುವ ನಮಗೆ ಇದೊಂದು ಅದ್ಭುತ ಚಿತ್ರ ಎನಿಸುವುದರಲ್ಲಿ ಎರಡು ಮಾತಿಲ್ಲ.

  ಕಥೆ ಬಹಳ ಸರಳವಾದದ್ದು. ಜಾನಿ ಗ್ರೇ(ಬಸ್ಟರ್ ಕೀಟನ್) ಎಂಬ ಟ್ರೇನ್ ಲೋಕೋಪೈಲಟ್ ಅಥವಾ ಎಂಜಿನಿಯರ್ ಗೆ ಜೀವನದಲ್ಲಿ ಎರಡು ವಿಷಯ ಅತ್ಯಂತ ಪ್ರಿಯವಾದದ್ದು. ತಾನು ಓಡಿಸುವ ರೈಲು, ‘ದಿ ಜೆನರಲ್’ ಮತ್ತು ತಾನು ಪ್ರೀತಿಸುವ ಹುಡುಗಿ ಆನಾಬೆಲ್ ಲೀ. ಹೀಗೆ ಒಂದು ದಿನ ಜಾನಿ ಅವಳ ಮನೆಗೆ ಹೋದಾಗ, ಯೂನಿಯನ್ ಮತ್ತು ಸೌತ್ ನಡುವೆ ಯುದ್ಧ ಘೋಷಣೆಯಾಗುತ್ತದೆ. ಈ ಸುದ್ದಿ ತಿಳಿದ ಲೀ ತಂದೆ ಮತ್ತು ಅಣ್ಣ ಸೈನ್ಯಕ್ಕೆ ಸೇರಲು ಹೊರಡುತ್ತಾರೆ. ಜಾನಿಗೂ ಸೇರುವಂತೆ ಲೀ ಹೇಳಿದಾಗ ಜಾನಿ ಸೈನ್ಯಕ್ಕೆ ಸೇರಲು ಎಲ್ಲರಿಗಿಂತ ಮುಂಚೆ ಓಡಿಹೋಗಿ ಸರತಿಯಲ್ಲಿ ನಿಲ್ಲುತ್ತಾನೆ. ಆದರೆ ಈತ ರೈಲು ಎಂಜಿನಿಯರ್ ಎಂದು ತಿಳಿದ ಕೂಡಲೆ ಈತ ಸೈನ್ಯಕ್ಕಿಂತ ಸಾಮಾನು ಸಾಗಣೆಗೆ ಹೆಚ್ಚು ಮುಖ್ಯವಾಗಿ ಬೇಕಾದವನು ಎಂದು ಯೋಚಿಸಿ ಅಲ್ಲಿನ ಅಧಿಕಾರಿ ಈತನನ್ನು ಸೇರಿಸಿಕೊಳ್ಳದೆ ಕಳುಹಿಸುತ್ತಾನೆ. ಇದು ತಿಳಿಯದ ಜಾನಿ ತನಗಿಂತ ಪೇಲವ ಸ್ಥಿತಿಯಲ್ಲಿರುವವರನ್ನೆಲ್ಲ ಸೇರಿಸಿಕೊಳ್ಳುತ್ತಿದ್ದಾರೆ ಆದರೆ ತನ್ನನ್ನು ಮಾತ್ರ ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಬಹಳ ಯೋಚಿಸಿ ವಿಧವಿಧವಾಗಿ ಸೈನ್ಯಕ್ಕೆ ಸೇರಲು ಬೇಕಿದ್ದ ಚೀಟಿ ಪಡೆಯಲು ಪ್ರಯತ್ನಿಸುತ್ತಾನೆ. ಆದರೆ ಅಧಿಕಾರಿ ಈತನನ್ನು ಅಲ್ಲಿಂದ ಒದ್ದು ಕಳುಹಿಸುತ್ತಾನೆ. ಬೇಜಾರು ಮಾಡಿಕೊಂಡು ಅಲ್ಲಿಂದ ಹೊರಡುತ್ತಿದ್ದಾಗ ಲೀ ತಂದೆ ಮತ್ತು ಅಣ್ಣ ಜಾನಿಯನ್ನು ನೋಡಿ ಸರತಿಯಲ್ಲಿ ತಮ್ಮೊಂದಿಗೆ ನಿಲ್ಲಲು ಕರೆಯುತ್ತಾರೆ. ಆದರೆ ಆಗಷ್ಟೇ ಒದೆತ ತಿಂದು ಬಂದಿದ್ದ ಜಾನಿ ಇಲ್ಲ ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಲೀ ತಂದೆ ಮತ್ತು ಅಣ್ಣ ಆತ ಕರೆದರೂ ಸೈನ್ಯಕ್ಕೆ ಸೇರಲಿಲ್ಲ ಎಂದು ಲೀ ಬಳಿ ಹೇಳುತ್ತಾರೆ. ಇದರಿಂದ ಕೋಪಗೊಳ್ಳುವ ಲೀ, ಜಾನಿಗೆ ಆತ ಸೈನ್ಯದ ಸಮವಸ್ತ್ರ ತೊಡುವವರೆಗೂ ತನ್ನ ಬಳಿ ಮಾತನಾಡದಂತೆ ಹೇಳಿ ಕಳುಹಿಸುತ್ತಾಳೆ.

  ಕೆಲವು ದಿನಗಳ ನಂತರ ಲೀ ಯುದ್ಧದಲ್ಲಿ ಗಾಯಾಳುವಾಗಿದ್ದ ತನ್ನ ತಂದೆಯನ್ನು ನೋಡಲು ಜಾನಿಯ ರೈಲಿನಲ್ಲಿ ಪ್ರಯಾಣ ಮಾಡುತ್ತಾಳೆ. ಯೂನಿಯನ್ ಪಡೆಯ ಕೆಲವು ಗೂಢಚಾರಿಗಳು ಆ ರೈಲನ್ನು ಊಟಕ್ಕೆ ನಿಲ್ಲಿಸಿದಾಗ ಕದ್ದೊಯ್ದು ದಾರಿಯಲ್ಲಿ ಸಿಗುವ ಎಲ್ಲ ಸೇತುವೆಗಳನ್ನು ಧ್ವಂಸಮಾಡಿ ಸೌತ್ ಸೈನ್ಯದ ಸಾಮಾನು ಸಾಗಣೆಯ ದಾರಿಯನ್ನು ನಿಲ್ಲಿಸುವ ಹುನ್ನಾರ ಮಾಡಿ ರೈಲು ಹತ್ತಿರುತ್ತಾರೆ. ಹಾಕಿಕೊಂಡ ಉಪಾಯದಂತೆ ಬಿಗ್ ಶ್ಯಾಂಟಿ ಎಂಬ ಊರಲ್ಲಿ ರೈಲು ನಿಲ್ಲಿಸಿ ಎಲ್ಲರೂ ಊಟಕ್ಕೆ ಹೋದಾಗ ಈ ಗೂಢಚಾರಿ ಪಡೆ ರೈಲನ್ನು ಕದ್ದೊಯ್ಯುತ್ತಾರೆ. ಹಾಗೆ ಕದ್ದೊಯ್ಯುವಾಗ ಅಕಸ್ಮಾತಾಗಿ ಲೀ ತನ್ನ ಲಗೇಜ್ ಹುಡುಕಲು ಲಗೇಜ್ ಕಂಪಾರ್ಟ್ ಮೆಂಟಿನಲ್ಲಿದ್ದಾಗ ಆಕೆಯನ್ನು ನೋಡಿ ಗಾಬರಿಗೊಂಡ ಗೂಢಚಾರಿಗಳು ಆಕೆಯನ್ನೂ ಸೇರಿಸಿ ರೈಲನ್ನು ಕದ್ದೊಯ್ಯುತ್ತಾರೆ. ರೈಲನ್ನು ಯಾರೋ ಕದ್ದೊಯ್ದಿದ್ದಾರೆ ಎಂದು ತಿಳಿದ ತಕ್ಷಣ ಜಾನಿ ಅದರ ಹಿಂದೆ ಓಡುತ್ತಾನೆ. ಸಿಕ್ಕ ಸಿಕ್ಕ ವಾಹನಗಳಲ್ಲಿ ಅದನ್ನು ಹಿಂಬಾಲಿಸುತ್ತಾನೆ. ಕೊನೆಗೆ ಮುಂದಿನ ನಿಲ್ದಾಣ ತಲುಪಿ ಅಲ್ಲಿದ್ದ ಇನ್ನೊಂದು ರೈಲು(ಟೆಕ್ಸಾಸ್ ಅದರ ಹೆಸರು) ತೆಗೆದುಕೊಂಡು ಕದ್ದೊಯ್ದ ರೈಲನ್ನು ಹಿಂಬಾಲಿಸುತ್ತಾನೆ. ರೈಲಿನ ಈ ಚೇಸ್ ದೃಶ್ಯವನ್ನು ಬಹುಶಃ ಬೇರೆ ಇನ್ಯಾವ ಚಿತ್ರದಲ್ಲಿಯೂ ಕಾಣಲಾರಿರಿ. ಒಂದು ರೈಲು ಇನ್ನೊಂದನ್ನು ಚೇಸ್ ಮಾಡುವುದು ಎಂದರೆ ಏನರ್ಥ? ಅವು ಓಡುವುದು ಹಳಿಯ ಮೇಲಲ್ಲವೇ? ಇಂತಹ ವಿಚಿತ್ರಗಳನ್ನು ಹೊತ್ತು ಮಾರ್ಗ ಮಧ್ಯೆ ಅನೇಕ ಗ್ಯಾಗ್ ಗಳನ್ನು(ದೈಹಿಕ ಹಾಸ್ಯ) ಮಾಡುತ್ತಾ ತನ್ನ ರೈಲು ಜೆನರಲ್ ಅನ್ನು ಹಿಂಬಾಲಿಸುತ್ತಾನೆ. ತಾನು ಕೊಂಡೊಯ್ದಿದ್ದ ರೈಲನ್ನು ಮಾರ್ಗ ಮಧ್ಯೆ ಬಿಟ್ಟು ಕಾಡೊಳಗೆ ಹೊಕ್ಕು ತನ್ನ ರೈಲನ್ನು ಕೊಂಡೊಯ್ದ ಕಡೆಗೆ ಮೆಲ್ಲಗೆ ಹೋಗುತ್ತಾನೆ. ಅಷ್ಟರಲ್ಲಿ ಮಳೆ ಬಂದು ಮಳೆಯಲ್ಲಿ ನೆನೆಯುತ್ತ ತನ್ನ ರೈಲು ಕದ್ದೊಯ್ದ ಗೂಢಚಾರರು ಹೋದ ಮನೆಗೆ ಹೋಗುತ್ತಾನೆ. ಯಾರು ಇಲ್ಲವೆಂದು ತಿಳಿದು ಅಲ್ಲಿದ್ದ ಊಟದ ಟೇಬಲ್ಲಿನ ಮೇಲಿನ ತಿಂಡಿಯನ್ನು ಎತ್ತಿಕೊಳ್ಳುತ್ತಿದ್ದಂತೆ ಅಲ್ಲಿಗೆ ಆ ಗೂಢಚಾರರು ಬರುತ್ತಾರೆ. ಅವರನ್ನು ನೋಡಿದ ಜಾನಿ ಅಲ್ಲಿಂದ ತಪ್ಪಿಸಿಕೊಳ್ಳಲಾಗದೆ, ಅದೇ ಟೇಬಲ್ಲಿನ ಕೆಳಗೆ ಅಡಗಿ ಕೂರುತ್ತಾನೆ. ಹಾಗೇ ಕೂತು ಅಲ್ಲಿದ್ದವರು ಯುದ್ಧದ ಮುಂದಿನ ನಡೆಯ ಬಗ್ಗೆ ಮಾತಾಡುವುದನ್ನೆಲ್ಲ ಕೇಳಿಸಿಕೊಳ್ಳುತ್ತಾನೆ. ಅಷ್ಟರಲ್ಲಿ ಅವರು ರೈಲು ತರುವಾಗ ಸೆರೆ ಹಿಡಿದ ಆನಬೆಲ್ ಲೀ ಳನ್ನು ಕರೆತರುತ್ತಾರೆ. ಇದನ್ನು ಟೇಬಲ್ಲಿಗೆ ಹೊದಿಸಿದ್ದ ಬಟ್ಟೆಯ ಮೇಲಾದ ಸಣ್ಣ ತೂತಿನಿಂದ ಜಾನಿ ನೋಡಿ ಆಶ್ಚರ್ಯಗೊಂಡು ಲೀ ಇವರ ಬಳಿ ಹೇಗೆ ಸಿಕ್ಕಿಹಾಕಿಕೊಂಡಳು ಎಂದು ಯೋಚಿಸುತ್ತ, ಆಕೆಯನ್ನು ಮತ್ತು ತನ್ನ ರೈಲನ್ನು ಅಲ್ಲಿಂದ ಹೇಗಾದರೂ ಮಾಡಿ ಕೊಂಡೊಯ್ಯಬೇಕು ಎಂದು ನಿರ್ಧರಿಸುತ್ತಾನೆ. ನೆರೆದಿದ್ದವರೆಲ್ಲ ಮಾತುಕತೆಯ ನಂತರ ತಮ್ಮ ತಮ್ಮ ಕೋಣೆಗಳಿಗೆ ತೆರಳಿದ ನಂತರ ಜಾನಿ ಸಮಯ ನೋಡಿ ಅಲ್ಲಿಂದ ಹೊರಬಂದು ಹೊರಗೆ ಕಾವಲಿದ್ದ ಸೈನಿಕನೊಬ್ಬನನ್ನು ಹೊಡೆದುರುಳಿಸಿ ಅವನ ಬಟ್ಟೆ ತೊಟ್ಟು ಲೀ ಳನ್ನು ಬಿಡಿಸಿ ಹೊರತರುತ್ತಾನೆ. ಇಬ್ಬರೂ ಹೊರಬಂದು ಕಾಡು ಸೇರಿ ವಿಶ್ರಾಂತಿ ಪಡೆಯುತ್ತಾರೆ. ಲೀಗೆ ತನ್ನ ಪ್ರಿಯತಮ ಜಾನಿ ತನ್ನನ್ನು ಕಾಪಾಡಲು ಬಂದಿದ್ದಾನೆ ಎಂದು ತಿಳಿದು ಬಹಳ ಸಂತೋಷಪಡುತ್ತಾಳೆ.

  ಮರುದಿನ ಬೆಳಗ್ಗೆ ಇಬ್ಬರೂ ಎಚ್ಚರಗೊಂಡ ನಂತರ ಜಾನಿ ತಾನು ಮತ್ತು ಲೀ ಉತ್ತರದ ಸೈನ್ಯದ ಒಂದು ದೊಡ್ಡ ಕ್ಯಾಂಪ್ ನಲ್ಲಿ ಇದ್ದಾರೆಂದು ತಿಳಿದು ಭಯಗೊಳ್ಳುತ್ತಾರೆ. ಆದರೂ ಜಾನಿ ಉಪಾಯದಿಂದ ಲೀ ಜೊತೆ ತನ್ನ ರೈಲು ‘ದಿ ಜೆನರಲ್’ ಓಡಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಇವನು ಅಲ್ಲಿಂದ ಹೊರಡುತಿದ್ದಂತೆ, ಉತ್ತರದ ಸೈನಿಕರು ಇವನನ್ನು ಇನ್ನೊಂದು ರೈಲಿನಲ್ಲಿ ಹಿಂಬಾಲಿಸುತ್ತಾರೆ. ಹಿಂದಿನ ದಿನ ಕೇಳಿಸಿಕೊಂಡ ಯುದ್ಧದ ಯೋಜನೆಗಳ ಪ್ರಕಾರ ಮುಂದೆ ಬರುವ ಸೇತುವೆ ಉತ್ತರದ ಸೈನ್ಯಕ್ಕೆ ಬಹಳ ಮುಖ್ಯವಾದದ್ದು ಎಂದು ಯೋಚಿಸುವ ಜಾನಿ ಆ ಸೇತುವೆಯನ್ನು ಧ್ವಂಸಮಾಡಲು ತನ್ನ ರೈಲನ್ನು ವೇಗವಾಗಿ ಓಡಿಸುತ್ತಾ ಹೋಗುತ್ತಾನೆ. ಹಾಗೆ ಹೋಗುತ್ತಾ ತನ್ನನ್ನು ಹಿಂಬಾಲಿಸಿ ಬರುತ್ತಿರುವ ಇನ್ನೊಂದು ರೈಲಿಗೆ ಅನೇಕ ಅಡ್ಡಿಗಳನ್ನು ನಿರ್ಮಿಸುತ್ತಾ ಹೋಗುತ್ತಾನೆ. ಹೀಗೆ ಹೋಗುವಾಗ ಜಾನಿ ಪ್ರೇಯಸಿ ಲೀ ತನಗೆ ಆದಷ್ಟು ಸಹಾಯ ಮಾಡುತ್ತಾ ಹೋಗುತ್ತಾಳೆ. ಆದರೆ ಆಕೆ ಮಾಡುವ ಸಹಾಯ ಜಾನಿಯ ಉಪಯೋಗಕ್ಕೆ ಬಾರದು. ರೈಲನ್ನು ಓಡಿಸುವುದರಲ್ಲಿ ಮಗ್ನನಾಗಿದ್ದ ಜಾನಿ ಲೀಗೆ ಕಟ್ಟಿಗೆಯನ್ನು ಒಂದೊಂದಾಗಿ ಬಾಯ್ಲರ್ ಗೆ ಹಾಕು ಎಂದಾಗ ಆಕೆ, ಒಂದೊಂದೇ ಕಟ್ಟಿಗೆ ತೆಗೆದು ನೋಡಿ ಅದು ಚೆನ್ನಾಗಿ ಕತ್ತರಿಸಲ್ಪಟ್ಟಿದ್ದರೆ ಮಾತ್ರ ಹಾಕುತ್ತಿರುತ್ತಾಳೆ. ಕಟ್ಟಿಗೆಯಲ್ಲಿ ತೂತು ಅಥವಾ ಇನ್ನಿತರೇ ದೋಷಗಳಿದ್ದರೆ ಅದನ್ನು ಬಿಸಾಡುತ್ತಾಳೆ. ಅದು ಸಾಲದೆಂಬಂತೆ ಗೃಹಿಣಿಯ ತರಹ ಪೊರಕೆ ಹಿಡಿದು ಕಸ ಗುಡಿಸಲು ನಿಲ್ಲುತ್ತಾಳೆ. ಹೀಗೆ ತನ್ನ ಪ್ರೇಯಸಿಯ ಮುಗ್ಧತೆಯನ್ನು ನೋಡಿ ಸಿಟ್ಟು ಮಾಡಿಕೊಳ್ಳದೆ ಅವಳಿಗೆ ಮುತ್ತಿಟ್ಟು ಜಾನಿ ಮುಂದುವರೆಯುತ್ತಾನೆ. ಹಿಂದೆ ಬರುತ್ತಿದ್ದ ರೈಲನ್ನು ಸಾಕಷ್ಟು ಹಿಂದಿಕ್ಕಿದ ನಂತರ ಉತ್ತರದ ಸೈನಿಕರು ತಾವು ಇತರೆ ಸೈನಿಕರೊಂದಿಗೆ ಸಂಧಿಸಲು ಯೋಚಿಸಿದ್ದ ಸೇತುವೆ ತಲುಪಿ ಜಾನಿ ಅದಕ್ಕೆ ಬೆಂಕಿಯಿಡುತ್ತಾನೆ. ಅಲ್ಲಿಂದ ತನ್ನ ದಕ್ಷಿಣದ ಸೈನ್ಯದ ಕ್ಯಾಂಪ್ ತಲುಪಿ ಅಲ್ಲಿನ ಜೆನರಲ್ ಗೆ ಸೇತುವೆಯ ಬಳಿ ಉತ್ತರದ ಸೈನಿಕರು ಸೇರುತ್ತಿರುವ ಬಗ್ಗೆ ಮಾಹಿತಿ ಒದಗಿಸಿ ತಕ್ಷಣ ಅಲ್ಲಿಗೆ ಹೋಗುವಂತೆ ಕೋರುತ್ತಾನೆ. ಅವನು ಹೇಳಿದ್ದನ್ನು ಕೇಳಿ ಜೆನರಲ್ ತನ್ನ ಸೈನ್ಯದೊಂದಿಗೆ ಸೇತುವೆಯ ಬಳಿ ಉತ್ತರದ ಸೈನ್ಯವನ್ನು ಎದುರುಗೊಳ್ಳಲು ಹೋಗುತ್ತಾನೆ. ಅವರೊಡನೆ ಜಾನಿ ಕೂಡ ಹೋಗಿ ಜೆನರಲ್ ಸಹಾಯಕ್ಕೆ ನಿಲ್ಲುತ್ತಾನೆ.

  ಇಷ್ಟೆಲ್ಲಾ ಆಗುವುದರಲ್ಲಿ ಉತ್ತರದ ಸೈನಿಕರು ಜಾನಿ ಮಾಡಿಟ್ಟಿದ್ದ ಅಡೆಗಳನ್ನೆಲ್ಲ ದಾಟಿ ಸೇತುವೆ ಬಳಿ ಬಂದು ತಮ್ಮ ಇತರೆ ಸೈನಿಕ ಗುಂಪನ್ನು ಸಂಧಿಸುತ್ತಾರೆ. ಸೇತುವೆಗೆ ಬೆಂಕಿ ಬಿದ್ದಿರುವುದನ್ನು ನೋಡಿ ದಾಟುವುದೊ ಬೇಡವೋ ಎಂದು ಯೋಚಿಸುತ್ತಿದ್ದಾಗ, ಅವರಲ್ಲೇ ಒಬ್ಬ ಜೆನರಲ್ ಸೇತುವೆಯಿನ್ನೂ ಅಷ್ಟು ಸುಟ್ಟಿಲ್ಲ, ದಾಟಬಹುದು ಎಂದು ದಾಟಲು ಹೇಳುತ್ತಾನೆ. ಅದರಂತೆ ರೈಲು ದಾಟಲು ಹೋದಾಗ ರೈಲಿನ ಭಾರ ತಾಳಲಾರದೆ ಸುಟ್ಟು ದುರ್ಬಲಗೊಂಡಿದ್ದ ಸೇತುವೆ ಕುಸಿದು ರೈಲೂ ನದಿಯಲ್ಲಿ ಬೀಳುತ್ತದೆ. ಅಲ್ಲಿಗೆ ಉತ್ತರದ ಸೈನ್ಯದವರ ಸಾಮಾನು ಸಾಗಣೆಗೆ ಮಾಡಿಕೊಂಡ ದಾರಿ ಇನ್ನಿಲ್ಲದಾಗುತ್ತದೆ. ಆಶ್ಚರ್ಯದ ಸಂಗತಿಯೇನೆಂದರೆ ಈ ರೈಲು ಬೀಳುವ ದೃಶ್ಯವನ್ನು ಆಟಿಕೆ ರೈಲು ಮತ್ತು ಸೇತುವೆ ಬಳಸಿ ತೆಗೆದದ್ದಲ್ಲ. ಈ ದೃಶ್ಯಕ್ಕಾಗಿ ನಿಜವಾದ ರೈಲನ್ನು ಮತ್ತು ಸೇತುವೆಯನ್ನು ಬಳಸಿಕೊಳ್ಳಲಾಯಿತು. ಈ ಒಂದು ದೃಶ್ಯ ಮೂಕಿ ಚಿತ್ರಗಳ ಇತಿಹಾಸದಲ್ಲೇ ಅತ್ಯಂತ ದುಬಾರಿ ದೃಶ್ಯ. ಈ ದೃಶ್ಯಕ್ಕಾಗಿ ಕೀಟನ್ ಅಂದಿನ ದಿನಗಳಲ್ಲಿ ನಲವತ್ತೆರಡು ಸಾವಿರ ಡಾಲರ್(ಇಂದಿನ ಲೆಕ್ಕದಲ್ಲಿ ಐದು ಲಕ್ಷ ಡಾಲರ್) ಖರ್ಚು ಮಾಡಿದ್ದ. ಇದರ ಅಂದಾಜು ನಿಮಗೆ ಸಿಗಬೇಕೆಂದರೆ, ಅಂದಿಗೆ ಒಂದು ಹೊಚ್ಚ ಹೊಸ ಕಾರಿನ ಸರಾಸರಿ ಬೆಲೆ ಮುನ್ನೂರು ಡಾಲರ್ ಗಳು. ಚಿತ್ರ ಸೋತು ಕೀಟನ್ ಗೆ ಸಾಕಷ್ಟು ನಷ್ಟವಾಯಿತು. ಆದರೂ ಇಂತಹ ಒಂದು ದೃಶ್ಯ ಆಗಿನ ಕಾಲದಲ್ಲಿ ಅಷ್ಟು ಕರಾರುವಾಕ್ಕಾಗಿ ಮಾಡಿದ್ದು ನೋಡಿದರೆ, ಚಿತ್ರನಿರ್ಮಾಣದಲ್ಲಿ ಅಂದಿನ ವೃತ್ತಿಪರತೆ ಮತ್ತು ನೈಪುಣ್ಯತೆ ಎದ್ದು ಕಾಣುತ್ತದೆ. ಹೊಸ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ ಮತ್ತು ಚಿತ್ರ ನಿರ್ಮಾಣದ ಬಗೆ ಬದಲಾಗುತ್ತಲೇ ಇರುತ್ತದೆ, ಆದರೆ ಇಂತಹ ದೃಶ್ಯಗಳು ಸಿನೆಮಾ ಇತಿಹಾಸದಲ್ಲೇ ಕಾಲಾತೀತವಾಗಿ ನಿಲ್ಲುತ್ತವೆ.


  ರೈಲು ಬಿದ್ದ ನಂತರ ಸಾವರಿಸಿಕೊಂಡು ಮುಂದುವರೆಯುವ ಉತ್ತರದ ಸೈನ್ಯದ ಮೇಲೆ ದಕ್ಷಿಣದ ಸೈನ್ಯ ದಾಳಿ ಮಾಡುತ್ತದೆ. ದಾಳಿಗೆ ಉತ್ತರ ಕೊಡುತ್ತ ಉತ್ತರದ ಸೈನಿಕರು ನದಿಯನ್ನು ದಾಟಲು ಪ್ರಯತ್ನಿಸುತ್ತಿದ್ದ ವೇಳೆ, ಜಾನಿ ಅಚಾತುರ್ಯದಿಂದ ತೋಪು ಸಿಡಿಸಿ ನದಿಯ ನೀರನ್ನು ಹಿಡಿದಿಟ್ಟಿದ್ದ ಚಿಕ್ಕ ಅಣೆಕಟ್ಟನ್ನು ಒಡೆದು ಬಿಡುತ್ತಾನೆ. ಇದರಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ, ಉತ್ತರದ ಸೈನಿಕರು ಅಲ್ಲಿಂದ ಹಿಂದೆ ಸರಿದು ಯುದ್ಧಭೂಮಿಯಿಂದ ಓಡಿಹೋಗುತ್ತಾರೆ. ಯುದ್ಧ ಅಲ್ಲಿಗೆ ಮುಗಿಯುತ್ತದೆ. ಯುದ್ಧದಲ್ಲಿ ಜಯಶಾಲಿಗಳಾಗಿ ಮರಳಿದ ಎಲ್ಲರಿಗೂ ಊರಿನ ಜನ ಅಭಿನಂದಿಸುತ್ತಾರೆ. ತಾನು ಸೈನಿಕನಲ್ಲವಲ್ಲ ಎಂದು ಬೇಸರಪಟ್ಟುಕೊಂಡು ಜಾನಿ ತನ್ನ ರೈಲಿಗೆ ಮರಳಿದಾಗ ಅಲ್ಲಿ ಎದುರಾಳಿ ಸೈನ್ಯದ ಜೆನರಲ್ ಓರ್ವ ಜ್ಞಾನತಪ್ಪಿ ಬಿದ್ದದ್ದು ನೋಡಿ ಆತನನ್ನು ಎಬ್ಬಿಸಿ ತನ್ನ ಸೈನ್ಯದ ಜೆನರಲ್ ಬಳಿಗೆ ಶರಣಾಗತಿ ಮಾಡಿಸಲು ಕರೆದೊಯ್ಯುತ್ತಾನೆ. ಜಾನಿಯ ಶೌರ್ಯ ನೋಡಿದ ಜೆನರಲ್ ಆತನಿಗೆ ಸೈನ್ಯದಲ್ಲಿ ಕೊನೆಗೂ ಸೇರಿಸಿಕೊಂಡು ಅವನಿಗೆ ಲೆಫ್ಟಿನೆಂಟ್ ಹುದ್ದೆಯನ್ನು ಕೊಟ್ಟು ಕಳುಹಿಸುತ್ತಾನೆ. ತನ್ನ ಪ್ರಿಯತಮ ಸೈನ್ಯಕ್ಕೆ ಸೇರಲಿಲ್ಲ ಎಂದು ಬೇಸರಪಟ್ಟುಕೊಂಡಿದ್ದ ಲೀ ಕೊನೆಗೆ ಜಾನಿ ಆಫಿಸರ್ ಆಗಿ ಬಂದದ್ದನ್ನು ನೋಡಿ ಖುಷಿಪಡುತ್ತಾಳೆ. ಇಬ್ಬರೂ ಮತ್ತೆ ಒಂದಾಗುವುದರೊಂದಿಗೆ ಕಥೆ ಮುಗಿಯುತ್ತದೆ.

  ಇಲ್ಲಿ ಚಿತ್ರದಲ್ಲಿ ಬರುವ ಅನೇಕ ಹಾಸ್ಯದ ದೃಶ್ಯಗಳನ್ನು ನಾನು ವಿವರಿಸಲು ಹೋಗಿಲ್ಲ. ವಿವರಿಸುವುದು ಕಷ್ಟವೂ ಹೌದು. ಅವನು ಓಡಿಬಂದ, ಅವನು ಬಿದ್ದ ಎಂದೆಲ್ಲ ವಿವರಿಸಲು ಹೋದರೆ ಹಾಸ್ಯ, ಶಾಲೆಯ ವ್ಯಾಕರಣ ಪುಸ್ತಕದ ರೀತಿ ಅನಿಸುತ್ತದೆ. ಅದೃಷ್ಟವಶಾತ್ ಈ ಚಿತ್ರ ಯೂಟ್ಯೂಬ್ ನಲ್ಲಿ ನೋಡಲು ಲಭ್ಯವಿರುವುದರಿಂದ ಕೆಳಗೆ ಈ ಚಿತ್ರದ ಲಿಂಕ್ ಹಂಚಿಕೊಳ್ಳುತ್ತಿದ್ದೇನೆ. ಎರಡು ಬಗೆಯ ಹಿನ್ನಲೆ ಸಂಗೀತವಿರುವ ಚಿತ್ರಗಳು ಇವೆ. ನನಗೆ ಇಷ್ಟವಾದದ್ದನ್ನು( ಕಿನೋ ಇಂಟರ್ ನ್ಯಾಷನಲ್ ನ ಕಾಪಿ) ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಹಾಗೆ ಈ ಚಿತ್ರದ ಬಗೆಗಿನ ಇನ್ನಷ್ಟು ಸ್ವಾರಸ್ಯದ ಸಂಗತಿಗಳನ್ನು ಹೇಳುವ ಕೆಲವು ವೆಬ್ ಲಿಂಕ್ ಗಳನ್ನೂ ಹಂಚಿಕೊಂಡಿದ್ದೇನೆ.

ಚಿತ್ರದ ಲಿಂಕ್ - https://www.youtube.com/watch?v=x2X58JcO9G4

ರೈಲು ಬೀಳುವ ದೃಶ್ಯದ ಬಗ್ಗೆ ಇರುವ ಲಿಂಕ್ -  https://www.thevintagenews.com/2016/09/06/priority-train-scene-buster-keatons-general-expensive-scene-silent-film-history/

ದಿ ಜೆನರಲ್ ಚಿತ್ರಿಸಿದ ಜಾಗದ ಕುರಿತು - https://silentlocations.wordpress.com/2014/09/26/how-buster-keaton-filmed-the-general/

ರೈಲು ಬಿದ್ದ ನಂತರ ಏನಾಯಿತು ಎನ್ನುವುದರ ಬಗ್ಗೆ - http://offbeatoregon.com/H1002b_TheGeneral.html

-ವಿಶ್ವನಾಥ್


Tuesday, 30 January 2018

ಸ್ಪಿರಿಟೆಡ್ ಅವೇ (ಸೆನ್ ಟೊ ಚಿಹಿರೊ ನೊ ಕಾಮಿಕಾಕುಶಿ)





  ಜಾಪನೀಸ್ ಮಾಂಗ(Manga) ಚಿತ್ರಗಳು ಕಾಮಿಕ್ಸ್ ಓದುವವರಿಗೆ ಪರಿಚಿತ. ಕಾಮಿಕ್ಸ್ ಗಳ ಪ್ರಪಂಚದಲ್ಲಿ ಮಾಂಗ(Manga) ಗಳದ್ದೇ ಒಂದು ದೊಡ್ಡ ಸ್ಥಾನವಿದೆ. ಅದರಲ್ಲೂ ಜಪಾನಿ ಸಂಸ್ಕೃತಿಯನ್ನು ಬಿಂಬಿಸುವ ಕಾಮಿಕ್ಸ್ ಗಳು ಬಹಳ ಚಿತ್ತಾಕರ್ಷಕವಾಗಿರುತ್ತವೆ. ಆ ಬಣ್ಣಗಳು, ಪಾತ್ರಗಳ ಕಣ್ಣುಗಳು, ಕಣ್ಣುಗಳಲ್ಲೇ ಭಾವನೆಗಳನ್ನು ಹೆಚ್ಚಾಗಿ ತೋರ್ಪಡಿಸುವ ಕಲೆ ಈ ಕಾಮಿಕ್ಸ್ ವಿಧಕ್ಕೆ ಇಷ್ಟು ಪ್ರಖ್ಯಾತಿ ತಂದು ಕೊಟ್ಟಿದೆ. ಇದರ ಮುಂದುವರಿದ ಭಾಗವಾಗಿ ರೂಪುಗೊಂಡವೇ ಆನೀಮ್ ಚಿತ್ರಗಳು. ಆನೀಮ್ ಚಿತ್ರಗಳ ತಯಾರಿಕೆಯಲ್ಲಿ ಅತ್ಯಂತ ಪಳಗಿದ ಮತ್ತು ಆನೀಮ್ ಚಿತ್ರಗಳಿಗೆ ವಿಶ್ವಖ್ಯಾತಿಯನ್ನು ತಂದುಕೊಟ್ಟ ನಿರ್ದೇಶಕ ಹಯಾಒ ಮಿಯಜಾಕಿ. ಈತನ ಚಿತ್ರಗಳ ಪ್ರತಿಯೊಂದು ಫ್ರೇಮ್ ಗಳು ಕೈಯಿಂದ ಚಿತ್ರಿತವಾದವು. ಚಿತ್ರ ನಿರ್ಮಾಣ ಮಾಡಲು ಕಂಪ್ಯೂಟರ್ ಬಳಕೆ ಮಾಡಿದರೂ ಅದು ಕೇವಲ ಚಿತ್ರ ಸಜ್ಜಿಕೆಯ ಕೊನೆಯ ಭಾಗದಲ್ಲಿ ಮಾತ್ರ. ಆತ ಚಿತ್ರ ನಿರ್ಮಾಣಕ್ಕೆ ಕೂತು ಚಿತ್ರ ಬಿಡಿಸುವ ಬಗೆಯ ಬಗ್ಗೆಯೇ ಹಲವಾರು ಡಾಕ್ಯುಮೆಂಟರಿಗಳು ಯುಟ್ಯೂಬ್ ನಲ್ಲಿ ಸಿಗುತ್ತವೆ. ನಿಮಗೆ ಸಮಯವಾದಾಗ ಖಂಡಿತ ಅವನ್ನು ನೋಡಲೇಬೇಕು. ಇಂತಹ ಚಿತ್ರಗಳ ಹಿಂದೆ ಇರುವ ಅಪಾರ ಶ್ರಮ ಇವು ಹಾಲಿವುಡ್ ಆನಿಮೇಶನ್ ಚಿತ್ರಗಳಿಗಿಂತ ಎಷ್ಟು ಭಿನ್ನ ಎಂದು ತೋರಿಸಿಕೊಡುತ್ತವೆ. ಮಿಯಜಾಕಿ ಚಿತ್ರಗಳಲ್ಲಿ ಪಾತ್ರಗಳು ಮಾನವ ಸಹಜ ಸಂಕೀರ್ಣ ಭಾವನೆಗಳನ್ನು ಅಷ್ಟೇ ನಾಜೂಕಾಗಿ ತೋರಿಸುವುದರಿಂದ ಆತನ ಚಿತ್ರಗಳು ಮಕ್ಕಳ ಚಿತ್ರವಾಗಿ ಕಂಡರೂ ಅದಕ್ಕೂ ಮೀರಿ ನಿಲ್ಲುತ್ತದೆ. ಹಾಲಿವುಡ್ ನಲ್ಲಿ ಡಿಸ್ನಿ ಚಿತ್ರ ಸಂಸ್ಥೆ ಹೇಗೆ ಆನಿಮೇಶನ್ ಚಿತ್ರಗಳಿಗೆ ಖ್ಯಾತಿಯನ್ನು ಪಡೆದಿದೆಯೋ ಹಾಗೆಯೇ ‘ಸ್ಟುಡಿಯೋ ಘಿಬ್ಲಿ’(Studio Ghibli) ಕೂಡ. ಇಂದು ನಾನು ಅಂತಹ ಅದ್ಭುತ ಆನೀಮ್ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಚಿತ್ರ ‘ಸ್ಪಿರಿಟೆಡ್ ಅವೇ’ ಬಗ್ಗೆ ಬರೆಯುತ್ತಿದ್ದೇನೆ.

  ಚಿಹಿರೊ ಎಂಬ ಹುಡುಗಿಗೆ ತನ್ನ ತಂದೆಗೆ ತಾವಿದ್ದ ಊರಿಂದ ಬೇರೆಡೆಗೆ ವರ್ಗವಾದಾಗ ತನ್ನ ಸ್ನೇಹಿತರನ್ನೆಲ್ಲಾ ಬಿಟ್ಟು ಹೋಗಬೇಕಲ್ಲ ಎಂದು ತುಂಬಾ ಬೇಸರ. ಆದರೆ ಆಕೆಯ ತಂದೆ ತಾಯಿ ಹೊಸ ಊರಿನಲ್ಲಿ ಹೊಸ ಗೆಳೆಯರನ್ನು ಮಾಡಿಕೊಳ್ಳಬಹುದು ಎಂದು ಸಮಾಧಾನಪಡಿಸುತ್ತ ವರ್ಗಾವಣೆಯಾದ ಊರಿನಲ್ಲಿ ತಮ್ಮ ಕಾರಿನಲ್ಲಿ ಹೊಸ ಮನೆಯನ್ನು ಹುಡುಕುತ್ತ ಹೋಗುತ್ತಿರುತ್ತಾರೆ. ಆದರೆ ದಾರಿ ತಪ್ಪಿ ಒಂದು ಹಳೆಯ ಮುಚ್ಚಿರುವ ಥೀಮ್ ಪಾರ್ಕ್ ಗೆ ಬರುತ್ತಾರೆ. ಕುತೂಹಲದಿಂದ ಚಿಹಿರೊಳ ತಂದೆತಾಯಿ ಇಬ್ಬರೂ ಒಳಗೆ ಹೋಗುತ್ತಾರೆ. ತನಗೆ ಒಳಗೆ ಹೋಗಲು ಇಷ್ಟವಿಲ್ಲದಿದ್ದರೂ ಒಬ್ಬಳೇ ಹಿಂದೆ ಉಳಿಯಲು ಭಯವಾಗಿ ಚಿಹಿರೊ ಅವರೊಡನೆ ಹೋಗುತ್ತಾಳೆ. ಪಾರ್ಕ್ ಮುಚ್ಚಿದೆ ಎಂದು ಭಾವಿಸಿ ಸುತ್ತಾಡುವ ಆಕೆಯ ತಂದೆತಾಯಿ ಕೊಂಚ ದೂರ ನಡೆದಾಗ ರುಚಿಯಾದ ಅಡಿಗೆ ವಾಸನೆ ಬರುತ್ತಿರುವುದನ್ನು ಗಮನಿಸಿ ಅದರ ಜಾಡು ಹಿಡಿದು ಅಡಿಗೆ ಇದ್ದ ಅಂಗಡಿಗೆ ಹೋಗುತ್ತಾರೆ. ಹೋಗಿ ನೋಡಿದಾಗ ಆಗಷ್ಟೇ ಮಾಡಿಟ್ಟ ವಿಧವಿಧವಾದ ಅಡಿಗೆಗಳು. ಆದರೆ ಅದನ್ನು ಗಮನಿಸಿಕೊಳ್ಳಲು ಯಾರೂ ಇಲ್ಲ. ಚಿಹಿರೊಗೆ ಅಲ್ಲಿ ಏನೋ ಸರಿ ಇಲ್ಲ ಅನ್ನಿಸಿ ವಾಪಸ್ ಹೋಗೋಣ ಎಂದು ಆಕೆಯ ತಂದೆತಾಯಿಯನ್ನು ಕರೆದಾಗ, ಆಕೆಯನ್ನು ಸಮಾಧಾನ ಪಡಿಸಿ, ಅಂಗಡಿಯವರು ಇಲ್ಲೇ ಎಲ್ಲೋ ಹೋಗಿರಬೇಕು, ಮೊದಲು ತಿನ್ನೋಣ ಆಮೇಲೆ ಅವರು ಬಂದ ಮೇಲೆ ದುಡ್ಡು ಕೊಡೋಣ ಎಂದು ಹೇಳಿ ಅಲ್ಲಿದ್ದ ಅಡಿಗೆಗಳಿಗೆ ಕೈ ಹಾಕಿ ತಿನ್ನಲು ತೊಡಗುತ್ತಾರೆ. ತನ್ನ ಕರೆಗೆ ಓಗೊಡದಿದ್ದಾಗ ಚಿಹಿರೊ ಅವರನ್ನು ಅಲ್ಲಿಯೇ ಬಿಟ್ಟು ಸುತ್ತಾಡಲು ಹೋಗುತ್ತಾಳೆ. ಹಾಗೆಯೇ ಸುತ್ತಾಡುತ್ತ ಒಂದು ಸ್ನಾನಗೃಹದ ಬಳಿಗೆ ಬರುತ್ತಾಳೆ. ಅದು ಇನ್ನೂ ಕೆಲಸ ಮಾಡುತ್ತಿರುವುದನ್ನು ನೋಡಿ ಅಚ್ಚರಿಗೊಳ್ಳುತ್ತಾಳೆ. ಆಕೆ ಇದನ್ನೆಲ್ಲಾ ನೋಡುತ್ತಾ ನಿಂತಿರುವಾಗ ಒಮ್ಮೆಲೇ ಒಂದು ಹುಡುಗ(ಹಾಕು) ಬಂದು ಆಕೆ ಅಲ್ಲಿ ಇರುವುದು ಸುರಕ್ಷಿತವಲ್ಲ ಮತ್ತು ಅಲ್ಲಿಂದ ಕತ್ತಲಾಗುವುದರೊಳಗೆ ನದಿ ದಾಟಿ ಹೊರಡುವಂತೆ ಹೇಳುತ್ತಾನೆ. ಹಾಗೆ ಹೇಳುತ್ತಿದ್ದ ಹಾಗೆ ನಿಧಾನವಾಗಿ ಸಂಜೆಯಾಗಿ ಸುತ್ತ ಮುತ್ತಲಿನ ಅಂಗಡಿಗಳ ದೀಪ ಹತ್ತಿಕೊಳ್ಳುತ್ತವೆ ಮತ್ತು ಭೂತದಂತ ಆಕೃತಿಗಳು ಓಡಾಡಲು ಪ್ರಾರಂಭಿಸುತ್ತವೆ. ಗಾಬರಿಗೊಂಡ ಚಿಹಿರೊ ತನ್ನ ತಂದೆತಾಯಿ ಹುಡುಕಿ ಅವರು ಕುಳಿತಿದ್ದ ಅಂಗಡಿಗೆ ಬರುತ್ತಾಳೆ. ಆದರೆ ಅವರಿದ್ದ ಜಾಗದಲ್ಲಿ ಎರಡು ದೊಡ್ಡ ಹಂದಿಗಳು ಕೂತಿದ್ದು ನೋಡಿ ಇನ್ನಷ್ಟು ಗಾಬರಿಗೊಂಡು ತನ್ನ ತಂದೆತಾಯಿಯನ್ನು ಕೂಗುತ್ತ ನದಿಯತ್ತ ಓಡುತ್ತಾಳೆ. ತಾವು ಒಳಬರುವಾಗ ಬತ್ತಿ ಬರಡಾಗಿದ್ದ ನದಿ ಈಗ ತುಂಬಿ ಹರಿಯುತ್ತಿದ್ದನ್ನು ನೋಡಿ ಆಕೆಗೆ ನದಿಯನ್ನು ದಾಟಲಾಗದೆ ಏನು ಮಾಡಬೇಕು ಎಂದು ತಿಳಿಯದೆ ಅಲ್ಲೇ ಅಳುತ್ತಾ ನಿಲ್ಲುತ್ತಾಳೆ. ಮತ್ತೆ ಆಕೆಯನ್ನು ಹುಡುಕಿ ಬರುವ ಹುಡುಗ ಆಕೆಗೆ ಸಮಾಧಾನ ಪಡಿಸಿ, ಆಕೆಯ ತಂದೆತಾಯಿ ಹಂದಿಯಾಗಿ ಮಾರ್ಪಾಡಾಗಿದ್ದು, ಆಕೆ ಸಿಕ್ಕಿಬಿದ್ದರೆ ಆಕೆಗೂ ಇದೆ ಗತಿಯಾಗುವುದು ಎಂದು ಹೇಳುತ್ತಾನೆ. ಇದನ್ನು ತಪ್ಪಿಸಿಕೊಂಡು ಆಕೆಯ ತಂದೆತಾಯಿ ಹುಡುಕಿ ಅಲ್ಲಿಂದ ಓಡಿಹೋಗಲು ಸಹಾಯ ಮಾಡುವುದಾಗಿಯೂ ಅಲ್ಲಿಯ ತನಕ ತಾನು ಹೇಳಿದಂತೆ ಕೇಳಲು ಹೇಳುತ್ತಾನೆ. ಚಿಹಿರೊ ಕೂಡ ಅವನು ಹೇಳಿದಂತೆ ಕೇಳುತ್ತಾಳೆ.

  ತನ್ನ ತಂದೆ ತಾಯಿಯನ್ನು ಕರೆದುಕೊಂಡು ಅಲ್ಲಿಂದ ತಪ್ಪಿಸಿಕೊಂಡು ಹೋಗುವವರೆಗೂ ಆ ಹುಡುಗ ಚಿಹಿರೊಗೆ ಸ್ನಾನಗೃಹದ ಬಾಯ್ಲರ್ ನೋಡಿಕೊಳ್ಳುವ ಕಮಾಜಿ ಬಳಿ ಕೆಲಸ ಮಾಡಿಕೊಂಡು ಇರಲು ಹೇಳುತ್ತಾನೆ. ಹಾಗೆ ಮಾಡದೆ ಸ್ನಾನಗೃಹದ ಒಡತಿ ಯುಬಾಬಾ ಕೈಯಲ್ಲಿ ಸಿಕ್ಕಿಬಿದ್ದರೆ, ಯುಬಾಬಾ ಆಕೆಯನ್ನು ಪ್ರಾಣಿಯನ್ನಾಗಿ ಮಾಡಿಬಿಡುತ್ತಾಳೆ ಎಂದು ಎಚ್ಚರಿಸುತ್ತಾನೆ. ಆತ ಹೇಳಿದಂತೆ ಕಮಾಜಿ ಹುಡುಕಿಕೊಂಡು ಹೋದಾಗ ಆತ ಆಕೆಗೆ ಕೊಡಲು ತನ್ನ ಬಳಿ ಏನೂ ಕೆಲಸವಿಲ್ಲ ಎಂದೂ, ಒಂದು ಕೆಲಸದ ಹುಡುಗಿಯ(ರಿನ್) ಜೊತೆ ಮಾಡಿ ಯುಬಾಬಾ ಬಳಿ ಕೆಲಸ ಕೇಳಿಕೊಳ್ಳಲು ಕಳಹುತ್ತಾನೆ. ಹೆದರಿಕೊಂಡೇ ಯುಬಾಬಾ ಕೋಣೆ ತಲುಪುವ ಚಿಹಿರೊ ಯುಬಾಬಾ ಬಳಿ ಕೆಲಸ ಕೇಳುತ್ತಾಳೆ. ಮೊದಲಿಗೆ ಇವಳನ್ನು ನೋಡಿ ಕೆಲಸ ಕೊಡಲಾಗದು ಎಂದು ನಿರಾಕರಿಸಿದರೂ ಚಿಹಿರೊಳ ಹಠ ನೋಡಿ ಮತ್ತು ಯುಬಾಬಾ ಕೆಲಸ ಕೇಳಿ ಬಂದವರಿಗೆ ತಾನು ಕೆಲಸ ಕೊಡುವುದಾಗಿ ತೆಗೆದುಕೊಂಡ ಪ್ರಮಾಣದ ಕಾರಣದಿಂದ ಕೆಲಸ ಕೊಡುತ್ತಾಳೆ. ಆದರೆ ಕೆಲಸದಲ್ಲಿ ಚಿಹಿರೊ ಮೇಲೆ ಯಾವುದೇ ದೂರು ಕೇಳಿಬಂದರೂ ಅವಳನ್ನು ಅವಳ ತಂದೆತಾಯಿಯಂತೆ ಹಂದಿಯಾಗಿ ಮಾಡುವುದಾಗಿ ಯುಬಾಬಾ ಕರಾರು ಮಾಡಿ ಅದಕ್ಕೆ ಚಿಹಿರೊಳಿಂದ ಸಹಿ ಪಡೆಯುತ್ತಾಳೆ. ಸಹಿಯಲ್ಲಿನ ಅಕ್ಷರಗಳನ್ನು ತನ್ನ ಮಂತ್ರಶಕ್ತಿಯಿಂದ ಬಂಧಿಸಿ ಚಿಹಿರೊಗೆ ಸೆನ್ ಎಂಬ ಹೊಸ ಹೆಸರು ಕೊಡುತ್ತಾಳೆ. ಯುಬಾಬಾ ಈಕೆಯ ಜವಾಬ್ದಾರಿಯನ್ನು ಚಿಹಿರೊಳನ್ನು ರಕ್ಷಿಸಿದ ಹುಡುಗ (ಹಾಕು) ನಿಗೆ ವಹಿಸುತ್ತಾಳೆ. ಚಿಹಿರೊಗೆ ಆಶ್ಚರ್ಯವಾದರೂ ಏನು ಹೇಳುವುದೋ ತಿಳಿಯದೆ ಸುಮ್ಮನೆ ಅವನ ಹಿಂಬಾಲಿಸುತ್ತಾಳೆ. ಹಾಕು ಚಿಹಿರೊಳನ್ನು ರಿನ್ ಜೊತೆ ಕೆಲಸಕ್ಕೆ ಕಳಹುತ್ತಾನೆ. ರಿನ್ ಚಿಹಿರೊಗೆ ಎಲ್ಲ ಕೆಲಸವನ್ನು ಪರಿಚಯ ಮಾಡಿಸಿ ಉಡಲು ಬಟ್ಟೆ ಕೊಟ್ಟು ಮಲಗುವ ಜಾಗ ತೋರಿಸುತ್ತಾಳೆ. ಇದೆಲ್ಲ ಆದ ನಂತರ ಚಿಹಿರೊ ತನ್ನ ತಂದೆತಾಯಿ ನೆನೆದು ಕಣ್ಣೀರಿಡುತ್ತ ಮಲಗುತ್ತಾಳೆ. ಸ್ನಾನಗೃಹದ ಮತ್ತೊಂದು ಭಾಗದಲ್ಲಿ ಯುಬಾಬಾ ಒಂದು ದೊಡ್ಡ ಹಕ್ಕಿಯಾಗಿ ಮಾರ್ಪಾಡುಗೊಂಡು ಎಲ್ಲಿಗೋ ಬೆಳಗ್ಗೆಯೇ ಹಾರಿ ಹೋಗಿ ಕತ್ತಲಾದ ಮೇಲೆ ಮರಳುತ್ತಾಳೆ. ಈ ನಡುವೆ ಹಾಕು ಚಿಹಿರೊಳನ್ನು ಗುಟ್ಟಾಗಿ ಆಕೆಯ ತಂದೆತಾಯಿಯನ್ನು ಇಟ್ಟಿದ್ದ ಜಾಗಕ್ಕೆ ಕರೆದುಕೊಂಡು ಹೋಗುತ್ತಾನೆ. ಆದರೆ ಚಿಹಿರೊ ಎಷ್ಟು ಕೂಗಿಕರೆದರೂ ಅಲ್ಲಿದ್ದ ಹಂದಿಗಳಲ್ಲಿ ಆಕೆಯ ತಂದೆತಾಯಿ ಆಕೆಯ ಕೂಗಿಗೆ ಸ್ಪಂದಿಸುವುದಿಲ್ಲ. ಇದರಿಂದ ಬೇಸರಗೊಳ್ಳುವ ಚಿಹಿರೊ ಅಳುತ್ತ ಕೂರುತ್ತಾಳೆ. ಆಕೆಯನ್ನು ಸಮಾಧಾನಪಡಿಸುವ ಹಾಕು, ಆಕೆ ಅಲ್ಲಿಗೆ ಬಂದಾಗಿನ ಬಟ್ಟೆಗಳನ್ನು ಕೊಟ್ಟು ಅವನ್ನು ಗುಟ್ಟಾಗಿಡಲು ಹೇಳುತ್ತಾನೆ. ಆಗ ಅದರಲ್ಲಿನ ಒಂದು ಪತ್ರವನ್ನು ನೋಡಿ ಚಿಹಿರೊ ತನ್ನ ಹೆಸರು ಸೆನ್ ಅಲ್ಲ ಚಿಹಿರೊ ಎಂದು ಜ್ಞಾಪಿಸಿಕೊಳ್ಳುತ್ತಾಳೆ. ಅದಕ್ಕೆ ಹಾಕು, ಯುಬಾಬಾ ಮಂತ್ರ ಕೆಲಸ ಮಾಡುವುದೇ ಆಕೆಗೆ ಸೆರೆಸಿಕ್ಕವರ ಹೆಸರನ್ನು ಬಂಧಿಸಿ ಅವರು ಅಲ್ಲಿಗೆ ಹೇಗೆ ಬಂದರು ಎಂಬುದನ್ನೇ ಮರೆಸಿಬಿಡುವುದು. ತಾನೂ ಅಲ್ಲಿಗೆ ಹೇಗೆ ಬಂದೆ ಎಂಬುದನ್ನೇ ಮರೆತಿದ್ದು ತನ್ನ ಹೆಸರು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬಾರದು ಎಂದು ಬೇಸರಪಟ್ಟುಕೊಳ್ಳುತ್ತಾನೆ. ನಂತರ ಆಕೆಯನ್ನು ಆಕೆಯ ಕೋಣೆಗೆ ಮರಳಲು ಹೇಳಿ ತಾನು ಒಂದು ಡ್ರ್ಯಾಗನ್ ಆಗಿ ಪರಿವರ್ತನೆಗೊಂಡು ಹೊರಟುಹೋಗುತ್ತಾನೆ.

  ರಾತ್ರಿಯ ಹೊತ್ತಿಗೆ ಮರಳುವ ಯುಬಾಬಾ ಸ್ನಾನಗೃಹದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾಳೆ. ರಿನ್ ಮತ್ತು ಚಿಹಿರೊ ಇಬ್ಬರಿಗೂ ಅಂದು ದೊಡ್ಡ ಸ್ನಾನದ ಕೋಣೆಯನ್ನು ಸ್ವಚ್ಛಗೊಳಿಸುವ ಕೆಲಸ ಕೊಡಲಾಗುತ್ತದೆ. ಈ ಮಧ್ಯೆ ಹೊರಗೆ ಸುರಿಯುತ್ತಿದ್ದ ಮಳೆಯಲ್ಲಿ ನೆನೆಯಬೇಡ ಎಂದು ಹೊರಗೆ ನಿಂತಿದ್ದ ಒಂದು ಭೂತಕ್ಕೆ ಚಿಹಿರೊ ಹೇಳಿ ಆ ಭೂತ ಒಳ ಬರಲು ಬಾಗಿಲನ್ನು ತೆರೆದಿತ್ತು ಹೋಗುತ್ತಾಳೆ. ಅಂದೇ ಒಂದು ಭೂತ ಬಹಳ ಕೆಟ್ಟ ವಾಸನೆ ಬೀರುತ್ತ ಸ್ನಾನದಕೋಣೆಗೆ ಬರುತ್ತದೆ. ಅದನ್ನು ಸ್ವಚ್ಛಗೊಳಿಸುವ ಕೆಲಸವನ್ನೂ ಇವರಿಬ್ಬರಿಗೆ ವಹಿಸುತ್ತಾರೆ. ಸ್ನಾನಕ್ಕೆ ಬೇಕಾಗುವ ಟೋಕನ್ ತರಲು ರಿನ್ ಚಿಹಿರೊಗೆ ಕಳಹುತ್ತಾಳೆ. ಆದರೆ ಚಿಹಿರೊಳ ಆನನುಭವ ನೋಡಿ ಅಲ್ಲಿನ ಮುಖ್ಯಸ್ಥ ಆಕೆಗೆ ಟೋಕನ್ ಕೊಡಲು ನಿರಾಕರಿಸುತ್ತಾನೆ. ಆದರೆ ಅಲ್ಲೇ ನಿಂತಿದ್ದ ಮಳೆಯಲ್ಲಿ ನೆನೆದಿದ್ದ ಭೂತ ಚಿಹಿರೊಗೆ ಸಹಾಯ ಮಾಡಿ ಆಕೆಗೆ ಟೋಕನ್ ಒಂದನ್ನು ಕೊಡುತ್ತದೆ. ಮತ್ತೆ ಆಕೆಯನ್ನು ಹಿಂಬಾಲಿಸುತ್ತಾ ಇನ್ನಷ್ಟು ಟೋಕನ್ ತಂದುಕೊಡುತ್ತದೆ. ತನಗೆ ಒಂದು ಟೋಕನ್ ಸಾಕು ಎಂದು ಚಿಹಿರೊ ಹೇಳಿದ ನಂತರ ಆ ಭೂತ ಮರೆಯಾಗುತ್ತದೆ. ಇಷ್ಟರಲ್ಲಿ ಚಿಹಿರೊ ಇದ್ದ ಕೋಣೆ ತಲಪುವ ಆ ಕೆಟ್ಟ ವಾಸನೆಯ ಭೂತ ಸ್ನಾನಕ್ಕೆ ಕೂರುತ್ತದೆ. ಅದನ್ನು ಸ್ವಚ್ಛ ಮಾಡುತ್ತಿದ್ದ ವೇಳೆ ಚಿಹಿರೋಗೆ ಆ ಭೂತದ ಮೈಯಲ್ಲಿ ಏನೋ ಸಿಕ್ಕಿಹಾಕಿಕೊಂಡಿದ್ದು ಅದನ್ನು ತೆಗೆಯಲು ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾಳೆ. ಇದಕ್ಕೆ ಸ್ಪಂದಿಸುವ ಅಲ್ಲೇ ಇದ್ದ ಯುಬಾಬಾ ಸ್ನಾನದ ಮನೆಯ ಎಲ್ಲರಿಗೂ ಚಿಹಿರೊಗೆ ಸಹಾಯ ಮಾಡಲು ಆಜ್ಞೆ ನೀಡುತ್ತಾಳೆ. ಇದರಿಂದ ಆ ಭೂತ ಈ ಮುಂಚೆ ನುಂಗಿದ ಎಷ್ಟೋ ಕಸವನ್ನು ಚಿಹಿರೊ ಎಲ್ಲರ ಸಹಾಯದೊಂದಿಗೆ ಹೊರಗೆಳೆಯುತ್ತಾಳೆ. ಕೊನೆಗೆ ಯಶಸ್ವಿಯಾಗಿ ಆ ಭೂತವನ್ನು ಸ್ವಚ್ಛಗೊಳಿಸುವ ಚಿಹಿರೊಗೆ ಆ ಭೂತ ಒಂದು ಔಷಧಿಯ ಉಂಡೆಯನ್ನು ಉಡುಗೊರೆಯಾಗಿ ಕೊಟ್ಟು ಸ್ನಾನದ ಮನೆಯ ಸೇವೆಗೆ ಅಲ್ಲಿ ಕೊಂಚ ಬಂಗಾರವನ್ನು ಬಿಟ್ಟು ಒಂದು ಡ್ರ್ಯಾಗನ್ ಆಗಿ ಮಾರ್ಪಾಡಾಗಿ ಅಲ್ಲಿಂದ ಹೊರಟು ಹೋಗುತ್ತದೆ. ಚಿಹಿರೊ ಕೆಲಸವನ್ನು ಯುಬಾಬಾ ತುಂಬಾ ಮೆಚ್ಚಿ ಆಕೆಯನ್ನು ಕೊಂಡಾಡುತ್ತಾಳೆ.

 ಇನ್ನೊಂದು ದಿನ ಬೆಳಗ್ಗೆ ಚಿಹಿರೊಗೆ ಟೋಕನ್ ಕೊಟ್ಟು ಸಹಾಯ ಮಾಡಿದ ಭೂತ ತುಂಬಾ ಶ್ರೀಮಂತ ಭೂತವೆಂಬಂತೆ ಸ್ನಾನದ ಮನೆಗೆ ಬಂದು ತನಗೆ ತಿನ್ನಲು ಕೊಡುವ ಎಲ್ಲರಿಗೂ ಬಂಗಾರ ಕೊಡುವುದಾಗಿ ಹೇಳಿ ಎಲ್ಲರನ್ನೂ ಎಬ್ಬಿಸುತ್ತದೆ. ಎಲ್ಲರೂ ಬಂಗಾರ ಕೊಡುವ ಭೂತ ಬಂದಿದೆ ಎಂದು ಎದ್ದು ತಮಗೆ ಸಿಕ್ಕಿದ ತಿಂಡಿಯನ್ನೆಲ್ಲ ತಂದು ಆ ಭೂತಕ್ಕೆ ಕೊಟ್ಟು ಸ್ನಾನದ ಕೋಣೆಗೆ ಕರೆದೊಯ್ಯುತ್ತಾರೆ. ಈ ನಡುವೆ ಚಿಹಿರೊ ಈ ಭೂತದ ಗದ್ದಲದಲ್ಲಿ ಎಲ್ಲರಂತೆ ತೊಡಗದೆ ತನ್ನ ಕೋಣೆಯಲ್ಲಿ ಕಾಲ ಕಳೆಯುತ್ತಾ ಇದ್ದಾಗ, ಹಾಕು ಡ್ರ್ಯಾಗನ್ ಆಗಿ ಮೈಯೆಲ್ಲಾ ಗಾಯಮಾಡಿಕೊಂಡು ಆಕಾಶದಲ್ಲಿ ಹಾರಾಡುತಿದ್ದನ್ನು ಚಿಹಿರೊ ನೋಡುತ್ತಾಳೆ. ಅವನ ಹಿಂದೆ ಕೆಲವು ಪಕ್ಷಿಯಂತವು ಹಿಂಬಾಲಿಸುತ್ತಾ ಇರುತ್ತವೆ. ಹಾಕುನನ್ನು ಕೂಗಿ ತನ್ನ ಕೋಣೆಗೆ ಕರೆಯುತ್ತಾಳೆ. ಅವನು ಒಳ ಬರುತ್ತಿದ್ದಂತೆ ಬಾಗಿಲು ಮುಚ್ಚಿ ಆ ಪಕ್ಷಿಗಳನ್ನು ಹೊರಕ್ಕೆ ಉಳಿಯುವಂತೆ ಮಾಡುತ್ತಾಳೆ. ಆದರೆ ಹಾಗೂ ಒಳನುಗ್ಗುವ ಪಕ್ಷಿಗಳನ್ನು ನೋಡಿದಾಗ ಅವು ಕಾಗದದ ಪಕ್ಷಿಗಳು. ಇವು ಹೇಗೆ ಹಾಕುವಿಗೆ ಗಾಯ ಮಾಡಿದವು ಎಂದು ಯೋಚಿಸುತ್ತಿದ್ದಂತೆಯೇ, ಹಾಕು ಮತ್ತೆ ಹೊರಹೋಗಿ ಯುಬಾಬಾಳ ಕೋಣೆ ಸೇರುತ್ತಾನೆ. ಅದನ್ನು ಗಮನಿಸಿದ ಚಿಹಿರೊ ತಾನೂ ಗುಟ್ಟಾಗಿ ಯುಬಾಬಾ ಕೋಣೆಗೆ ಹೋಗುತ್ತಾಳೆ. ಹಾಗೆ ಹೋಗುವಾಗ, ಬಂಗಾರದ ಭೂತ ಸಿಕ್ಕಿ ಚಿಹಿರೊಗೆ ಬಂಗಾರದ ಆಸೆ ತೋರಿಸುತ್ತದೆ. ಆದರೆ ಚಿಹಿರೊ ಅದಕ್ಕೆ ಮಣಿಯದೆ ಯುಬಾಬಾ ಕೋಣೆಯ ಕಡೆ ಧಾವಿಸುತ್ತಾಳೆ. ಈ ನಡುವೆ ಕಾಗದದ ಪಕ್ಷಿಯೊಂದು ಆಕೆಗೆ ಗೊತ್ತಾಗದಂತೆ ಆಕೆಯ ಬೆನ್ನ ಮೇಲೆ ಕೂರುತ್ತದೆ. ಚಿಹಿರೊ ಅತ್ತ ಹೋಗುತ್ತಿದ್ದಂತೆ, ಆ ಭೂತ ಎಲ್ಲರನ್ನೂ ತಿನ್ನಲು ತೊಡಗುತ್ತದೆ.

  ಚಿಹಿರೊ ಯುಬಾಬಾಳಿಗೆ ಕಾಣದಂತೆ ಅಡಗಲು ಆಕೆಯ ಮಗನ ಕೋಣೆಗೆ ನುಗ್ಗಿ ಅಡಗಿಕೊಳ್ಳುತ್ತಾಳೆ. ಯುಬಾಬಾ ಗಾಯಗೊಂಡು ಬಂದ ಹಾಕುನನ್ನು ರಕ್ಷಿಸಲು ಇಷ್ಟಪಡದೆ ಆತನನ್ನು ಸಾಯಲು ಬಿಟ್ಟು ಹೋಗುತ್ತಾಳೆ. ಆಕೆ ಹೋದನಂತರ ಚಿಹಿರೊ ಕೋಣೆಯಿಂದ ಹೊರಬರಲು ಪ್ರಯತ್ನಿಸಿದಾಗ, ಯುಬಾಬಾಳ ಮಗ ಆಕೆಯನ್ನು ತನ್ನೊಡನೆ ಆಡಿಕೊಂಡಿರಲು ಹೇಳುತ್ತಾನೆ. ಯಾಕೆ ಆತ ಹೊರಗೆ ಹೋಗಿ ಆಡಬಾರದು ಎಂದು ಚಿಹಿರೊ ಕೇಳಿದಾಗ, ಹೊರಗೆ ಹೋದರೆ ಮೈ ಕೊಳಕಾಗಿ ಕ್ರಿಮಿಗಳಿಂದ ರೋಗ ಬರುತ್ತದೆ, ಹಾಗಾಗಿ ಕೋಣೆಯಲ್ಲೇ ಆಡುತ್ತೇನೆ ಎಂದು ಆತ ಹೇಳುತ್ತಾನೆ ಮತ್ತು ಅವನ ಮಾತಿಗೆ ಒಪ್ಪದಿದ್ದರೆ ಯುಬಾಬಾಳನ್ನು ಕೂಗಿ ಕರೆಯುವುದಾಗಿಯೂ, ಚಿಹಿರೊಳನ್ನು ಅಲ್ಲಿ ಕಂಡರೆ ಯುಬಾಬಾ ಆಕೆಯನ್ನು ಖಂಡಿತ ಕೊಲ್ಲುವುದಾಗಿಯೂ ಹೆದರಿಸುತ್ತಾನೆ. ಚಿಹಿರೊ ಕಡೆಗೆ ಏನೂ ದಾರಿ ಕಾಣದೆ, ತನ್ನ ಕೊಳಕಾದ ಕೈ ತೋರಿಸಿ ಆತನನ್ನು ಹೆದರಿಸಿ ಅಲ್ಲಿಂದ ಹೊರ ಬರುತ್ತಾಳೆ. ಹಾಕುನನ್ನು ಎಬ್ಬಿಸಲು ಪ್ರಯತ್ನಿಸುತ್ತಿದ್ದ ವೇಳೆ, ಯುಬಾಬಾಳ ಮಗ ಹೊರಬಂದು ಅಳಲು ಶುರುಮಾಡುತ್ತಾನೆ. ಇದನ್ನು ಕೇಳಲಾಗದೆ, ಕಾಗದದ ಪಕ್ಷಿ ಯುಬಾಬಾಳ ರೂಪ ಪಡೆಯುತ್ತದೆ. ಅದನ್ನು ನೋಡಿ ಆಶ್ಚರ್ಯಗೊಳ್ಳುವ ಚಿಹಿರೊಗೆ ತಾನು ಯುಬಾಬಾ ಅಲ್ಲ ಆಕೆಯ ಅವಳಿ ಸಹೋದರಿ ಜೆನಿಬಾ ಎಂದು ಪರಿಚಯ ಮಾಡಿಕೊಳ್ಳುತ್ತಾಳೆ. ಯುಬಾಬಾ ಹಾಕು ಬಳಸಿ ತನ್ನ ಬಳಿ ಇದ್ದ ಚಿನ್ನದ ಮಾಂತ್ರಿಕ ಮುದ್ರೆಯನ್ನು ಕದ್ದಿದ್ದಾಳೆ, ಅದನ್ನು ಹಿಂಪಡೆಯಲು ತಾನು ಬಂದಿರುವುದಾಗಿ ಹೇಳುತ್ತಾಳೆ. ಅಳುತ್ತ ನಿಂತ ಯುಬಾಬಾಳ ಮಗನನ್ನು ಜೆನಿಬಾ ಇಲಿಯಾಗಿ ಪರಿವರ್ತಿಸಿ, ಅಲ್ಲಿದ್ದ ಯುಬಾಬಾಳ ಕಾಗೆಯನ್ನು ಚಿಕ್ಕ ಪಕ್ಷಿಯನ್ನಾಗಿ ಪರಿವರ್ತಿಸಿ, ಯುಬಾಬಾಳ ಮೂರೂ ತಲೆಗಳ ಗೊಂಬೆಗಳನ್ನು ಕೂಡಿಸಿ ಯುಬಾಬಾ ಮಗನನ್ನಾಗಿ ಮಾಡುತ್ತಾಳೆ. ಇದನ್ನು ಯಾರಿಗೂ ತಿಳಿಸದಂತೆ ಚಿಹಿರೊಗೆ ಎಚ್ಚರಿಸುತ್ತಾಳೆ. ಹಾಕುನನ್ನು ಕೊಂದು ತನ್ನ ಮುದ್ರೆ ಪಡೆಯಲು ಮುಂದಾಗುವ ಜೆನಿಬಾಳನ್ನು ತಡೆಯುವ ಚಿಹಿರೊ ಹಾಕು ಒಳ್ಳೆಯ ಹುಡುಗನಾಗಿದ್ದು ಆತನನ್ನು ಬಿಟ್ಟುಬಿಡುವಂತೆ ಕೋರಿಕೊಳ್ಳುತ್ತಾಳೆ. ಅದಕ್ಕೆ ಜೆನಿಬಾ ಒಪ್ಪದಿದ್ದಾಗ, ಹಾಕು ಜೊತೆಗೆ ಚಿಹಿರೊ ತಪ್ಪಿಸಿಕೊಂಡು ಕಮಾಜಿ ಇದ್ದ ಕೋಣೆಗೆ ಬಂದು ಬೀಳುತ್ತಾರೆ. ಅಲ್ಲಿ ಹಾಕುವಿಗೆ ಹಿಂದೆ ಭೂತ ಕೊಟ್ಟಿದ್ದ ಔಷಧಿಯನ್ನು ತಿನ್ನಿಸಿ ಅವನನ್ನು ಬದುಕಿಸಿಕೊಳ್ಳುತ್ತಾಳೆ. ಔಷಧಿ ತಿಂದ ಬಳಿಕ ತಾನು ಕದ್ದು ತಂದಿದ್ದ ಚಿನ್ನದ ಮುದ್ರೆ ಉಗುಳುವ ಹಾಕು ಡ್ರ್ಯಾಗನ್ ರೂಪದಿಂದ ಮನುಷ್ಯ ರೂಪಕ್ಕೆ ಮರಳಿ ಅಲ್ಲೇ ಸುಸ್ತಾಗಿ ನಿದ್ರಿಸುತ್ತಾನೆ. ಕಮಾಜಿಯೊಡನೆ ಮಾತನಾಡಿ ಇದನ್ನು ಸರಿಪಡಿಸಲು ಆ ಮುದ್ರೆಯನ್ನು ಜೆನಿಬಾಳಿಗೆ ಮರಳಿಸುವುದೇ ದಾರಿ ಎಂದು ಆತನ ಬಳಿ ಆಕೆಯ ಮನೆ ತಲುಪಲು ದಾರಿ ಕೇಳಿ ಅಲ್ಲಿಗೆ ಹೋಗುವ ರೈಲಿಗೆ ಟಿಕೆಟ್ ಪಡೆದು ಹೊರಡಲು ಸಿದ್ಧವಾಗುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸುವ ರಿನ್, ಬಂಗಾರ ಕೊಡುವ ಭೂತ ಎಲ್ಲರನ್ನೂ ತಿನ್ನಲು ತೊಡಗಿದ್ದು, ಅದು ಚಿಹಿರೊಳನ್ನು ಕೇಳುತ್ತಿದೆ ಮತ್ತು ಯುಬಾಬಾ ಅದರಿಂದ ಬಹಳ ಸಿಟ್ಟಾಗಿದ್ದಾಳೆ ಎಂದು ಹೇಳುತ್ತಾಳೆ. ಅದಕ್ಕೆ ಚಿಹಿರೊ ತಾನೇ ಆ ಭೂತವನ್ನು ಎದುರಿಸಿ ಅದನ್ನು ಸ್ನಾನಗೃಹದಿಂದ ಹೊರಗೆ ಕಳಿಸುವೆ ಎಂದು ಹೋಗುತ್ತಾಳೆ. ಆ ಭೂತವಿದ್ದ ಜಾಗಕ್ಕೆ ಹೋಗಿ ನೋಡಿದಾಗ, ಅದು ಸೆನ್(ಚಿಹಿರೊ) ಬೇಕು ಎಂದು ಹಠ ಹಿಡಿದು ಕೂತಿರುತ್ತದೆ. ಆ ಭೂತ ಚಿಹಿರೊಗೆ ಬಂಗಾರದ ಆಸೆಯೂ ತೋರಿಸುತ್ತದೆ. ಆದರೆ ಇದಕ್ಕೆ ಮಣಿಯದ ಚಿಹಿರೊ ಉಪಾಯದಿಂದ ತನ್ನ ಬಳಿ ಉಳಿದಿದ್ದ ಔಷಧಿಯನ್ನು ಅದರ ಬಾಯಿಗೆ ತುರುಕುತ್ತಾಳೆ. ಔಷಧಿಯ ಪ್ರಭಾವದಿಂದ ಆ ಭೂತ ಒದ್ದಾಡಿ, ಅಲ್ಲಿಯ ತನಕ ತಿಂದದ್ದನ್ನೆಲ್ಲ ಕಕ್ಕುತ್ತ, ಸಿಟ್ಟಿಗೆದ್ದು ಚಿಹಿರೊಳನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆ ಭೂತವನ್ನು ಹಾಗೆಯೇ ಸ್ನಾನಗೃಹದಿಂದ ಹೊರಕ್ಕೆ ಕರೆತರುವ ಚಿಹಿರೊ ಬೇಗನೆ ಓಡಿ ಹೋಗಿ ತನಗಾಗಿ ನದಿಯ ಬಳಿ ದೋಣಿಯೊಂದಿಗೆ ಕಾಯುತ್ತಿದ್ದ ರಿನ್ ಸೇರುತ್ತಾಳೆ. ಆ ಭೂತವೂ ಮತ್ತೆ ಆಕೆಯನ್ನು ಹಿಂಬಾಲಿಸುತ್ತಾ ನಿಧಾನವಾಗಿ ಬರುತ್ತದೆ. ರಿನ್ ಆ ಭೂತಕ್ಕೆ, ಚಿಹಿರೊಗೆ ಏನಾದರೂ ಅಪಾಯ ಮಾಡಿದರೆ ಅದರ ಗ್ರಹಾಚಾರ ನೆಟ್ಟಗಿರುವುದಿಲ್ಲ ಎಂದು ಕೂಗಿ ಎಚ್ಚರಿಸಿ ಚಿಹಿರೊಳನ್ನು ರೈಲು ನಿಲ್ದಾಣಕ್ಕೆ ತಂದು ನಿಲ್ಲಿಸುತ್ತಾಳೆ. ಒಂಟಿತನದಿಂದ ಬೇಸತ್ತಿದ್ದ ಆ ಭೂತ ರೈಲು ಬಂದೊಡನೆ ಚಿಹಿರೊ ಜೊತೆ ಬರುವುದಾಗಿ ಹೇಳಿ ಆಕೆಯೊಡನೆ ರೈಲು ಹತ್ತುತ್ತದೆ.

  ಇತ್ತ ಸ್ನಾನದಗೃಹದಲ್ಲಿ ಯುಬಾಬಾ ಆ ಭೂತದಿಂದ ಆದ ನಷ್ಟ ಮತ್ತು ಅದು ಕೊಟ್ಟ ಬಂಗಾರ ಎಲ್ಲ ತಾಳೆ ಹಾಕಿ, ಲಾಭ ನಷ್ಟ ಲೆಕ್ಕ ಹಾಕುತ್ತ ಕೂತಿರುತ್ತಾಳೆ. ಕಮಾಜಿಯಿಂದ ಚಿಹಿರೊ ತನ್ನನ್ನು ಉಳಿಸಿದ ಬಗೆ ಮತ್ತು ತನಗಾಗಿ ಮಾಡಲು ಹೋಗಿರುವ ಕೆಲಸದ ಬಗ್ಗೆ ತಿಳಿದು ಹಾಕು ಯುಬಾಬಾ ಬಳಿ ಹೋಗಿ ತಾನು ಆಕೆಯ ಮಗನನ್ನು ಜೆನಿಬಾ ಬಳಿ ಬಿಟ್ಟಿರುವುದಾಗಿಯೂ, ಆತ ಮರಳಿ ಬೇಕಾದಲ್ಲಿ ಚಿಹಿರೊ ಮತ್ತು ಆಕೆಯ ತಂದೆತಾಯಿಯನ್ನು ಬಿಟ್ಟು ಕಳಿಸಲು ಒಪ್ಪುವಂತೆ ಷರತ್ತು ಹಾಕುತ್ತಾನೆ. ಅದಕ್ಕೆ ಒಪ್ಪುವ ಯುಬಾಬಾ, ಚಿಹಿರೊಗೆ ಒಂದು ಕೊನೆಯ ಪರೀಕ್ಷೆ ನಡೆಸುವುದಾಗಿಯೂ, ಅದರಲ್ಲಿ ಆಕೆ ಗೆದ್ದರೆ ಮಾತ್ರ, ಆಕೆ ತನ್ನ ತಂದೆತಾಯಿಯೊಡನೆ ಮನುಷ್ಯ ಲೋಕಕ್ಕೆ ಮರಳಬಹುದು ಎಂದು ಹೇಳುತ್ತಾಳೆ.

  ಪ್ರಯಾಸದಿಂದ ಜೆನಿಬಾ ಮನೆ ತಲುಪುವ ಚಿಹಿರೊ, ಜೆನಿಬಾಳಿಗೆ ಆಕೆಯ ಚಿನ್ನದ ಮುದ್ರೆ ಹಿಂದಿರುಗಿಸಿ ಹಾಕುನಿಗೆ ಅಪಾಯ ಮಾಡದಂತೆ ಕೇಳಿಕೊಳ್ಳುತ್ತಾಳೆ. ಅದಕ್ಕೆ ಒಪ್ಪುವ ಜೆನಿಬಾ, ಚಿಹಿರೊ ಮತ್ತು ಆಕೆಯ ಗೆಳೆಯರಿಗೆ ತಿನ್ನಲು ತಿಂಡಿ ಕೊಟ್ಟು ಉಪಚರಿಸುತ್ತಾಳೆ. ಹೇಗೆ ಯುಬಾಬಾ ಮತ್ತು ತಾನು ಅವಳಿ ಸಹೋದರಿಯರಾಗಿದ್ದರೂ ಸ್ವಭಾವದಲ್ಲಿ ಭಿನ್ನ ಎಂದು ಜೆನಿಬಾ ಚಿಹಿರೊಳಿಗೆ ಹೇಳುತ್ತಾಳೆ. ಯುಬಾಬಾಳಿಂದ ತಪ್ಪಿಸಿಕೊಳ್ಳಲು ಏನಾದರೂ ಮಾರ್ಗವಿದೆಯೇ ಎಂದು ಚಿಹಿರೊ ಕೇಳಿದಾಗ, ಆ ವಿಷಯದಲ್ಲಿ ತಾನು ಏನೂ ಸಹಾಯ ಮಾಡಲಾಗದು ಎಂದು ಜೆನಿಬಾ ಹೇಳುತ್ತಾಳೆ. ಆದರೆ ಅಷ್ಟರಲ್ಲಿ ಚಿಹಿರೊ ಜೊತೆ ಬಂದಿದ್ದ ಭೂತ, ಇಲಿ ಮತ್ತು ಚಿಕ್ಕ ಪಕ್ಷಿ ಆಕೆಗೆಂದು ಮಾಡಿದ ಕೂದಲು ಕಟ್ಟುವ ದಾರವನ್ನು ಕೊಟ್ಟು ಅದು ಆಕೆಯನ್ನು ಕಾಪಾಡುತ್ತದೆ ಎಂದು ಜೆನಿಬಾ ಹೇಳುತ್ತಾಳೆ. ಹಾಕು ಸ್ಥಿತಿ ಏನಾಗಿರಬಹುದೋ ಎಂದು ಚಿಂತಿಸುತ್ತಾ ಚಿಹಿರೊ ಸಂಕಟ ಪಡುತ್ತಿರಬೇಕಾದರೆ, ಹಾಕು ಡ್ರ್ಯಾಗನ್ ರೂಪದಲ್ಲಿ ಜೆನಿಬಾ ಮನೆ ಬಾಗಿಲಿಗೇ ಬರುತ್ತಾನೆ. ಜೆನಿಬಾ ಹಾಕುವನ್ನು ಕ್ಷಮಿಸಿರುವುದಾಗಿ ಹೇಳಿದ ನಂತರ ಚಿಹಿರೊ ಮತ್ತು ಆಕೆಯ ಗೆಳೆಯರನ್ನು ಹಾಕು ಅಲ್ಲಿಂದ ಕರೆದೊಯ್ಯುತ್ತಾನೆ. ಜೆನಿಬಾ ಭೂತವನ್ನು ತನ್ನೊಡನೆ ಇರಲು ಹೇಳಿ ಅದನ್ನು ಅಲ್ಲಿಯೇ ಉಳಿಸಿಕೊಳ್ಳುತ್ತಾಳೆ. ಆಕಾಶದಲ್ಲಿ ಹಾರಾಡುತ್ತಾ ಹೋಗುತ್ತಿರಬೇಕಾದರೆ, ಚಿಹಿರೊ ತಾನು ಚಿಕ್ಕವಳಿದ್ದಾಗ ಒಮ್ಮೆ ನದಿಯಲ್ಲಿ ಬಿದ್ದಿದ್ದಾಗಿಯೂ, ಇನ್ನು ತಾನು ಮುಳುಗಿದೆ ಎಂದುಕೊಂಡ ವೇಳೆ ನದಿ ಆಕೆಯನ್ನು ದಡ ಸೇರಿಸಿತು ಎಂದು ಹೇಳುತ್ತಾಳೆ. ತನ್ನನ್ನು ಕಾಪಾಡಿದ ನದಿಯನ್ನು ಕೊಹಾಕು ನದಿಯೆಂದು ಕರೆಯುತ್ತಿದ್ದರೆಂದು ಮತ್ತು ಹಾಕುವಿನ ಮೂಲ ಹೆಸರು ಕೊಹಾಕು ಎಂದೇ ಆಗಿರಬೇಕೆಂದು ಹಾಕುವಿಗೆ ಹೇಳುತ್ತಾಳೆ. ಅದಕ್ಕಾಗಿಯೇ ಆತನಿಗೆ ತನ್ನ ಹೆಸರು ಸದಾ ನೆನಪಿದ್ದದ್ದು ಎಂದು ಹೇಳಿದೊಡನೆ, ಹಾಕು ಡ್ರ್ಯಾಗನ್ ರೂಪ ಕಳಚಿ ಮನುಷ್ಯ ರೂಪ ತಾಳಿ ಹಳೆಯದ್ದನ್ನೆಲ್ಲ ನೆನಪಿಸಿಕೊಂಡು ತನ್ನ ಹೆಸರು ಕೊಹಾಕು ಎಂದೂ ತಾನು ನದಿಯ ಭೂತ(spirit) ಎಂದು ಹೇಳುತ್ತಾನೆ ಮತ್ತು ಇದನ್ನೆಲ್ಲಾ ನೆನಪಿಸಿದ್ದಕ್ಕೆ ಧನ್ಯವಾದ ಹೇಳಿ ಯುಬಾಬಾ ಬಳಿ ಕರೆದೊಯ್ಯುತ್ತಾನೆ. ಯುಬಾಬಾ ಆಕೆಗೆ ಕರಾರಿನಂತೆ ಒಂದು ಕೊನೆಯ ಪರೀಕ್ಷೆ ಇಡುತ್ತಾಳೆ. ಅಲ್ಲಿ ನಿಂತ ಅನೇಕ ಹಂದಿಗಳಲ್ಲಿ ತನ್ನ ತಂದೆತಾಯಿಯನ್ನು ಗುರುತಿಸುವಂತೆ ಚಿಹಿರೊಗೆ ಸವಾಲು ಹಾಕುತ್ತಾಳೆ. ಅದರಲ್ಲಿ ಯಾವುದೂ ತನ್ನ ತಂದೆತಾಯಿಯಲ್ಲ ಎಂದು ಹೇಳಿದೊಡನೆ ಆ ಹಂದಿಗಳೆಲ್ಲ ಯುಬಾಬಾ ಸೇವಕರಾಗಿ ಪುನರ್ ರೂಪ ತಾಳಿ ಚಿಹಿರೊ ಗೆದ್ದದ್ದಕ್ಕೆ ಶುಭ ಹಾರೈಸುತ್ತಾರೆ. ಯುಬಾಬಾ ಒಲ್ಲದ ಮನಸ್ಸಿನಿಂದ ಚಿಹಿರೊಳನ್ನು ಕಳುಹಿಸಿ ಕೊಡುತ್ತಾಳೆ. ಹಾಕು ಆಕೆಯನ್ನು ಕರೆದುಕೊಂಡು ನದಿ ದಾಟಿಸಿ ಬರಲು ಹೋಗುತ್ತಾನೆ. ತನ್ನ ತಂದೆ ತಾಯಿ ಎಲ್ಲಿ ಎಂದು ಚಿಹಿರೊ ಕೇಳಿದಾಗ, ಚಿಹಿರೊ ಯುಬಾಬಾಳ ಪರೀಕ್ಷೆ ಗೆದ್ದ ತಕ್ಷಣ ಅವರಿಬ್ಬರೂ ನದಿಯ ಇನ್ನೊಂದು ಬದಿಯಲ್ಲಿ ಎಚ್ಚರಗೊಂಡಿರುತ್ತಾರೆ ಎಂದು ಕರೆದೊಯ್ಯುತ್ತಾನೆ. ಮತ್ತೆ ಸಿಗುವುದಾಗಿ ವಿದಾಯ ಹೇಳಿ ಹಾಕು ಚಿಹಿರೊಳನ್ನು ಕಳುಹಿಸಿ ಕೊಡುತ್ತಾನೆ. ಆದರೆ ಪೂರ್ತಿ ಸುರಂಗ ದಾಟುವವರೆಗೂ ಹಿಂತಿರುಗಿ ನೋಡದಂತೆ ಎಚ್ಚರಿಸುತ್ತಾನೆ. ಚಿಹಿರೊ ಅದರಂತೆಯೇ ಓಡಿ ಹೋಗಿ ತನ್ನ ತಂದೆತಾಯಿಯನ್ನು ಸೇರುತ್ತಾಳೆ. ಅವರು ಏನೂ ನಡೆದೇ ಇಲ್ಲದಂತೆ ಚಿಹಿರೊಳಿಗೆ ಹಾಗೆ ಎಲ್ಲೆಂದರಲ್ಲಿ ಸುತ್ತಾಡಲು ಹೋಗದಂತೆ ಹೇಳಿ ಅಲ್ಲಿಂದ ಹೊರಡುತ್ತಾರೆ. ಕೊನೆಯ ಬಾರಿ ಒಮ್ಮೆ ಹಿಂತಿರುಗಿ ನೋಡಿಬಿಡಲೆ ಎಂದು ಚಿಹಿರೊ ಕತ್ತು ತಿರುಗಿಸುವಷ್ಟರಲ್ಲಿ ಹಾಕು ಹೇಳಿದ್ದು ನೆನಪಿಸಿಕೊಂಡು ಸುಮ್ಮನೆ ಹೊರಹೋಗುತ್ತಾಳೆ.  

  ಈ ಚಿತ್ರದಲ್ಲಿ ಕೆಲವೆಡೆ ದೃಶ್ಯಗಳ ನಡುವೆ ಒಮ್ಮೊಮ್ಮೆ ಸಂಬಂಧ ಅಸ್ಪಷ್ಟ ಎನಿಸುತ್ತದೆ. ಅದಕ್ಕೆ ಕಾರಣವೂ ಇದೆ. ಹಯಾಒ ಮಿಯಜಾಕಿ ತನ್ನ ಚಿತ್ರ ನಿರ್ಮಾಣ ಪ್ರಾರಂಭಿಸಿದಾಗ, ಪೂರ್ತಿ ಕಥೆಯನ್ನು ಇಟ್ಟುಕೊಂಡು ಚಿತ್ರ ನಿರ್ಮಾಣ ಮಾಡುವುದಿಲ್ಲ. ಬದಲಿಗೆ, ಸ್ಥೂಲವಾಗಿ ಚಿತ್ರದ ಪಾತ್ರಗಳನ್ನು ಮೊದಲು ಸೃಷ್ಟಿಸಿ ಆನಂತರ ಅವುಗಳನ್ನು ಹೊಸೆದು ಕಥೆ ಹೆಣೆಯುತ್ತ, ಒಮ್ಮೆ ತಿದ್ದುತ್ತ ಅಥವಾ ಅಗತ್ಯ ಬಿದ್ದಲ್ಲಿ ಕಥೆಯನ್ನು ಮತ್ತೆ ಮತ್ತೆ ಬದಲಿಸುತ್ತ ತನಗೆ ಪೂರ್ತಿ ಸಮಾಧಾನವಾಗುವವರೆಗೂ ಕಥೆಯನ್ನು ಮುಗಿಸುವುದಿಲ್ಲ. ಆದರೆ ಇವೆಲ್ಲ ನ್ಯೂನತೆಗಳನ್ನು ಮೀರುವಂಥ ಕಲೆ ಆತನ ಚಿತ್ರದಲ್ಲಿ ಕಂಡುಬರುತ್ತದೆ. ಚಿತ್ರದ ಪ್ರತಿಯೊಂದು ಫ್ರೇಮ್ ಕೂಡ ಒಂದೊಂದು ಕಲಾಕೃತಿಯಂತೆ ಕಾಣಿಸುತ್ತದೆ.




  ಮಕ್ಕಳಿಗಾಗಿ ಈ ಚಿತ್ರ ಮಾಡಲಾಗಿದೆ ಎನ್ನಿಸಿದರೂ ದೊಡ್ಡವರೂ ಈ ಚಿತ್ರವನ್ನು ನೋಡತಕ್ಕದ್ದು. ನಮ್ಮ ಜೀವನದಲ್ಲಿನ ಬರುವ ಹಲವಾರು ಬದಲಾವಣೆಗಳನ್ನು ನೋಡಿ ನಾವು ಚಿಹಿರೊನ ರೀತಿ ಬೇಸರ ಪಟ್ಟುಕೊಳ್ಳುತ್ತೇವೆ. ಹೊಸ ಬದಲಾವಣೆಗಳಿಗೆ ಮನಸ್ಸು ಒಪ್ಪುವುದಿಲ್ಲ ಮತ್ತು ಹಳೆಯದೇ ಚೆನ್ನಾಗಿತ್ತು ಎಂದು ಮರುಗುತ್ತೇವೆ. ಆದರೆ ಒಮ್ಮೆ ಜೀವನದಲ್ಲಿ ಆಗುವ ಬದಲಾವಣೆಗಳನ್ನು ಚಿಹಿರೊ ಎದುರಿಸಿದ ರೀತಿ ಎದುರಿಸಿದಾಗಲೇ ನಮಗೆ ಅದರಾಚೆಗಿನ ಜಗತ್ತು ಮತ್ತು ಜೀವನ ದರ್ಶನವಾಗುವುದು. ಇಲ್ಲಿ ನಾವು ಜೀವನದಲ್ಲಿ ಹಳೆಯದನ್ನು ಮರೆಯದೆ ಹೊಸತನ್ನು ಅಪ್ಪಿಕೊಳ್ಳುತ್ತ ತನ್ಮೂಲಕ ನಾವೂ ಬದಲಾಗುತ್ತ ಬೆಳೆಯುತ್ತ ಹೋಗುವುದನ್ನು ಮಾರ್ಮಿಕವಾಗಿ ಹೇಳಲಾಗಿದೆ.





Thursday, 11 January 2018

ನಾನು ನೋಡಿದ ಚಿತ್ರ- ಟೊರ, ಟೊರ, ಟೊರ


IMDb: Tora, Tora, Tora



  ಎರಡನೇ ವಿಶ್ವ ಯುದ್ಧದ ಪರ್ಲ್ ಹಾರ್ಬರ್ ದಾಳಿಯ ಬಗ್ಗೆ ಬಹುತೇಕರಿಗೆ ಗೊತ್ತಿದೆ- ಹೇಗೆ ಜಪಾನಿಗಳ ಈ ಒಂದು ದಾಳಿಯಿಂದ ಅಮೇರಿಕಾ ವಿಶ್ವ ಯುದ್ಧಕ್ಕೆ ಧುಮುಕಿತು ಮತ್ತು ವಿಶ್ವ ಯುದ್ಧದ ಚಿತ್ರಣವನ್ನು ಮತ್ತು ಭವಿಷ್ಯವನ್ನು ಬದಲಾಯಿಸಿತು. ಈ ಘಟನೆಯನ್ನೊಳಗೊಂಡ ಚಿತ್ರ ‘ಪರ್ಲ್ ಹಾರ್ಬರ್’ ಕೂಡ ಹಾಲಿವುಡ್ ನಲ್ಲಿ ನಿರ್ಮಾಣವಾಗಿತ್ತು. ಆದರೆ ಆ ಚಿತ್ರ ಪರ್ಲ್ ಹಾರ್ಬರ್ ನ ದಾಳಿಯನ್ನು ನೆಪವಾಗಿಟ್ಟುಕೊಂಡು ಆ ಘಟನೆಯಲ್ಲಿ ಭಾಗಿಯಾದ ಜನಗಳ ಕಥೆಯನ್ನಷ್ಟೇ ಹೇಳಿತ್ತು. ‘ಟೊರ, ಟೊರ, ಟೊರ’ ಆಂಗ್ಲೋ-ಜಾಪನೀಸ್ ಚಿತ್ರ. ಈ ಚಿತ್ರ ಪೂರ್ತಿಯಾಗಿ ಪರ್ಲ್ ಹಾರ್ಬರ್ ನಡೆದ ದಿನ ಮತ್ತು ಆ ದಾಳಿಗೆ ಎಡೆಮಾಡಿಕೊಟ್ಟ ಹಲವಾರು ಸಂಗತಿಗಳ ಬಗ್ಗೆ ವಿಸ್ತೃತವಾಗಿ ತಿಳಿಸಿಕೊಡುತ್ತಾ ಹೋಗುತ್ತದೆ. ಹಾಗಾಗಿಯೇ ಈ ಚಿತ್ರದಲ್ಲಿ ಯಾರೊಬ್ಬರನ್ನೂ ನೀವು ಒಂದು ಸಾಂಪ್ರದಾಯಿಕ ಚಿತ್ರದಂತೆ ಪ್ರೊಟಾಗನಿಸ್ಟ್ ಎಂದು ಗುರುತಿಸಲಾರಿರಿ. ಆ ಎರಡು ದೇಶಗಳ ನಡುವೆ ನಡೆದ ಈ ಒಂದು ಘಟನೆಯ ಹಿನ್ನಲೆಯಲ್ಲಿ ಎರಡೂ ದೇಶಗಳಲ್ಲಿ ಏನೆಲ್ಲಾ ನಡೆದಿತ್ತು ಎಂದು ತಿಳಿಯಲು ಇದೊಂದು ತುಂಬಾ ಒಳ್ಳೆಯ ಐತಿಹಾಸಿಕ ಚಿತ್ರ.

  ಪಶ್ಚಿಮದಲ್ಲಿ ಯುಕೆ, ಫ್ರಾನ್ಸ್ ಸೇರಿದಂತೆ ಹಲವಾರು ದೇಶಗಳು ಜರ್ಮನಿಯ ವಿರುದ್ಧ ಹೋರಾಡುತ್ತಿದ್ದ ವೇಳೆಯಲ್ಲೇ, ಇತ್ತ ಪೂರ್ವದಲ್ಲಿ ಜಪಾನ್ ನ ಇಂಪೀರಿಯಲ್ ಆರ್ಮಿ ಚೀನಾದ ಮೇಲೆ ದಾಳಿ ನಡೆಸುತ್ತಿತ್ತು. ಈ ದಾಳಿಯನ್ನು ವಿರೋಧಿಸಿ ಅಮೇರಿಕ ಜಪಾನ್ ಗೆ ತಮ್ಮ ಪರಸ್ಪರ ಸಂಬಂಧವನ್ನು ಉಳಿಸಿಕೊಳ್ಳಲು ಈ ದಾಳಿಯಿಂದ ಜಪಾನ್ ಹಿಂದೆ ಸರಿಯಬೇಕೆಂದು ಕೇಳಿಕೊಳ್ಳುತ್ತದೆ. ತನಗೆ ಬೇಕಿದ್ದ ಅಗತ್ಯ ಕಚ್ಚಾ ವಸ್ತುಗಳ ಆಕರವಾಗಿದ್ದ ಚೀನಾ ಬಿಟ್ಟು ಕೊಡಲು ಜಪಾನ್ ತಯಾರಿರಲಿಲ್ಲ. ಹೀಗೆ ಹಿಂದೆ ಸರಿಯದಿದ್ದರೆ ತನ್ನ ಮೇಲೆ ಅಮೇರಿಕ ದಾಳಿ ಮಾಡಬಹುದು ಎಂದು ಜಪಾನ್ ಯೋಚಿಸಿ, ಹಾಗೇನಾದರೂ ಸಂಬಂಧ ಮುರಿದು ಬಿದ್ದರೆ ಇದನ್ನು ತಪ್ಪಿಸಲು ಒಂದೇ ಉಪಾಯ ಅಮೇರಿಕಾದ ಪೆಸಿಫಿಕ್ ಫ್ಲೀಟ್ ನ ಮೇಲೆ ದಾಳಿ ನಡೆಸಿ ಧ್ವಂಸಮಾಡುವುದು. ಇದೆ ಸಮಯದಲ್ಲಿ ಯುರೋಪಿಯನ್ ಸೇನೆಗಳು ಯುರೋಪಿಯನ್ ಯುದ್ಧಕ್ಕಾಗಿ ತಮ್ಮ ಆಗ್ನೇಯ ಏಶಿಯಾ ಭಾಗದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದರಿಂದ, ಜಪಾನ್ ಗೆ ಅಮೇರಿಕಾ ಮೇಲೆ ದಾಳಿ ಮಾಡಿ ಇಡೀ ಪೆಸಿಫಿಕ್ ಭಾಗವನ್ನು ನಿಯಂತ್ರಿಸುವುದೇ ಒಳ್ಳೆಯದೆನ್ನಿಸಿತು. ಈ ರೀತಿ ಅಮೆರಿಕಾಗೆ ಯುದ್ಧಕ್ಕೆ ಆಹ್ವಾನ ಕೊಡುವಂತ ನಿರ್ಣಯಗಳನ್ನು ಕೈಗೊಳ್ಳಲು ಜಪಾನ್ ಸರ್ಕಾರದಲ್ಲಿದ್ದ ಕೆಲವು ಯುದ್ಧೋನ್ಮಾದದಲ್ಲಿದ್ದ ನಾಯಕರೂ(ವಾರ್ ಮಿನಿಸ್ಟರ್- ಹಿದೇಕಿ ತೊಜೊ) ಕಾರಣ. ಈ ಹಂತದಲ್ಲೇ ಜಪಾನ್, ಜರ್ಮನಿ ಮತ್ತು ಇಟಲಿಯ ಜತೆ ‘ಟ್ರೈ- ಪಾರ್ಟೈಟ್’ ಒಪ್ಪಂದ ಮಾಡಿಕೊಳ್ಳುತ್ತದೆ. ಇತ್ತ ಅಮೆರಿಕಾದಲ್ಲಿ ಸೆಕ್ರೆಟರಿ ಆಫ್ ಸ್ಟೇಟ್- ಕಾರ್ಡೆಲ್ ಹಲ್ ಜಪಾನಿನ ರಾಯಭಾರಿ ನೊಮುರ ಜೊತೆ ಚರ್ಚಿಸಿ ಹೇಗಾದರೂ ಮಾಡಿ ಒಂದು ಒಪ್ಪಂದಕ್ಕೆ ಬರಲು ಪ್ರಯತ್ನಿಸುತ್ತಿರುತ್ತಾರೆ. ಆದರೆ, ಜಪಾನಿ ಸರ್ಕಾರ ಯಾವುದೇ ಒಂದು ಒಪ್ಪಂದದ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳದೆ ಸುಮ್ಮನೆ ಕಾಲ ತಳ್ಳುತ್ತಿದ್ದಾರೆ ಎಂದು ಕಾರ್ಡೆಲ್ ಭಾವಿಸುತ್ತಾನೆ.

 ಇಷ್ಟೆಲ್ಲಾ ನಡೆಯುತ್ತಿದ್ದರೂ ಅಮೇರಿಕ ಜಪಾನ್ ಮೇಲೆ ನಿಗಾ ಇಡಲು ಜಪಾನ್ ನ ಟೋಕಿಯೋದಿಂದ ಜಪಾನಿನ ಎಲ್ಲ ರಾಯಭಾರಿ ಕಚೇರಿಗಳಿಗೆ ತಲುಪುವ ಸಂದೇಶಗಳನ್ನು ಗುಪ್ತವಾಗಿ ಪಡೆದು ತನ್ನ ಎಲೆಕ್ಟ್ರಿಕಲ್ ಡಿಕೋಡರ್ ಮೂಲಕ ಓದುತ್ತಿರಿತ್ತದೆ. ಈ ವ್ಯವಸ್ಥೆ ಎಷ್ಟು ವೇಗವಾಗಿ ಕೆಲಸಮಾಡುತ್ತಿರುತ್ತದೆ ಎಂದರೆ, ಅಮೇರಿಕಾದ ರಯಾಭಾರಿ ಕಚೇರಿಯಲ್ಲಿ ಟೋಕಿಯೋದಿಂದ ಬಂದ ಗುಪ್ತ ಸಂದೇಶ ಬಿಡಿಸಿ ಓದುವ ಮುಂಚೆಯೇ ಅಮೆರಿಕಾದವರಿಗೆ ಅದರಲ್ಲೇನಿದೆ ಎಂದು ತಿಳಿದಿರುತ್ತಿತ್ತು. ಈ ವ್ಯವಸ್ಥೆಯನ್ನು ನೌಕಾದಳದ ಲೆಫ್ಟಿನಂಟ್ ಕಮಾಂಡರ್ ಆಲ್ವಿನ್ ಕ್ರೆಮರ್ ಮತ್ತು ಆರ್ಮಿಯ ಕರ್ನಲ್ ರೂಫಸ್ ಬ್ರಾಟ್ಟನ್ ನೋಡಿಕೊಳ್ಳುತ್ತಿರುತ್ತಾರೆ. ಇವರ ಬಳಿ ಇಲ್ಲಿ ಪತ್ತೆಯಾದ ಸಂದೇಶಗಳನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂಬ ನಿರ್ದಿಷ್ಟ ಪಟ್ಟಿಯೂ ಇರುತ್ತದೆ. ಆದರೆ ಮೊದಲ ಬಾರಿಗೆ ಈ ಪಟ್ಟಿಯನ್ನು ನೋಡಿದ ಕರ್ನಲ್ ಇದರಲ್ಲಿ ಏರ್ ಫೋರ್ಸ್ ನ ಕಮಾಂಡರ್ ಮತ್ತು ವಿದೇಶಗಳಲ್ಲಿನ ನೌಕಾ ಕಮಾಂಡರ್ ಹೆಸರು ಇಲ್ಲದ್ದನ್ನು ಕಂಡು ಆಶ್ಚರ್ಯಗೊಳ್ಳುತ್ತಾನೆ.  

  ಜಪಾನಿನ ನೌಕಾದಳಕ್ಕೆ ಹೊಸದಾಗಿ ನೇಮಕವಾದ ಅಡ್ಮಿರಲ್ ಯಾಮಮೊಟೊ ತನ್ನ ಹಿಂದಿನ ಅಧಿಕಾರಿ ನೇವಿ ವಾರ್ ಮಿನಿಸ್ಟ್ರಿಗೆ ವರ್ಗಾವಣೆಯಾಗುತ್ತಿದ್ದರಿಂದ ಆತನಿಗೆ ಹೇಗಾದರೂ ಮಾಡಿ ಅಲ್ಲಿ ಆರ್ಮಿಯವರ ಹುಂಬತನ ತಡೆಯುವಂತೆ ಕೇಳಿಕೊಳ್ಳುತ್ತಾನೆ. ಅಮೇರಿಕಾದ ಜೊತೆಗೆ ಯುದ್ಧಕ್ಕೆ ಇಳಿದರೆ ಅದು ತಮ್ಮ ದೇಶಕ್ಕೆ ಬಹಳ ನಷ್ಟ ಉಂಟುಮಾಡಲಿದೆ ಎಂಬ ಸತ್ಯ ಯಾಮಮೊಟೊಗೆ ತಿಳಿದಿತ್ತು. ಹಾಗೆ ಯುದ್ಧ ಒದಗಿಯೇ ಬಂದರೆ ಅಮೆರಿಕಾದ ಪೆಸಿಫಿಕ್ ಫ್ಲೀಟ್ ಮೇಲೆ ದಾಳಿ ಮಾಡಿದರೆ ಜಪಾನಿಗೆ ಯುದ್ಧದಲ್ಲಿ ಗೆಲ್ಲಲು ಒಂದು ಅವಕಾಶವಿದೆ ಎಂದು ತಯಾರಿಯೂ ಮಾಡಲು ತೊಡಗುತ್ತಾನೆ. ತನ್ನ ಟಾರ್ಪೀಡೊ ಬಾಂಬರ್ ಗಳು ಹಡಗುಗಳನ್ನು ಸರಿಯಾಗಿ ಗುರಿಯಿಟ್ಟು ಹೊಡೆಯಲು ಅನೇಕ ಬಾರಿ ಅಭ್ಯಾಸ ಮಾಡಿಸುತ್ತಾನೆ. ಪೆಸಿಫಿಕ್ ಫ್ಲೀಟ್ ಅನ್ನು ಧ್ವಂಸಮಾಡಲು ಪರ್ಲ್ ಹಾರ್ಬರ್ ಸರಿಯಾದ ಜಾಗ ಎಂದೂ ಗುರುತಿಸುತ್ತಾನೆ. ಇದಕ್ಕೆ ವಿಸ್ತೃತ ಯುದ್ಧ ತಂತ್ರ ಹೆಣೆಯಲು ಯಾಮಾಮೊಟೊ ತನ್ನ ಕಿರಿಯ ಅಧಿಕಾರಿ ಕಮ್ಯಾಂಡರ್. ಮಿನೊರು ಗೆಂಡಾಗೆ ವಹಿಸುತ್ತಾನೆ.

  ಪರ್ಲ್ ಹಾರ್ಬರ್ ನ ಉಸ್ತುವಾರಿ ನೋಡಿಕೊಳ್ಳಲು ಬರುವ ಹೊಸ ಅಡ್ಮಿರಲ್ ಹಸ್ಬಂಡ್ ಕಿಮ್ಮೆಲ್ ಹಿಂದಿನ ಅಧಿಕಾರಿಯೊಂದಿಗೆ ಪರ್ಲ್ ಹಾರ್ಬರ್ ಅನ್ನು ಇನ್ನಷ್ಟು ಭದ್ರಪಡಿಸಲು ಏನೇನು ಕ್ರಮ ಕೈಗೊಳ್ಳಬಹುದು ಎಂದು ವೈಮಾನಿಕ ಸರ್ವೇಕ್ಷಣೆಯನ್ನು ಮಾಡುತ್ತಾನೆ. ಇದರಲ್ಲಿ ಎದ್ದು ಕಾಣುವ ದೊಡ್ಡ ತೊಂದರೆಯೆಂದರೆ ಪರ್ಲ್ ಹಾರ್ಬರ್ ನ ಬಂದರಿಗೆ ಹಡಗುಗಳು ಹೋಗಿಬರಲು ಒಂದು ಕಂದಕದಂತ ಪ್ರವೇಶ ದಾರಿ ಬಿಟ್ಟರೆ ಬೇರೇನೂ ಇಲ್ಲ. ಇದರಿಂದ ಆ ಸಣ್ಣ ದಾರಿಯಲ್ಲಿ ಒಂದು ದೊಡ್ಡ ಹಡಗು ದಾಳಿಗೆ ಒಳಗಾಗಿ ಅಲ್ಲೇ ದಾರಿಗೆ ಅಡ್ಡವಾಗಿ ನಿಂತುಬಿಟ್ಟರೆ ಬಂದರಿನಲ್ಲಿರುವ ಎಲ್ಲ ಹಡಗುಗಳೂ ಬಂದರಿನಲ್ಲೇ ನಿಲ್ಲಬೇಕಾಗುತ್ತದೆ ಮತ್ತು ಇದರಿಂದ ಹಡಗುಗಳನ್ನು ಬಾಂಬರ್ ವಿಮಾನಗಳು ಹೊಡೆಯುವುದು ಬಹಳ ಸುಲಭವಾಗುತ್ತದೆ. ಈ ಸಂಗತಿ ಗೊತ್ತಿದ್ದರೂ ಟಾರ್ಪೀಡೊಗಳು ನೀರಿಗೆ ಬಿದ್ದ ನಂತರ 75 ಅಡಿಗಳವರೆಗೂ ಮುಳುಗಿ ಆನಂತರ ಸಮವಾಗಿ ಹಡಗಿನತ್ತ ಸಾಗುತ್ತದೆ ಮತ್ತು ಪರ್ಲ್ ಹಾರ್ಬರ್ ನ ಬಳಿಯ ಸಮುದ್ರ ಕೇವಲ 40 ಅಡಿಗಳಷ್ಟೆ ಇರುವುದರಿಂದ ದಾಳಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಿಲ್ಲ ಎಂದು ಸುಮ್ಮನಾಗುತ್ತಾರೆ. ಇನ್ನೊಂದೆಡೆ ಹವಾಯಿ ದ್ವೀಪದ ಆರ್ಮಿ ಕಮ್ಯಾಂಡರ್ ಲೆ.ಜನರಲ್. ವಾಲ್ಟರ್ ಶಾರ್ಟ್ ಯುದ್ಧವಿಮಾನಗಳು ರನ್ವೇ ಸಮೀಪ ಓಡಿಸಲು ತಯಾರಾಗಿ ನಿಂತಿದ್ದನ್ನು ಕಂಡು ಹೀಗೆ ಯಾಕೆ ಈ ವಿಮಾನಗಳು ನಿಂತಿವೆ ಎಂದು ತನ್ನ ಕಿರಿಯ ಅಧಿಕಾರಿಗೆ ಕೇಳಿದಾಗ, ಅವು ದ್ವೀಪದ ಮೇಲೆ ದಾಳಿಯಾದರೆ, ತುರ್ತು ಪ್ರತಿದಾಳಿ ಮಾಡಲು ಸಿದ್ಧವಿರಲು ಎಂದು ಉತ್ತರಿಸುತ್ತಾನೆ. ಇದರಿಂದ ತೃಪ್ತನಾಗದ ಜನರಲ್ ಹವಾಯಿ ದ್ವೀಪದಲ್ಲಿ ಇರುವ ಅನೇಕ ಜಪಾನಿಗಳಲ್ಲಿ ಯಾರಾದರು ಬಂದು ಇವುಗಳನ್ನು ನಾಶಪಡಿಸುವುದು ಸುಲಭವಾಗಿವೆ, ಹಾಗಾಗಿ ಈ ವಿಮಾನಗಳನ್ನೆಲ್ಲ ಒಂದೆಡೆ ಸೇರಿಸಿ ಸದಾ ಕಾವಲು ಇರಿಸುವಂತೆ ಆದೇಶಿಸುತ್ತಾನೆ. ಅಡ್ಮಿರಲ್. ಹಾಲ್ಸೀ, ಅಡ್ಮಿರಲ್ ಕಿಮ್ಮೆಲ್ ಬಳಿ ಬಂದು ತನ್ನ ವಿಮಾನವಾಹಕ ಹಡಗುಗಳನ್ನು ಅಟ್ಲಾಂಟಿಕ್ ಸಾಗರಕ್ಕೆ ಕೊಂಡೊಯ್ಯುವಂತೆ ಆದೇಶಬಂದಿದ್ದರ ಬಗ್ಗೆ ತನ್ನ ಅಸಮಾಧಾನ ತೋಡಿಕೊಳ್ಳಲು ಬರುತ್ತಾನೆ. ಹಾಲ್ಸೀಯ ವಾದವೇನೆಂದರೆ ತನ್ನ ವಿಮಾನವಾಹಕ ಹಡಗುಗಳನ್ನು ಕೊಂಡೊಯ್ದಾಗ, ದ್ವೀಪದ ಮೇಲೆ ದಾಳಿಯಾದರೆ, ಬಂದರಿನಲ್ಲಿದ್ದ ಚಿಕ್ಕ ಹಡಗುಗಳು ಮತ್ತು ಹಳೆಯ ಯುದ್ಧಹಡಗುಗಳು ಸಾಲದಾಗುತ್ತವೆ ಎಂದು. ಇದಕ್ಕೆ ಕಿಮ್ಮೆಲ್, ಇದು ಸಾಲದು ಎಂದು ತನ್ನ ಬಳಿ ಇದ್ದ ಕೆಲವು (ಇಂಧನ ತುಂಬಿಸುವ) ಟ್ಯಾಂಕರ್ ಹಡಗುಗಳನ್ನೂ ಬೇರೆಡೆಗೆ ಕಳಿಸಲು ಆದೇಶ ಬಂದಿದೆ ಎಂದು ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾನೆ. ಆದರೂ ಸಮಯ ಬಂದರೆ ರಾಷ್ಟ್ರಾಧ್ಯಕ್ಷನನ್ನು ಭೇಟಿಯಾದರೂ ಇದನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆಯನ್ನು ಕೊಟ್ಟು ಕಳಹುತ್ತಾನೆ. ಇಂತಹ ಹಲವಾರು ಘಟನೆಗಳು, ಹಲವಾರು ವ್ಯಕ್ತಿಗಳ ಅಚಾತುರ್ಯ, ಅಸಹಾಯಕತೆ ಮತ್ತು ಬೇಜವಾಬ್ದಾರಿತನಗಳು ಸೇರಿ ಪರ್ಲ್ ಹಾರ್ಬರ್ ಘಟನೆ ಅಷ್ಟು ದೊಡ್ಡ ದಾಳಿಯಾಗಲು ಕಾರಣವಾಯಿತು. ಇಂತಹ ಅಚಾತುರ್ಯ, ಹುಂಬತನಗಳು ಕೇವಲ ಅಮೆರಿಕನ್ನರ ಕಡೆಗಷ್ಟೇ ಇರಲಿಲ್ಲ, ಜಪಾನಿಗಳ ಕಡೆಯಲ್ಲಿ, ಯಾಮಾಮೋಟೋ ಅನೇಕ ಹಳೆಯ ಕಾಲದ ಯುದ್ಧನೀತಿಯ ಮೇಲೆ ನಂಬಿಕೆಯುಳ್ಳ ಅಧಿಕಾರಿಗಳನ್ನು ಎದುರಿಸಬೇಕಾಯ್ತು. ಇದರಲ್ಲಿ ತಮಾಷೆಯ ಸಂಗತಿಯೆಂದರೆ, ಅಮೆರಿಕನ್ನರು ತಮ್ಮೆಡೆಗೆ ಬರುವ ವಿಮಾನಗಳನ್ನು ಪತ್ತೆಹಚ್ಚಲು ಹೊಸ ರೇಡಾರ್ ಅನ್ನು ಹವಾಯಿ ದ್ವೀಪದ ಬೆಟ್ಟಗಳ ಮೇಲೆ ಸ್ಥಾಪಿಸಲು ನಿರ್ಧರಿಸಿದಾಗ ಅದಕ್ಕೆ ಮಿನಿಸ್ಟ್ರಿ ಆಫ್ ಇಂಟಿರಿಯರ್ ನ ನ್ಯಾಷನಲ್ ಪಾರ್ಕ್ ಸರ್ವಿಸ್ ನವರು ಪರವಾನಗಿ ಕೊಡಲು ಒಪ್ಪದಿರುವುದು. ಯುದ್ಧವನ್ನು ಯಾರುಯಾರು ಹೇಗೆಲ್ಲ ಗಂಭೀರವಾಗಿ ತೆಗೆದುಕೊಂಡಿದ್ದರು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಿದು. ಆನಂತರ ಆರ್ಮಿಯವರು ರೇಡಾರ್ ಅನ್ನು ಸ್ಥಾಪಿಸುತ್ತಾರೆಯಾದರೂ ಅದರ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾಗುತ್ತಾರೆ.


  ಅಮೇರಿಕಾ ತನಗೆ ಕೊಟ್ಟ ಎಚ್ಚರಿಕೆ ಕಡೆಗಣಿಸಿ ಜಪಾನ್ ಸೇನೆ ಇಂಡೋ-ಚೀನಾ ಭಾಗವನ್ನು ತೊರೆಯದೆ ತನ್ನ ಆಕ್ರಮಣ ಮುಂದುವರೆಸುತ್ತದೆ. ಇದಕ್ಕೆ ಪ್ರತಿಯಾಗಿ ಅಮೇರಿಕಾ ಜಪಾನಿನೊಂದಿಗೆ ಇದ್ದ ಎಲ್ಲ ವ್ಯವಹಾರಗಳ ಮೇಲೆ ನಿರ್ಬಂಧ ಹೇರುತ್ತದೆ. ಸೈನ್ಯದ ಅತ್ಯಂತ ಹಿರಿಯ ಅಧಿಕಾರಿಗಳ ಕಚೇರಿಯಿಂದ ಎಲ್ಲ ಸಂಬಂಧಿತ ಹಿರಿಯ ಅಧಿಕಾರಿಗಳಿಗೆ ಈ ಹೊಸ ಬೆಳವಣಿಗೆಗಳ ಬಗ್ಗೆ ತಿಳಿಸುತ್ತ, ಜಪಾನಿನಿಂದ ಯಾವುದೇ ದಾಳಿಯನ್ನು ನಿರೀಕ್ಷೆ ಮಾಡುತ್ತಿಲ್ಲವಾದರೂ ಎಲ್ಲ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂದೇಶ ಬರುತ್ತದೆ. ಈ ಸಂದೇಶವನ್ನು ಹೇಗೆ ಅರ್ಥೈಸಬೇಕೆಂದು ಗೊಂದಲಕ್ಕೀಡಾಗುವ ಅಧಿಕಾರಿಗಳು ಸುಮ್ಮನೆ ಫುಲ್ ಅಲರ್ಟ್ ಘೋಷಣೆ ಮಾಡಿ ಕೂರುತ್ತಾರೆ. ಈ ನಡುವೆ ಅಮೇರಿಕಾ ರಾಯಭಾರಿ ನೊಮುರ ಅಮೇರಿಕ ಜೊತೆಗಿನ ಸಂಬಂಧ ಸುಧಾರಿಸಲು ಎಷ್ಟು ಪ್ರಯತ್ನಿಸುತ್ತಿದ್ದರೂ ಟೊಕಿಯೋದಿಂದ ಎಲ್ಲಾ ಮಾತುಕತೆಯನ್ನು ನವೆಂಬರ್ 29ರ ಒಳಗೆ ಕೊನೆಗೊಳಿಸುವಂತೆ ತಾಕೀತು ಬರುತ್ತದೆ. ಇದನ್ನೇ ಗಮನಿಸುತ್ತಿದ್ದ ಕರ್ನಲ್ ಬ್ರಾಟ್ಟನ್ ಹೀಗೆ ಟೊಕಿಯೋದಿಂದ ಆದೇಶ ಬಂದಿರುವುದು ನೋಡಿದರೆ, ನವೆಂಬರ್ 30 ಭಾನುವಾರದ ದಿನ ಜಪಾನ್ ದಾಳಿ ಮಾಡಬಹುದು ಎಂದು ಅಂದಾಜಿಸುತ್ತಾನೆ. ಇದನ್ನು ಗಮನಿಸಿದ ಸರ್ಕಾರದ ಮಂತ್ರಿಗಳು ಮತ್ತು ಸೇನೆಯ ಹಿರಿಯ ಅಧಿಕಾರಿಗಳು ಎಲ್ಲರೂ ಫುಲ್ ಅಲರ್ಟ್ ಗೆ ಹೋಗುವಂತೆ ಆದೇಶ ಹೊರಡಿಸುತ್ತಾರೆ. ಇದೆಲ್ಲದರ ಮಧ್ಯೆ ಯಾಮಾಮೋಟೋ ಎಂಪರರ್ ಹಿರೋಹಿತೋ ಗೆ ಯುದ್ಧದ ವರದಿ ಒಪ್ಪಿಸಲು ಇಂಪೀರಿಯಲ್ ಪ್ಯಾಲೇಸ್ ಗೆ ಹೋಗುತ್ತಾನೆ. ಪ್ಯಾಲೇಸ್ ನ ಉಸ್ತುವಾರಿ ಕೊಇಚಿ ಕಿಡೊ ಈ ಭೇಟಿಯನ್ನು ಅತ್ಯಂತ ದುಃಖದ ಸಂಗತಿ ಎಂದು ಯಾಮಾಮೋಟೋಗೆ ಹೇಳಿಕೊಳ್ಳುತ್ತಾನೆ. ಯುದ್ಧವನ್ನು ಇಷ್ಟಪಡದ ದೊರೆ ಮತ್ತು ಯುದ್ಧವನ್ನು ವಿರೋಧಿಸುತ್ತಿರುವ ಅಧಿಕಾರಿಯ ನಡುವಿನ ಈ ಔಪಚಾರಿಕ ಮಾತುಕತೆಗೆ ತಾನು ಸಾಕ್ಷಿಯಾಗದಿರುವುದು ತನ್ನ ಭಾಗ್ಯವೇ ಎಂದು ಕಿಡೊ ಹೇಳುತ್ತಾನೆ. ಏಕೆಂದರೆ, ಔಪಚಾರಿಕ ಮಾತುಕತೆಗಳಲ್ಲಿ ದೊರೆ ಸಾಂಪ್ರದಾಯಿಕ ಪ್ರಶ್ನೆಗಳನ್ನು ಬಿಟ್ಟು ಬೇರೇನನ್ನೂ ಕೇಳುವಂತಿಲ್ಲ ಮತ್ತು ಉತ್ತರಿಸುವವರು ಕೇಳಿದ ಪ್ರಶ್ನೆಗೆ ಉತ್ತರಿಸುವುದು ಬಿಟ್ಟು ಬೇರೇನೂ ಹೇಳುವಂತಿಲ್ಲ.

  ಹೀಗೆ ಬಂದ ಎಚ್ಚರಿಕೆ ಸಂದೇಶಗಳ ಪ್ರತಿಕ್ರಿಯೆಯ ರೂಪದಲ್ಲಿ ಅಡ್ಮಿರಲ್ ಕಿಮ್ಮೆಲ್ ಎಲ್ಲ ವಿಮಾನವಾಹಕ ಹಡಗುಗಳನ್ನು ಗಸ್ತು ತಿರುಗಿ ಬರಲು ಕಳಹುತ್ತಾನೆ. ಯುದ್ಧ ಹಡಗುಗಳು(ಬ್ಯಾಟಲ್ ಶಿಪ್) ತುಂಬಾ ನಿಧಾನವಾಗಿದ್ದರಿಂದ ಮತ್ತು ಯಾವುದೇ ವೈಮಾನಿಕ ಬೆಂಬಲವಿಲ್ಲದೆ ತುಂಬಾ ದಿನ ಹೀಗೆ ಯುದ್ಧ ಹಡಗುಗಳನ್ನು ಬಿಡಲು ಸಾಧ್ಯವಿಲ್ಲದಿರುವುದರಿಂದ, ಅವುಗಳನ್ನು ಜೊತೆಯಲ್ಲಿ ಕರೆದೊಯ್ಯದೆ ಬಂದರಿನಲ್ಲೇ ಬಿಟ್ಟು, ಆದಷ್ಟು ಬೇಗನೆ ವಿಮಾನವಾಹಕ ಹಡಗುಗಳನ್ನು ಗಸ್ತು ಮುಗಿಸಿ ಬರಲು ಆದೇಶಿಸುತ್ತಾನೆ. ಇಲ್ಲಿ ಅಮೆರಿಕಾದ ನೇತೃತ್ವ ವಹಿಸಿದ್ದವರ ಸಂದಿಗ್ಧವೂ ನೋಡಬೇಕು. ಅವರಿಗೆ ಜಪಾನ್ ದಾಳಿಗೂ ತಯಾರಾಗಬೇಕು ಆದರೆ ತಾವೇ ಯುದ್ಧ ಪ್ರಾರಂಭಿಸಿದೆವು ಎನ್ನುವ ಅಪವಾದವೂ ಬೇಡ. ಇಲ್ಲಿ ಹಿರಿಯ ಅಧಿಕಾರಿಗಳು ಸರಿಯಾದ ನಿಲುವು ತಾಳಲಾರದೆ ಹೋಗುವುದರಿಂದ ಕೆಳಮಟ್ಟದ ಅಧಿಕಾರಿಗಳಿಗೆ ತಾವು ಯುದ್ಧಕ್ಕೆ ತಯಾರಾದರೂ ಜಪಾನ್ ಹಡಗುಗಳು ಅಥವಾ ವಿಮಾನಗಳನ್ನು ತಮ್ಮ ಜಾಗದಲ್ಲಿ ಕಂಡರೆ ಅದಕ್ಕೆ ಪ್ರತಿಯಾಗಿ ಅವುಗಳ ಮೇಲೆ ದಾಳಿ ಮಾಡಬೇಕೋ ಬೇಡವೋ ಎನ್ನುವ ಗೊಂದಲ ನಿರ್ಮಾಣವಾಗುತ್ತದೆ. ಇಂತದೆ ಒಂದು ಗೊಂದಲದ ಪ್ರಶ್ನೆಯನ್ನು ಕಿಮ್ಮೆಲ್ ಗೆ ಅಡ್ಮಿರಲ್ ಹಾಲ್ಸೀ ಕೇಳಿದಾಗ “ನಿನ್ನ ಸಾಮಾನ್ಯ ಜ್ಞಾನ ಉಪಯೋಗಿಸು” ಎಂದಷ್ಟೇ ಹೇಳುತ್ತಾನೆ. ಹವಾಯಿ ದ್ವೀಪಗಳ ಸನಿಹ ತಲುಪುತ್ತಿದ್ದ ವೇಳೆ ಪರ್ಲ್ ಹಾರ್ಬರ್ ಬಂದರಿನ ಎಲ್ಲ ಚಲನವಲನಗಳ ಬಗ್ಗೆ ನಿರಂತರ ಮಾಹಿತಿ ಪಡೆಯುತ್ತಿದ್ದ ಜಪಾನ್ ನೌಕಾ ಸೇನೆಯ ಹಿರಿಯ ಅಧಿಕಾರಿಗಳು, ಒಂದು ವಿಮಾನವಾಹಕ ಹಡಗು ಬಿಟ್ಟರೆ ಉಳಿದೆಲ್ಲವೂ ಗಸ್ತು ತಿರುಗಲು ಹೋಗಿವೆ ಎಂಬ ಮಾಹಿತಿ ತಿಳಿದು ಬೇಸರಪಟ್ಟುಕೊಳ್ಳುತ್ತಾರೆ. ಅಮೆರಿಕಾದ ಪೆಸಿಫಿಕ್ ಫ್ಲೀಟ್ ನ ಬೆನ್ನೆಲುಬೇ ಈ ವಿಮಾನವಾಹಕ ಹಡಗುಗಳು. ಡಿಸೆಂಬರ್ 6 ಶನಿವಾರದ ರಾತ್ರಿ ಟೊಕಿಯೋದಿಂದ ತನ್ನ ರಾಯಭಾರಿ ಕಚೇರಿಗಳಿಗೆ ಗುಪ್ತ ಸಂದೇಶ ರವಾನಿಸಲಾಗುತ್ತದೆ. ಈ ಸಂದೇಶ 14 ಭಾಗಗಳಿಂದ ಕೂಡಿದ್ದು 13 ಭಾಗಗಳನ್ನು 6ರ ರಾತ್ರಿಯೇ ಕಳುಹಿಸಿ ಕೊನೆಯ ಭಾಗವನ್ನ ಮರುದಿನ ಬೆಳಗ್ಗೆ ಕಳುಹಿಸುವುದಾಗಿಯೂ ಸಂದೇಶ ಬರುತ್ತದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಲೆ.ಕಮ್ಯಾಂಡರ್. ಕ್ರೆಮರ್ ಈ ಸಂದೇಶಗಳ ಬಗ್ಗೆ ಏನು ಮಾಡುವುದು ಎಂದು ಯೋಚಿಸಿ ಕೊನೆಗೆ ಮೇಲಿನವರಿಗೆ ಎಚ್ಚರಿಕೆ ಕೊಡುವುದೇ ಒಳಿತು ಎಂದು ತಿಳಿದು ಕ್ರೆಮರ್ ನೇರ ವೈಟ್ ಹೌಸ್ ಗೆ ಹೊರಡುತ್ತಾನೆ. ಆದರೆ ಕೊನೆಯ ಭಾಗ ಏನು ಎಂದು ತಿಳಿಯದೆ ಮುಂದಿನ ನಡೆ ನಿರ್ಧರಿಸುವುದು ಬೇಡ ಎಂದು ಹಿರಿಯ ಅಧಿಕಾರಿಗಳು ನಿರ್ಧರಿಸುತ್ತಾರೆ. ಕೊನೆಗೆ ಈ ವಿಷಯ ರಾಷ್ಟ್ರಾಧ್ಯಕ್ಷರನ್ನು ತಲುಪಿದರೂ ಅವರು ಜಪಾನ್ ದೊರೆಗೆ ವೈಯಕ್ತಿಕ ಸಂದೇಶವೊಂದನ್ನಷ್ಟೇ ಕಳಿಸಿ ಪ್ರತಿಕ್ರಿಯೆ ಬರುವ ತನಕ ಕಾಯೋಣ ಎಂದು ನಿರ್ಧರಿಸುತ್ತಾರೆ.

  ಡಿಸೆಂಬರ್ 7ರ ಬೆಳಗ್ಗೆ ವಾಷಿಂಗ್ಟನ್ ನಲ್ಲಿ ಬ್ರಾಟ್ಟನ್ ರಾತ್ರಿಯೆಲ್ಲ ಕಾದಿದ್ದು ಕೊನೆಗೆ ಬಂದ ಸಂದೇಶದ 14ನೆ ಭಾಗದ ತಿರುಳು,”ರಾಯಭಾರಿಗಳು ದಯವಿಟ್ಟು ತಮಗೆ ದೊರಕುವ ಟೋಕಿಯೋದ ಪ್ರತ್ಯುತ್ತರದ ಸಂದೇಶವನ್ನು ಡಿಸೆಂಬರ್ 7 ಸರಿಯಾಗಿ 1 ಗಂಟೆಗೆ ಅಮೇರಿಕಾ ಸರ್ಕಾರಕ್ಕೆ ಸಲ್ಲಿಸತಕ್ಕದ್ದು” ಎಂದು ಕ್ರೆಮರ್ ಗೆ ಕರೆಮಾಡಿ ತಿಳಿಸುತ್ತಾನೆ. ಜಪಾನ್ ನಲ್ಲಿ ಅಧ್ಯಕ್ಷ ರೂಸವೆಲ್ಟ್ ಕಳಿಸಿದ ಸಂದೇಶ ಹಿಡಿದು ಜಪಾನ್ ನ ವಿದೇಶ ಮಂತ್ರಿ ಆಗಿನ ಪ್ರಧಾನ ಮಂತ್ರಿ ಹಿದೇಕಿ ತೊಜೊ ಬಳಿ ಅದಕ್ಕೆ ಪ್ರತ್ಯುತ್ತರ ಕೇಳಲು ಬರುತ್ತಾನೆ. ಅದಕ್ಕೆ ತೊಜೊ ಶಾಂತಿ ಮೂಡಲು ಕಾಲ ಮಿಂಚಿಹೋಗಿದೆ, ಯುದ್ಧ ಆಗಿಯೇ ತೀರುವುದು ಎನ್ನುವ ಧಾಟಿಯಲ್ಲಿ ಮಾತನಾಡಿ ಆ ಸಂದೇಶವನ್ನು ದೊರೆಗಳಿಗೆ ತಲುಪಿಸಿ ಸುಮ್ಮನಿರಲು ಹೇಳುತ್ತಾನೆ. ಇತ್ತ ಅಮೆರಿಕಾದಲ್ಲಿ ಟೊಕಿಯೋದಿಂದ ತನ್ನ ರಾಯಭಾರಿ ಕಚೇರಿಗೆ ಸಂದೇಶದ 14ನೆ ಭಾಗ ಪಡೆದ ನಂತರ ಎಲ್ಲ ಕೋಡ್ ಮೆಷಿನ್ ಮತ್ತು ಗುಪ್ತ ಕಡತಗಳನ್ನು ಧ್ವಂಸಮಾಡಲು ಆದೇಶ ಬರುತ್ತದೆ. ಇದನ್ನು ಓದಿದ ಬ್ರಾಟ್ಟನ್ ತಕ್ಷಣವೇ ಅದನ್ನು ಅನುವಾದಿಸಿ ಆರ್ಮಿ ಚೀಫ್ ಆಫ್ ಸ್ಟಾಫ್ ಮಾರ್ಷಲ್ ಗೆ ತಿಳಿಸಲು ಹೊರಡುತ್ತಾನೆ. ಅದರ ಇನ್ನೊಂದು ನಕಲನ್ನು ಕ್ರೆಮರ್ ಬಂದ ನಂತರ ಆತನಿಗೆ ಕೊಡಲು ಸಹಾಯಕನಿಗೆ ಹೇಳಿ ಹೊರಡುತ್ತಾನೆ. ಜಪಾನ್ ನೌಕಾ ಸೇನೆಯ ಪರ್ಲ್ ಹಾರ್ಬರ್ ದಾಳಿಗೆ ನಿಯೋಜನೆಗೊಂಡ ಎಲ್ಲ ಪೈಲೆಟ್ ಗಳು ತಮ್ಮ ಹಡಗುಗಳಲ್ಲಿ ಹೊರಡುವ ಮುನ್ನ ತಮ್ಮೆಲ್ಲ ತಯಾರಿಗಳನ್ನು ಮುಗಿಸಿಕೊಳ್ಳುತ್ತಾರೆ. ಜಪಾನ್ ರಾಯಭಾರಿ ಕಚೇರಿಯಲ್ಲಿ ಇನ್ನೂ 14ನೆ ಭಾಗದ ಸಂದೇಶವನ್ನು ಮಾತ್ರ ಬಿಡಿಸಿ ಓದುತ್ತಲೇ ಇರುತ್ತಾರೆ. ಕ್ರೆಮರ್ ಕಚೇರಿಗೆ ಬಂದ ನಂತರ ಗುಪ್ತ ಸಂದೇಶವನ್ನು ಪಡೆದು ನೇವಲ್ ಆಪರೇಷನ್ಸ್ ನ ಚೀಫ್, ಅಡ್ಮಿರಲ್ ಹಾರಲ್ಡ್ ಸ್ಟಾರ್ಕ್ ಗೆ ಮುಟ್ಟಿಸುತ್ತಾನೆ. ಸ್ಟಾರ್ಕ್ ತಕ್ಷಣವೇ ಈ ಮಾಹಿತಿಯನ್ನು ಹವಾಯಿ ದ್ವೀಪದ ಮುಖ್ಯಸ್ಥ ಅಡ್ಮಿರಲ್ ಕಿಮ್ಮೆಲ್ ಗೆ ತಿಳಿಸದೆ ಅಧ್ಯಕ್ಷ ರೂಸವೆಲ್ಟ್ ಗೆ ತಿಳಿಸಿ ಮುಂದಿನ ನಡೆ ನಡೆಸುವುದಾಗಿ ಕೂರುತ್ತಾನೆ.

  ಇಷ್ಟು ಹೊತ್ತಿಗಾಗಲೇ ಪರ್ಲ್ ಹಾರ್ಬರ್ ದಾಳಿ ಆಗಲು ಬೇಕಿರುವ ಎಲ್ಲ ಘಟನೆಗಳೂ ಆಗಿಹೋಗಿರುತ್ತವೆ. ಬ್ರಾಟ್ಟನ್ ಕೊಟ್ಟ ಮಾಹಿತಿ ಆಧರಿಸಿ ಆರ್ಮಿ ಚೀಫ್ ಮಾರ್ಷಲ್ ಒಂದು ತುರ್ತು ಫುಲ್ ಅಲರ್ಟ್ ಸಂದೇಶ ಬರೆದು ಅದನ್ನು ಮಾಹಿತಿ ರವಾನೆ ಕೇಂದ್ರಕ್ಕೆ ಕೊಟ್ಟು ಎಲ್ಲ ಸ್ಟೇಷನ್ ಗಳಿಗೆ ರೇಡಿಯೋ ಮೂಲಕ ತಲುಪಿಸಲು ಹೇಳುವಂತೆ ಬ್ರಾಟ್ಟನ್ ಗೆ ಆದೇಶಿಸುತ್ತಾನೆ. ಇದನ್ನು ಹಿಡಿದು ಬ್ರಾಟ್ಟನ್ ಕಮ್ಯುನಿಕೇಷನ್ಸ್ ಸೆಂಟರ್ ಗೆ ಹೋದಾಗ  ಅದರ ಮುಖ್ಯಸ್ಥ ಆರ್ಮಿ ಚೀಫ್ ರ ಬರವಣಿಗೆ ಅರ್ಥವಾಗುತ್ತಿಲ್ಲ ಹಾಗಾಗಿ ಕಳಿಸಲು ಬರುವುದಿಲ್ಲ ಎಂದಾಗ, ಬ್ರಾಟ್ಟನ್ ಅಲ್ಲಿಯೇ ಕುಳಿತು ಅದರಲ್ಲಿದ್ದನ್ನೆಲ್ಲ ಟೈಪ್ ಮಾಡಿಕೊಟ್ಟು ಹೊರಡುತ್ತಾನೆ. ಈ ಸಂದೇಶವನ್ನು ರೇಡಿಯೋ ಮೂಲಕ ಹವಾಯಿ ದ್ವೀಪಕ್ಕೆ ಕಳಿಸಲು ಹವಾಮಾನ ವೈಪರೀತ್ಯದಿಂದ ಆಗುತ್ತಿಲ್ಲ ಎಂದು ಕಿರಿಯ ಅಧಿಕಾರಿಯೋರ್ವ ಹೇಳಿದಾಗ ಅದನ್ನು ಟೆಲಿಗ್ರಾಂ ಮೂಲಕ ಕಳಿಸುವಂತೆ ಮುಖ್ಯಸ್ಥ ಆದೇಶಿಸುತ್ತಾನೆ. ಆದರೆ ಆ ಟೆಲಿಗ್ರಾಂಅನ್ನು ‘ಅರ್ಜೆಂಟ್’ ಎಂದು ಗುರುತು ಮಾಡದೆ ಕಳುಹಿಸುತ್ತಾನೆ. ಇದರೊಳಗಿನ ಮಹತ್ವ ತಿಳಿಯದ ಉಳಿದ ಕೆಲಸಗಾರರು ಅದನ್ನು ಲಕೋಟೆಯಲ್ಲಿಟ್ಟು ಮುಂದಿನ ಸಂದೇಶ ರವಾನೆಕಾರ ಬಂದಾಗ ಕೊಡಲು ತೆಗೆದಿಡುತ್ತಾರೆ. ಬೆಳಗಿನ ಜಾವ ರೇಡಾರ್ ಅನ್ನು ನೋಡುತ್ತಾ ಕೂತ ಇಬ್ಬರು ಅಧಿಕಾರಿಗಳು ದ್ವೀಪದೆಡೆಗೆ ಬರುತ್ತಿರುವ ಎರಡು ದೊಡ್ಡ ಚಿಕ್ಕೆಗಳನ್ನು(ಜಪಾನ್ ಯುದ್ಧ ವಿಮಾನಗಳ ಎರಡು ದೊಡ್ಡ ಗುಂಪು) ನೋಡಿ ಹೆಡ್ ಕ್ವಾರ್ಟರ್ಸ್ ಗೆ ಮಾಹಿತಿ ತಲುಪಿಸಿದರೆ, ಅದರ ಬಗ್ಗೆ ತಲೆಕೆಡಿಸಿಕೊಳ್ಳದಿರಲು ಅಲ್ಲಿಂದ ಆದೇಶ ಬರುತ್ತದೆ. ಬೆಳಗಾಗುತ್ತಿದ್ದಂತೆ ತನ್ನ ವಿಮಾನದ ರೇಡಿಯೋದಲ್ಲಿ ಹವಾಯಿ ದ್ವೀಪದ ರೇಡಿಯೋ ಸಂಗೀತ ಕೇಳುತ್ತ ದ್ವೀಪಕ್ಕೆ ಸಮೀಪಿಸುವ ಫುಚಿದ ಮತ್ತು ಅವನ ನೇತೃತ್ವದ ಗುಂಪು ತನ್ನ ಕಮ್ಯಾಂಡ್ ಗೆ “ಟೊರ, ಟೊರ, ಟೊರ” ಎನ್ನುವು ಗುಪ್ತ ಸಂದೇಶ ಕಳಿಸುವ ಮೂಲಕ ತಾವು ದಾಳಿ ಪ್ರಾರಂಭಿಸುತ್ತಿದ್ದೇವೆ ಎಂದು ಮಾಹಿತಿ ಕಳಿಸುತ್ತಾರೆ. ಚದುರಿದ ಜೇನುಹುಳುಗಳ ಗುಂಪಂತೆ ಜಪಾನ್ ನ ಯುದ್ಧ ವಿಮಾನಗಳು ದ್ವೀಪದ ಎಲ್ಲರನ್ನೂ ಎಚ್ಚರಿಸುವಂತೆ ಸದ್ದು ಮಾಡುತ್ತಾ ಪರ್ಲ್ ಹಾರ್ಬರ್ ಬಂದರಿನ ಮೇಲೆ ದಾಳಿ ಪ್ರಾರಂಭಿಸುತ್ತವೆ. ದಾಳಿ ಇಂದು ಆಗುವುದೋ ನಾಳೆ ಆಗುವುದೋ ಎಂದು ಎದುರುನೋಡುತ್ತಿದ್ದ ಅಡ್ಮಿರಲ್ ಕಿಮ್ಮೆಲ್ ತನ್ನ ಮನೆಯ ಅಂಗಳದಿಂದ ಪರ್ಲ್ ಹಾರ್ಬರ್ ಮೇಲೆ ನಡೆಯುತ್ತಿರುವ ದಾಳಿ ನೋಡಿ ಅಲ್ಲೇ ಅವಾಕ್ಕಾಗಿ ನಿಲ್ಲುತ್ತಾನೆ. ಗುಪ್ತ ಸಂದೇಶ ಬಿಡಿಸಿ ಸೆಕ್ರೆಟರಿ ಹಲ್ ಗೆ ಎಲ್ಲ ಸಂಬಂಧ ಕಡೆದುಕೊಳ್ಳುತ್ತಿರುವುದರ ಬಗ್ಗೆ ಹೇಳಲು ನೋಮುರ ಎರಡು ಗಂಟೆಗೆ ಬರುತ್ತಾನೆ. ಅಷ್ಟು ಹೊತ್ತಿಗಾಗಲೇ ಪರ್ಲ್ ಹಾರ್ಬರ್ ಮೇಲೆ ದಾಳಿಯಾಗಿರುವ ಬಗ್ಗೆ ಹಲ್ ಗೆ ಮಾಹಿತಿ ಬಂದಿರುತ್ತದೆ. ಔಪಚಾರಿಕವಾಗಿ ನೋಮುರನಿಂದ ಕಡತಗಳನ್ನು ಪಡೆದು ಹೊರಡುವಂತೆ ಹೇಳುತ್ತಾನೆ. ಅಡ್ಮಿರಲ್ ಕಿಮ್ಮೆಲ್ ಕಚೇರಿಗೆ ಮರಳಿ ದಾಳಿಯ ಬಗ್ಗೆ ಮಾಹಿತಿ ಪಡೆದು ಅದಕ್ಕೆ ಪ್ರತಿಕ್ರಿಯೆಯನ್ನು ನಿರ್ದೇಶಿಸುತ್ತಾನೆ. ದಾಳಿ ಪ್ರಾರಂಭಿಸಿದ ಮೇಲೆ ಬರುವ ಎಚ್ಚರಿಕೆ ಸಂದೇಶ ನೋಡಿ ತನ್ನ ಕಿರಿಯ ಅಧಿಕಾರಿಗಳಿಗೆ ಅದನ್ನು ಓದಿ ಸುಮ್ಮನಾಗುತ್ತಾನೆ. ಪರ್ಲ್ ಹಾರ್ಬರ್ ನಲ್ಲಿ ವಿಮಾನವಾಹಕ ಹಡಗುಗಳು ಇಲ್ಲದ್ದರಿಂದ ಇನ್ನೂ ದಾಳಿ ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದು ವೈಸ್ ಅಡ್ಮಿರಲ್ ನಗುಮೊ ನಿರ್ಧರಿಸಿ ಯುದ್ಧ ವಿಮಾನಗಳು ದಾಳಿಯಿಂದ ಮರಳುತ್ತಿದ್ದಂತೆ ಹಡಗುಗಳು ಜಪಾನ್ ಗೆ ಮರಳುವಂತೆ ಆದೇಶಿಸುತ್ತಾನೆ. ತನ್ನ ಕಚೇರಿಯಲ್ಲಿ ಬರುತ್ತಿದ್ದ ಮಾಹಿತಿಯನ್ನೆಲ್ಲ ಆಲಿಸುತ್ತ ಕುಳಿತಿದ್ದ ಯಾಮಾಮೋಟೋ ದಾಳಿ ಯಶಸ್ವಿಯಾಯಿತು ಎಂದು ಎಲ್ಲ ಹರ್ಷ ವ್ಯಕ್ತಪಡಿಸಿದಾಗ, ಜಪಾನ್ ನ ಈ ದಾಳಿ ಅಮೆರಿಕದಂತ ಮಲಗಿದ್ದ ದೈತ್ಯನನ್ನು ಎಬ್ಬಿಸಿ ಅದರಲ್ಲಿ ಹೋರಾಡುವ ಛಲ ತುಂಬಿದೆ ಎಂದು ಹೇಳುತ್ತಾನೆ. ಹೊರಗೆ ಬಂದು ಸಾಗರದ ಅಲೆಗಳನ್ನು ನೋಡುತ್ತಾ ಮುಂದಾಗಲಿರುವ ಕೋಲಾಹಲದ ಭವಿಷ್ಯವನ್ನು ನೋಡುತ್ತಿರುವಂತೆ ಮೂಕನಾಗಿ ನಿಲ್ಲುತ್ತಾನೆ.

 ಈ ಚಿತ್ರವನ್ನು ಅತಿಯಾಗಿ ನಾಟಕೀಯಗೊಳಿಸಿಲ್ಲ, ಅಬ್ಬರವಿಲ್ಲ. ಹಾಗಾಗಿ ಸಂಭಾಷಣೆ ಆಧಾರಿತ ಚಿತ್ರಗಳಂತೆ ಇಲ್ಲಿ ಉದ್ದುದ್ದದ ಸಂಭಾಷಣೆಗಳು ಕಾಣಸಿಗುವುದಿಲ್ಲ. ಆದರೆ ಐತಿಹಾಸಿಕವಾಗಿ ದಾಳಿಯ ಪೂರ್ವಾಪರ ನಡೆದ ಎಲ್ಲ ಘಟನೆಗಳನ್ನು ಸೆರೆ ಹಿಡಿಯುವಲ್ಲಿ ಚಿತ್ರ ಯಶಸ್ವಿಯಾಗಿದೆ. 1970 ರ ಚಿತ್ರವಾದ್ದರಿಂದ ಗ್ರಾಫಿಕ್ಸ್ ಬಳಸದೆ ಸ್ಟಂಟ್ ಗಳನ್ನು ಅದೂ ಇಷ್ಟು ದೊಡ್ಡ ಮಟ್ಟದಲ್ಲಿ ಮಾಡಿರುವುದು ಶ್ಲಾಘನೀಯ. ಎಲ್ಲದಕ್ಕಿಂತ ಹೆಚ್ಚಾಗಿ ಐತಿಹಾಸಿಕ ಘಟನೆಗಳನ್ನು ಕಥೆಗೆ ತಕ್ಕಂತೆ ತಿರುಚದೆ, ಕಥೆಯನ್ನು ಐತಿಹಾಸಿಕ ಘಟನೆಗಳಿಗೆ ಬದ್ಧವಾಗಿ ರಚಿಸಿರುವುದು ಉಳಿದ ಚಿತ್ರಗಳಿಗೆ ಒಂದು ಮಾದರಿಯಾಗಿ ನಿಲ್ಲುತ್ತದೆ. ಯೂಟ್ಯೂಬ್ ನಲ್ಲಿ ‘History Buffs’ ಎಂಬ ಚಾನೆಲ್ ಇದೆ. ಅದರಲ್ಲಿ ಐತಿಹಾಸಿಕ ಚಿತ್ರಗಳನ್ನು ವಿಮರ್ಶೆ ಮಾಡಲಾಗುತ್ತದೆ. ಈ ಚಿತ್ರದಲ್ಲಿನ ಐತಿಹಾಸಿಕ ಸಂಗತಿಗಳ ಬಗ್ಗೆ ಆ ಚಾನೆಲ್ ನಲ್ಲಿ ಇನ್ನೂ ವಿಸ್ತೃತವಾಗಿ ಹೇಳಲಾಗಿದೆ. ಇಷ್ಟಪಟ್ಟವರು ಅದನ್ನೂ ನೋಡಬಹುದು.


  ಈ ಚಿತ್ರದಲ್ಲಿ ಪರ್ಲ್ ಹಾರ್ಬರ್ ಬಂದರಿನ (40 ಅಡಿಗಳ) ಆಳದ ಬಗ್ಗೆ ಮತ್ತು ಆಗ ಚಾಲ್ತಿಯಲ್ಲಿದ್ದ (75 ಅಡಿಗಳಿಗೂ ಹೆಚ್ಚು ಆಳಕ್ಕೆ ಧುಮುಕುವ) ಟಾರ್ಪಿಡೋಗಳ ಬಗ್ಗೆ ಮಾತನಾಡಿದರೂ, ಜಪಾನಿಗಳು ಹೇಗೆ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರು ಎನ್ನುವುದನ್ನು ತಿಳಿಸುವುದಿಲ್ಲ. ಜಪಾನಿಗಳು ತಾವು ಆಗ ಉಪಯೋಗಿಸುತ್ತಿದ್ದ (ಟೈಪ್ 91 ಥಂಡರ್ ಫಿಶ್) ಏರಯಲ್ ಟಾರ್ಪಿಡೋಗಳ ಬಾಲಕ್ಕೆ ಮರದ ರೆಕ್ಕೆಗಳನ್ನು ಜೋಡಿಸುವುದರ ಮೂಲಕ (ಮಾಡಿಫಿಕೇಶನ್ 2) ಟಾರ್ಪಿಡೋಗಳು ನೀರಿಗೆ ಬಿದ್ದ ನಂತರ ಹೆಚ್ಚು ಆಳಕ್ಕೆ ಇಳಿಯದೆ ಹಡಗುಗಳತ್ತ ಸಾಗುವಂತೆ ಮಾರ್ಪಾಡುಮಾಡಿಕೊಂಡರು. ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಜಾಲತಾಣ ನೋಡಬಹುದು.


  ಜಪಾನ್ ಮತ್ತು ಅಮೇರಿಕಾ ನಡುವಿನ ಯುದ್ಧದ ಬಗ್ಗೆ ಇನ್ನೊಂದು ಒಳ್ಳೆಯ ಜೋಡಿ ಚಿತ್ರ, ‘Flags of our fathers’ ಮತ್ತು ‘Letters from Iwo Jima’. ಎರಡೂ ಚಿತ್ರ ಕ್ಲಿಂಟ್ ಈಸ್ಟ್ ವುಡ್ ನಿರ್ದೇಶಿಸಿದ್ದು ಇವೋ ಜಿಮ ದ್ವೀಪದ ಮೇಲಿನ ಅಮೇರಿಕ ಸೇನೆಯ ದಾಳಿಯ ಬಗ್ಗೆ ಎರಡೂ ದೇಶಗಳ ದೃಷ್ಟಿಕೋನವನ್ನು ಬಿಂಬಿಸುವಂತೆ ಈ ಎರಡು ಚಿತ್ರಗಳನ್ನು ನಿರ್ಮಿಸಲಾಗಿದೆ. ಜಪಾನ್ ಮೇಲಿನ ಅಮೇರಿಕಾ ದಾಳಿಯ ಬಗ್ಗೆ ನಿರ್ಮಿಸಲಾದ ಮಿನಿ- ಸೀರಿಸ್ ‘The Pacific’ ಕೂಡ ನೋಡಬಹುದು. ಆದರೆ ಈ ಎಲ್ಲ ಚಿತ್ರಗಳು ಮತ್ತೆ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಳ್ಳದೆ ಅದರಲ್ಲಿನ ಪಾತ್ರಗಳನ್ನು ಕೇಂದ್ರವಾಗಿಟ್ಟುಕೊಂಡು ನಿರ್ಮಿತವಾದವು.