Friday, 24 November 2017

ಲೈಫ್ ಆಫ್ ಬ್ರಯಾನ್







ಎಪ್ಪತರ ದಶಕದಲ್ಲಿ ಇಂಗ್ಲೆಂಡಿನಲ್ಲಿ ಪ್ರಖ್ಯಾತಿ ಪಡೆದಿದ್ದ ಮೊಂಟಿ ಪೈಥಾನ್ ನ ತಂಡ ಬಹಳ ಕಷ್ಟದೊಂದಿಗೆ ಈ ಹಾಸ್ಯ ಚಿತ್ರವನ್ನು ನಿರ್ಮಿಸಿತು. ಆರು ಜನ ಮುಖ್ಯವಾಗಿ ಈ ತಂಡದಲ್ಲಿದ್ದರು- ಗ್ರೆಹಾಂ ಚಾಪ್ಮನ್, ಟೆರ್ರಿ ಜೋನ್ಸ್, ಟೆರ್ರಿ ವಿಲಿಯಮ್ಸ್, ಜಾನ್ ಕ್ಲೀಸ್, ಎರಿಕ್ ಐಡಲ್ ಮತ್ತು ಮೈಕಲ್ ಪೇಲಿನ್. ಇವರು ಈ ಚಿತ್ರದ ಮುನ್ನ ಮೊಂಟಿ ಪೈಥಾನ್ ನ ಫ್ಲೈಯಿಂಗ್ ಸರ್ಕಸ್(Monty Python’s Flying Circus) ಎಂಬ ಹಾಸ್ಯ ಪ್ರಹಸನಗಳ ಮಾಲಿಕೆಯನ್ನ ಬಿಬಿಸಿ ಟಿವಿಗಾಗಿ ಮಾಡಿ ಪ್ರಸಿದ್ಧರಾಗಿದ್ದರು. ಹಾಸ್ಯ ಮಾಡುವಾಗ ಯಾರನ್ನಾದರೂ ಹಾಸ್ಯ ಮಾಡಬಹುದಾದಂತಹ ಸ್ವಾತಂತ್ರ್ಯ ಒಬ್ಬ ಕಲಾವಿದನಿಗಿರಬೇಕು. ಆಗಷ್ಟೇ ಆತನ ಹಾಸ್ಯದ ಸಂಪೂರ್ಣ ಲಾಭ ಮತ್ತು ಮನರಂಜನೆ ನೋಡುಗರದ್ದಾಗುತ್ತದೆ. ಪೊಲಿಟಿಕಲ್ ಕರೆಕ್ಟ್ ನೆಸ್ ಎಂಬ ದೊಡ್ಡ ಪೆಡಂಭೂತ ಇನ್ನೂ ಕಾಲಿರಿಸದಿದ್ದ ಕಾಲದಲ್ಲಿ ರೂಪುಗೊಂಡ ಒಂದು ಅದ್ಭುತ ಹಾಸ್ಯ ಚಿತ್ರವಿದು. ವಿಪರ್ಯಾಸವೆಂದರೆ ಧರ್ಮ, ಸಿದ್ಧಾಂತ ಮತ್ತು ವ್ಯಕ್ತಿಗಳ ಬಗೆಗಿನ ಹಾಸ್ಯ ಇಂದು ಮುಟ್ಟಬಾರದಂತಹ ವಿಷಯಗಳು. ಎಂತಹ ಸಪ್ಪೆ ಮತ್ತು ನೀರಸ ಕಾಲ ನಮ್ಮದು.
 
  ಏಸುವಿನ ಕಥೆ ಬಹುತೇಕ ಎಲ್ಲರಿಗೂ ಪರಿಚಿತ. ಆತ ಹುಟ್ಟಿದ್ದು, ಬೆಳೆದದ್ದು, ಕ್ರಿಶ್ಚಿಯಾನಿಟಿ ಹುಟ್ಟು ಹಾಕಿದ್ದು ಮತ್ತು ಕೊನೆಗೆ ಶಿಲುಬೇಗೇರಿದ್ದು ಎಲ್ಲವೂ ಕೇಳಿರುವ ಕಥೆಗಳು. ಆದರೆ ಆತ ಹುಟ್ಟಿದ ದಿನದಂದೇ ಆತನ ಪಕ್ಕದ ಮನೆಯಲ್ಲಿ ಹುಟ್ಟಿದವನೇ ಈ ಕಾಲ್ಪನಿಕ ಬ್ರಯಾನ್. ಆತನ ಜೀವನ ಕಥೆಯೇ ಲೈಫ್ ಆಫ್ ಬ್ರಯಾನ್. ಏಸು ಹುಟ್ಟಿದ ದಿನದಂದು ಮೂರು ರಾಜರು ಏಸುವಿಗೆ ಕಾಣಿಕೆಯನ್ನಿತ್ತರು. ಆದರೆ ಅಲ್ಲಿಗೆ ಬರುವ ಮುನ್ನ ಆ ಮೂವರು ಬ್ರಯಾನ್ ಮನೆಗೆ ಹೋಗಿ ಅವನೇ ಏಸುವೆಂದು ಕಾಣಿಕೆ ನೀಡುತ್ತಾರೆ ಮತ್ತು ಆತ ಬೆಳೆದು ತನ್ನ ಜನರೆಲ್ಲರಿಗೂ ದೊಡ್ಡ ನಾಯಕನಾಗುತ್ತಾನೆ ಎಂದು ಭವಿಷ್ಯ ನುಡಿದು ಹೊರಗೆ ಹೋಗಿ ನೋಡಿ ನಿಜವಾದ ಏಸುವಿನ ಮನೆ ಸಿಕ್ಕ ಮೇಲೆ ಮತ್ತೆ ಬ್ರಯಾನ್ ಬಳಿಗೆ ಬಂದು ಕೊಟ್ಟ ಉಡುಗೊರೆಗಳನ್ನೆಲ್ಲ ವಾಪಸ್ ಪಡೆದು ಹೋಗುತ್ತಾರೆ. ಇದು ಚಿತ್ರ ತೆರೆಯುವ ರೀತಿ. ಇದರ ನಂತರ ಸಿನೆಮಾದ ಕ್ರೆಡಿಟ್ಸ್ ಜೊತೆಗೆ ಪರಿಚಯ ಗೀತೆ. ಈ ಗೀತೆ ನೀವು ಪೂರ್ತಿ ಕೇಳಬೇಕು. ಒಂದು ಪರಿಚಯ ಹಾಡನ್ನು ಯಾವ ವಿಶೇಷ ಪದಪ್ರಯೋಗವಿಲ್ಲದೆ ಹಾಸ್ಯಮಯವಾಗಿಸುವ ಬಗೆ ಬಹಳ ಚೆನ್ನಾಗಿದೆ.


  ಈಗ ಕಾಲ 33A.D. ಜುದೇಯ(Judea) ದೇಶದಲ್ಲಿ ಏಸು ಕ್ರೈಸ್ತ ಮತದ ಬಗ್ಗೆ ಎಲ್ಲೆಡೆ ಪ್ರಚಾರ ಮಾಡುತ್ತಾ ಹೋಗುತ್ತಿದ್ದಾನೆ. ಹೀಗೆ ಒಂದು ಶನಿವಾರದ ಮಧ್ಯಾಹ್ನ ಆತನ ಸರ್ಮನ್ ಕೇಳುತ್ತ ಜನ ನಿಂತಿರಬೇಕಾದರೆ ಬ್ರಯಾನ್ ತನ್ನ ಅಮ್ಮನೊಂದಿಗೆ ದೂರದಲ್ಲಿ ಅಷ್ಟು ಸರಿಯಾಗಿ ಕೇಳದ ಜಾಗದಲ್ಲಿ ಬಂದು ನಿಂತು ಕೇಳಲು ಪ್ರಯತ್ನಿಸುತ್ತಾನೆ. ಆದರೆ ಆತನ ಅಮ್ಮನಿಗೆ ಸ್ಟೋನಿಂಗ್ ಗೆ(ಬಹಿರಂಗವಾಗಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ)  ಹೋಗಬೇಕೆಂಬ ಆಸೆ. ಬ್ರಯಾನ್ ಗೆ ಆತ ಏನು ಹೇಳುತ್ತಿದ್ದಾನೆ ಎಂದು ಕೇಳಬೇಕೆನ್ನುವ ಆಸೆ. ಆದರೆ ಅವನ ಸುತ್ತಲಿದ್ದ ಜನ ಮಾಡಿಕೊಳ್ಳುವ ಚಿಲ್ಲರೆ ಜಗಳದಿಂದ ಏನೂ ಕೇಳಿಸದೆ ಬೇಸತ್ತು ಅಮ್ಮನೊಟ್ಟಿಗೆ ಸ್ಟೋನಿಂಗ್ ಗೆ ಹೋಗುತ್ತಾನೆ. ಅಲ್ಲಿ ಹೆಂಗಸರಿಗೆ ಪ್ರವೇಶವಿಲ್ಲ. ಆದರೆ ಈ ನಿಯಮವನ್ನು ಪಾಲಿಸದ ಹೆಂಗಸರು ಗಡ್ಡ ತೊಟ್ಟು ಗಂಡಸರಂತೆ ಕಲ್ಲು ಮಾರುವವನ ಬಳಿ ಕಲ್ಲು ಕೊಂಡುಕೊಂಡು ಬಂದು ಕಲ್ಲು ಹೊಡೆಯುವುದು ಎಂದಿನ ಪ್ರಹಸನ. ಕಲ್ಲು ಮಾರುವವನೂ ಕಲ್ಲು ಮಾರಲು ಅವುಗಳನ್ನು ಬಣ್ಣಿಸಿ ಅದರಲ್ಲಿ ಎಂತಹ ಕುಸುರಿ ಕೆಲಸವಿದೆ ನೋಡಿ ಎಂದೆಲ್ಲ ಪುಸಲಾಯಿಸುತ್ತಾನೆ. ಯಾರೋ ಓರ್ವ ಬಡಪಾಯಿಗೆ ಅನಗತ್ಯವಾಗಿ ದೇವರ ಹೆಸರನ್ನು ಬಳಸಿದ ಎಂಬ ಕಾರಣಕ್ಕೆ ಈ ಶಿಕ್ಷೆ. ಹೆಂಗಸರೆಲ್ಲ ಕಲ್ಲು ಹೊಡೆಯಲು ಕಾತರರಾಗಿರುತ್ತಾರೆ ಆದರೆ ಶಿಕ್ಷೆ ಜಾರಿ ಮಾಡುವವ ನಿಧಾನ ಮಾಡುವುದನ್ನು ತಾಳಲಾರದೆ ಹೆಂಗಸರೆಲ್ಲ ಸೇರಿ ಅವನ ಮೇಲೆಯೇ ಕಲ್ಲು ಎತ್ತಿ ಹಾಕಿ ಸಾಯಿಸುತ್ತಾರೆ. ಇಂತಹ ಅನೇಕ ಇತಿಹಾಸದ ನೈಜ ಘಟನೆಗಳು, ಪದ್ಧತಿಗಳ ಬಗ್ಗೆ ಚಿತ್ರ ಹಾಸ್ಯ ಮಾಡುತ್ತದೆ.

  ಮನೆಗೆ ಬಂದ ಮೇಲೆ ರೋಮನ್ ಸೈನಿಕನೋರ್ವ ತಮ್ಮ ಮನೆಯಲ್ಲಿ ಇದ್ದದ್ದು ಕಂಡು ಕೋಪಗೊಳ್ಳುವ ಬ್ರಯಾನ್ ಗೆ ಸಮಾಧಾನ ಹೇಳುವ ಆತನ ತಾಯಿ ಆತ ಓರ್ವ ರೋಮನ್ ಸೆಂಚೂರಿಯನ್ ನ ಮಗ ಆದರೆ ಆ ಸೆಂಚೂರಿಯನ್ ತನ್ನನ್ನು ಪ್ರೀತಿಸಿ ಕೈಕೊಟ್ಟ ಎಂದು ತನ್ನ ಗುಟ್ಟನ್ನು ಹೇಳುತ್ತಾಳೆ. ಹಾಗಾಗಿ ಬ್ರಯಾನ್ ರೋಮನ್ ರನ್ನು ಅಷ್ಟು ಬೈಯುವುದರಲ್ಲಿ ಅರ್ಥವಿಲ್ಲ ಏಕೆಂದರೆ ಆತನೂ ರೋಮನ್ ಎಂದು ಆತನ ತಾಯಿ ಅಂದದ್ದಕ್ಕೆ ಆತ ತಾನೆಂದೂ ಒಬ್ಬ ಯಹೂದಿಯೇ, ಎಂದೆಂದಿಗೂ ರೋಮನ್ ಆಗಲಾರ ಎಂದು ಸಿಟ್ಟು ಮಾಡಿಕೊಂಡು ಕೋಣೆ ಸೇರುತ್ತಾನೆ. 
  
  ಒಂದು ದಿನ ರೋಮನ್ ಕಾಲೋಸ್ಸಿಯಂನಲ್ಲಿ ಗ್ಲಾಡಿಯೇಟರ್ ಗಳ ಕಾಳಗ ನಡೆಯುತ್ತಿದ್ದ ವೇಳೆ ಬ್ರಯಾನ್ ವೀಕ್ಷಕರಿಗೆ ತಿನ್ನಲು ವಿಧವಿಧದ ತಿಂಡಿಗಳನ್ನು ಮಾರುತ್ತಿರುತ್ತಾನೆ. ಅಲ್ಲೇ ತಾನು ಹಿಂದೆ ನೋಡಿದ ಹೆಣ್ಣೊಬ್ಬಳನ್ನು ಕಂಡು ಅವಳಿದ್ದ ಗುಂಪಿನ ಬಳಿ ಹೋಗುತ್ತಾನೆ. ಅವರು ಸಾಮ್ರಾಜ್ಯಶಾಹಿ ವಿರೋಧಿಯಾದ ಪೀಪಲ್ಸ್ ಫ್ರಂಟ್ ಆಫ್ ಜುದೇಯ(ಪಿ.ಎಫ್.ಜೆ) ಎಂಬ ಗುಂಪಿಗೆ ಸೇರಿದವರು ಎಂದು ತಿಳಿದು ತನ್ನನ್ನೂ ಸೇರಿಸಿಕೊಳ್ಳುವಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಆ ಗುಂಪು ಒಪ್ಪಿ ಅವನನ್ನು ಸೇರಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಗ್ಲಾಡಿಯೆಟರ್ ಗಳ ಕಾಳಗದಲ್ಲಿ ಓರ್ವ ಎದುರಾಳಿಗೆ ಓಡಿಸಿ ಓಡಿಸಿಯೇ ಹೃದಯಾಘಾತ ತರಿಸಿ ಸಾಯಿಸಿ ಗೆಲ್ಲುತ್ತಾನೆ. ಆ ಗುಂಪಿನ ನಾಯಕ ರೆಜ್ ಬ್ರಯಾನ್ ಗೆ ಗೋಡೆಗಳ ಮೇಲೆ “ರೋಮನ್ ಮನೆಗೆ ಹೋಗಿ” ಎಂದು ರಾತ್ರಿ ಬರೆಯುವಂತೆ ಕೆಲಸ ಕೊಡುತ್ತಾನೆ. ಹಾಗೆ ಮಾಡಲು ರಾತ್ರಿ ಹೋಗಿ ರೋಮನ್ ರಿಗೆ ಸಿಕ್ಕಿಬಿದ್ದು ಮತ್ತೆ ಅವರಿಂದ ತಪ್ಪಿಸಿಕೊಳ್ಳುತ್ತಿದ್ದಾಗ ಪಿ.ಎಫ್.ಜೆ ಗುಂಪಿನ ಜೂಡಿತ್ ಆತನನ್ನು ರಕ್ಷಿಸಿ ತಮ್ಮ ಅಡಗುತಾಣಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಪಿ.ಎಫ್.ಜೆ ಗುಂಪಿನ ಸದಸ್ಯರು ರೋಮನ್ ಸೀಸರ್ ಪೊಂಟಿಯಸ್ ಪೈಲೇಟ್ ನ ಹೆಂಡತಿಯನ್ನು ಅಪಹರಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉಪಾಯ ಮಾಡುತ್ತಿರುತ್ತಾರೆ. ಎಲ್ಲ ತಯಾರಾಗಿ ಅಪಹರಿಸಲು ರಾತ್ರಿ ಸೀಸರ್ ನ ಅರಮನೆಗೆ ಹೋದಾಗ ಅಲ್ಲಿ ಮತ್ತೊಂದು ಗುಂಪು ಅದೇ ಕೆಲಸಕ್ಕಾಗಿ ಅಲ್ಲಿಗೆ ಬಂದದ್ದು ತಿಳಿದು ಆ ಎರಡೂ ಗುಂಪಿನ ನಡುವೆ ಪೈಲೇಟ್ ನ ಹೆಂಡತಿ ಯಾರಿಗೆ ಸೇರಬೇಕೆಂಬ ವಿಷಯದಲ್ಲಿ  ಜಗಳವಾಗುತ್ತದೆ. ಇದರಿಂದ ಎಚ್ಚೆತ್ತುಕೊಳ್ಳುವ ರೋಮನ್ ಸೈನಿಕರು ಇವರೆಲ್ಲ ಬಡಿದಾಡಿಕೊಂಡು ಬಿದ್ದ ನಂತರ ಉಳಿದ ಬ್ರಯಾನ್ ನನ್ನು ಸೆರೆ ಹಿಡಿದು ಸೆರೆಮನೆಗೆ ತಳ್ಳುತ್ತಾರೆ.


  ಅಲ್ಲಿ ಕೊಂಚ ಕಾಲ ಕಳೆದ ನಂತರ ಸೀಸರ್ ನ ಬಳಿಗೆ ಬ್ರಯಾನ್ ನನ್ನು ಕೊಂಡೊಯ್ಯುತ್ತಾರೆ. ಪೈಲೇಟ್ ಗೆ ‘ರ’ ಅಕ್ಷರ ಉಚ್ಛಾರ ಮಾಡಲು ಬಾರದು. ಆತನ ಈ ‘ರ’ ಇಲ್ಲದ ಮಾತು ಕೇಳಿ ಅಲ್ಲಿ ನೆರೆದಿದ್ದ ಸೈನಿಕರಿಗೆ ಸರಿಯಾಗಿ ಈತ ಹೇಳುವ ಮಾತು ಅರ್ಥವಾಗುವುದಿಲ್ಲ. ಈ ಎಲ್ಲ ಗೊಂದಲದಲ್ಲಿ ಬ್ರಯಾನ್ ಮತ್ತೆ ತಪ್ಪಿಸಿಕೊಳುತ್ತಾನೆ. ರೋಮನ್ ಸೈನಿಕರಿಂದ ತಪ್ಪಿಸಿಕೊಳ್ಳಲು ಗಡ್ಡದ ಅಂಗಡಿಗೆ ಹೋಗಿ ಒಂದು ಗಡ್ಡ ಕೇಳಿ ಅಂಗಡಿಯವ ಹೇಳಿದ ದರ ಕೊಡಲು ಮುಂದಾಗುತ್ತಾನೆ. ಅದಕ್ಕೆ ಒಪ್ಪದ ಅಂಗಡಿಯವ ಚೌಕಾಸಿ ಮಾಡದೆ ತಾನು ಮಾರುವುದಿಲ್ಲ, ಬ್ರಯಾನ್ ಚೌಕಾಸಿ ಮಾಡಿದರೆ ಮಾತ್ರ ಗಡ್ಡ ಕೊಡುವುದಾಗಿ ಪಟ್ಟು ಹಿಡಿಯುತ್ತಾನೆ. ಬ್ರಯಾನ್ ಗೆ ಆ ಪರಿಸ್ಥಿತಿಯಲ್ಲಿ ಸರಿಯಾಗಿ ಚೌಕಾಸಿ ಬರದಿದ್ದನ್ನು ನೋಡಿ ಅಂಗಡಿಯವನೇ ಆತನಿಗೆ ಹೇಗೆ ಚೌಕಾಸಿ ಮಾಡಬೇಕೆಂದು ಹೇಳಿಕೊಡುತ್ತಾನೆ. ಕಡೆಗೆ ಗಡ್ಡದ ಜೊತೆ ಒಂದು ಸೋರೆಕಾಯಿ ಕೊಡುತ್ತಾನೆ. ಅದನ್ನು ಪಡೆದು ಅಂಗಡಿಯವ ಮತ್ತೆ ಚೌಕಾಸಿಯ ಪಾಠ ಹೇಳುವುದರಲ್ಲಿ ಕಾಲು ಕೀಳುತ್ತಾನೆ. ಅಲ್ಲಿಂದ ನೇರವಾಗಿ ಪಿ.ಎಫ್.ಜೆ ಗುಂಪಿನ ಗುಪ್ತ ಮುಖ್ಯ ಕಚೇರಿಗೆ ಹೋಗುತ್ತಾನೆ. ಅಲ್ಲಿಗೆ ಇವನನ್ನು ಬೆನ್ನಟ್ಟಿ ಬರುವ ರೋಮನ್ ಸೈನಿಕರು ಅವರಿದ್ದ ಮನೆ ಬಾಗಿಲಿಗೇ ಬರುತ್ತಾರೆ. ತಕ್ಷಣ ಅಡಗಿಕೊಳ್ಳುವ ಎಲ್ಲರೂ ಮನೆಯ ಒಡೆಯ ಮತ್ತಾಯಸ್ ಸೈನಿಕರಿಗೆ ಮನೆಯನ್ನು ಶೋಧಿಸಲು ಅವಕಾಶ ಕೊಟ್ಟು ಅವರೆಲ್ಲ ಏನೂ ಸಿಗದೆ ವಾಪಸಾದ ಮೇಲೆ ಬ್ರಯಾನ್ ಗೆ ಅವರನ್ನು ನೇರವಾಗಿ ಅಲ್ಲಿಗೆ ಕರೆತಂದದ್ದಕ್ಕೆ ಬಯ್ಯುತ್ತಾರೆ. ಇನ್ನೂ ಮಾತಾಡುತ್ತಿದ್ದಂತೆ ಮತ್ತೆ ಸೈನಿಕರು ಶೋಧಿಸಲು ಬರುತ್ತಾರೆ. ಮತ್ತೆ ಬಚ್ಚಿಟ್ಟುಕೊಳ್ಳುವ ಎಲ್ಲರೂ ಏನೂ ಸಿಗದೆ ಸೈನಿಕರು ಮರಳಿದ್ದನ್ನು ಗಮನಿಸಿ ಇನ್ನೇನು ಹೊರಬರುತ್ತಿದ್ದಂತೆ ಮೂರನೇ ಬಾರಿ ಸೈನಿಕರು ಪ್ರತ್ಯಕ್ಷವಾಗುತ್ತಾರೆ. ಮತ್ತೆ ಎಲ್ಲರೂ ಬಚ್ಚಿಟ್ಟುಕೊಳ್ಳುತ್ತಾರೆ. ಅಷ್ಟರವರೆಗೂ ಬ್ರಯಾನ್ ಬಚ್ಚಿಟ್ಟುಕೊಂಡಿದ್ದ ಕಿಟಕಿಯ ಭಾಗ ಮುರಿದು ಹೊಸ ಧರ್ಮ ಪ್ರಚಾರ ಮಾಡುವವರ ಬೀದಿಗೆ ಬೀಳುತ್ತಾನೆ. ಅವನು ಬಿದ್ದ ಸ್ಥಳದಲ್ಲಿ ಇನ್ನಾರೋ ಇದ್ದದ್ದರಿಂದ ಜನ ಇವನೂ ಧರ್ಮ ಪ್ರಚಾರಕನೇ ಇರಬೇಕೆಂದು ಇವನ ಕಡೆ ನೋಡುತ್ತಾರೆ. ಬ್ರಯಾನ್ ರೋಮನ್ ರಿಂದ ತಪ್ಪಿಸಿಕೊಳ್ಳಲು ಇದು ಸರಿಯಾದ ದಾರಿಯೆಂದು ಅರಿತು ಸುಮ್ಮನೆ ಕಥೆ ಹೇಳುತ್ತಾ ಹೋಗುತ್ತಾನೆ. ಕಥೆಯ ಬಗ್ಗೆ ಪ್ರಶ್ನೆ ಕೇಳಿ ಇವನ ಕಥೆ ಹೇಳುವ ಶೈಲಿ ಇಷ್ಟವಾಗದ ಜನ ಮರಳಿ ಹೋಗುತ್ತಿದ್ದನ್ನು ಮತ್ತು ರೋಮನ್ ಸೇನೆಯ ಪಡೆಯೊಂದು ಅತ್ತಲೇ ಧಾವಿಸುತ್ತಿದ್ದನ್ನು ಗಮನಿಸಿ ಏನೇನೋ ತಡವರಿಸುತ್ತಾನೆ. ಸೈನಿಕರು ಅಲ್ಲಿಂದ ಹೋದ ನಂತರ ತನ್ನ ತಡವರಿಕೆ ನಿಲ್ಲಿಸಿ ತಾನು ನಿಂತಿದ್ದ ಕಟ್ಟೆಯಿಂದ ಕೆಳಗಿಳಿದು ಹೊರಡಲು ಸಿದ್ಧವಾಗುತ್ತಾನೆ. ಇವನು ಮಾತು ಅರ್ಧಕ್ಕೆ ನಿಲ್ಲಿಸಿದ್ದು ಜನರಲ್ಲಿ ಕುತೂಹಲ ಹುಟ್ಟಿಸುತ್ತದೆ. ಜನ ಏನದು ಪೂರ್ತಿ ಹೇಳೆಂದು ಇವನಿಗೆ ದುಂಬಾಲು ಬೀಳುತ್ತಾರೆ. ಏಕೆ ಹೀಗೆ ಪೂರ್ತಿ ಹೇಳದೆ ಗುಟ್ಟು ಮಾಡುತ್ತಿದ್ದಾನೆ ಎಂದು ತಮ್ಮಲ್ಲಿ ತಾವೇ ಇನ್ನಷ್ಟು ಕುತೂಹಲ ಹುಟ್ಟಿಸಿಕೊಂಡು ಇವನು ಮರಣವನ್ನು ಗೆಲ್ಲುವ ಗುಟ್ಟು ತಿಳಿದಿದ್ದಾನೆ ಹಾಗಾಗಿ ಹೇಳುತ್ತಿಲ್ಲ ಎಂದು ತಮ್ಮಲ್ಲೇ ಮಾತಾಡಿಕೊಂಡು ನೋಡನೋಡುತ್ತಿದ್ದಂತೆಯೇ ಆತನನ್ನು ಗುರು ಎಂದು ಕರೆದು ಆತನನ್ನು ಒಂದು ಹಿಂಡು ಜನ ಹಿಂಬಾಲಿಸಲು ಪ್ರಾರಂಭಿಸುತ್ತಾರೆ. ಆತ ಬಿಟ್ಟು ಹೋದ ಸೋರೆಕಾಯಿಯನ್ನು ಪವಿತ್ರ ಎಂದು ಕರೆದು ಅದನ್ನು ಗೌರವಿಸಲು ಮುಂದಾಗುತ್ತಾರೆ. ಈ ಜನರಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಚಪ್ಪಲಿ ಕಿತ್ತರೂ ಅದನ್ನು ಅಲ್ಲೇ ಬಿಟ್ಟು ಓಡುತ್ತಾನೆ. ಆ ಕಿತ್ತ ಚಪ್ಪಲಿಯನ್ನೂ ತಮ್ಮ ಗುರು ಅದರಲ್ಲಿ ಏನೋ ಸಂಕೇತ ಬಿಟ್ಟಿದ್ದಾನೆಂದು ಅದನ್ನೂ ಗೌರವಿಸುತ್ತಾ ಬ್ರಯಾನ್ ನನ್ನು ಹಿಂಬಾಲಿಸುತ್ತಾರೆ. ಹಾಗೆ ಹಿಂಬಾಲಿಸುವಾಗ ಜನರ ಗುಂಪಿನಲ್ಲಿ ಸೋರೆಕಾಯಿಗೆ ನಡೆಕೊಳ್ಳುವ ಗುಂಪು, ಚಪ್ಪಲಿಗೆ ನಡೆಕೊಳ್ಳುವ ಗುಂಪು, ಇವು ಯಾವಕ್ಕೂ ನಡೆದುಕೊಳ್ಳದ ಗುಂಪು ಹೀಗೆ ಹಲವಾರು ಗುಂಪುಗಳಾಗಿ ಒಡೆದು ಬ್ರಯಾನ್ ನನ್ನು ಹಿಂಬಾಲಿಸುತ್ತಾರೆ. ಇವರಿಂದ ತಪ್ಪಿಸಿಕೊಳ್ಳಲು ಒಂದು ಗುಂಡಿಗೆ ಹಾರುವ ಬ್ರಯಾನ್ ಅಲ್ಲಿ ತಪಸ್ಸಿಗೆ ಕೂತಿದ್ದ ಒಬ್ಬ ಮುದುಕನ ಮೇಲೆ ಬೀಳುತ್ತಾನೆ. ಆ ಮುದುಕ ತನ್ನ ತಪೋಭಂಗ ಮಾಡಿದ ಬ್ರಯಾನ್ ಗೆ ಬಯ್ಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಜನ ಬ್ರಯಾನ್ ನನ್ನು ಒಂದು ಪವಾಡ ಮಾಡುವಂತೆ ಪೀಡಿಸುತ್ತಾರೆ. ಬ್ರಯಾನ್ ಅದಕ್ಕೆ ಏನೋ ಹೇಳಿದಕ್ಕೆ ಪವಾಡ ಮಾಡಿದ ಎಂದು ಸಂತೋಷ ಪಡುತ್ತಾರೆ. ಅಷ್ಟರಲ್ಲಿ ಮುದುಕ ಬ್ರಯಾನ್ ಮೇಲಿನ ಸಿಟ್ಟಿನಿಂದ ಅವನಿಗೆ ಹೊಡೆಯಲು ಮುಂದಾದಾಗ ಆತ ಒಬ್ಬ ಧರ್ಮವನ್ನು ನಂಬದವನು ಎಂದು ಆ ಮುದುಕನನ್ನು ಅಲ್ಲಿದ್ದ ಜನ ಹೊಡೆದು ಸಾಯಿಸುತ್ತಾರೆ.



  ಇದೆಲ್ಲರದರಿಂದ ತಪ್ಪಿಸಿಕೊಂಡು ಮನೆಗೆ ಬಂದು ಜೂಡಿತ್ ಜೊತೆಗೆ ಇದ್ದ ಬ್ರಯಾನ್ ಬೆಳಗೆದ್ದು ಮನೆ ಮುಂದೆ ರಾಶಿ ರಾಶಿ ಜನ ಸೇರಿದ್ದು ನೋಡಿ ಗಾಬರಿಗೊಳ್ಳುತ್ತಾನೆ. ಅಷ್ಟರಲ್ಲಿ ಮನೆಗೆ ಬರುವ ಆತನ ತಾಯಿ ಈಗ ಇವನು  ಇನ್ನೇನು ಅನಾಹುತ ಮಾಡಿರಬಹುದೆಂದು ಸಿಟ್ಟು ಮಾಡಿಕೊಂಡು ಬ್ರಯಾನ್ ಗೆ ಚೆನ್ನಾಗಿ ಹೊಡೆಯುತ್ತಾಳೆ. ಆಕೆಯನ್ನು ತಡೆಯುವ ಜೂಡಿತ್ ಬ್ರಯಾನ್ ಒಬ್ಬ ಒಳ್ಳೆಯ ನಾಯಕ ಎಂದೆಲ್ಲ ಆತನನ್ನು ಹೊಗಳಲು ಶುರು ಮಾಡುತ್ತಾಳೆ. ಹೊರಗಡೆ ನೆರೆದಿದ್ದ ಜನ ಆತನನ್ನು ನೋಡಲೇಬೇಕೆಂದು ಹಠ ಮಾಡಿದ್ದು ನೋಡಿ ಆತನಿಗೆ ಜನರನ್ನು ನೋಡಲು ಕಳಿಸುತ್ತಾಳೆ. ಜನರಿಗೆ ಬ್ರಯಾನ್ ಎಷ್ಟು ಹೇಳಿದರೂ ಕೇಳದಿದ್ದಾಗ ಬೇಸತ್ತು ಮನೆಯಿಂದ ಹೊರಬಂದರೆ ಮತ್ತೆ ಅಲ್ಲಿ ಜನ. ಕೆಲವರು ಇವನನ್ನು ಬಳಸಿ ಜನರಿಗೆ ದರ್ಶನ ಭಾಗ್ಯ ಕರುಣಿಸಲು ದುಡ್ಡು ಪೀಕುತ್ತಿರುತ್ತಾರೆ. ಇವರಿಂದ ಬೇಜಾರಾಗಿ ಒಂಟಿಯಾಗಿ ಕೂತಿದ್ದಾಗ ರೋಮನ್ ಸೈನಿಕರು ಕಡೆಗೂ ಈತನನ್ನು ಸೆರೆಹಿಡಿದು ಶಿಲುಬೆಗೇರಿಸುವ ಶಿಕ್ಷೆ ಕೊಡುತ್ತಾರೆ. ಪಿ.ಎಫ್.ಜೆ ಯ ಸದಸ್ಯರು ಸುಮ್ಮನೆ ತಮ್ಮ ಕಚೇರಿಯಲ್ಲಿ ಕೂತು ಯೋಜನೆ ಹಾಕುತ್ತ ಕುಳಿತಿದ್ದಾಗ ಜೂಡಿತ್ ಬಂದು ಬ್ರಯಾನ್ ನನ್ನು ಸೆರೆ ಹಿಡಿದ ವಿಷಯ ಹೇಳಿದರೂ ಸದಸ್ಯರು ಬ್ರಯಾನ್ ನನ್ನು ಉಳಿಸಬೇಕೋ ಬೇಡವೋ ಎಂದು ನಿರ್ಣಯ ಕೈಗೊಳ್ಳುವ ಬಗ್ಗೆ ಚರ್ಚಿಸಲು ನಿರ್ಧರಿಸುತ್ತಾರಷ್ಟೇ. ಇವರಿಂದ ಏನೂ ಆಗದು ಎಂದು ಜೂಡಿತ್ ಪೈಲೇಟ್ ವಿಶೇಷ ದಿನವಾದ ಅಂದು ಒಬ್ಬ ಖೈದಿಯನ್ನು ಬಂಧಮುಕ್ತಗೊಳಿಸುತ್ತಾನೆಂದು ತಿಳಿದು ಅವನು ಘೋಷಣೆ ಮಾಡುವ ಸ್ಥಳಕ್ಕೆ ಹೋಗಿ ಬ್ರಯಾನ್ ನನ್ನು ಉಳಿಸಲು ಕೇಳುತ್ತಾಳೆ. ಅದಕ್ಕೆ ಒಪ್ಪುವ ಪೈಲೇಟ್ ಹಾಗೆಯೇ ಆಜ್ಞೆಯನ್ನು ಕೊಡುತ್ತಾನೆ. ಅಷ್ಟರಲ್ಲಿ ಶಿಲುಬೆಗೇರಿಸುವ ಜನರನ್ನು ಶಿಕ್ಷೆ ಕೊಡುವ ಜಾಗಕ್ಕೆ ಕರೆದೊಯ್ದಿರುತ್ತಾರೆ. ಅಲ್ಲಿಗೆ ಬರುವ ಪಿ.ಎಫ್.ಜೆ ಸದಸ್ಯರನ್ನು ನೋಡಿ ತನ್ನನ್ನು ರಕ್ಷಿಸಲು ಬಂದಿದ್ದಾರೆಂದು ಬ್ರಯಾನ್ ಸಂತೋಷಗೊಳ್ಳುತ್ತಾನೆ. ಆದರೆ ಅವರೆಲ್ಲ ಒಂದು ಉದ್ದದ ಭಾಷವನ್ನಷ್ಟೇ ಕೊಟ್ಟು ಅವನು ತಮಗಾಗಿ ಮಾಡುತಿದ್ದ ತ್ಯಾಗವನ್ನು ತಾವೆಲ್ಲ ಮೆಚ್ಚುತ್ತೇವೆಂದು ಹೇಳಿ ಹೊರಟು ಹೋಗುತ್ತಾರೆ. ಕೊನೆಗೂ ಬ್ರಯಾನ್ ರಕ್ಷಿಸಲು ಅಲ್ಲಿಗೆ ಬರುವ ರೋಮನ್ ಸೈನಿಕರು ಬ್ರಯಾನ್ ಯಾರೆಂದು ಕೇಳಿದಾಗ ಯಾರೋ ಒಬ್ಬ ತಮಾಷೆ ಮಾಡಲು ತಾನೇ ಬ್ರಯಾನ್ ಎಂದು ಕೂಗುತ್ತಾನೆ. ಆಗ ಬ್ರಯಾನ್, ಅವನಲ್ಲ ತಾನು ನಿಜವಾದ ಬ್ರಯಾನ್ ಎಂದು ಎಷ್ಟು ಕೂಗಿ ಹೇಳಿದರೂ ಯಾರೂ ಕೇಳದೆ ಅವನನ್ನು ಅಲ್ಲೇ ಬಿಡುತ್ತಾರೆ. ಜೂಡಿತ್ ಅಲ್ಲಿಗೆ ಬಂದು ರೆಜ್ ತನಗೆ ಎಲ್ಲ ಬಿಡಿಸಿ ಹೇಳಿದ್ದು ಬ್ರಯಾನ್ ಮಾಡಲು ಹೊರಟಿದ್ದ ಕೆಲಸವನ್ನು ತಾನು ಶ್ಲಾಘಿಸುವುದಾಗಿ ಹೇಳಿ ಹೊರಟು ಹೋಗುತ್ತಾಳೆ. ಬ್ರಯಾನ್ ತಾಯಿ ಬಂದು ತನ್ನ ಜೀವನದ ಅಂತ್ಯಕಾಲದಲ್ಲಿ ಹೀಗೆ ಬ್ರಯಾನ್ ಬಿಟ್ಟು ಹೋಗುತ್ತಿದ್ದಾನೆಂದು ಚೆನ್ನಾಗಿ ಬೈದು ಹೊರಟು ಹೋಗುತ್ತಾಳೆ. ಎಲ್ಲ ಕಳೆದುಕೊಂಡೆ ಎಂದು ಹತಾಶನಾಗುವ ಬ್ರಯಾನ್ ಗೆ ಮತ್ತೆ ಹುರಿದುಂಬಿಸಲು ಹಿಂದಿನಿಂದ ಒಬ್ಬ ಹಾಡು ಹಾಡಲು ಪ್ರಾರಂಭಿಸುತ್ತಾನೆ, “Always look on the bright side of life”. ಈ ಹಾಡು ಕೇವಲ ಬ್ರಯಾನ್ ಗಷ್ಟೇ ಅಲ್ಲ ನಮಗೆಲ್ಲರಿಗೂ. ಜೀವನದಲ್ಲಿ ಏನೆಲ್ಲಾ ಕಂಡು ಏನೆಲ್ಲಾ ಮಾಡಿ ಕೊನೆಗೆ ಸಾವು ಹತ್ತಿರಾದಾಗ ಹಾಗೆ ಮಾಡಲಿಲ್ಲವಲ್ಲ, ಹೀಗೆ ಆಗಲಿಲ್ಲವಲ್ಲ ಎಂದು ನಮ್ಮನ್ನು ನಾವೇ ಶಪಿಸುತ್ತೇವೆ, ಹತಾಶರಾಗುತ್ತೇವೆ. ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ಹೀಗೆ ವ್ಯಥೆ ಪಡುವುದರಲ್ಲಿ ಯಾವ ಅರ್ಥವೂ ಇಲ್ಲ ಎನ್ನುವುದರಲ್ಲಿ ಸತ್ಯವಿದೆ. ನಮ್ಮ ನಾಟಕಕ್ಕೆ ತೆರೆಯೆಳಿಯುವ ಸಮಯ ಬಂದಾಗ ಒಮ್ಮೆ ಪ್ರೇಕ್ಷರೆಡೆಗೆ ಬಾಗಿ ನಮಿಸಿ ಒಂದು ನಗೆ ಕೊಟ್ಟು ನೇಪಥ್ಯಕ್ಕೆ ಸರಿಯಬೇಕು ಎಂದು ಬಹಳ ಸೊಗಸಾಗಿ ಈ ಹಾಡಲ್ಲಿ ಹಾಡಲಾಗಿದೆ. ಆದರೆ ಈ ಹಾಡಲ್ಲೂ ತಮಾಷೆ ಬಿಟ್ಟಿಲ್ಲ. ಹಾಗಾಗಿ ಈ ಹಾಡು ಸದಾ ಕಾಲ ಮನದಲ್ಲಿ ಉಳಿಯುವಂತಹ ಕೆಲವಲ್ಲಿ ಒಂದು.



  ಧರ್ಮವನ್ನು ಟೀಕಿಸುತ್ತ ಅದನ್ನು ಹಿಂಬಾಲಿಸುವ ಭರದಲ್ಲಿ ಮನುಷ್ಯ ಏನೆಲ್ಲಾ ಮಾಡಿ ಕೂರುತ್ತಾನೆ ಎಂದು ಹಾಸ್ಯಮಯವಾಗಿ ಈ ಚಿತ್ರದಲ್ಲಿ ತೋರಿದ್ದಾರೆ. ಹಾಗೆಯೇ ಸುಮ್ಮನೆ ಕ್ರಾಂತಿ ಕ್ರಾಂತಿ ಎಂದು ಒಣ ಸಿದ್ಧಾಂತಗಳನ್ನು ಇಟ್ಟುಕೊಂಡು ಬಡಿದಾಡುವ ಜನರನ್ನೂ ಅಷ್ಟೇ ಆಡಿಕೊಂಡಿದ್ದಾರೆ. ಈ ಚಿತ್ರವನ್ನು ಮಾಡುವಾಗಿನಿಂದಲೂ ಈ ಚಿತ್ರಕ್ಕೆ ಅನೇಕ ತೊಂದರೆಗಳಾದವು. ನಿರ್ಮಾಪಕರು ಬದಲಾದರು. ಚಿತ್ರ ಬಿಡುಗಡೆಗೆ ತೊಂದರೆಯಾಯಿತು. ಐರ್ಲೆಂಡ್ ನಲ್ಲಿ ಈ ಚಿತ್ರವನ್ನು ಸಾಕಷ್ಟು ವರ್ಷ ಬ್ಯಾನ್ ಮಾಡಲಾಗಿತ್ತು. ಇವೆಲ್ಲದರ ನಡುವೆ ಕೂಡ ಚಿತ್ರಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯಿತು. ಆದರೆ ಅವರಿಗೆ ಎಂದೂ ಜೀವದ ಭಯ ಇರಲಿಲ್ಲ ಅಥವಾ ಅಂತಹ ಸಂದರ್ಭ ಒದಗಲಿಲ್ಲ. ಇದರ ಬಗ್ಗೆ ಪ್ರತಿಭಟನೆ ಮಾಡುವವರು ಟಿವಿಯಲ್ಲಿ ಇವರೊಡನೆ ಚರ್ಚೆಗೆ ಕೂತರು. ಆ ಚರ್ಚೆಗಳನ್ನು ನೋಡಿ ಇನ್ನಷ್ಟು ಜನ ಚಿತ್ರ ನೋಡಲು ಮುಂದಾದರು. ಈ ಚಿತ್ರ ಏಸು ಕ್ರಿಸ್ತನ ಬಗ್ಗೆ ಅಲ್ಲ. ಅದರಲ್ಲಿ ಅವನ ಬಗ್ಗೆ ಟೀಕೆ ಮಾಡಿಲ್ಲ ಎಂದು ಸಾರಿ ಸಾರಿ ಹೇಳಿದ ನಂತರ ಎಲ್ಲವೂ ಸರಿಹೋಯಿತು. ಈ ಚಿತ್ರ ಮಾಡಿದ ಬಗೆಗಿನ ಒಂದು ಡಾಕ್ಯುಮೆಂಟರಿ ಕೂಡ ಇದೆ. ಇಷ್ಟವಿದ್ದವರು ಅದನ್ನೂ ನೋಡಬಹುದು.



ವಿ.ಸೂ: ಚಿತ್ರದಲ್ಲಿ ಭಾಷೆ ಸ್ವಲ್ಪ ಒರಟು ಅನ್ನಿಸಬಹುದು ಮತ್ತು ಒಂದು ನಗ್ನ ದೃಶ್ಯವೂ ಕೆಲವು ಸೆಕೆಂಡುಗಳ ಕಾಲ ಇದೆ. ಇವನ್ನು ಸಹಿಸುವವರಾದರೆ ಇದೊಂದು ಒಳ್ಳೆಯ ಚಿತ್ರ.

ಫನ್ ಫ್ಯಾಕ್ಟ್: ಪೈಥಾನ್ ಕಂಪ್ಯೂಟರ್ ಭಾಷೆಯನ್ನು ಕಂಡುಹಿಡಿದವ ಮೊಂಟಿ ಪೈಥಾನ್ ತಂಡವನ್ನು ಇಷ್ಟಪಡುತ್ತಿದ್ದರಿಂದಲೇ ಅದಕ್ಕೆ ಹಾಗೆ ಹೆಸರಿಟ್ಟ.

-ವಿಶ್ವನಾಥ್

Friday, 10 November 2017

ದಿ ಪಿಯನಿಸ್ಟ್



IMDb: http://www.imdb.com/title/tt0253474/?ref_=nv_sr_1




     ಇಂಗ್ಲಿಶ್ ಸಿನೆಮಾ ನೋಡುವವರಿಗೆ ಚಿರಪರಿಚಿತ ಎನ್ನಬಹುದಾದ ನಿರ್ದೇಶಕ ಸ್ಟಿವೆನ್ ಸ್ಪಿಲ್ಬರ್ಗ್. ಅವರ "ದಿ ಶಿನ್ದ್ಲರ್ಸ್ ಲಿಸ್ಟ್" ಎರಡನೇ ವಿಶ್ವ ಯುದ್ಧದ ಅವಧಿಯಲ್ಲಿ ಯಹೂದಿಗಳ ಮೇಲಾದ ಕ್ರೌರ್ಯದ ಬಗೆಗಿನ ಚಿತ್ರ. ಅಂತಹದ್ದೇ ಅಷ್ಟೇ ಮಹತ್ತರವಾದ ಚಿತ್ರ "ದಿ ಪಿಯನಿಸ್ಟ್". ರೋಮನ್ ಪೋಲಾನ್ಸ್ಕಿನಿರ್ದೇಶಿರುವ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಏಡ್ರಿಯನ್ ಬ್ರೋಡಿ ಇದ್ದಾರೆ.

    ಈ ಚಿತ್ರ, 1939ರ ಮತ್ತು ನಂತರದ ಅವಧಿಯಲ್ಲಿ ಪೋಲೆಂಡ್ ದೇಶದಲ್ಲಿ ನಾಜಿ ಆರ್ಮಿಯ ಕ್ರೌರ್ಯ, ಅತ್ಯಾಚಾರಗಳ ಬಗ್ಗೆ ಅದರಲ್ಲೇ ಇದ್ದು ನೋವು ಸಂಕಟ ಅನುಭವಿಸಿ ಜೀವ ಉಳಿಸಿಕೊಂಡ ಒಬ್ಬ ಪಿಯಾನಿಸ್ಟ್, ವ್ಲಾಡಿಸ್ಲಾವ್ ಸ್ಪಿಲ್ಮನ್ ರ(Wladyslaw Szpilman) ಕಥೆ. 1939ರ ಆಗಿನ ಪೋಲೆಂಡ್ ಜೀವನದ ವಿಡಿಯೋ ಕ್ಲಿಪ್ ಗಳಿಂದ ಪ್ರಾರಂಭವಾಗುವ ಚಿತ್ರ, ವ್ಲಾಡಿಸ್ಲಾವ್ ರವರು ರೇಡಿಯೋ ಕಾರ್ಯಕ್ರಮ ಕೊಡುತ್ತಿದ್ದ ಸಂದರ್ಭದಿಂದ ತೆರೆದುಕೊಳ್ಳುತ್ತದೆ. ನಾಜಿ ಆರ್ಮಿಯ ಬಾಂಬ್ ದಾಳಿಯ ಕಾರಣದಿಂದ ವಾರ್ಸಾ(Warsaw) ರೇಡಿಯೋ ಕೇಂದ್ರ ಸ್ಥಗಿತಗೊಳಿಸಿ ಅಲ್ಲಿದ್ದ ಎಲ್ಲರೂ ಹೊರಗೆ ಬರುತ್ತಿರುವಾಗ ಸ್ಪಿಲ್ಮನ್ ತನ್ನ ಸ್ನೇಹಿತ ಯೂರೆಕ್ ನ ಸುಂದರ ತಂಗಿ ಡೋರೊಟಳನ್ನು ಭೇಟಿಯಾಗುತ್ತಾನೆ. ಆಕೆಯ ಸೌಂದರ್ಯಕ್ಕೆ ಮನಸೋಲುವ ಸ್ಪಿಲ್ಮನ್ ಆಕೆಯನ್ನು ಸರಿಯಾಗಿ ಮಾತನಾಡಿಸಬೇಕು ಎನ್ನುವಷ್ಟರಲ್ಲಿ ಆಕೆಯ ಅಣ್ಣ ಅದು ಸರಿಯಾದ ಸಮಯವಲ್ಲ ಎಂದು ಹೇಳಿ ಆಕೆಯನ್ನು ಕರೆದೊಯ್ಯುತ್ತಾನೆ.

    ನಾಜಿ ಆರ್ಮಿಯನ್ನು ಹಿಮ್ಮೆಟ್ಟಿಸಲು ಎಲ್ಲ ಪೋಲೆಂಡ್ ನಾಗರಿಕರಿಗೆ ಕರೆ ನೀಡಲಾಗಿರುತ್ತದೆ. ಇದಕ್ಕೆ ಓಗೊಟ್ಟು ಬಹಳಷ್ಟು ಜನ ಮನೆ ಬಿಟ್ಟು ಸುರಕ್ಷಿತ ಜಾಗಗಳಿಗೆ ಹೋಗಿ ಯುದ್ಧ ಮುಂದುವರೆಸಲು ನಿರ್ಧಾರ ಮಾಡಿರುತ್ತಾರೆ. ಆದರೆ ಸ್ಪಿಲ್ಮನ್ ಕುಟುಂಬ ರೇಡಿಯೋದಲ್ಲಿ ಬ್ರಿಟನ್ ದೇಶ ಜರ್ಮನಿಯ ಮೇಲೆ ಯುದ್ಧ ಘೋಷಿಸುವುದನ್ನು ಕೇಳಿ ತಾವಿದ್ದ ಮನೆಯಲ್ಲೇ ಉಳಿದು ಕಾದು ನೋಡಲು ನಿರ್ಧರಿಸುತ್ತಾರೆ. ನಿಧಾನವಾಗಿ ಪರಿಸ್ಥಿತಿ ತಿಳಿಯಾಗಬಹುದು ಎಂದು. ಆದರೆ ಅವರು ಎಣಿಸಿದಂತೆ ನಡೆಯದೆ ನಾಜಿ ಸೇನೆಯು ನಿಧಾನವಾಗಿ ಯಹೂದಿಗಳ ಮೇಲೆ ಒಂದೊಂದೇ ಕಟ್ಟಲೆಗಳನ್ನು ಹೇರಲು ತೊಡಗುತ್ತಾರೆ.

  ಮೊದಲು ತೋಳುಗಳ ಮೇಲೆ ಯಹೂದಿ ಚಿಹ್ನೆಯಾದ ಡೇವಿಡ್ ನ ನಕ್ಷತ್ರವನ್ನು ಧರಿಸುವಂತೆ ಕಾನೂನು ಮಾಡಲಾಗುತ್ತದೆ. ಬಡವರು ಶ್ರೀಮಂತರು ಎನ್ನದೆ ಎಲ್ಲ ಯಹೂದಿಗಳನ್ನು ಕಂಡಲ್ಲಿ ಅವಮಾನಿಸುವುದು ಕೆಟ್ಟದಾಗಿ ನಡೆಸಿಕೊಳ್ಳುವುದು ಪ್ರಾರಂಭವಾಗುತ್ತದೆ. ನಂತರ ನಿಧಾನವಾಗಿ ಎಲ್ಲ ಯಹೂದಿಗಳನ್ನು ಅವರಿಗಾಗಿಯೇ ಬೇರ್ಪಡಿಸಲಾದ ಒಂದು ಕಾಲೋನಿಗೆ(Jewish Ghetto) ಕಡ್ಡಾಯವಾಗಿ ಸ್ಥಳಾಂತರಿಸಲು ಕಾನೂನು ಹೊರಡಿಸಲಾಗುತ್ತದೆ. ತನ್ನ ಕುಟುಂಬ ಅತ್ಯಗತ್ಯ ವಸ್ತುಗಳನ್ನೆಲ್ಲ ತೆಗೆದುಕೊಂಡು ಸ್ಥಳಾಂತರಿಸುವಾಗ ಸ್ಪಿಲ್ಮನ್  ಡೋರೊಟಳನ್ನು ಮತ್ತೆ ಭೇಟಿಯಾಗುತ್ತಾನೆ. ಆಕೆಗೆ ಇವರ ಮೇಲೆ ನಡೆಸಲಾಗುತ್ತಿರುವ ಅನ್ಯಾಯದ ಬಗ್ಗೆ ಸಿಟ್ಟು ಬೇಸರ ಎರಡೂ ಆದರೂ ಇಬ್ಬರೂ ಏನೂ ಮಾಡಲಾಗದೆ ಕೊನೆಯ ಬಾರಿ ವಿದಾಯ ಹೇಳಿ ಅವರವರ ದಾರಿ ಹಿಡಿಯುತ್ತಾರೆ.

    ಸ್ಪಿಲ್ಮನ್ ಮತ್ತು ಆತನ ತಮ್ಮ, ತಮ್ಮ ಬಳಿ ಇರುವ ಪುಸ್ತಕಗಳನ್ನು ಮಾರಿ ಬಂದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿರುತ್ತಾರೆ. ಒಂದು ದಿನ ಇವರ ಸ್ನೇಹಿತನೊಬ್ಬ ಯಹೂದಿಗಳನ್ನು ನಿಯಂತ್ರಿಸಲು ಯಹೂದಿಗಳಲ್ಲೇ ಕೆಲವರನ್ನು ಪೋಲಿಸ್ ಆಗಿ ನಾಜಿ ಸೇನೆ ನೇಮಿಸುತ್ತಿರುವುದಾಗಿ, ತಾನು ಸ್ಪಿಲ್ಮನ್ ಮತ್ತು ಆತನ ತಮ್ಮನನ್ನು ಶಿಫಾರಸು ಮಾಡಿ ಆ ಕೆಲಸಕ್ಕೆ ಹಚ್ಚಬಹುದು ಎಂದು ಹೇಳುತ್ತಾನೆ. ಆದರೆ ಇದಕ್ಕೊಪ್ಪದ ಸ್ಪಿಲ್ಮನ್ ಮತ್ತು ಆತನ ತಮ್ಮ, ಅವನಿಗೆ ಬೈದು ಕಳುಹಿಸುತ್ತಾರೆ. ಅಲ್ಲಿಂದ ದಿನೇ ದಿನೇ ಪರಿಸ್ಥಿತಿ ಹದಗೆಡುತ್ತಾ ಸ್ಪಿಲ್ಮನ್ ಕುಟುಂಬ ಬಹಳ ಕಷ್ಟ ಅನುಭವಿಸುತ್ತಾರೆ. ಕೊನೆಗೆ ಒಂದು ದಿನ ಎಲ್ಲರನ್ನೂ ದೂರದ ಊರೊಂದಕ್ಕೆ ಕರೆದೊಯ್ಯುತ್ತಿರುವುದಾಗಿ ಎಲ್ಲ ಯಹೂದಿಗಳು ತಮ್ಮ ವಸ್ತುಗಳನ್ನು ಇದ್ದಲ್ಲೇ ಬಿಟ್ಟು ಹೊರಡಬೇಕು ಎಂದು ನಾಜಿ ಸೇನೆ ಆದೇಶಿಸುತ್ತದೆ. ಹೀಗೆ ರೈಲು ಹತ್ತಲು ಒಟ್ಟು ಸೇರಿಸಿದ್ದ ಗುಂಪಲ್ಲಿ ಅಲ್ಲಿಯ ತನಕ ಬೇರೆ ಬೇರೆಯಾಗಿದ್ದ ಸ್ಪಿಲ್ಮನ್ ಕುಟುಂಬ ಮತ್ತೆ ಸೇರುತ್ತದೆ. ತಮ್ಮ ಬಳಿ ಇದ್ದ ಕೊಂಚವೇ ದುಡ್ಡಿನಲ್ಲಿ ಒಂದು ಸಿಹಿ ತಿಂಡಿಯನ್ನು ಕೊಂಡು ಎಲ್ಲರೂ ಹಂಚಿಕೊಂಡು ಕಡೆಯ ಬಾರಿ ತಿನ್ನುತ್ತಾರೆ. ಎಲ್ಲರೂ ರೈಲು ಹತ್ತಲು ಬಂದಾಗ ಸ್ಪಿಲ್ಮನ್ ನನ್ನು ನೋಡಿದ ಪೋಲಿಸ್ ಸ್ನೇಹಿತ ಆತನನ್ನು ರೈಲು ಹತ್ತದಂತೆ ಹೊರಗೆಳೆದು ಬದಿಗೆ ತಳ್ಳುತ್ತಾನೆ ಮತ್ತು ತಪ್ಪಿಸಿಕೊಳ್ಳಲು ಹೇಳುತ್ತಾನೆ. ಆದರೆ ಕುಟುಂಬದವರನ್ನು ಬಿಟ್ಟು ಹೋಗಲು ಮನಸ್ಸಾಗದ ಸ್ಪಿಲ್ಮನ್ ಮತ್ತೆ ಅವರೊಟ್ಟಿಗೆ ಸೇರಲು ಹೋದಾಗ ಆತನನ್ನು ಮತ್ತೆ ಹೊರಗೆಳುಯುವ ಸ್ನೇಹಿತ ತಾನು ಆತನ ಜೀವ ಉಳಿಸಿದ್ದೇನೆಂದೂ, ಅಲ್ಲಿಂದ ತಪ್ಪಿಸಿ ಕೊಳ್ಳಲು ಹೇಳುತ್ತಾನೆ. ಮನಸ್ಸಿಲ್ಲದ ಮನಸ್ಸಿನಿಂದ ಹೊರಡುವ ಸ್ಪಿಲ್ಮನ್ ತನ್ನ ಕುಟುಂಬವನ್ನು ಕಳೆದುಕೊಂಡ ದುಃಖದೊಂದಿಗೆ ಅಳುತ್ತ ಮತ್ತೆ ನಗರಕ್ಕೆ ಬರುತ್ತಾನೆ.

    ಅಳಿದುಳಿದಿದ್ದ ಪೋಲಿಶ್ ಮತ್ತು ಯಹೂದಿಗಳ ಒಂದು ಸಣ್ಣ ಕ್ಯಾಂಪ್ ಗೆ ಸೇರುವ ಸ್ಪಿಲ್ಮನ್ ಅಲ್ಲಿ ಕೂಲಿ ಮಾಡುತ್ತಾ ಕಾಲ ಕಳೆಯುತ್ತಿರುತ್ತಾನೆ. ಅಲ್ಲೂ ದಿನವೂ ಸಾವಿನ ಭಯ ಇದ್ದದ್ದೇ. ಅಷ್ಟರಲ್ಲೇ ಒಂದು ದಿನ ಕ್ಯಾಂಪಿನಲ್ಲಿ ತನ್ನ ಹಳೆ ಪರಿಚಿತನೊಬ್ಬನ ಭೇಟಿಯಾಗುತ್ತದೆ. ಆತನ ಸಹಾಯ ಪಡೆದು ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎಂದು ಹವಣಿಸುವ ಸ್ಪಿಲ್ಮನ್ ಒಂದು ದಿನ ಆತನ ಸಹಾಯ ಪಡೆದು ಕ್ಯಾಂಪಿನಿಂದ ತಪ್ಪಿಸಿಕೊಂಡು ಆತನ ಪರಿಚಯಸ್ತ ಪೋಲಿಶ್ ಮಹಿಳೆ ಜನೀನ್ ಳ ಬಳಿ ಸಹಾಯ ಕೇಳಿ ಹೋಗುತ್ತಾನೆ. ಆತನನ್ನು ಮನೆಗೆ ಕರೆದುಕೊಂಡು ಹೋಗುವ ಜನೀನ್ ಆತನಿಗೆ ಉಪಚಾರ ಮಾಡಿ ಆಕೆಯ ಗಂಡನ ಸಹಾಯದಿಂದ ತಮ್ಮ ಮತ್ತೊಬ್ಬ ಪರಿಚಿತ ಗೆಬ್ಚಿನ್ಸ್ಕಿ ಮನೆಗೆ ಕಳಿಸಿ ಅಲ್ಲಿ ಸ್ಪಿಲ್ಮನ್ ಗೆ ಅಂದು ರಾತ್ರಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಡುತ್ತಾಳೆ. ಗೆಬ್ಚಿನ್ಸ್ಕಿಈತನನ್ನು ಬರಮಾಡಿಕೊಂಡು ಬೇರೊಂದು ಮನೆಯಲ್ಲಿ ಉಳಿದುಕೊಳ್ಳಲು ಸಹಾಯ ಮಾಡುತ್ತಾನೆ. ಆ ಮನೆಗೆ ಗುಟ್ಟಾಗಿ ಸ್ಪಿಲ್ಮನ್ ನನ್ನು ಭೇಟಿಯಾಗಲು ಜನೀನ್ ಆಗಾಗ ಬರುತ್ತಿರುತ್ತಾಳೆ ಮತ್ತು  ಹಾಗೆ ಬಂದಾಗಲೆಲ್ಲ ಆತನ ಊಟದ ವ್ಯವಸ್ಥೆ ಮಾಡಿಯೂ ಹೋಗುತ್ತಿರುತ್ತಾಳೆ. ಹೀಗೇ ನಡೆಯುತ್ತಿರುವಾಗ ಒಂದು ದಿನ ತಾನಿದ್ದ ಮನೆಯ ಎದುರು ಕಟ್ಟಡದಲ್ಲಿ ಕೆಲವು ಕ್ರಾಂತಿಕಾರಿ ಯಹೂದಿಗಳು ಅಡಗಿದ್ದಾರೆ ಎಂಬ ಮಾಹಿತಿ ತಿಳಿದು ಜರ್ಮನ್ ಸೇನೆ ದಾಳಿ ಮಾಡುತ್ತದೆ. ಆದರೆ ಬಹಳ ದೃಢಸಂಕಲ್ಪ ಹೊಂದಿದ್ದ ಆ ಕ್ರಾಂತಿಕಾರಿಗಳು ಕೊನೆಗೂ ಜರ್ಮನ್ ಸೇನೆಗೆ ಸಾಕಷ್ಟು ಘಾಸಿ ಮಾಡಿ 3 ದಿನ ನಂತರ ಸಾಯುತ್ತಾರೆ. ಇದನ್ನು ತಾನಿದ್ದ ಮನೆಯಿಂದಲೇ ಮೂಕನಂತೆ ನೋಡುತ್ತಿದ್ದ ಸ್ಪಿಲ್ಮನ್ ಜನೀನ್ ಬಂದಾಗ ಆ ಕ್ರಾಂತಿಕಾರಿಗಳು ಸತ್ತದ್ದರಿಂದ ಏನು ಪ್ರಯೋಜನವೋ ಎಂದು ಬೇಸರದಿಂದ ನುಡಿಯುತ್ತಾನೆ. ಅದಕ್ಕೆ ಜನೀನ್ ಈ ಕ್ರಾಂತಿಕಾರಿಗಳ ಹೋರಾಟ ಜರ್ಮನ್ ರನ್ನು ಆಶ್ಚರ್ಯಗೊಳಿಸಿದೆ ಮತ್ತು ಇದರಿಂದ ಪ್ರೇರಿತಗೊಂದು ಪೋಲಿಶ್ ಜನ ಕೂಡ ಜರ್ಮನ್ ರ ವಿರುದ್ಧ ದಂಗೆಯೇಳುತ್ತಾರೆ ಎಂದು ಹೇಳುತ್ತಾಳೆ.
  
  ಒಂದು ದಿನ ಇದ್ದಕ್ಕಿದ್ದಂತೆ ಗೆಬ್ಚಿನ್ಸ್ಕಿಜರ್ಮನ್ ಸೇನೆ ಜನೀನ್ ಮತ್ತವಳ ಗಂಡನನ್ನು ಸೆರೆಹಿಡಿದಿರುವುದಾಗಿಯೂ ತನ್ನನ್ನೂ ಸೆರೆಹಿಡಿಯಬಹುದು ಎಂಬ ಮಾಹಿತಿ ಸಿಕ್ಕಿ ಅಲ್ಲಿಂದ ತಪ್ಪಿಸಿಕೊಳ್ಳುತ್ತಿರುವುದಾಗಿಯೂ ಸ್ಪಿಲ್ಮನ್ಗೂ ತಪ್ಪಿಸಿಕೊಳ್ಳುವಂತೆ ಹೇಳಿ ಹೊರಟು ಹೋಗುತ್ತಾನೆ. ತಾನು ಕಂಡುಕೊಂಡ ಆ ಜಾಗವನ್ನು ಬಿಡಲು ಮನಸ್ಸಿಲ್ಲದೆ ಸ್ಪಿಲ್ಮನ್ ಅಲ್ಲಿಯೇ ಉಳಿಯುತ್ತಾನೆ. ಅಷ್ಟರಲ್ಲೇ ಜರ್ಮನ್ ಸೈನಿಕರು ಆತನ ಅಪಾರ್ಟ್ಮೆಂಟ್ ಬಿಲ್ಡಿಂಗ್ ಗೆ ದಾಳಿಯಿಟ್ಟು ಕೆಲವರನ್ನು ಸೆರೆ ಹಿಡಿದುಕೊಂದು ಹೋಗುತ್ತಾರೆ. ಸ್ಪಿಲ್ಮನ್ ಈ ಮನೆಯಲ್ಲಿ ಇರುವುದು ಹೊರಗಿನವರಿಗೆ ತಿಳಿಯಬಾರದಾದ್ದರಿಂದ ಆತ ತುಂಬಾ ನಿಶಬ್ಧವಾಗಿರಬೇಕಾಗಿರುತ್ತದೆ. ಹಸಿವಿನಿಂದ ಮನೆಯಲ್ಲಿ ಏನಿದೆ ಎಂದು ಹುಡುಕುತ್ತಿರುವ ಸಂದರ್ಭದಲ್ಲಿ ತಟ್ಟೆಗಳನ್ನು ಬೀಳಿಸಿ ದೊಡ್ಡ ಸದ್ದು ಮಾಡಿಬಿಡುತ್ತಾನೆ. ಇದರಿಂದ ಈ ಮನೆಯಲ್ಲಿ ಯಾರೋ ಇದ್ದಾರೆ ಎಂದು ತಿಳಿದ ಪಕ್ಕದ ಮನೆಯಾಕೆ ಈತನ ಮನೆ ಬಾಗಿಲು ತಟ್ಟುತ್ತಾಳೆ. ತಾನಿನ್ನು ಸಿಕ್ಕಿಬಿದ್ದೆ ಎಂದು ಗಾಬರಿಗೊಂಡ ಸ್ಪಿಲ್ಮನ್ ತನ್ನ ಸಾಮಾನುಗಳನ್ನೆಲ್ಲಾ ತೆಗೆದುಕೊಂಡು ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ.

   ಗೆಬ್ಚಿನ್ಸ್ಕಿ ಒಮ್ಮೆ ಕೊಟ್ಟಿದ್ದ ಮಾಹಿತಿ ಬಳಸಿ ಆತ ಹೇಳಿದ ಮಿ||ಜೀಕೇವಿಚ್ ನನ್ನು ಸಂಪರ್ಕ ಮಾಡಲು ಸ್ಪಿಲ್ಮನ್ ಮುಂದಾಗುತ್ತಾನೆ. ಅವರ ಮನೆಗೆ ಹೋದಾಗ ಅಲ್ಲಿ ರೇಡಿಯೋ ಕೇಂದ್ರದಲ್ಲಿ ಭೇಟಿಯಾಗಿದ್ದ ತನ್ನ ಸ್ನೇಹಿತ ಯೂರೆಕ್ ನ ತಂಗಿ ಡೋರೊಟಳನ್ನು ನೋಡುತ್ತಾನೆ. ಗೆಬ್ಚಿನ್ಸ್ಕಿ ಸಂಪರ್ಕಿಸಲು ಹೇಳಿದ ವ್ಯಕ್ತಿ ಆಕೆಯ ಗಂಡನಾಗಿರುತ್ತಾನೆ. ತನ್ನ ಪರಿಸ್ಥಿತಿಯನ್ನೆಲ್ಲಾ ವಿವರಿಸಿದ ಮೇಲೆ ಆಕೆಯ ಗಂಡನೂ ಬಂದು ಆತನನ್ನು ಅಂದು ಅಲ್ಲೇ ಉಳಿಸಿಕೊಂಡು ಬೇರೊಂದು ಕಡೆ ಉಳಿಯುವ ವ್ಯವಸ್ಥೆ ಮಾಡಿಕೊಡುತ್ತಾನೆ. ಆ ಮನೆ ಎದುರಲ್ಲೇ ಜರ್ಮನ್ ಸೈನಿಕರನ್ನು ಶುಶ್ರೂಷೆ ಮಾಡುತ್ತಿದ್ದ ಆಸ್ಪತ್ರೆಯು ಮತ್ತು ಪೋಲಿಸ್ ಸ್ಟೇಷನ್ ಇರುತ್ತದೆ. ಜರ್ಮನ್ ರಿಂದ ತಪ್ಪಿಸಿಕೊಳ್ಳಬೇಕಾದರೆ ಅವರ ಮಧ್ಯೆಯೇ ಇದ್ದರೆ ಯಾರಿಗೂ ತಿಳಿಯದು ಎಂದು ಜೀಕೇವಿಚ್ ಹೇಳುತ್ತಾನೆ. ಹಾಗೆ ಹೇಳಿ ಆಗಾಗ ಸ್ಪಿಲ್ಮನ್ ಯೋಗಕ್ಷೇಮ ವಿಚಾರಿಸಲು ಬರುವುದಾಗಿಯೂ ಹೇಳಿ ಮನೆಗೆ ಹೊರಗಡೆಯಿಂದ ಬೀಗ ಹಾಕಿ ಹೋಗುತ್ತಾನೆ. ಅವನು ಹೋದಮೇಲೆ ಸ್ಪಿಲ್ಮನ್ ಕಣ್ಣು ಆ ಮನೆಯಲ್ಲಿ ಇದ್ದ ಪಿಯಾನೋ ಮೇಲೆ ಬೀಳುತ್ತದೆ. ಬಹಳ ದಿನದಿಂದ ಪಿಯಾನೋ ನುಡಿಸಿಲ್ಲದ್ದರಿಂದ ತಡೆಯಲಾಗದೆ ಅದರ ಮುಚ್ಚಳಿಕೆ ತೆರೆದು ಕೂರುತ್ತಾನೆ. ಮನದಲ್ಲೇ ಸಂಗೀತವನ್ನು ನೆನೆಯುತ್ತ ಪಿಯಾನೋ ಮೇಲೆ ನುಡಿಸುತ್ತಿರುವಂತೆ ಸುಮ್ಮನೆ ಕೈಯಾಡಿಸುತ್ತಾನೆ. ನಮ್ಮ ಜೀವನದಲ್ಲಿ ಅದಮ್ಯವಾಗಿ ಇಷ್ಟ ಪಡುವ ಒಂದೇ ಒಂದು ವಸ್ತುವಿಂದ ನಮ್ಮನ್ನು ದೂರವಿರಿಸಿದರೆ ಆ ಒದ್ದಾಟ ಮತ್ತು ಸಂಕಟ ಅತೀವವಾದದ್ದು. ಸ್ಪಿಲ್ಮನ್ ನದ್ದು ಇಲ್ಲಿ ಅದೇ ಪರಿಸ್ಥಿತಿ.
 
  ಕೆಲವು ದಿನಗಳ ನಂತರ ಜೀಕೇವಿಚ್ ತನ್ನೊಂದಿಗೆ ಆಂಟೆಕ್ ಶಾಲಾಸ್ ಎಂಬುವವನನ್ನು ಕರೆತಂದು ಇನ್ನು ಮುಂದೆ ಸ್ಪಿಲ್ಮನ್ ನನ್ನು ಆತ ನೋಡಿಕೊಳ್ಳುವುದಾಗಿ ಹೇಳುತ್ತಾನೆ. ಆದರೆ ಆಂಟೆಕ್, ಸ್ಪಿಲ್ಮನ್ ಹಸಿದುಕೊಂಡು ಬಳಲುತ್ತಿದ್ದರೂ ಎರಡು ವಾರದ ನಂತರ ಕೊಂಚ ಆಹಾರದೊಂದಿಗೆ ಬರುತ್ತಾನೆ. ಯಾಕಿಷ್ಟು ನಿಧಾನ ಮಾಡಿದೆ ಎಂದು ಸ್ಪಿಲ್ಮನ್ ಕೇಳಿದಾಗ ದುಡ್ಡಿನ ಅಡಚಣೆಯಾಗಿತ್ತು ಎಂದು ನೆವ ಹೇಳಿ ಸ್ಪಿಲ್ಮನ್ ನಿಂದ ದುಡ್ಡಿಗಾಗಿ ಮಾರಲು ಸ್ಪಿಲ್ಮನ್ ನ ಕೈಗಡಿಯಾರ ಕೂಡ ಕೊಂಡೊಯ್ದಿರುತ್ತಾನೆ. ಇಷ್ಟರಲ್ಲಿ ಸ್ಪಿಲ್ಮನ್ ಜಾಂಡಿಸ್ ಆಗಿ, ಸರಿಯಾದ ಆಹಾರವಿಲ್ಲದೆ ಬಳಲಿ ಮನೆಯಲ್ಲಿ ಒಬ್ಬನೇ ಹಿಂಸೆ ಅನುಭವಿಸುತ್ತಿರುತ್ತಾನೆ. ಒಂದು ದಿನ ಡೋರೋಟ ಮತ್ತು ಜೀಕೇವಿಚ್ ದಂಪತಿ ತಾವು ಬೇರೆಯ ಊರಿಗೆ ಹೋಗುವ ಮುನ್ನ ಕಡೆಯ ಬಾರಿ ಸ್ಪಿಲ್ಮನ್ ಯೋಗಕ್ಷೇಮ ವಿಚಾರಿಸಿ ಹೋಗುವ ಎಂದು ಸ್ಪಿಲ್ಮನ್ ಮನೆಗೆ ಬರುತ್ತಾರೆ. ಸ್ಪಿಲ್ಮನ್ ಸ್ಥಿತಿ ನೋಡಿ ಬೇಸರಗೊಳ್ಳುವ ಡೋರೋಟ ತನ್ನ ಗಂಡನಿಗೆ ಹೇಳಿ ವೈದ್ಯರೊಬ್ಬರನ್ನು ಕರೆಸಿ ಚಿಕಿತ್ಸೆ ಮಾಡಿಸುತ್ತಾಳೆ. ಆಂಟೆಕ್ ಸ್ಪಿಲ್ಮನ್ ಹೆಸರು ಹೇಳಿ ವಾರ್ಸಾ ಊರಿನ ತುಂಬಾ ದುಡ್ಡು ಎತ್ತಿ ಪರಾರಿಯಾಗಿದ್ದಾನೆ ಎಂದು ಡೋರೋಟ ಹೇಳುತ್ತಾಳೆ. ಸ್ಪಿಲ್ಮನ್ ಗಾಗಿ ಕೊಂಚ ಅಡಿಗೆ ಮಾಡಿಕೊಟ್ಟು ಕಡೆಯ ಬಾರಿ ವಿದಾಯ ಹೇಳಿ ಹೊರಡುತ್ತಾಳೆ.

  ಕೆಲವು ದಿನಗಳ ನಂತರ ಸ್ಪಿಲ್ಮನ್ ಮನೆ ಎದುರಲ್ಲಿದ್ದ ಪೋಲಿಸ್ ಸ್ಟೇಷನ್ ಮತ್ತು ಆಸ್ಪತ್ರೆಗೆ ಕೆಲವು ಕ್ರಾಂತಿಕಾರಿಗಳು ದಾಳಿ ಮಾಡುತ್ತಾರೆ. ದಾಳಿ ಮಾಡಿದ ಕ್ರಾಂತಿಕಾರಿಗಳು ಕೆಲವು ಜನ ಈತ ಇದ್ದ ಅಪಾರ್ಟ್ಮೆಂಟಿನಲ್ಲಿ ಕೂಡ ಇದ್ದದ್ದರಿಂದ ಜರ್ಮನ್ ಸೇನೆ ಸ್ಪಿಲ್ಮನ್ ಇದ್ದ ಕಟ್ಟಡದ ಮೇಲೂ ದಾಳಿ ಮಾಡುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳುವ ಸ್ಪಿಲ್ಮನ್ ಅಡಗಲು ಮತ್ತೊಂದು ಜಾಗವನ್ನು ಹುಡುಕುತ್ತ ಯಾರೂ ಇಲ್ಲದ ಒಂದು ಬಂಗಲೆಗೆ ಹೋಗುತ್ತಾನೆ. ಆ ಬಂಗಲೆಯ ಅಡಿಗೆ ಮನೆಯಲ್ಲಿ ಏನಾದರೂ ಸಿಗುವುದ ಎಂದು ಹುಡುಕುತ್ತಿದ್ದಾಗ  ಒಂದು ಟಿನ್ ಕಲ್ಲಂಗಡಿ ಹಣ್ಣಿನ ರಸ ಸಿಗುತ್ತದೆ. ಅದನ್ನು ತೆಗೆದುಕೊಂಡು ಹೊರಬರುತ್ತಿದ್ದಾಗ ಯಾರೋ ಜರ್ಮನ್ ಭಾಷೆಯಲ್ಲಿ ಮಾತಾಡುತ್ತಿದ್ದನ್ನು ಕೇಳಿ ಅಡಗಿಕೊಳ್ಳಲು ಅಟ್ಟಕ್ಕೆ ಹೋಗುತ್ತಾನೆ. ಹಾಗೆ ಹೋಗುವಾಗ ಯಾರೋ ಆ ಮನೆಯಲ್ಲಿ ಇದ್ದ ಪಿಯಾನೋ ನುಡಿಸುತ್ತಿದ್ದನ್ನು ಕೇಳುತ್ತ ಒಳಗೆ ಸೇರಿಕೊಳ್ಳುತ್ತಾನೆ. ಎಲ್ಲ ಸದ್ದಡಗಿದ ನಂತರ ಕೆಳಗಿಳಿದು ಬಂದು ಆ ಹಣ್ಣಿನ ರಸದ ಟಿನ್ ಒಡೆಯಲು ಪ್ರಯತ್ನಿಸುತ್ತಿದ್ದಾಗ ಅಲ್ಲಿ ಜರ್ಮನ್ ಸೇನೆಯ ಒಬ್ಬ ಕ್ಯಾಪ್ಟನ್ ಆಗಮಿಸುತ್ತಾನೆ. ಆತನನ್ನು ನೋಡಿ ದಿಗಿಲಾಗುವ ಸ್ಪಿಲ್ಮನ್ ಆತ ಕೇಳುವ ಪ್ರಶ್ನೆಗೆಲ್ಲ ಉತ್ತರಿಸಿ ತಾನೊಬ್ಬ ಪಿಯನಿಸ್ಟ್ “ಆಗಿದ್ದೆ” ಎಂದು ಪರಿಚಯಿಸಿಕೊಳ್ಳುತ್ತಾನೆ. ಆ ಕಾಪ್ಟನ್ ಸ್ಪಿಲ್ಮನ್ ನನ್ನು ಕರೆದು ಆ ಬಂಗಲೆಯಲ್ಲಿ ಇದ್ದ ಪಿಯಾನೋ ನುಡಿಸಲು ಹೇಳುತ್ತಾನೆ. ಈ ಸನ್ನಿವೇಶ ತುಂಬಾ ವಿಚಿತ್ರವಾಗಿದೆ. ಆ ಕಾಪ್ಟನ್ ಕೇವಲ ಇನ್ನೊಬ್ಬ ಪಿಯಾನೋ ವಾದಕನ ನುಡಿಸುವಿಕೆಯನ್ನು ಕೇಳಲಷ್ಟೇ ಸ್ಪಿಲ್ಮನ್ ಗೆ ಪಿಯಾನೋ ನುಡಿಸಲು ಹೇಳಿದರೂ, ಸ್ಪಿಲ್ಮನ್ ಗೆ ಇದು ಜೀವನ್ಮರಣದ ಪ್ರಶ್ನೆ. ತಾನು ಸರಿಯಾಗಿ ನುಡಿಸದಿದ್ದರೆ ಎಲ್ಲಿ ಆ ಕಾಪ್ಟನ್ ತನ್ನನ್ನು ಸೆರೆ ಹಿಡಿದು ಜೈಲಿಗೆ ತಳ್ಳುತ್ತಾನೋ ಎಂಬ ಭಯ. ಆದರೂ ಸ್ಪಿಲ್ಮನ್, ಫ್ರೆಡೆರಿಕ್ ಶೋಪಿನ್ ನ ಒಂದು ಬ್ಯಾಲೆಯನ್ನು(Ballade) ಅದ್ಭುತವಾಗಿ ನುಡಿಸುತ್ತಾನೆ. ಇದನ್ನು ಕೇಳುತ್ತಾ ಗಮನಿಸುತ್ತಾ ಹೋಗುವ ಕಾಪ್ಟನ್ ಮುಖ ಸಂಗೀತವನ್ನು ಆಸ್ವಾದಿಸುವವನಂತೆ ಕಂಡರೂ ಒಂದು ಪಶ್ಚಾತಾಪದ ಛಾಯೆ ಹೊತ್ತಿರುತ್ತದೆ. ಸ್ಪಿಲ್ಮನ್ ನುಡಿಸುವ ಸಂಗೀತ ಜನರೇ ಇಲ್ಲದೆ ಬೆಂಗಾಡಾದಂತೆ ಇದ್ದ ವಾರ್ಸಾ ಸಿಟಿಯಲ್ಲಿ ಮೆಲ್ಲಗೆ ಭರವಸೆಯ ಗಾಳಿ ಬೀಸಿದಂತೆ ಭಾಸವಾಗುತ್ತದೆ. ಇದಾದ ನಂತರ ಕಾಪ್ಟನ್, ಸ್ಪಿಲ್ಮನ್ ಅಲ್ಲಿ ಬಚ್ಚಿಟ್ಟುಕೊಂಡಿದ್ದಾನೆಯೇ ಮತ್ತು ಆತ ಯಹೂದಿಯೇ ಎಂದು ಪ್ರಶ್ನಿಸಿದಾಗ ಸ್ಪಿಲ್ಮನ್ ತಾನು ಇನ್ನು ಸತ್ತೆ ಎಂದೇ ಭಾವಿಸುತ್ತಾನೆ. ಆದರೆ ಆ ಕಾಪ್ಟನ್ ಸ್ಪಿಲ್ಮನ್ ಗೆ ಅಟ್ಟದ ಮೇಲೆ ಬಚ್ಚಿಟ್ಟುಕೊಳ್ಳಲು ಹೇಳಿ ಹೋಗುತ್ತಾನೆ.

  ಆ ಕಾಪ್ಟನ್ ಅದೇ ಬಂಗಲೆಯಲ್ಲಿ ಕಛೇರಿ ಸ್ಥಾಪಿಸುತ್ತಾನೆ. ಯಾರಿಗೂ ತಿಳಿಯದಂತೆ ಸ್ಪಿಲ್ಮನ್ ಗೆ ಬ್ರೆಡ್ ಮತ್ತು ಜ್ಯಾಮ್ ತಂದು ಕೊಡುತ್ತಾನೆ; ಜೊತೆಗೆ ಟಿನ್ ಒಡೆಯಲು ಒಂದು ಟಿನ್ ಓಪೆನರ್ ಕೂಡ. ಕೊಂಚ ದಿನಗಳ ನಂತರ ರಷ್ಯಾ ದಾಳಿಗೆ ಹಿಮ್ಮೆಟ್ಟಿ ಜರ್ಮನ್ ವಾಪಾಸಾಗುವ ಸಂದರ್ಭ ಬಂದಾಗ ಆ ಕಾಪ್ಟನ್ ಹೊರಡುವ ಮುನ್ನ ಮತ್ತೆ ಸ್ಪಿಲ್ಮನ್ ಗೆ ಬ್ರೆಡ್ ಕೊಟ್ಟು ತಾನುಟ್ಟಿದ್ದ ಕೋಟ್ ಕೂಡ ಕೊಡುತ್ತಾನೆ. ಕಡೆಗೆ ಸ್ಪಿಲ್ಮನ್ ನ ಹೆಸರು ಕೇಳಿ ಮತ್ತೆ ಶಾಂತಿ ನೆಲೆಸಿದಾಗ ರೇಡಿಯೋದಲ್ಲಿ ಈತನ ಸಂಗೀತ ಕೇಳುವುದಾಗಿಯು ಹೇಳಿ ಹೊರಡುತ್ತಾನೆ.

  ಕೆಲವು ದಿನಗಳ ನಂತರ ರಷ್ಯಾ ಸೇನೆ ವಿಜಯದ ಘೋಷಣೆ ಕೂಗುತ್ತ ಅಡಗಿದ್ದ ಪೋಲಿಶ್ ಜನಗಳಿಗೆ ನಿರ್ಭಯವಾಗಿ ಹೊರಬರಲು ಕರೆಕೊಡುತ್ತಾರೆ. ಕರೆಗೆ ಓಗೊಟ್ಟು ಸ್ಪಿಲ್ಮನ್ ಹೊರಬಂದು ಅಲ್ಲಿ ನಡೆದು ಬರುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಆನಂದದಿಂದ ತಬ್ಬಿಕೊಳ್ಳಲು ಹೋಗುತ್ತಾನೆ. ಆದರೆ ಸ್ಪಿಲ್ಮನ್ ಧರಿಸಿದ್ದ ಜರ್ಮನ್ ಸೇನೆಯ ಕೋಟ್ ನೋಡಿ ಅವರು ಗಾಬರಿಗೊಂಡು ಕಿರುಚಿಕೊಂಡಾಗ ರಷ್ಯಾ ಸೈನಿಕರು ಈತನ ಮೇಲೆ ಗುಂಡು ಹಾರಿಸಲು ತೊಡಗುತ್ತಾರೆ. ಗುಂಡು ಹೊಡೆಯಬೇಡಿ ತಾನೊಬ್ಬ ಪೋಲಿಶ್ ಎಂದು ಕೂಗಿ ಹೇಳಿ ಶರಣಾಗುತ್ತಾನೆ. ಆಗ ರಷ್ಯಾ ಸೈನಿಕನೊಬ್ಬ ಜರ್ಮನ್ ಸೇನೆಯ ಕೋಟ್ ಏಕೆ ಧರಿಸಿದ್ದೆ ಎಂದು ಕೇಳಿದಾಗ “ ಚಳಿಯಾಗಿತ್ತು” ಎಂದು ಸ್ಪಿಲ್ಮನ್ ಉತ್ತರಿಸುತ್ತಾನೆ.

  ಎಲ್ಲ ಕಳೆದು ಮತ್ತೆ ಮೊದಲಿನ ಜೀವನಕ್ಕೆ ಮರಳಿದ ನಂತರ ತನ್ನ ಹಳೆಯ ಸಹೋದ್ಯೋಗಿ/ಸ್ನೇಹಿತ ಸಿಗುತ್ತಾನೆ. ಆತನಿಗೆ ತನ್ನೆಲ್ಲ ಕಥೆ ಹೇಳಿದ ನಂತರ ತನ್ನನ್ನು ರಕ್ಷಿಸಿದ ಅಧಿಕಾರಿಯನ್ನು ತನ್ನ ಸ್ನೇಹಿತ ನೋಡಿದ್ದ ಎಂದು ತಿಳಿದು ಆ ಅಧಿಕಾರಿಯನ್ನು ಹುಡುಕಲು ಪ್ರಯತ್ನಿಸುತ್ತಾನೆ. ಆದರೆ ಪ್ರಯೋಜನವಾಗುವುದಿಲ್ಲ. ಕಡೆಗೆ ಮತ್ತೆ ರೇಡಿಯೋದಲ್ಲಿ ಪಿಯಾನೋ ನುಡಿಸುವ ಕಲಾವಿದನಾಗಿ ತನ್ನ ಜೀವನ ಮುಂದುವರೆಸುತ್ತಾನೆ.

  ಈ ಚಿತ್ರಕ್ಕಾಗಿ ಏಡ್ರಿಯನ್ ಬ್ರೋಡಿಗೆ ಅತ್ಯುತ್ತಮ ನಟ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಸಿಕ್ಕಿತು. ರೋಮನ್ ಪೋಲನ್ಸ್ಕಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಮತ್ತು ರೊನಾಲ್ಡ್ ಹಾರ್ವುಡ್ ಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ದೊರಕಿತು. ಚಿತ್ರ ಕೇವಲ ಒಬ್ಬ ವ್ಯಕ್ತಿಯದ್ದು ಅನ್ನಿಸಿದರೂ ಒಂದು ಜನಾಂಗ ಅನುಭವಿಸಿದ ಕ್ರೌರ್ಯ, ಹಿಂಸೆಯ ಸಂಕೇತವಾಗಿ ಗಟ್ಟಿಯಾಗಿ ನಿಲ್ಲುತ್ತದೆ.


ವ್ಲಾಡಿಸ್ಲಾವ್ ಸ್ಪಿಲ್ಮನ್


ಸ್ಪಿಲ್ಮನ್ ಗೆ ರಕ್ಷಣೆ ನೀಡಿದ ಕಾಪ್ಟನ್ ವಿಲ್ಮ್ ಹೊಸೆನ್ಫೆಲ್ದ್

 
- ವಿಶ್ವನಾಥ್ 






Wednesday, 8 November 2017

ವ್ಯಾಗ್ ದಿ ಡಾಗ್



IMDb: http://www.imdb.com/title/tt0120885/

  “ನಾಯಿ ತನ್ನ ಬಾಲವನ್ನು ಏಕೆ ಆಡಿಸುತ್ತದೆ? ಏಕೆಂದರೆ ನಾಯಿ ತನ್ನ ಬಾಲಕ್ಕಿಂತ ಚುರುಕಾಗಿದೆ.”
“ಬಾಲ ನಾಯಿಗಿಂತ ಚುರುಕಾಗಿದ್ದಿದ್ದರೆ, ಬಾಲವೇ ನಾಯಿಯನ್ನು ಆಡಿಸುತ್ತಿತ್ತು.”

  90ರ ದಶಕದಲ್ಲಿ ಬಿಲ್ ಕ್ಲಿಂಟನ್ ಮಾಡಿಕೊಂಡ ಲೆವಿನ್ಸ್ಕಿ ಹಗರಣ ಜ್ಞಾಪಿಸಿಕೊಳ್ಳಿ. ಅದೊಂದು ಹಗರಣದಿಂದ ಕ್ಲಿಂಟನ್ ನ ಘನತೆಗೆ ಅಪಾರ ಧಕ್ಕೆಯಾಯಿತು. ತನ್ನ ವೃತ್ತಿ ಜೀವನಕ್ಕೆ ಒಂದು ದೊಡ್ಡ ಕಳಂಕ ಅಂಟಿಸಿಕೊಂಡು ಆತ ಸೇವೆಯಿಂದ ನಿವೃತ್ತಿಯಾದ. ಇಂತಹ ಒಂದು ಸನ್ನಿವೇಶದ ಬಗ್ಗೆಯೇ ಈ ಚಿತ್ರ.

 ಈ ಕಾಲ್ಪನಿಕ ಕಥೆಯಲ್ಲಿ ಬರುವ ಅಮೇರಿಕ ಅಧ್ಯಕ್ಷ ಕೂಡ ತನ್ನ ವೈಟ್ ಹೌಸ್ ಗೆ ಆಗಮಿಸಿದ ಗರ್ಲ್ ಸ್ಕೌಟ್ ಗಳ ಪೈಕಿ ಓರ್ವ ಹುಡುಗಿಯ ಜೊತೆ ಅಸಭ್ಯವಾಗಿ ನಡೆದುಕೊಂಡ ಎನ್ನುವ ಸುದ್ದಿ ಎಲ್ಲೆಡೆ ಹಬ್ಬುವುದರಲ್ಲಿರುತ್ತದೆ. ಇದೂ ಚುನಾವಣೆಗೆ ಕೇವಲ ಸುಮಾರು 10-11 ದಿನಗಳಿರುವಾಗ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷರ ಶಿಫಾರಸಿನ ಮೇರೆಗೆ ಇದನ್ನು ಸಂಭಾಳಿಸಲು ‘ಮಿ. ಫಿಕ್ಸ್ ಇಟ್’ ಕಾನ್ರಾಡ್ ಬ್ರೀಯನ್(ರಾಬರ್ಟ್ ಡಿ ನಿರೋ) ನನ್ನು ಕರೆಸಲಾಗುತ್ತದೆ. ಬಂದು ವಿಷಯ ಪೂರ್ತಿ ತಿಳಿದ ನಂತರ ಅವನು ನಿರ್ಧಾರ ಮಾಡುವುದಿಷ್ಟೇ- ರಾಜಕೀಯ ಸ್ಫೋಟಕ್ಕೆ ಕಾರಣವಾಗಬಲ್ಲಂತಹ ಇಂತಹ ವಿಷಯವನ್ನು ಮುಚ್ಚಿಹಾಕಬೇಕಾದರೆ, ಇದಕ್ಕಿಂತ ಸ್ಫೋಟಕ ವಿಷಯವೊಂದು ಉದ್ಭವಿಸಬೇಕು. ಹಾಗಾಗದಿದ್ದರೆ, ಉದ್ಭವಿಸುವ ಹಾಗೆ ಮಾಡಿ ಜನರ ಗಮನ ಅದರೆಡೆಗೆ ಸೆಳೆಯಬೇಕು.
 ಅಂತಹ ಬಲವಾದ ವಿಷಯ ಏನಿದೆ? ಎಲ್ಲಿಂದ ಸೃಷ್ಟಿಸುವುದು? ಹೀಗೆ ಮಾತನಾಡುತ್ತಲೇ ಬ್ರೀಯನ್, ಚೀನಾ ದೇಶ ಪ್ರವಾಸದಲ್ಲಿ ಇರುವ ಅಧ್ಯಕ್ಷ ಆರೋಗ್ಯದ ನೆಪ ಹೇಳಿ ಒಂದೆರೆಡು ದಿನ ಅಲ್ಲಿಯೇ ಇರುವಂತೆ ಏರ್ಪಾಡು ಮಾಡಲು ಸೂಚಿಸುತ್ತಾನೆ. ಪತ್ರಿಕೆಗಳಿಗೆ ಸುದ್ದಿ ಸೋರಿಕೆಯಾಗುವ ಅನಧಿಕೃತ ಮೂಲಗಳಿಂದ “ಅಧ್ಯಕ್ಷ B-3 ಬಾಂಬರ್ ಬಗ್ಗೆ ಮಾತಾಡಲು ಚೀನಾಗೆ ಹೋಗಿಲ್ಲ” ಎಂದು ಬೇಕೆಂದೇ ಸುದ್ದಿ ಸೋರಿಕೆ ಮಾಡುವುದು. ಯಾರಾದರು ಕೇಳಿದರೆ “B-3 ಬಾಂಬರ್ ಬಗ್ಗೆ ತಮಗೆ ಗೊತ್ತಿಲ್ಲ” ಎಂದು ಈ ವಿಷಯದ ಸುತ್ತ ಇಲ್ಲದ ನಿಗೂಢತೆ ಸೃಷ್ಟಿಸುವುದು. ಇದಕ್ಕೆ ಪುಷ್ಟಿ ಕೊಡಲು ಮಿಲಿಟರಿ ಜನರಲ್ ಗಳನ್ನು ಬೋಯಿಂಗ್ ಕಂಪನಿಗೆ ಸುಮ್ಮನೆ ಕಳಿಸುವುದು. ಇದನ್ನು ಖಂಡಿತ ಗಮನಿಸುವ ಪತ್ರಕರ್ತರು ಏನಾದರು ಪ್ರಶ್ನೆ ಮಾಡಿದರೆ ಅದನ್ನು ಅಲ್ಲಗಳೆದು ಹಿನ್ನಲೆಯಲ್ಲಿ ಏನೋ ನಡೆಯುತ್ತಿದೆ ಎಂದು ಪತ್ರಕರ್ತರ ಗಮನವನ್ನ ಒಂದೆರಡು ದಿನಗಳ ಮಟ್ಟಿಗೆ ಹಗರಣದಿಂದ ಬೇರೆಡೆಗೆ ಸೆಳೆಯುವುದು ಆತನ ಉಪಾಯ.
 ಇದು ಕೇವಲ ಒಂದೆರಡು ದಿನಗಳ ಮಟ್ಟಿಗೆ ಸಮಯ ಕೊಟ್ಟರೂ ಇದರ ಮುಂದುವರಿದ ಭಾಗವಾಗಿ ಒಂದು ಯುದ್ಧ ಸೃಷ್ಟಿಸಬೇಕು. ಅಮೇರಿಕ ಯಾವುದಾದರೂ ದೇಶದ ಜೊತೆ ಯುದ್ಧಕ್ಕೆ ಹೋಗುವುದರ ಅಥವಾ ಸಿದ್ಧವಾಗುತ್ತಿರುವುದರ ಬಗ್ಗೆ ಕಥೆಯನ್ನು ಬೆಳೆಸಬೇಕು. ಮತ್ತು ಆ ದೇಶ ಅಷ್ಟು ಪರಿಚಿತವಲ್ಲದ ದೇಶವಾಗಿರಬೇಕು. ಆ ದೇಶದ ಇರುವಿಕೆಯ ಬಗ್ಗೆಯೇ ಜನರಿಗೆ ಅಷ್ಟು ಗೊತ್ತಿಲ್ಲದಿದ್ದರೆ, ಆ ದೇಶದ ಬಗ್ಗೆ ಏನು ಸುದ್ದಿ ಹರಡಿದರೂ ಅದರ ನಿಜ ಹೊರಬರಲು ಒಂದು 15-20 ದಿನಗಳಾದರೂ ಬೇಕು. ಇಷ್ಟು ದಿನ ಚುನಾವಣೆಯವರೆಗು ಅಧ್ಯಕ್ಷನನ್ನು ಹಗರಣದ ಅಪಪ್ರಚಾರವಿಲ್ಲದೆ ಕರೆದುಕೊಂದು ಹೋಗುವಲ್ಲಿ ಸಾಕು. ಆದರೆ ಯಾವ ದೇಶದ ಮೇಲೆ ಈ ತೋರಿಕೆಯ ಯುದ್ಧಕ್ಕೆ ತೆರಳುವುದು? ಅಲ್ಬೇನಿಯಾದ ಮೇಲೆ ಯುದ್ಧಕ್ಕೆ ಹೋದರೆ ಹೇಗೆ ಎಂದು ಬ್ರೀಯನ್ ಯೋಚಿಸುತ್ತಾನೆ. ಏಕೆಂದು ಪ್ರಶ್ನಿಸಿದ ಸಹಾಯಕಿ ಏಮಿಸ್ ಗೆ ಆ ದೇಶದ ಬಗ್ಗೆ ಜನಕ್ಕೆ ಗೊತ್ತಿಲ್ಲ ಮತ್ತು ಆ ದೇಶ ನಮ್ಮ ಮೇಲೆ ಯುದ್ಧಕ್ಕೆ ಸಿದ್ಧವಾಗಿದ್ದಕ್ಕೆ ನಾವು ಅದರ ಮೇಲೆ ಯುದ್ಧಕ್ಕೆ ಹೋಗುತ್ತಿದ್ದೇವೆ ಎಂದು ವಿವರಿಸುತ್ತಾನೆ. ಹಾಗೆ ಸಿ.ಐ.ಎ ಮತ್ತು ಇತರ ಏಜೆನ್ಸಿಗಳ ಅಲ್ಬೇನಿಯಾ ಪರಿಣತರನ್ನು ಕೂಡಲೇ ಈ ಬಗ್ಗೆ ಸುದ್ದಿ ಕೊಟ್ಟು ಅವರನ್ನು ಜಾಗೃತಗೊಳಿಸುವಂತೆ ಹೇಳುತ್ತಾನೆ. ಆದರೆ ಪತ್ರಿಕೆಯ ಮುಂದೆ ಮಾತ್ರ ಇವೆಲ್ಲಾ ನಡೆಯುತ್ತಿಲ್ಲ ಎಂದೇ ಹೇಳಬೇಕು.
 ಇದೆ ಹಾದಿಯಲ್ಲಿ ಯೋಚಿಸುತ್ತ ಬ್ರೀಯನ್ ಒಬ್ಬ ಹಾಲಿವುಡ್ ನಿರ್ಮಾಪಕನನ್ನು ಭೇಟಿಯಾಗಿ ಅವನಿಂದ ಇದರ ಬಗ್ಗೆ ಸಹಾಯ ಪಡೆಯಲು ಯೋಚಿಸಿ ಲಾಸ್ ಏಂಜಲಿಸ್ ಗೆ ಹೊರಡುತ್ತಾನೆ. ಅಲ್ಲಿ ನಿರ್ಮಾಪಕ ಮೊಟ್ಸ್(ಡಸ್ಟಿನ್ ಹಾಫ್ಮನ್) ನನ್ನು ಭೇಟಿಯಾಗಿ ಆಗಿರುವ ಸಮಸ್ಯೆಯನ್ನೆಲ್ಲ ವಿವರಿಸಿ ಅಲ್ಬೇನಿಯದಲ್ಲಿ ಭಯೋತ್ಪಾದಕ ದಾಳಿ ಶುರುವಾಗಿದ್ದು ಅದರಿಂದ ತಪ್ಪಿಸಿಕೊಂಡು ಹೊರಬರುತ್ತಿರುವ ಹುಡುಗಿಯ ವಿಡಿಯೋ ಚಿತ್ರಿಸಿಕೊಡಬೇಕು ಎಂದು ಕೇಳಿಕೊಳ್ಳುತ್ತಾನೆ. ಇವರ ವಿವರವನ್ನೆಲ್ಲಾ ಕೇಳಿ ವಿಷಯದ ಗಾಂಭೀರ್ಯ ಅರಿತ ಮೊಟ್ಸ್, ಅದಕ್ಕೆ ಬೇಕಾದ ಕಲಾವಿದರನ್ನು ಕರೆಸಿ ವಿಡಿಯೋ ನಿರ್ಮಿಸಿ ಕೊಡುತ್ತಾನೆ. ಈ ವಿಡಿಯೋ ಚಿತ್ರೀಕರಣ ಪ್ರಹಸನ ಮುಗಿದ ನಂತರ ಬ್ರೀಯನ್ ಮುಂದಿನ ಹಂತದ ಕಥೆ ಸೃಷ್ಟಿಸಲು ಬೇರೆಯ ಊರಿಗೆ ಹೋಗುವ ಸಂದರ್ಭದಲ್ಲಿ ಸಿ.ಐ.ಎ ಬ್ರೀಯನ್ ಮತ್ತು ಏಮಿಸ್ ರನ್ನು ವಿಚಾರಣೆಗೆಂದು ಕರೆದೊಯ್ಯುತ್ತಾರೆ. ಸಿ.ಐ.ಎ ಅಧಿಕಾರಿ ತಮಗೆ ಬಂದ ಎಲ್ಲ ಮಾಹಿತಿಗಳ ಪ್ರಕಾರ ಯಾವ ಯುದ್ಧದ ಪರಿಸ್ಥಿತಿ ಇಲ್ಲದಿದ್ದರೂ ಏಕೆ ಈ ಇಬ್ಬರು ಹೀಗೆ ಸುಳ್ಳು ಸುದ್ದಿ ಪ್ರಸಾರವಾಗುವಂತೆ ಮಾಡುತ್ತಿದ್ದಾರೆ ಎಂದು ವಿಚಾರಿಸುತ್ತಾನೆ. ಈ ವಿಚಾರಣೆಯಿಂದ ಏಮಿಸ್ ಹೆದರಿದರೂ, ಬ್ರೀಯನ್ ಮಾತ್ರ ಮಾತನ್ನು ಹೇಗೆ ತಿರುಗಿಸುತ್ತಾನೆ ಎಂದರೆ ಸಿ.ಐ.ಎ ಅಧಿಕಾರಿ ಇವರನ್ನು ವಿಚಾರಣೆಗೆ ಒಳಪಡಿಸಿ ತಪ್ಪು ಮಾಡಿದ್ದೀನೇನೋ ಎಂದುಕೊಳ್ಳುವಂತೆ ಮಾಡುತ್ತಾನೆ. ಕಡೆಗೆ ಸಿ.ಐ.ಎ ಅಧಿಕಾರಿಗಳೇ ಇವರಿಗೆ ಹೋಗಲು ಅನುವು ಮಾಡಿಕೊಡುತ್ತಾರೆ.

 ಇದಾದ ನಂತರ ಮುಂದಿನ ಹಂತಕ್ಕೆ ಬ್ರೀಯನ್, ಏಮಿಸ್ ಮತ್ತು ನಿರ್ಮಾಪಕ ಸಿದ್ಧರಾಗುತ್ತಿದಂತೆ, ಸುದ್ದಿ ವಾಹಿನಿಗಳಲ್ಲಿ ಅಲ್ಬೇನಿಯಾದ ಜೊತೆಗಿನ ಬಿಕ್ಕಟ್ಟು ಪರಿಹಾರಗೊಂಡಿದ್ದು ಪರಿಸ್ಥಿತಿ ಎಲ್ಲ ಶಾಂತವಾಗಿದೆ ಎಂದು ಸಿ.ಐ.ಎ ಹೇಳಿದ್ದಾರೆ ಎಂದು ಸುದ್ದಿ ಪ್ರಕಟವಾಗುತ್ತದೆ. ತಮಗೆ ಸಿಕ್ಕ ಸಿ.ಐ.ಎ ಅಧಿಕಾರಿ ತಮ್ಮ ಮುಂದೆ ಮಾತ್ರ ಭಯ ಪ್ರದರ್ಶಿಸಿದರೂ ಎಲ್ಲೋ ಕೈ ಕೊಟ್ಟಿದ್ದಾನೆ ಮತ್ತು ಈ ಸುದ್ದಿಯನ್ನು ಸೋರಿಕೆ ಮಾಡಿದ್ದಾನೆ ಎಂದೂ, ಮುಂದೇನು ಮಾಡುವುದು ಎಂದು ಬ್ರೀಯನ್, ಏಮಿಸ್ ಮತ್ತು ಮೊಟ್ಸ್ ಯೋಚಿಸುತ್ತಾ ಕೂರುತ್ತಾರೆ. ಆಗ ಹೊಳೆಯುವುದೇ ಹಿಂದೆ ಅಮೇರಿಕಾ ನಡೆಸಿದ ಯಾವುದೋ ಗುಪ್ತ ಸೈನಿಕ ಕಾರ್ಯಾಚರಣೆಯಲ್ಲಿ ಒಬ್ಬ ಸೈನಿಕ ಮರಳಿ ಬಂದಿಲ್ಲವೆಂದೂ, ಆತ ಇನ್ನೂ ಬದುಕಿದ್ದು ಮರಳಿ ಬರಲು ಪ್ರಯತ್ನಿಸುತ್ತಿದ್ದಾನೆ ಎಂದು ಸುದ್ದಿಯಾದರೆ ಜನರ ಗಮನ ಖಂಡಿತ ಸೆಳೆಯಬಹುದು ಎಂದು ಯೋಚಿಸುತ್ತಾರೆ. ಹೀಗೆ ಯೋಚಿಸಿ ಪೆಂಟಗಾನ್ ನಲ್ಲಿ ಯಾರನ್ನೋ ಸಂಪರ್ಕಿಸಿ ವಿಶೇಷ ಕಾರ್ಯಕ್ರಮದ ಅಡಿಯ ಯಾವ ಸಂಬಂಧಿಕರೂ ಇಲ್ಲದ ಯಾವುದಾದರೂ ಸೈನಿಕನ ಹೆಸರನ್ನು ಸೂಚಿಸಲು ಹೇಳಿ ಶೂಮನ್ ಎನ್ನುವನನ್ನು ಆಯ್ಕೆ ಮಾಡಿ ತಮ್ಮ ಸುಪರ್ದಿಗೆ ಒಪ್ಪಿಸಲು ಕೇಳಿಕೊಳ್ಳುತ್ತಾರೆ. ಇವರ ಉಪಾಯ ಆತನನ್ನು ಬೇರೆ ದೇಶದಿಂದ ಬಿಡುಗಡೆ ಮಾಡಿಸಿ ನಮ್ಮ ರಾಷ್ಟ್ರಾಧ್ಯಕ್ಷರು ಕರೆತಂದಿದ್ದಾರೆ ಎಂದು ಬಿಂಬಿಸಿ ಪ್ರಚಾರ ಗಿಟ್ಟಿಸುವುದು.
  ಆದರೆ ಆಗುವುದೇ ಬೇರೆ. ಆತನನ್ನು ಕರೆತರಲು ಹೋದಾಗಲೇ ತಿಳಿಯುವುದು ಆತ ಸೈನ್ಯದಲ್ಲಿ ಮಾನಸಿಕ ಅಸ್ವಸ್ಥರಾದವರನ್ನು ಇಟ್ಟಿದ್ದ ವಿಶೇಷ ಆಸ್ಪತ್ರೆಯಿಂದ ಕರೆತಂದು ಇವರಿಗೆ ಒಪ್ಪಿಸಿದ್ದಾರೆ ಎಂದು. ಆತ ಒಬ್ಬಾಕೆಯ ಮಾನಭಂಗ ಮಾಡಿ ಆಸ್ಪತ್ರೆ ಸೇರಿದ್ದ ಹುಚ್ಚ. ಇವರಿಗೆ ಏನು ಮಾಡುವುದೋ ತಿಳಿಯದೆ ಶೂಮನ್ ನನ್ನು ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೊರಡುತ್ತಾರೆ, ಮಾರ್ಗ ಮಧ್ಯೆ ವಿಮಾನದಲ್ಲಿ ಹವಾಮಾನ ವೈಪರಿತ್ಯದ ಕಾರಣದಿಂದ ತಾಂತ್ರಿಕ ತೊಂದರೆಯಾಗಿ ವಿಮಾನ ನೆಲಕ್ಕಪ್ಪಳಿಸುತ್ತದೆ. ಪವಾಡವೆಂಬಂತೆ ಎಲ್ಲರೂ ಬದುಕುಳಿದರೂ ಯಾವುದೊ ದೂರದ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದರಿಂದ ಬ್ರೀಯನ್, ಏಮಿಸ್, ಮೊಟ್ಸ್ ಮತ್ತು ಶೂಮನ್ ಅಲ್ಲೇ ತಮ್ಮ ಇತರೆ ಸಹೋದ್ಯೋಗಿಗಳು ಬಂದು ಕರೆದೊಯ್ಯುವವರೆಗೂ ಕಾಯುತ್ತ ಕೂರುತ್ತಾರೆ. ಅಷ್ಟರಲ್ಲಿ ಅಲ್ಲೇ ಇದ್ದ ಅಂಗಡಿಯವನ ಮಗಳನ್ನು ನೋಡಿದ ಶೂಮನ್ ಆಕೆಯ ಹಿಂದೆ ಓಡುತ್ತಾನೆ. ತನ್ನನ್ನು ಹಿಂಬಾಲಿಸಿದ ಈತನನ್ನು ನೋಡಿದ ಆ ಹುಡುಗಿ ಹೆದರಿ ಚೀರಿಕೊಂಡಾಗ ಅಂಗಡಿಯವ ತನ್ನ ಗನ್ ನಿಂದ ಶೂಮನ್ ನನ್ನು ಕೊಲ್ಲುತ್ತಾನೆ. ಕಥೆ ಮುಗಿಯುವ ಹಂತದಲ್ಲಿ ಮತ್ತೆ ಸಮಸ್ಯೆಯಾಗಿದ್ದಕ್ಕೆ ತಲೆಕೆಡಿಸಿಕೊಂಡ ಬ್ರೀಯನ್ ಮತ್ತು ಏಮಿಸ್ ಗೆ ಸಮಾಧಾನ ಹೇಳುತ್ತಾ ಮೊಟ್ಸ್ ವಿಮಾನ ಅಪಘಾತದಲ್ಲಿ ಆತ ಮೃತಪಟ್ಟ ಎಂದು ಹೇಳಿ ವಿಷಯ ಮುಚ್ಚಿಹಾಕುವ ಸಲಹೆ ಕೊಡುತ್ತಾನೆ. ಕೊನೆಗೆ ಎಲ್ಲಾ ಮುಗಿದು ಶೂಮನ್ ಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುತ್ತಾರೆ.
  ಇಷ್ಟು ದೊಡ್ಡ ಜವಾಬ್ದಾರಿಯನ್ನು ಮುಗಿಸಿ ಸಮಧಾನಪಟ್ಟುಕೊಳ್ಳುತ್ತಾ ಒಬ್ಬರಿಗೊಬ್ಬರು ಶುಭಾಶಯ ಹೇಳಿಕೊಳ್ಳುತ್ತಾ ಇರುವಾಗ ಮೊಟ್ಸ್ ತನ್ನ ಈ ಸಾಹಸಕ್ಕೆ ತನಗೆ ದಕ್ಕಬೇಕಾದ್ದ ಕೀರ್ತಿ ಸಿಗದೆ ಹೋಗುತ್ತದಲ್ಲ ಎಂದು ಚಡಪಡಿಸುತ್ತಾ ಟಿವಿ ಕಾರ್ಯಕ್ರಮವೊಂದಕ್ಕೆ ಕರೆ ಮಾಡಿ ಎಲ್ಲ ವಿಷಯ ತಿಳಿಸುವುದಾಗಿ ಬ್ರೀಯನ್ ಗೆ ಹೇಳುತ್ತಾನೆ. ಮೊಟ್ಸ್ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಬ್ರೀಯನ್ ಎಷ್ಟು ಹೇಳಿದರೂ ಮೊಟ್ಸ್ ಕೇಳದೆ ಹೊರನಡೆದಾಗ ಬ್ರೀಯನ್ ಸೀಕ್ರೆಟ್ ಸರ್ವಿಸ್ ನವರಿಗೆ ಏನೋ ಸಂಜ್ಞೆ ಮಾಡುತ್ತಾನೆ. ಇದಾದ ನಂತರ ಸುದ್ದಿವಾಹಿನಿಗಳಲ್ಲಿ ಖ್ಯಾತ ನಿರ್ಮಾಪಕ ಸ್ಟಾನ್ಲಿ ಮೊಟ್ಸ್ ಧಿಡೀರನೆ ಹೃದಯಾಘಾತವಾಗಿ ತಮ್ಮ ಈಜುಕೊಳದ ಬಳಿ ಸತ್ತರು ಎಂದು ಸುದ್ದಿ ಪ್ರಕಟವಾಗುತ್ತದೆ. ಅದೇ ಸುದ್ದಿ ಮುಂದುವರೆದು ಅಲ್ಬೇನಿಯಾದ ಹಳ್ಳಿಯೊಂದರಲ್ಲಿ ನಡೆದ ಬಾಂಬ್ ದಾಳಿಯ ಜವಾಬ್ದಾರಿಯನ್ನು ‘ಅಲ್ಬೇನಿಯಾ ಯುನೈಟ್’ ಎಂಬ ಗುಂಪು ಹೊತ್ತಿದೆ ಎಂದು ಸುದ್ದಿ ಪ್ರಕಟವಾಗುತ್ತದೆ. ಇದಕ್ಕೆ ಪ್ರತಿಯಾಗಿ ಅಮೇರಿಕಾ ತನ್ನ ಸೈನ್ಯವನ್ನು ಶೀಘ್ರದಲ್ಲಿ ಅಲ್ಬೇನಿಯಾ ಬಿಕ್ಕಟ್ಟನ್ನು ಪೂರ್ತಿ ಬಗೆ ಹರಿಸಲು ಕಳಿಸುತ್ತದೆ ಎಂದು ಅಮೇರಿಕಾ ಸೇನೆಯ ಜನರಲ್ ಹೇಳಿಕೆ ಕೊಟ್ಟಿದ್ದಾರೆಂದು ಸುದ್ದಿ ವಾಹಿನಿ ಪ್ರಕಟಿಸುತ್ತದೆ.

  ಸುದ್ದಿ ವಾಹಿನಿಗಳಲ್ಲಿ ಪ್ರಕಟವಾಗುವ ಅದೆಷ್ಟು ಸುದ್ದಿಗಳು ಹೀಗೆ ಇರಬಹುದು ಎಂದು ಯೋಚಿಸಿದರೆ ಯಾರನ್ನು ನಂಬುವುದೋ ಎಂದು ಕಳವಳವಾಗುತ್ತದೆ. ಇದೆ ತರಹದ ಎಷ್ಟೋ ಚಿತ್ರಗಳು ಬಂದಿದ್ದರೂ ಈ ರೀತಿ ಗಂಭೀರ ವಿಷಯವನ್ನು ಹಾಸ್ಯದ ಲೇಪನದೊಂದಿಗೆ ಹೇಳುವಂತಹವು ಕೆಲವೇ ಕೆಲವು. ‘ಯೆಸ್ ಮಿನಿಸ್ಟರ್’ ಮತ್ತು ‘ಯೆಸ್ ಪ್ರೈಮ್ ಮಿನಿಸ್ಟರ್’ ಧಾರಾವಾಹಿಗಳು ಕೂಡ ಇಂತಹದ್ದೇ ರಾಜಕೀಯ ವಿಡಂಬನೆಯದ್ದು. ಈ ಚಿತ್ರವನ್ನು ಇಷ್ಟ ಪಟ್ಟವರು ಖಂಡಿತ ಆ ಧಾರಾವಾಹಿಯನ್ನು ಇಷ್ಟ ಪಡುತ್ತೀರಿ.

-ವಿಶ್ವನಾಥ್