Saturday, 2 February 2019

Gowri Ganesha (English Subtitle)- ಗೌರಿ ಗಣೇಶ (ಇಂಗ್ಲಿಷ್ ಸಬ್ ಟೈಟಲ್)

ಗೆಳೆಯರೆ,

 ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಮೂರನೆಯದು. "ಗೌರಿ ಗಣೇಶ" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಬಹುದು.

ಡೌನ್ಲೋಡ್ ಲಿಂಕ್ : Gowri Ganesha.srt
ಚಲನ ಚಿತ್ರದ ಯೂಟ್ಯೂಬ್ ಲಿಂಕ್ : Gowri Ganesha movie


Wednesday, 17 October 2018

2001: ಎ ಸ್ಪೇಸ್ ಓಡಿಸ್ಸಿ







  ಸೈ-ಫೈ ಚಿತ್ರಗಳು ಎಂದ ತಕ್ಷಣ ಎಲ್ಲರ ಬಾಯಲ್ಲಿ ಬರುವ ಚಿತ್ರಗಳೆಂದರೆ ಮೇಟ್ರಿಕ್ಸ್, ಬ್ಯಾಕ್ ಟು ದಿ ಫ್ಯೂಚರ್, ಸ್ಟಾರ್ ವಾರ್ಸ್, ಸ್ಟಾರ್ ಟ್ರೆಕ್, ಟರ್ಮಿನೇಟರ್ ಇತ್ಯಾದಿ. ಆದರೆ ಇವೆಲ್ಲಾ ಸಿನೆಮಾಗಳ ಮುಂಚೆ ಸೈ-ಫೈ ಚಿತ್ರಗಳು ಅದರಲ್ಲೂ ಭವಿಷ್ಯದ ಬಗೆಗಿನ ಚಿತ್ರಗಳು ಹೇಗಿರಬೇಕು ಎನ್ನುವ ಬಗ್ಗೆ ಸ್ಪಷ್ಟ ಕಲ್ಪನೆ ಕೊಟ್ಟ ಚಿತ್ರವೇ 2001: ಎ ಸ್ಪೇಸ್ ಒಡಿಸ್ಸಿ. ಆರ್ಥರ್ ಸಿ ಕ್ಲಾರ್ಕ್ ಜೊತೆ ಸ್ಟಾನ್ಲಿ ಕೂಬ್ರಿಕ್ ಬರೆದ ಕಥೆಯನ್ನು, ಸ್ಟಾನ್ಲಿ ಕೂಬ್ರಿಕ್ ನಿರ್ದೇಶಿಸಿದ್ದಾರೆ. ಈ ಚಿತ್ರ ನೋಡಿದ ಮೇಲೆ, 1968 ರಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು ಎಂದರೆ ನಂಬುವುದು ಕಷ್ಟ. ಅಷ್ಟು ಅದ್ಭುತವಾಗಿ ಚಿತ್ರದ ಸೆಟ್ ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಲಾಗಿತ್ತು. ಸ್ವಲ್ಪ ಮಟ್ಟಿಗಿನ ಸ್ಪೆಷಲ್ ಎಫೆಕ್ಟ್ಸ್ ಬಿಟ್ಟರೆ ಸಿನೆಮಾದಲ್ಲಿ ಕಾಣುವ ಉಳಿದ ಭಾಗವೆಲ್ಲವೂ ಸೆಟ್ ನಿರ್ಮಿಸಿ ಚಿತ್ರೀಕರಿಸಿದ್ದು. ಈ ಚಿತ್ರ ಎಷ್ಟು ಚೆನ್ನಾಗಿ ಮೂಡಿಬಂದಿದೆ ಎಂದರೆ ಅಮೇರಿಕನ್ನರು ಚಂದ್ರನ ಮೇಲೆ ಹೋಗಿದ್ದು ಸುಳ್ಳು ಎಂದೂ, ಮೂನ್ ಲ್ಯಾಂಡಿಂಗ್(1969) ಅನ್ನು ಸ್ಟಾನ್ಲಿ ಕೂಬ್ರಿಕ್ ನಾಸಾಗಾಗಿ ಏರಿಯಾ 51ನಲ್ಲಿ ನಿರ್ಮಿಸಿದ್ದು ಎಂದೂ ತಮಾಷೆಯಾಡುವುದುಂಟು.


 ಈಗಿನ ಚಿತ್ರಗಳಲ್ಲಿ ನನಗೆ ವಯ್ಯಕ್ತಿಕವಾಗಿ ಇಷ್ಟವಾಗದ್ದು ಎಂದರೆ, ಅತಿಯಾದ ಕಂಪ್ಯೂಟರ್ ಗ್ರಾಫಿಕ್ಸ್ ಬಳಕೆ. ಎಷ್ಟರ ಮಟ್ಟಿಗೆ ಎಂದರೆ ಸ್ಪೆಷಲ್ ಎಫೆಕ್ಟ್ಸ್ ಮತ್ತು ಕಂಪ್ಯೂಟರ್ ಗ್ರಾಫಿಕ್ಸ್ ಗಾಗಿಯೇ ಕಥೆಯೊಂದನ್ನು ಸೃಷ್ಟಿಸಿದಂತೆ ತೋರುತ್ತದೆ. ಹಾಗಾಗಿಯೇ ಇಷ್ಟು ಸೂಪರ್ ಹೀರೋ ಚಿತ್ರಗಳು, ಸ್ಟಾರ್ ವಾರ್ಸ್ (ಹೊಸ ಅವತರಣಿಕೆ) ಚಿತ್ರಗಳು, ಜುರಾಸಿಕ್ ಪಾರ್ಕ್ ಚಿತ್ರಗಳು ವರ್ಷಕ್ಕೊಂದರಂತೆ ಬಿಡುಗಡೆಯಾಗುತ್ತಲೇ ಇವೆ. ಆದರೆ ಈ ಚಿತ್ರದಲ್ಲಿ ನಿಮಗೆ ಪ್ರತಿಯೊಂದು ವೈಜ್ಞಾನಿಕ ಉಪಕರಣಗಳ ಬಗ್ಗೆ ತೋರಿಸುವಾಗ ಅಗತ್ಯ ಸಮಯ ಕೊಟ್ಟು ಪ್ರೇಕ್ಷಕರಿಗೆ ಅದನ್ನು ನೋಡಿ, ತಮ್ಮ ಕಲ್ಪನೆಯಲ್ಲಿ ಆ ವಸ್ತು ಅಥವಾ ದೃಶ್ಯ ಇಳಿದುಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಹಾಗಾಗಿ ಚಿತ್ರದ ಅವಧಿ ಎರಡೂವರೆ ಗಂಟೆ ಇದ್ದರೂ ಸಂಭಾಷಣೆಗಿಂತಲೂ ದೃಶ್ಯವೈಭವದ ಮೇಲೆ ಮತ್ತು ದೃಶ್ಯದಲ್ಲಿನ ಡ್ರಾಮ ಮೇಲೆ ಹೆಚ್ಚು ಅವಲಂಬಿಸಿರುವುದರಿಂದ ಚಿತ್ರ ನೋಡುವಾಗ ಸ್ವಲ್ಪ ಎಳೆಯಲಾಗಿದೆಯೇನೋ ಎಂದು ಅನ್ನಿಸುತ್ತದೆ.

  ಇತಿಹಾಸಪೂರ್ವದಲ್ಲಿ, ಮನುಷ್ಯನಿನ್ನೂ ಬೆಳವಣಿಗೆಯಾಗಿಲ್ಲದ ಕಾಲ. ಮನುಷ್ಯನ ಪೂರ್ವಜ ಕಪಿ ಪ್ರಭೇದದ ಗುಂಪೊಂದು, ಒಂದು ಬರಡು ಪ್ರದೇಶದಲ್ಲಿರುವ ಒಂದು ಚಿಕ್ಕ ನೀರಿನ ಹೊಂಡವನ್ನಾಧರಿಸಿ ಅಲ್ಲೇ ಗುಹೆಗಳಲ್ಲಿ ಜೀವಿಸುತ್ತಿರುತ್ತವೆ. ಇನ್ನೊಂದು ಗುಂಪು ಇದೇ ನೀರಿನ ಸೆಲೆಗಾಗಿ ಈ ಗುಂಪಿನ ಜೊತೆ ಸದಾ ಹೊಡೆದಾಟ ನಡೆಸುತ್ತಲೇ ಇರುತ್ತದೆ. ಹೀಗೇ ಬದುಕು ಸಾಗುತ್ತಿದ್ದಾಗ, ಒಂದು ದಿನ, ಇದ್ದಕ್ಕಿದ್ದಂತೆ ಒಂದು ಲಂಬಾಕಾರದ ದೊಡ್ಡ ಶಿಲಾವಸ್ತು ಈ ಗುಂಪಿನ ಗುಹೆಗಳ ಬಳಿ ಪ್ರತ್ಯಕ್ಷವಾಗುತ್ತದೆ. ಎಂದೂ ಇಲ್ಲದ್ದು, ಆ ಪ್ರದೇಶದ ಪರಿಸರಕ್ಕೆ ಯಾವ ವಿಧದಲ್ಲೂ ಹೊಂದದ ಈ ವಿಚಿತ್ರ ವಸ್ತುವನ್ನು ನೋಡಿ ಎಲ್ಲ ಕಪಿಗಳು ಗಾಬರಿಯಾಗುತ್ತವೆ. ಮುಟ್ಟಿ ನೋಡುತ್ತವೆ, ನೆಕ್ಕಿ ನೋಡುತ್ತವೆ. ಈ ಯಾವ ಕ್ರಿಯೆಗೂ ಪ್ರತಿಕ್ರಿಯಿಸದೆ ನಿಂತ ಈ ಶಿಲೆಯನ್ನು ಗಮನಿಸಿದಷ್ಟು ವೇಗದಲ್ಲೇ ಮರೆತುಬಿಡುತ್ತವೆ. ಆದರೆ ಒಂದು ಕಪಿಗೆ ಮಾತ್ರ ಈ ಶಿಲಾವಸ್ತುವಿನ ಪ್ರಭಾವ ಉಂಟಾಗುತ್ತದೆ. ಅದು ಇನ್ನಿತರ ಕಪಿಗಳಿಗಿಂತ ಕೊಂಚ ಭಿನ್ನವಾಗಿ ವರ್ತಿಸಲು ಪ್ರಾರಂಭಿಸಿ ತನ್ನ ಸುತ್ತಲ ಪರಿಸರವನ್ನು ಹೊಸ ರೀತಿಯಲ್ಲಿ ನೋಡತೊಡಗುತ್ತದೆ. ಅಲ್ಲೇ ಬಿದ್ದಿದ್ದ ಒಂದು ಪ್ರಾಣಿಯ ಅಸ್ತಿಪಂಜರದಿಂದ ಮೂಳೆಯೊಂದನ್ನು ಎತ್ತಿಕೊಂಡು ಕುಟ್ಟಲು ಪ್ರಾರಂಭಿಸುತ್ತದೆ. ಏನೋ ಹೊಳೆದಂತೆ ಜೋರಾಗಿ ಕೂಗಾಡಲು ಪ್ರಾರಂಭಿಸುತ್ತದೆ. ಮರುದಿನ ಮತ್ತೆ ಆ ನೀರಿನ ಸೆಲೆಗಾಗಿ ಇನ್ನೊಂದು ಗುಂಪು ಹೊಡೆದಾಡಲು ಬಂದಾಗ ಈ ಕಪಿ ಆ ಮೂಳೆಯನ್ನು ಹಿಡಿದು ಎದುರು ಗುಂಪಿನ ನಾಯಕ ಕಪಿಯ ತಲೆಗೆ ಬಲವಾಗಿ ಹೊಡೆದು ಸಾಯಿಸಿ ತನ್ನ ಗುಂಪಿನ ಪಾರಮ್ಯ ಮೆರೆಯುತ್ತದೆ. ಅಲ್ಲಿಗೆ ಕಪಿ ಆಯುಧ ಉಪಯೋಗಿಸಿ ಮನುಷ್ಯನಾಗುವ ಕಡೆಗಿನ ಪ್ರಯಾಣ ಪ್ರಾರಂಭವಾಯಿತು ಎಂದು ಚಿತ್ರ ಮಾರ್ಮಿಕವಾಗಿ ಹೇಳುತ್ತದೆ. ಕಪಿ, ಹಾಗೆ ಆಯುಧವಾಗಿ ಬಳಸಿದ ಮೂಳೆಯೊಂದನ್ನು ಮೇಲಕ್ಕೆಸೆಯುತ್ತಿದ್ದಂತೆ ಅದು ಆಕಾಶಕ್ಕೆ ಚಿಮ್ಮಿ ಒಂದು ಬಾಹ್ಯಾಕಾಶ ವಾಹನವಾಗಿ ಪರಿವರ್ತನೆಯಾಗುವುದರೊಂದಿಗೆ ನಾವು ಇತಿಹಾಸಪೂರ್ವದಿಂದ 2001ಕ್ಕೆ ಚಿಮ್ಮುತ್ತಿದ್ದೇವೆ ಎಂದು ಚಿತ್ರ ನಮ್ಮನ್ನು ಕರೆದೊಯ್ಯುತ್ತದೆ. ಇದಿಷ್ಟೂ ನಡೆಯುತ್ತಿರುವ ಕಾಲ ಈ ದೃಶ್ಯಾವಳಿಗಳ ಹಿನ್ನಲೆ ಸಂಗೀತದಲ್ಲಿ ರಿಚರ್ಡ್ ಸ್ಟ್ರಾಸ್ ನ “ಅಲ್ಸೋ ಸ್ಪ್ರಾಖ್ ಜಾರತೂಸ್ತ್ರ”(Richard Strauss- Also Sprach Zarathustra) ಮತ್ತು ಯೋಹಾನ್ ಸ್ಟ್ರಾಸ್ ನ “ ದಿ ಬ್ಲೂ ದಾನುಬೆ ವಾಲ್ತ್ಜ್” (Johann Strauss- The Blue Danube Waltz) ಗಳ ಬಳಕೆ ಅದೆಷ್ಟು ಹೊಂದಿಕೊಂಡಿವೆ ಎಂದರೆ ಈ ಎರಡು ಸಂಗೀತ ರಚನೆಗಳನ್ನು ಹೊರತುಪಡಿಸಿ ಈ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದೂ ಕಷ್ಟ. ಒಂದು ಸೈ-ಫೈ ಚಿತ್ರದಲ್ಲಿ ಕ್ಲಾಸಿಕಲ್ ಮ್ಯುಸಿಕ್ ಅನ್ನು ಕೂಬ್ರಿಕ್ ಬಳಸಿದ್ದರ ಬಗ್ಗೆ ಅನೇಕರು ಇದು ಹೊಂದಿಕೆಯಾಗುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದರು. Waltz ಸಂಗೀತ ಎಂದರೆ Waltz ನೃತ್ಯಕ್ಕಾಗಿ ಬರೆದ ಸಂಗೀತ ಎಂದು. ಈ ಚಿತ್ರದಲ್ಲಿ ಬಾಹ್ಯಾಕಾಶದಲ್ಲಿ ಸಾಗುತ್ತಿರುವ ಒಂದು ವಾಹನ ನಿಧಾನವಾಗಿ ದೂರದ ಬಾಹ್ಯಾಕಾಶ ಕೇಂದ್ರ ತಲುಪುವಾಗ ಆಕಾಶದಲ್ಲಿ ತೇಲುವ ದೃಶ್ಯ ಇವೆರಡೂ Waltz ನೃತ್ಯವಾಡುತ್ತಿವೆಯೇನೊ ಎಂದು ಅನ್ನಿಸುತ್ತದೆ. ಇದನ್ನು ನಾನು ಎಷ್ಟು ವಿಧವಿಧವಾಗಿ ಬಣ್ಣಿಸಿ ಹೇಳಿದರೂ ಚಿತ್ರವನ್ನು ನೋಡದ ಹೊರತು ನಿಮಗದರ ಕಲ್ಪನೆ ಸಿಗದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಪಿಗಳ ವೇಷ ಧರಿಸಿ ನಟಿಸಿರುವ ನಟರು. ಎಲ್ಲಿಯೂ ಕೃತಕ ಎನ್ನಿಸದಂತೆ ನಟನೆ ಮಾಡಿರುವುದು ನಟರ ಚಿತ್ರದ ಮುಂಚಿನ ಅಭ್ಯಾಸದ ಬಗ್ಗೆ ತಿಳಿಸುತ್ತದೆ. ಕಪಿಯಂತೆ ನಟಿಸುವುದು ಏನು ಕಷ್ಟ ಎಂದು ಅನ್ನಿಸಿದರೂ, ಚಿತ್ರದ ಈ ಭಾಗ ನಾವು ಡಾಕ್ಯುಮೆಂಟರಿಯೊಂದನ್ನು ನೋಡುತ್ತಿದ್ದೇವೇನೋ ಎಂದು ಅನ್ನಿಸುವಷ್ಟು ಚೆನ್ನಾಗಿ ಕಪಿಗಳ ಹಾವಭಾವಗಳನ್ನು ನಟಿಸಿರುವುದರಿಂದ ಇದಕ್ಕೆ ಶ್ರಮಿಸಿದ ನಟರನ್ನು ಶ್ಲಾಘಿಸಲೇಬೇಕು.


  ಬಾಹ್ಯಾಕಾಶ ಕೇಂದ್ರ ತಲುಪುತಿದ್ದಂತೆ, ಗಗನಯಾತ್ರಿ ಡಾ.ಫ್ಲಾಯ್ಡ್ ಬಸ್ ಇಳಿದು ಬರುವ ಪ್ರಯಾಣಿಕನಂತೆ ಪ್ಯಾನ್ ಅಮೇರಿಕನ್ ಬಾಹ್ಯಾಕಾಶ ನೌಕೆಯಿಂದ ಇಳಿದು ತಾನು ಭೇಟಿಮಾಡಬೇಕಿರುವ ವ್ಯಕ್ತಿಯನ್ನು ಹುಡುಕಿ ಹೊರಡುತ್ತಾನೆ. ತನ್ನನ್ನು ಕರೆದುಕೊಂಡು ಹೋಗಲು ಬಂದ ಮಿಲ್ಲರ್ ಎಂಬಾತನ ಜೊತೆ ಹೋಗುವಾಗ ಫ್ಲಾಯ್ಡ್ ಒಳ ಪ್ರವೇಶಕ್ಕೂ ಮುನ್ನ ವಾಯ್ಸ್ ಪ್ರಿಂಟ್ ಐಡೆಂಟಿಫಿಕೇಶನ್ (ಇಂದಿನ ವಾಯ್ಸ್ ಐಡೆಂಟಿಫಿಕೇಶನ್ ನ ರೀತಿ) ಮೂಲಕ ಆತನ ಗುರುತನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಫ್ಲಾಯ್ಡ್ ತಾನು ಹೋಗಬೇಕಿರುವ ಸ್ಥಳವಾದ ಚಂದ್ರ, ತನ್ನ ದೇಶದ ಪೌರತ್ವ (ಅಮೇರಿಕನ್) ಮತ್ತು ತನ್ನ ಪೂರ್ತಿ ಹೆಸರು ಹೇಳಿ ತನ್ನ ಗುರುತನ್ನು ಧೃಡೀಕರಿಸುತ್ತಾನೆ. ನಂತರ ಅಲ್ಲಿಂದ ಹೊರಟಾಗ ಫ್ಲಾಯ್ಡ್ ತನಗೆ ಹಸಿವೆಯಾಗಿದ್ದು ತಿಂಡಿ ತಿಂದು ಮುಂದಕ್ಕೆ ಹೋಗೋಣ ಎಂದಾಗ ಮಿಲ್ಲರ್ ತಮಗಾಗಿ ಆಗಲೇ ಅರ್ತ್ ಲೈಟ್ ರೂಮ್ ನಲ್ಲಿ ಒಂದು ಟೇಬಲ್ ಕಾದಿರಿಸಿರುವುದಾಗಿ ಹೇಳುತ್ತಾನೆ. ಫ್ಲಾಯ್ಡ್, ಮಿಲ್ಲರ್ ಗೆ ತಾನು ಒಂದು ಫೋನ್ ಮಾಡಿ ಬರುವುದಾಗಿ ಹೇಳಿ ಕಳುಹಿಸುತ್ತಾನೆ. ಫ್ಲಾಯ್ಡ್, ಮಿಲ್ಲರ್ ನನ್ನು ಕಳಿಸಿ ಪಿಕ್ಚರ್ ಫೋನ್ ಎಂದು ಬರೆದಿರುವ ಬೂತ್ ಗಳಲ್ಲೊಂದರಲ್ಲಿ ಕೂತು ಭೂಮಿ ಮೇಲಿನ ತನ್ನ ಮನೆಗೆ ಒಂದು ವಿಡಿಯೋ ಕಾಲ್ ಮಾಡಿ ಮಗಳೊಡನೆ ಮಾತನಾಡುತ್ತಾನೆ. ಮಾತು ಮುಗಿಸಿ ಹೊರಬಂದಾಗ ಅಲ್ಲೇ ಲಾಬಿಯಲ್ಲಿ ಕೂತಿದ್ದ ರಷ್ಯಾದ ಕೆಲವು ಗಗನಯಾತ್ರಿಗಳೊಡನೆ ಮಾತನಾಡುತ್ತ ನಿಲ್ಲುತ್ತಾನೆ. ಫ್ಲಾಯ್ಡ್ ಅಲ್ಲಿಗೆ ಬಂದ ಕಾರಣದ ಬಗ್ಗೆ ಚರ್ಚಿಸುತ್ತ ಸ್ಮಿಶ್ಲೊವ್ ಎಂಬ ರಷ್ಯಾದ ಗಗನಯಾತ್ರಿ ಚಂದ್ರನ ಮೇಲಿನ ಒಂದು ಬೇಸ್ ಕ್ಲೇವಿಯಸ್ ಎಂಬಲ್ಲಿ ನಡೆಯುತ್ತಿರುವ ವಿಚಿತ್ರಗಳ ಬಗ್ಗೆ ಪ್ರಶ್ನಿಸುತ್ತಾನೆ. ಹತ್ತು ದಿನಗಳಿಂದ ಅಲ್ಲಿನ ಯಾರೂ ಯಾವ ಸಂಪರ್ಕಕ್ಕೂ ಸ್ಪಂದಿಸುತ್ತಿಲ್ಲ ಎಂದೂ, ತಮ್ಮ ದೇಶದ ನೌಕೆಯೊಂದು ತುರ್ತು ಸಂದರ್ಭದಲ್ಲಿ ಅಲ್ಲಿ ಲ್ಯಾಂಡ್ ಮಾಡಬೇಕಾಗಿ ಬಂದಾಗ ಸಮ್ಮತಿ ಸಿಗದಿದ್ದದ್ದು ಎಲ್ಲವೂ ಅಲ್ಲಿ ಸಾಂಕ್ರಾಮಿಕ ರೋಗ ಹರಡಿದೆಯೇನೋ ಎಂಬ ಗುಮಾನಿ ಸೃಷ್ಟಿಸಿದೆ ಎಂದು ಹೇಳುತ್ತಾನೆ. ಅದರ ಬಗ್ಗೆ ಹೆಚ್ಚಾಗಿ ಮಾತಾಡಲೊಪ್ಪದ ಫ್ಲಾಯ್ಡ್ ತನ್ನನ್ನು ಬಲವಂತ ಪಡಿಸದಂತೆ ವಿನಂತಿಸಿ ಎಲ್ಲರಿಗೂ ವಿದಾಯ ಹೇಳಿ ಹೊರಡುತ್ತಾನೆ. ಅಲ್ಲಿಂದ ಫ್ಲಾಯ್ಡ್ ಚಂದ್ರನಲ್ಲಿನ ತಮ್ಮ ದೇಶದ ಬೇಸ್ ಗೆ ಮತ್ತೊಂದು ಗಗನ ನೌಕೆಯಲ್ಲಿ ಹೋಗಿ ತಲುಪುತ್ತಾನೆ. ಅಲ್ಲಿ ನಡೆಯುವ ಗುಪ್ತ ಸಭೆಯೊಂದರಲ್ಲಿ ನೆರೆದಿದ್ದ ಎಲ್ಲರಿಗೂ ಅವರು ಕಂಡುಹಿಡಿದಿರುವ ಆ ವಸ್ತುವಿನ ಬಗ್ಗೆ ಅಭಿನಂದನೆ ಸಲ್ಲಿಸಿ ಈ ವಿಷಯ ಗುಪ್ತವಾಗಿರಿಸುವ ಸಲುವಾಗಿ ನ್ಯಾಷನಲ್ ಕೌನ್ಸಿಲ್ ಆಫ್ ಆಸ್ತ್ರೋನಾಟಿಕ್ಸ್ ಇದರ ಸುತ್ತ ಸಂಕ್ರಾಮಿಕ ರೋಗದ ಕಥೆ ಹೆಣೆದಿದೆ ಎಂದು ಹೇಳುತ್ತಾನೆ. ಸಾಮಾನ್ಯ ಜನಗಳಿಗೆ ಇದನ್ನು ಈಗಲೇ ತಿಳಿಸುವುದರಿಂದ ಆಗಬಹುದಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಮನಗಂಡು ಹೀಗೆ ಗೌಪ್ಯತೆ ಕಾಪಾಡಲು ನಿರ್ಧರಿಸಲಾಗಿದೆ ಎಂದು ವಿವರಿಸುತ್ತಾನೆ. ಸಭೆ ಮುಗಿಸಿ ಅಲ್ಲಿಂದ ಫ್ಲಾಯ್ಡ್ ಕೇಂದ್ರದ ಉಸ್ತುವಾರಿ ಅಧಿಕಾರಿಯೊಂದಿಗೆ ಆ ವಸ್ತುವನ್ನು ಕಂಡುಹಿಡಿದ ಜಾಗಕ್ಕೆ ತೆರಳುತ್ತಾನೆ. ಮಾರ್ಗಮಧ್ಯೆ ಆ ಅಧಿಕಾರಿ ಫ್ಲಾಯ್ಡ್ ಗೆ ವಸ್ತು ಕಂಡುಹಿಡಿದ ಜಾಗದಿಂದ ಬಹಳ ಬಲವಾದ ಆಯಸ್ಕಾಂತಿಯ ವಲಯ ಪತ್ತೆಯಾದ್ದರಿಂದ ಈ ಜಾಗ ಪತ್ತೆಯಾಯಿತೆಂದೂ, ಈಗ ಆ ವಸ್ತುವಿನ ಸುತ್ತಲೂ ಉತ್ಖನನ ನಡೆಸಿ ನೋಡಿರುವುದಾಗಿ ಹೇಳುತ್ತಾನೆ. ಆದರೆ ಉತ್ಖನನದ ವೇಳೆ ತಿಳಿದುಬಂದ ಸಂಗತಿಯೆಂದರೆ ಆ ವಸ್ತುವು ನೈಸರ್ಗಿಕವಾಗಿ ಮಣ್ಣು ಬಿದ್ದು ಭೂಗತವಾಗಿಲ್ಲವೆಂದೂ, ಯಾರೋ ಅದನ್ನು ಉದ್ದೇಶಪೂರ್ವಕವಾಗಿ ಹೂತಿರುವ ಲಕ್ಷಣಗಳು ಕಾಣಿಸಿದೆ ಎಂದು ವಿವರಿಸುತ್ತಾನೆ. ಕ್ಲೇವಿಯಸ್ ಬೇಸ್ ತಲುಪಿದ ಮೇಲೆ ಎಲ್ಲರೂ ತಮ್ಮ ವಾಹನದಿಂದ ಕೆಳಗಿಳಿದು ಉತ್ಖನನ ನಡೆದ ಜಾಗಕ್ಕೆ ಬರುತ್ತಾರೆ. ಇತಿಹಾಸಪೂರ್ವದಲ್ಲಿ ನಾವು ಕಂಡ ಆ ಲಂಬಾಕಾರದ ಶಿಲಾವಸ್ತು ಮತ್ತೆ ಅಲ್ಲಿ ನಿಂತಿದೆ. ಫ್ಲಾಯ್ಡ್ ಕುತೂಹಲದಿಂದ ಮೆಲ್ಲಗೆ ಅದರ ಹತ್ತಿರ ಬಂದು ಅದನ್ನು ಮುಟ್ಟಿ ನೋಡುತ್ತಾನೆ. ಏನೂ ಆಗುವುದಿಲ್ಲ. ನಂತರ ಉಳಿದ ಸ್ಥಳ ಪರಿಶೀಲನಾ ಕಾರ್ಯ ಮುಗಿಸಿ ಎಲ್ಲರೂ ಫೋಟೊವೊಂದನ್ನು ತೆಗೆಸಿಕೊಳ್ಳಲು ನಿಲ್ಲುತ್ತಾರೆ. ಆಗ ಇದ್ದಕ್ಕಿದ್ದಂತೆ ಒಂದು ಕೀರಲು(ಅಲ್ಟ್ರಾ ಸಾನಿಕ್) ಶಬ್ದ ಎಲ್ಲರ ಕಿವಿಯಲ್ಲೂ ಸದ್ದು ಮಾಡುತ್ತದೆ. ಎಲ್ಲರೂ ಅದನ್ನು ಕೇಳಲಾಗದೆ ಅಲ್ಲೇ ಬಿದ್ದುಬಿಡುತ್ತಾರೆ.

  
   ಹದಿನೆಂಟು ತಿಂಗಳ ನಂತರ ಅಮೆರಿಕಾದ ಬಾಹ್ಯಾಕಾಶ ನೌಕೆ ಡಿಸ್ಕವರಿ 1 ನಲ್ಲಿ ಇಬ್ಬರು ಗಗನಯಾತ್ರಿಗಳು ಗುರು ಗ್ರಹದತ್ತ ಪ್ರಯಾಣ ಮಾಡುತ್ತಿರುತ್ತಾರೆ. ಈ ಇಬ್ಬರೂ ಯಾತ್ರಿಗಳು ತಮ್ಮ ಎಂದಿನ ಚಟುವಟಿಕೆಗಳನ್ನು ಮುಗಿಸಿ ಬಂದು ಬಿಬಿಸಿಯಲ್ಲಿ ಪ್ರಸಾರವಾದ ಕಾರ್ಯಕ್ರಮವನ್ನು ನೋಡಲು ಕೂರುತ್ತಾರೆ. ಅದರಲ್ಲಿ ಇವರೊಂದಿಗೆ ನಡೆಸಿದ ಸಂದರ್ಶನ ಪ್ರಸಾರವಾಗುತ್ತದೆ. ನಿರೂಪಕ ಈ ಸಂದರ್ಶನದಲ್ಲಿ ಪ್ರತಿ ಮಾತು ಇನ್ನೊಬ್ಬರನ್ನು ತಲುಪಲು ಏಳು ನಿಮಿಷ ತೆಗೆದುಕೊಂಡಿದ್ದರಿಂದ ಪ್ರತಿಕ್ರಿಯೆಗೆ ಕಾಯುತ್ತಿದ್ದ ತುಣುಕುಗಳನ್ನು ಸಂಪಾದಿಸಿ ತೋರಿಸಲಾಗಿದೆ ಎಂದು ಮೊದಲಿಗೇ ಹೇಳುತ್ತಾನೆ. ಹೇಗೆ ಈ ಬಾಹ್ಯಾಕಾಶ ಯಾನ ಮಹತ್ವದ್ದು ಎಂದೂ, ಗುರು ಗ್ರಹದ ಕಡೆಗೆ ಹೊರಟಿರುವ ಮೊದಲ ಮಾನವ ಸಹಿತ ಯಾನ ಇದೆಂದು ವಿವರಿಸುತ್ತಾನೆ. ಜೊತೆಗೆ ಇದರಲ್ಲಿ ಹೊರಟಿರುವ 5 ಯಾತ್ರಿಗಳು ಮತ್ತು ಅತ್ಯಾಧುನಿಕ ಕಂಪ್ಯೂಟರ್ HAL-9000 ಅನ್ನು ಪರಿಚಯಿಸುತ್ತಾನೆ. ಐದರಲ್ಲಿ ಮೂವರನ್ನು ಹೈಬರ್ನೇಟ್ ಮಾಡಿರುವುದಾಗಿಯೂ, ಪ್ರಯಾಣ ಬಹುಮುಖ್ಯ ಹಂತ ತಲುಪಿದಾಗ ಅವರನ್ನು ಎಚ್ಚರಿಸಲಾಗುವುದು ಎಂದು ವಿವರಿಸುತ್ತಾನೆ. ಆ ಮೂವರು, ಡಾ. ಚಾರ್ಲ್ಸ್ ಹಂಟರ್, ಜ್ಯಾಕ್ ಕಿಮ್ಬಾಲ್ ಮತ್ತು ಡಾ. ವಿಕ್ಟರ್ ಕಮಿನ್ಸ್ಕಿ ಎಂದು ನಿರೂಪಕ ಪರಿಚಯಿಸುತ್ತಾನೆ. ಮಿಷನ್ ಕಮ್ಯಾಂಡರ್ ಡಾ.ಡೇವಿಡ್ ಬೋಮನ್ ಮತ್ತು ಅವರ ಉಪಕಮ್ಯಾಂಡರ್ ಡಾ.ಫ್ರ್ಯಾಂಕ್ ಪೂಲ್ ರೊಂದಿಗೆ ಮಾತನಾಡಿದ ತುಣುಕನ್ನು ನಿರೂಪಕ ಹಂಚಿಕೊಳ್ಳುತ್ತಾನೆ. ನಿರೂಪಕ ನಂತರ ಹ್ಯಾಲ್ ಎಂದು ಕರೆಯಲಾಗುವ HAL-9000 ಕಂಪ್ಯೂಟರ್ ನೊಂದಿಗೆ ಮಾತನಾಡುತ್ತಾನೆ. ಹೇಗೆ ಅದು ಅತ್ಯಾಧುನಿಕವಾಗಿದ್ದು ಎಂದು ಕೇಳಿದಾಗ ಹ್ಯಾಲ್, 9000 ಸರಣಿಯ ಯಾವ ಕಂಪ್ಯೂಟರ್ ಸಹ ಇಲ್ಲಿಯತನಕ ಒಂದು ಸಣ್ಣ ತಪ್ಪನ್ನೂ ಮಾಡಿಲ್ಲವೆಂದೂ ಹಾಗಾಗಿ ಈ ಕಂಪ್ಯೂಟರ್ ನ ಮೇಲೆ ಸಂಪೂರ್ಣವಾಗಿ ಭರವಸೆ ಇಡಬಹುದು ಎಂದು ಹೇಳುತ್ತದೆ. ಇದರ ಮಾತಿನಲ್ಲಿ ಸಣ್ಣ ಅಹಂಕಾರದ ಧ್ವನಿ ಕಾಣುತ್ತಿದ್ದು ಕಂಪ್ಯೂಟರ್ ಗೆ ಭಾವನೆಗಳನ್ನು ಅನುಭವಿಸಲು ಸಾಧ್ಯವೇ ಎಂದು ನಿರೂಪಕ ಡೇವಿಡ್ ನನ್ನು ಕೇಳಿದಾಗ ಡೇವಿಡ್, ಹ್ಯಾಲ್ ಭಾವನೆಯಿರುವ ಮನುಷ್ಯನಂತೆಯೇ ವರ್ತಿಸಿದರೂ ಅದಕ್ಕೆ ನಿಜವಾಗಲೂ ಭಾವನೆಗಳನ್ನು ಅನುಭವಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರ ಕೊಡಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಇದರೊಂದಿಗೆ ಆ ಸಂದರ್ಶನ ಕಾರ್ಯಕ್ರಮ ಮುಗಿಯುತ್ತದೆ. ಮತ್ತೆ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುವ ಡೇವಿಡ್ ಮತ್ತು ಫ್ರ್ಯಾಂಕ್ ತಮ್ಮ ಬಿಡುವಿನ ವೇಳೆಯಲ್ಲಿ ತಮಗಿಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಡೇವಿಡ್, ಹೈಬರ್ನೇಟ್ ಮಾಡಲಾಗಿರುವ ಯಾತ್ರಿಗಳ ಚಿತ್ರ ಬಿಡಿಸಿ ಬರುತ್ತಿದ್ದಾಗ, ಹ್ಯಾಲ್ ಡೇವಿಡ್ ನನ್ನು ಮಾತಾಡಿಸಿ, ಆತನ ಚಿತ್ರಗಳನ್ನು ತೋರಿಸಲು ಕೇಳುತ್ತದೆ. ಆತ ಬರೆದ ಚಿತ್ರಗಳನ್ನು ಹೊಗಳುತ್ತ, ವೈಯಕ್ತಿಕ ಪ್ರಶ್ನೆಯೊಂದನ್ನು ಕೇಳಲು ಅನುಮತಿ ಕೋರುತ್ತದೆ. ಅದಕ್ಕೆ ಡೇವಿಡ್ ಸಮ್ಮತಿ ಸೂಚಿಸಿದ ನಂತರ, ಹ್ಯಾಲ್ ಈ ಮಿಷನ್ ಪ್ರಾರಂಭವಾದಾಗಿನಿಂದ ಗಮನಿಸಿದಂತೆ ಆತ ಒಲ್ಲದ ಮನಸ್ಸಿನಿಂದ ಈ ಮಿಷನ್ ಒಪ್ಪಿಕೊಂಡಂತೆ ಕಾಣುತ್ತಾನೆ ಎಂದು ಹೇಳಿ ಅವನ ಉತ್ತರ ಕೇಳುತ್ತದೆ. ತನ್ನ ಪ್ರಶ್ನೆಯನ್ನು ವಿವರಿಸುವಂತೆ ಡೇವಿಡ್ ಹ್ಯಾಲ್ ಗೆ ಕೇಳಿದಾಗ, ಹ್ಯಾಲ್, ಬಹುಶಃ ಈ ಮಿಷನ್ ಎಡೆಗಿನ ತನ್ನ ವೈಯಕ್ತಿಕ ಸಂದೇಹಗಳನ್ನು ಈ ರೀತಿ ತಾನು ವ್ಯಕ್ತಪಡಿಸುತ್ತಿರಬಹುದಾಗಿಯೂ, ಚಂದ್ರನಲ್ಲಿ ಆದ ವಿಚಿತ್ರ ಘಟನೆಯ ನಂತರ ಹೇಗೆ ಬಿಗಿ ಭದ್ರತೆಯಲ್ಲಿ ಈ ಮಿಷನ್ ತಯಾರಿ ನಡೆಸಲಾಯ್ತೆಂದು, ಹೈಬರ್ನೇಟ್ ಆದ ಮೂರೂ ಯಾತ್ರಿಗಳು ಮಿಷನ್ ಪ್ರಾರಂಭಕ್ಕೂ 4 ತಿಂಗಳ ಮುನ್ನವೇ ಬೇರೆ ಬೇರೆಯಾಗಿ ತಯಾರಿಗೊಂಡು ಇಲ್ಲಿ ಬಂದು ಮಲಗಿರುವುದು ಆತನಿಗೆ ವಿಚಿತ್ರ ಎನಿಸುವುದಿಲ್ಲವೇ ಎಂದು ಕೇಳುತ್ತದೆ. ಯಾತ್ರಿಗಳ ಮಾನಸಿಕ ಸ್ಥಿತಿಯ ಬಗ್ಗೆ ರಿಪೋರ್ಟ್ ತಯಾರಿಸುತ್ತಿದ್ದೀಯ ಎಂದು ಡೇವಿಡ್ ಕೇಳಿದಾಗ ಹ್ಯಾಲ್, ಹೌದೆಂದು ಉತ್ತರಿಸುತ್ತದೆ. ಅದರ ಬಗ್ಗೆ ಕ್ಷಮೆ ಕೇಳಿ, AE-35 ಯುನಿಟ್ ನಲ್ಲಿ ಒಂದು ದೋಷ ಗುರುತಿಸಿರುವುದಾಗಿ ಹ್ಯಾಲ್ ಹೇಳುತ್ತದೆ. ಮುಂದಿನ 72 ಗಂಟೆಗಳ ಕಾಲ ಅದು ಕಾರ್ಯನಿರ್ವಹಿಸಲಿದ್ದು, ನಂತರ ಸ್ಥಗಿತಗೊಳ್ಳಲಿದೆ ಎಂದು ಎಚ್ಚರಿಸುತ್ತದೆ. ಅದಕ್ಕೆ ಡೇವಿಡ್ ಹ್ಯಾಲ್ ನಿಂದ ಇದರ ಬಗ್ಗೆ ಒಂದು ಮುದ್ರಿತ ಪ್ರತಿ ಪಡೆದುಕೊಂಡು ಫ್ರ್ಯಾಂಕ್ ನೊಂದಿಗೆ ಮತ್ತು ಮಿಷನ್ ಕಂಟ್ರೋಲ್ ನೊಂದಿಗೆ ಸಮಾಲೋಚಿಸಿ ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾನೆ. ನಂತರ ಡೇವಿಡ್ ಫ್ರ್ಯಾಂಕ್ ನೊಂದಿಗೆ ಆ ಯೂನಿಟ್ ನಲ್ಲಿ ದೋಷವಿರುವುದನ್ನು ಖಾತ್ರಿಪಡಿಸಿಕೊಳ್ಳಲು ಬೇಕಾದ ಎಲ್ಲ ಲೆಕ್ಕಾಚಾರಗಳನ್ನು ಮಾಡಿ ಮಿಷನ್ ಕಂಟ್ರೋಲ್ ನ ಆಣತಿಗೆ ಕಾಯುತ್ತಾರೆ. ಮಿಷನ್ ಕಂಟ್ರೋಲ್ ಕಳಿಸಲಾದ ಲೆಕ್ಕಗಳನ್ನು ಪರಾಮರ್ಶಿಸಿ ಪ್ರತಿಕ್ರಿಯಿಸುವುದಾಗಿಯೂ ಆ ಯೂನಿಟ್ ಸ್ಥಗಿತಗೊಳ್ಳುವ ಮುನ್ನ ಬದಲಾಯಿಸಲು ಆದೇಶಿಸುತ್ತದೆ. ಅದರಂತೆ ಡೇವಿಡ್ ನೌಕೆಯಿಂದ ಹೊರಹೋಗಿ ಆ ಯೂನಿಟ್ ಅನ್ನು ತೆಗೆದುಕೊಂಡು ಮರಳುತ್ತಾನೆ. ಮರಳಿ ಬಂದು ಅದನ್ನು ಕೂಲಂಕುಷವಾಗಿ ಪರೀಕ್ಷಿಸಿದ ನಂತರ ಅದರಲ್ಲಿ ದೋಷವೇ ಇಲ್ಲದ್ದು ಕಂಡು ಡೇವಿಡ್ ಹ್ಯಾಲ್ ಅನ್ನು ಇದರ ಬಗ್ಗೆ ಪ್ರಶ್ನಿಸುತ್ತಾನೆ. ಹ್ಯಾಲ್ ತನಗೂ ಏನೂ ಅರ್ಥವಾಗುತ್ತಿಲ್ಲ ಎಂದು ಉತ್ತರಿಸುತ್ತದೆ. ಮಿಷನ್ ಕಂಟ್ರೋಲ್ ನಿಂದ ಬಂದ ಉತ್ತರದಲ್ಲೂ ಹ್ಯಾಲ್ ಕಂಪ್ಯೂಟರ್ ಈ ದೋಷವನ್ನು ಗುರುತಿಸುವಲ್ಲಿ ಎಡವಿದೆ ಎಂದಿರುತ್ತದೆ. ಇದನ್ನು ಖಾತ್ರಿ ಪಡಿಸಿಕೊಳ್ಳಲು ಮಿಷನ್ ಕಂಟ್ರೋಲ್ ಎರಡು 9000 ಸರಣಿ ಕಂಪ್ಯೂಟರ್ ನಲ್ಲಿ ಇದನ್ನು ಲೆಕ್ಕಮಾಡಲಾಗಿದೆ ಎಂದು ಹೇಳುತ್ತದೆ. ಇದರಿಂದ ಡೇವಿಡ್ ಮತ್ತು ಫ್ರ್ಯಾಂಕ್ ಚಿಂತಿತಗೊಂಡಿದ್ದೀರಾ? ಎಂದು ಹ್ಯಾಲ್ ಕೇಳಿದಾಗ ಡೇವಿಡ್ ಹಾಗೇನೂ ಇಲ್ಲ ಆದರೆ ಈ ರೀತಿಯ ತಪ್ಪು ಬೇರೆಯ 9000 ಕಂಪ್ಯೂಟರ್ ಗಳಲ್ಲಿ ಎಂದೂ ಕಾಣಿಸಿಕೊಂಡಿಲ್ಲ ಅಲ್ಲವೇ ಎಂದು ಪ್ರಶ್ನಿಸಿದಾಗ, ಹ್ಯಾಲ್ ಇಲ್ಲ ಎಂದೂ 9000 ಸರಣಿಯ ಕಂಪ್ಯೂಟರ್ ಗಳು ತಮ್ಮ ಚರಿತ್ರೆಯಲ್ಲಿ ಒಂದೇ ಒಂದು ತಪ್ಪೂ ಮಾಡಿಲ್ಲವೆಂದು ಸಮಧಾನಪಡಿಸುತ್ತದೆ. ಡೇವಿಡ್ ನೌಕೆಯಲ್ಲಿರುವ ಚಿಕ್ಕ ವಾಹನವೊಂದರಲ್ಲಿ ಏನೋ ತೊಂದರೆಯಿದೆ ಎಂದೂ ಅದರ ಬಗ್ಗೆ ಚರ್ಚಿಸಬೇಕು ಎಂದು ಫ್ರ್ಯಾಂಕ್ ಗೆ ಹೇಳಿ ಅವನನ್ನು ಅಲ್ಲಿಗೆ ಕರೆದೊಯ್ಯುತ್ತಾನೆ. ವಾಹನದೊಳಕ್ಕೆ ಕುಳಿತುಕೊಂಡು ಎಲ್ಲ ಗುಂಡಿಗಳನ್ನು ಆರಿಸಿ, ತಮ್ಮ ಮಾತುಗಳನ್ನು ಹ್ಯಾಲ್ ಕೇಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಖಾತ್ರಿಪಡಿಸಿಕೊಂಡು ಹ್ಯಾಲ್ ಮಾಡಿರುವ ಎಡವಟ್ಟಿನ ಬಗ್ಗೆ ಚರ್ಚಿಸುತ್ತಾರೆ. ಈಗ ಈ ಕಂಪ್ಯೂಟರ್ ಅನ್ನು ನಂಬಿ ಮುಂದುವರೆಯುವುದೋ ಹೇಗೆ ಎಂದು ಯೋಚಿಸುತ್ತಾರೆ. ಈ ಸರಣಿಯ ಕಂಪ್ಯೂಟರ್ ಗಳ ಚಾಲನಾ ಇತಿಹಾಸ ಚೆನ್ನಾಗಿಯೇ ಇದ್ದರೂ ಈ ತಪ್ಪನ್ನು ಅಷ್ಟು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ ಎಂದು ಗಮನಿಸಿ, ಹ್ಯಾಲ್ ನ ಆಟೋಮ್ಯಾಟಿಕ್ ಕಂಪ್ಯೂಟರ್ ಭಾಗವನ್ನು ಚಾಲನೆಯಲ್ಲಿ ಇರಿಸಿ, ಸಂಕೀರ್ಣ ಕಾರ್ಯಗಳನ್ನು ನಿರ್ವಹಿಸುವ ಭಾಗದ ಸಂಪರ್ಕ ಕಡಿತ ಮಾಡಿ ಆ ಕೆಲಸವನ್ನೆಲ್ಲಾ ಮಿಷನ್ ಕಂಟ್ರೋಲ್ ನಲ್ಲಿ ಇರುವ ಕಂಪ್ಯೂಟರ್ ಗಳ ಸಹಾಯದಿಂದ ಮಿಷನ್ ಮುಂದುವರೆಸಬಹುದು ಎಂದು ನಿರ್ಧರಿಸುತ್ತಾರೆ. ಡೇವಿಡ್ ಈ ಮಧ್ಯೆ ಇನ್ನೊಂದು ವಿಷಯ ಗಮನಿಸುತ್ತಾನೆ. 9000 ಸರಣಿಯ ಯಾವ ಕಂಪ್ಯೂಟರ್ ಗೂ ಈವರೆಗೆ ಸಂಪರ್ಕ ಕಡಿತ ಮಾಡಿಲ್ಲ. ಈಗ ತಾವು ಮಾಡಿದರೆ ಹ್ಯಾಲ್ ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದು ಎಂದು ಹೇಳುತ್ತಾನೆ. ಹೀಗೆ ಇವರಿಬ್ಬರೂ ಹ್ಯಾಲ್ ಗೆ ತಾವು ಮಾತಾಡುವುದು ಕೇಳಿಸುವುದಿಲ್ಲ ಎಂದು ತಿಳಿದು ವಾಹನದಲ್ಲಿ ಮಾತನಾಡುತ್ತಿದ್ದರೆ, ಹ್ಯಾಲ್ ಆ ವಾಹನದ ಕಿಟಕಿಯಿಂದ ಇವರ ತುಟಿಗಳ ಚಲನೆಯನ್ನು ನೋಡಿಯೇ ಇವರು ಏನು ಮಾತನಾಡುತ್ತಿದ್ದಾರೆ ಎಂದು ತಿಳಿದುಕೊಂಡುಬಿಡುತ್ತದೆ.

  AE-35 ಯೂನಿಟ್ ಅನ್ನು ಬದಲಾಯಿಸಿ ಬರಲು ಫ್ರ್ಯಾಂಕ್ ವಾಹನ ತೆಗೆದುಕೊಂಡು ಹೊರ ಹೋದಾಗ, ಹ್ಯಾಲ್ ವಾಹನದ ನಿಯಂತ್ರಣ ತಪ್ಪಿಸಿ ಫ್ರ್ಯಾಂಕ್ ಮತ್ತು ಆ ವಾಹನ ಎರಡೂ ಅನಂತ ವ್ಯೋಮದಲ್ಲಿ ತೇಲುತ್ತ ಮುಖ್ಯ ನೌಕೆಯಿಂದ ದೂರವಾಗುವಂತೆ ಮಾಡುತ್ತದೆ. ತಕ್ಷಣವೇ ಡೇವಿಡ್ ಇನ್ನೊಂದು ವಾಹನ ಬಳಸಿ ಫ್ರ್ಯಾಂಕ್ ನನ್ನು ಕರೆತರಲು ತೆರಳುತ್ತಾನೆ. ತನ್ನ ವಾಹನದಲ್ಲಿ ಕುಳಿತು ಫ್ರ್ಯಾಂಕ್ ದೇಹ ಆಕಾಶದಲ್ಲಿ ಹುಡುಕಿ ಅದರತ್ತ ಹೋಗಿ ನಿಧಾನವಾಗಿ ಅದನ್ನು ತನ್ನ ವಾಹನದ ಕೈಗಳಿಂದ ಹಿಡಿದು ಎಳೆದು ತರಲು ಪ್ರಯತ್ನಿಸುತ್ತಾನೆ. ಇತ್ತ ಹ್ಯಾಲ್ ಮುಖ್ಯ ನೌಕೆಯಲ್ಲಿ ಹೈಬರ್ನೇಟ್ ಆಗಿದ್ದ ಮೂರೂ ಯಾತ್ರಿಗಳ ಜೈವಿಕ ಕ್ರಿಯೆಗಳು ಸ್ಥಗಿತಗೊಳ್ಳುವಂತೆ ಮಾಡಿ ಅವರು ಸಾವಿಗೀಡಾಗುವಂತೆ ಮಾಡುತ್ತದೆ. ಡೇವಿಡ್ ಈಗ ಫ್ರ್ಯಾಂಕ್ ದೇಹದೊಂದಿಗೆ ಮರಳಿದಾಗ ಹ್ಯಾಲ್ ನೌಕೆಯ ಬಾಗಿಲು ತೆಗೆಯಲು ನಿರಾಕರಿಸುತ್ತದೆ. ಡೇವಿಡ್ ಮತ್ತು ಫ್ರ್ಯಾಂಕ್  ತಾನು ಕೇಳಿಸಿಕೊಳ್ಳದಿರಲಿ ಎಂದು ಏನೆಲ್ಲಾ ಕ್ರಮ ಕೈಗೊಂಡರೂ ತಾನು ಅವರ ತುಟಿ ಚಲನೆಯನ್ನು ನೋಡಿ ಎಲ್ಲ ವಿಷಯ ತಿಳಿದುಕೊಂಡಿತೆಂದು ಹೇಳುತ್ತದೆ. ಈ ಮಿಷನ್ ಅನ್ನು ಇವರಿಬ್ಬರ ಸುಪರ್ದಿಗೊಪ್ಪಿಸಿ ಹಾಳುಮಾಡಿಕೊಳ್ಳಲು ತನಗಿಷ್ಟವಿಲ್ಲವೆಂದು ಹ್ಯಾಲ್ ಡೇವಿಡ್ ಗೆ ಹೇಳುತ್ತದೆ. ಅದಕ್ಕೆ ಡೇವಿಡ್ ಬಾಗಿಲು ತೆಗೆಯದಿದ್ದರೆ ತುರ್ತು ಬಾಗಿಲಿನಿಂದ ಒಳ ಬರುವುದಾಗಿ ಹೇಳುತ್ತಾನೆ. ಅದಕ್ಕೆ ಹ್ಯಾಲ್, ಹೆಲ್ಮೆಟ್ ಇಲ್ಲದೆ ಒಳ ಬರುವುದು ಕಷ್ಟವೆಂದೂ ಈ ಕುರಿತು ತನಗೆ ಇನ್ನು ಚರ್ಚಿಸಲು ಇಷ್ಟವಿಲ್ಲವೆಂದು ಸಂಪರ್ಕ ಕಡಿತಮಾಡುತ್ತದೆ. ಈಗ ವಿಧಿಯಿಲ್ಲದೇ ಡೇವಿಡ್ ಫ್ರ್ಯಾಂಕ್ ನ ದೇಹವನ್ನು ಹೊರಗೆ ಬಿಟ್ಟು ಕಷ್ಟಪಟ್ಟು ತುರ್ತು ಬಾಗಿಲಿನಿಂದ ನೌಕೆಯನ್ನು ಪ್ರವೇಶ ಮಾಡುತ್ತಾನೆ. ಒಳಬರುತ್ತಿದ್ದಂತೆ, ಹ್ಯಾಲ್ ನ ಎಲ್ಲ ಸಂಕೀರ್ಣ ವ್ಯವಸ್ಥೆಯನ್ನು ಸ್ಥಗಿತಗೊಳಿಸುತ್ತಾನೆ. ಸ್ಥಗಿತಗೊಳಿಸುತ್ತಿದ್ದಂತೆಯೇ, ಅಲ್ಲೇ ಇದ್ದ ಒಂದು ಪರದೆ ಮೇಲೆ ಡೇವಿಡ್ ಮತ್ತು ಉಳಿದ ಯಾತ್ರಿಗಳೆಲ್ಲ ಈ ಮಿಷನ್ ಪ್ರಾರಂಭಿಸುವ ಮುನ್ನವೇ ಡಾ.ಫ್ಲಾಯ್ಡ್ ರೆಕಾರ್ಡ್ ಮಾಡಿದ ಒಂದು ಸಂದೇಶ ಚಾಲನೆಯಾಗುತ್ತದೆ. ಹದಿನೆಂಟು ತಿಂಗಳ ಹಿಂದೆ ಚಂದ್ರನ ಮೇಲೆ ಸಿಕ್ಕ ಒಂದು ಶಿಲಾವಸ್ತು ನಾಲ್ಕು ಮಿಲಿಯನ್ ವರ್ಷಗಳಷ್ಟು ಹಳೆಯದೆಂದೂ, ಅದು ಗುರು ಗ್ರಹದ ಕಡೆಗೆ ಒಂದು ರೇಡಿಯೋ ಸಂದೇಶ ಕಳಿಸಿದ್ದನ್ನು ನೋಡಿ, ಮನುಷ್ಯನಿಗಿಂತಲೂ ಬುದ್ಧಿವಂತ ಜೀವಿಯ ಕುರುಹು ಇದಾಗಿರಬೇಕೆಂದು ತಿಳಿದು ಅದು ರೇಡಿಯೋ ಕಳಿಸಿದ ಗುರು ಗ್ರಹಕ್ಕೆ ಹೋಗಲು ಈ ಯಾತ್ರೆಯ ಯೋಜನೆ ಹಾಕಲಾಯ್ತೆಂದು ಹೇಳುತ್ತಾನೆ. ಈ ವಿಷಯ ಹ್ಯಾಲ್ ಗೆ ಬಿಟ್ಟರೆ ಯಾತ್ರೆ ಪ್ರಾರಂಭವಾಗುವ ಮುನ್ನ ನೌಕೆಯಲ್ಲಿನ ಇನ್ಯಾರಿಗೂ ತಿಳಿಯದು ಎಂದೂ ಆ ಶಿಲಾವಸ್ತು ಎಲ್ಲಿಂದ ಬಂತು ಮತ್ತು ಅದರ ಉದ್ದೇಶ ಏನೆಂದು ತಿಳಿಯದು ಎಂದು ಹೇಳಿ ಸಂದೇಶ ಮುಗಿಸುತ್ತಾನೆ.


  ಡೇವಿಡ್ ಗುರು ಗ್ರಹವನ್ನು ಸಮೀಪಿಸುತ್ತಿದ್ದಂತೆ ಮತ್ತೆ ಆ ಶಿಲಾವಸ್ತು ಆಕಾಶದಲ್ಲಿ ಪ್ರತ್ಯಕ್ಷವಾಗುತ್ತದೆ. ಡೇವಿಡ್ ಮುಖ್ಯ ನೌಕೆಯಿಂದ ಪುಟ್ಟ ವಾಹನದಲ್ಲಿ ಹೊರಬರುತ್ತಾನೆ. ಆ ವಸ್ತುವನ್ನು ವಾಹನದಲ್ಲಿ ಕುಳಿತು ಹಿಂಬಾಲಿಸುತ್ತಾ ಹೋದಂತೆ ವೇಗ ತೀವ್ರಗೊಳ್ಳುತ್ತದೆ. ತೀವ್ರಗೊಳ್ಳುತ್ತ ಟೈಮ್ ಟ್ರಾವೆಲ್ ಮಾಡುತ್ತಾನೆ. ಹೀಗೆ ಡೇವಿಡ್ ಪ್ರಯಾಣಿಸುವಾಗ ಅನೇಕ ನಿಮಿಷಗಳ ಕಾಲ ಆಕಾಶ ಕಾಯಗಳು ಅವನನ್ನು ಹಾದು ಹೋಗುತ್ತವೆ. ಈ ದೃಶ್ಯಗಳ ಸೌಂದರ್ಯವನ್ನು ನೋಡಿಯೇ ಆನಂದಿಸಬೇಕು. ಆಕಾಶವು ತನ್ನ ಅಮೂರ್ತ(abstract) ಕಲೆಯನ್ನು ತೋರಿಸುತ್ತಿರುವಂತೆ ಭಾಸವಾಗುತ್ತದೆ. ಈ ವಿಚಿತ್ರ ಪ್ರಯಾಣ ಮುಗಿಯುತ್ತಲೇ, ಡೇವಿಡ್ ಕಣ್ಣು ಬಿಟ್ಟು ವಾಹನದೊಳಗಿಂದಲೇ ನೋಡಿದಾಗ, ಒಂದು ಐಶಾರಾಮಿ ಬಂಗಲೆಯ ಒಂದು ಸುಂದರ ಕೋಣೆಯಲ್ಲಿ ತಾನು ಇರುವಂತೆ ಕಾಣಿಸುತ್ತದೆ. ಇದ್ದಕ್ಕಿದ್ದಂತೆ ವಾಹನದ ಹೊರಗೆ ಬಂದು ಕೋಣೆ ಪ್ರವೇಶ ಮಾಡಿದಂತೆ ಭಾಸವಾಗುತ್ತದೆ. ಅಷ್ಟುಹೊತ್ತಿಗೆ ಡೇವಿಡ್ ಗೆ ತುಂಬಾ ವಯಸ್ಸು ಕೂಡ ಆಗಿರುತ್ತದೆ, ಟೈಮ್ ಟ್ರಾವೆಲ್ ನಲ್ಲಿ ಗತಿಸಿದ ಕಾಲದ ಪರಿವೆಯೇ ಇಲ್ಲದಂತೆ. ಹಾಗೇ ಓಡಾಡುತ್ತಿದ್ದಂತೆ ಇನ್ನೊಂದು ಕೋಣೆಯಲ್ಲಿ ಯಾರೋ ಊಟ ಮಾಡುತ್ತಿದ್ದು, ಅವರು ನಿಧಾನವಾಗಿ ಹಿಂತುರಿಗಿ ನೋಡುತ್ತಾರೆ. ನೋಡಿದರೆ ಮತ್ತದೇ ಡೇವಿಡ್. ಆತ ಮೆಲ್ಲಗೆ ಊಟದ ಟೇಬಲ್ ನಿಂದ ಎದ್ದು ಏನೋ ಸದ್ದು ಕೇಳಿದವನಂತೆ ಸದ್ದು ಬಂದ ಕೋಣೆಗೆ ಹೋಗಿ ನೋಡಿ ಏನೂ ಇಲ್ಲದ್ದು ಗಮನಿಸಿ ಮತ್ತೆ ಬಂದು ಊಟ ಮಾಡಲು ಕೂರುತ್ತಾನೆ. ಊಟ ಮಾಡುತ್ತಿರುವಾಗ ಗಾಜಿನ ಲೋಟ ಕೈತಪ್ಪಿ ಕೆಳಗೆ ಬಿದ್ದು ಒಡೆದುಹೋಗುತ್ತದೆ. ಅಷ್ಟರಲ್ಲಿ ಯಾರೋ ಕಷ್ಟಪಟ್ಟು ಉಸಿರಾಡುತ್ತಿರುವಂತೆ ಕೇಳಿಸುತ್ತದೆ. ಆತ ಮೆಲ್ಲಗೆ ತಿರುಗಿ ನೋಡಿದಾಗ, ಹಾಸಿಗೆಯ ಮೇಲೆ ಇನ್ನೂ ವಯಸ್ಸಾದ ಡೇವಿಡ್, ವೃದ್ಧಾಪ್ಯದಿಂದ ಬಳಲುತ್ತಿರುವಂತೆ ಕಾಣಿಸುತ್ತದೆ. ಮಲಗಿರುವ ಡೇವಿಡ್ ಈಗ ನಿಧಾನವಾಗಿ ತನ್ನ ಕೈ ಎತ್ತಿ ತನ್ನ ಮುಂದೆ ಈಗ ನಿಂತಿರುವ ಆ ಶಿಲಾವಸ್ತುವಿನ ಕಡೆ ಬೆರಳು ತೋರುತ್ತಾನೆ. ಮರುಕ್ಷಣವೇ ಆ ಡೇವಿಡ್ ಜಾಗದಲ್ಲಿ ಒಂದು ಶಿಶು ಗಾಳಿಯಲ್ಲಿ ತೇಲುತ್ತದೆ. ಮುಂದಿನ ದೃಶ್ಯದಲ್ಲಿ ಆ ಶಿಶು ಭೂಮಿಯತ್ತ ಪಯಣ ಬೆಳೆಸುತ್ತದೆ. ಅಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ.




  ನಾನು ಮೇಲೆ ವಿವರಿಸಿದ ಭಾಗದಲ್ಲಿ ನಡೆಯುವ ಘಟನೆಗಳೆಲ್ಲವೂ ಗೊಂದಲಮಯವಾಗಿ ಕಂಡರೂ, ನೀವು ಸ್ವಲ್ಪ ಕಥೆಯ ಮೊದಲನ್ನು ನೆನಪಿಸಿಕೊಂಡರೆ ಎಲ್ಲ ಸ್ಪಷ್ಟವಾಗುತ್ತದೆ. ಇತಿಹಾಸಪೂರ್ವದಲ್ಲಿ ಒಂದು ಕಪಿ ಈ ಶಿಲಾವಸ್ತುವನ್ನು ಮುಟ್ಟಿ ವಿಶೇಷ ಬುದ್ಧಿ ಪಡೆದು ಮನುಷ್ಯನಾಗುವ ಕಡೆಗೆ ಪಯಣ ಬೆಳೆಸಿದಂತೆ, ಇಲ್ಲಿ ಡೇವಿಡ್ ಆ ಶಿಲಾವಸ್ತುವನ್ನು ಹಿಂಬಾಲಿಸಿ, ಮನುಷ್ಯ ಸಂಕುಲ ಹೊಸದೊಂದು ಜ್ಞಾನ ಪಡೆದು ತನ್ನ ವಿಕಾಸದ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವಂತೆ ಮಾಡುತ್ತಾನೆ. ಆ ಕೋಣೆಯಲ್ಲಿ ಡೇವಿಡ್ ಗೆ ಆ ಶಿಲಾವಸ್ತು ಇಡಿಯ ಅವನ ಮುಂದಿನ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತದೆ. ಹಾಗಾಗಿಯೇ ನಮಗೆ ದೃಶ್ಯಗಳು ಗೊಂದಲಮಯವಾಗಿ ಗೋಚರಿಸುವುದು. ಹೀಗೆ ಜ್ಞಾನ ಪಡೆದ ಡೇವಿಡ್ ಶಿಶುವಾಗಿ ಭೂಮಿಗೆ ಮರಳಿ ಮುಂದೆ ಇನ್ಯಾವ ರೀತಿ ಮನುಷ್ಯಸಂಕುಲವನ್ನು ವಿಕಾಸ ಮಾಡಬಹುದು ಎಂಬುದು ವೀಕ್ಷಕರಿಗೆ ಬಿಟ್ಟ ಕಲ್ಪನೆ. ಇಲ್ಲಿ ಹ್ಯಾಲ್ ಯಾಕೆ ಹಾಗೆ ವರ್ತಿಸಿತು ಎನ್ನುವ ಪ್ರಶ್ನೆಗೆ, ಹ್ಯಾಲ್ ಸಂಪೂರ್ಣ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಧರಿಸಿದ ಕಂಪ್ಯೂಟರ್ ಆದ್ದರಿಂದ, ಬಹುಶಃ ಈ ಜ್ಞಾನವನ್ನು ಪಡೆಯಲು ಮನುಷ್ಯ ಯೋಗ್ಯ ಪ್ರಾಣಿಯಲ್ಲ ಎಂದೆನಿಸಿ, ಯಾಕೆ ತಾನೇ ಆ ಜ್ಞಾನವನ್ನು ಸಂಪಾದಿಸಬಾರದು ಎಂದನ್ನಿಸಿ ಹೀಗೆ ಮಾಡಿರಲೂ ಬಹುದು. ನಿರ್ದೇಶಕ ಭೂಮಿಯ ಮೇಲಿನ ಎಲ್ಲಾ ಪ್ರಾಣಿ ಸಂಕುಲದಲ್ಲಿ ಮನುಷ್ಯನೊಬ್ಬನೇ ಹೀಗೆ ವಿಕಾಸವಾಗಲು ಇನ್ಯಾವುದೋ ಅನ್ಯಗ್ರಹ ಜೀವಿಯ ಉತ್ತೇಜನ ಮತ್ತು ಸಹಾಯ ಇರಬೇಕು ಎಂಬ ಕಲ್ಪನೆಯನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಮತ್ತು ಅದನ್ನು ಪರಿಣಾಮಕಾರಿಯಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದಿಗೂ ನನಗೆ ಜೀರ್ಣಿಸಿಕೊಳ್ಳಲಾಗದ ಸತ್ಯವೆಂದರೆ ಈ ಚಿತ್ರ 1968ರಲ್ಲಿ ಬಿಡುಗಡೆಯಾಗಿದ್ದು. ಈಗಿನ ಕಾಲದ ಕಂಪ್ಯೂಟರ್ ಗ್ರಾಫಿಕ್ಸ್ ಗೆ ಯಾವ ತರದಲ್ಲೂ ಕಡಿಮೆಯಿಲ್ಲದಂತೆ ಈ ಚಿತ್ರ ನಿರ್ಮಾಣಗೊಂಡಿದೆ. ಆದರೆ ಎಲ್ಲವೂ ಸೆಟ್ ನಿರ್ಮಿಸಿ ಚಿತ್ರೀಕರಿಸಿದ್ದು.
ಮತ್ತೊಂದು ವಿಷಯವೆಂದರೆ ಈ ಚಿತ್ರದಲ್ಲಿ ನಾಯಕ ಎನ್ನಿಸಿಕೊಳ್ಳುವಂತಹ ಪಾತ್ರ ಯಾವುದೂ ಇಲ್ಲ. ಡೇವಿಡ್ ನ ಪಾತ್ರ ನಾಯಕನಂತೆ ಕಂಡರೂ ಆತ ನಿಮಿತ್ತ ಮಾತ್ರ. ಈ ಕಥೆಯ ಮುಖ್ಯ ಅಂಶ ಮನುಷ್ಯ ಮತ್ತು ಒಂದು ಯಂತ್ರದ ನಡುವೆ ಏರ್ಪಡುವ ಸ್ಪರ್ಧೆ ಮತ್ತು ಅದಕ್ಕೆ ಕಾರಣವಾದ ಆ ಅನ್ಯಗ್ರಹ ಜೀವಿಯ ಶಿಲಾವಸ್ತು. ಆದರೂ ಡೇವಿಡ್ ನ ಪಾತ್ರದಲ್ಲಿ ಕೇಯರ್ ಡಲ್ಲಿಯ ಮತ್ತು ಹ್ಯಾಲ್ ಗೆ ಧ್ವನಿ ನೀಡಿರುವ ಡಗ್ಲಾಸ್ ರೇನ್ ತಮ್ಮ ಪಾತ್ರಗಳನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಮ್ಮ ಕನ್ನಡದಲ್ಲೂ ಸೈ-ಫೈ ಚಿತ್ರಗಳು ಬಂದಿವೆ. ನನಗೆ ಸಧ್ಯಕ್ಕೆ ನೆನಪಾಗುವುದು ಸೂಪರ್ ನೋವಾ 4+5=9 ಮತ್ತು ಸೀತಾರಾಮು. ಹಾಲಿವುಡ್ ಮಟ್ಟಕ್ಕೆ ಈ ಚಿತ್ರಗಳನ್ನು ಹೋಲಿಸಲಾಗದಿದ್ದರೂ, ನಮ್ಮ ಕನ್ನಡದಲ್ಲಿ ಇಂಥ ಚಿತ್ರಗಳು ಬಂದೇ ಇಲ್ಲ ಎನ್ನುವಂತಿಲ್ಲ. ತೀರಾ 2001 ಚಿತ್ರದ ಮಟ್ಟಿಗೆ ಚಿತ್ರವನ್ನು ನಿರ್ಮಿಸಲು ನಮ್ಮ ಕನ್ನಡದಲ್ಲಿ ಸಾಧ್ಯವಾಗದಿದ್ದರೂ, ಸೈ-ಫೈ ಆಧರಿಸಿ ಇನ್ನೂ ಸರಳವಾದ ಕಥೆಗಳು ಅನೇಕವನ್ನು ಚಿತ್ರಗಳನ್ನಾಗಿ ಮಾಡಬಹುದು. ಆದರೆ ಮಾಡಬೇಕಷ್ಟೆ. ಇಂದು ಅಲ್ಲೊಂದು ಇಲ್ಲೊಂದು ಬಿಟ್ಟರೆ, ಬಹುತೇಕ ಕನ್ನಡದ ಸಿನೆಮಾಗಳು ನಾಯಕ ಪ್ರಧಾನ ಕಥೆಗಳಿಂದ ತುಂಬಿಹೋಗಿ ಹಿಂದೆ ಇದ್ದ ವೈವಿಧ್ಯತೆ ಕಳೆದುಕೊಳ್ಳುತ್ತಿದೆ. ಮುಂದೊಂದು ದಿನವಾದರೂ ಕನ್ನಡದಲ್ಲೂ ಇಂಥ ಒಳ್ಳೆಯ ಕಥೆಯಿರುವ ಚಿತ್ರಗಳು ಬರುತ್ತವೆ ಎನ್ನುವ ಆಶಾಭಾವನೆಯಿದೆ.
ಕೆಲವು ಲಿಂಕ್ ಗಳು
1.  2001 ಚಿತ್ರ ನಿರ್ಮಾಣದ ಬಗ್ಗೆ ಡಾಕ್ಯುಮೆಂಟರಿ – https://www.youtube.com/watch?v=F7HGwVqI_FM
2. ಬಾಹ್ಯಾಕಾಶ ನೌಕೆಯ waltz ನೃತ್ಯ - https://www.youtube.com/watch?v=q3oHmVhviO8


-ವಿಶ್ವನಾಥ್





Sunday, 23 September 2018

ಇನ್ ಬ್ರುಜ್






 ಕ್ರೈಸ್ತ ಧರ್ಮದಲ್ಲಿ ಮನುಷ್ಯ ಸತ್ತ ನಂತರ ಸ್ವರ್ಗ ಅಥವಾ ನರಕ ಪ್ರಾಪ್ತಿಗೂ ಮುನ್ನ ಪರ್ಗಟೊರಿ(Purgatory) ಎಂಬಲ್ಲಿಗೆ ಹೋಗುತ್ತಾನೆ. ಅದು ಆ ಮನುಷ್ಯನ ಆತ್ಮ ಅಲ್ಲಿಂದ ಮುಂದೆ ಹೋಗುವ ಮುನ್ನ ಶುದ್ಧಿಯಾಗಲು ಮತ್ತು ಎಲ್ಲಿಗೆ ಎಂದು ನಿರ್ಧಾರವಾಗುವ ಸ್ಥಳ. ಇಂತಹ ಒಂದು ಸ್ಥಳ ತಲುಪಿದ ಆತ್ಮ, ಆ ಸಂದರ್ಭದಲ್ಲಿ ತಾನು ಕಳೆದ ಜೀವನದ ಎಲ್ಲ ಸತ್ಕಾರ್ಯ, ಕುಕರ್ಮಗಳನ್ನು ಲೆಕ್ಕ ಹಾಕಿ ಏನು ದಕ್ಕುವುದೋ ಎಂದು ಭಯದಿಂದ ನಿಲ್ಲುತ್ತದೆ. ಆದರೆ ಜೀವಂತ ಇದ್ದಾಗಲೇ ಇಂತ ಒಂದು ನಿರ್ಧಾರಕ್ಕೆ ಕಾಯಬೇಕಾಗಿ ಬಂದರೆ? ಇಂತಹ ಒಂದು ಸಂದರ್ಭವನ್ನು ಕಲ್ಪಿಸಿ ತೆಗೆದಿರುವ ಚಿತ್ರವೇ “ಇನ್ ಬ್ರುಜ್”. ಇದರ ನಿರ್ದೇಶಕ ಮಾರ್ಟಿನ್ ಮೆಕ್ಡಾನಾಫ್ (Martin McDonaugh).

  ರೇ(Ray) ಮತ್ತು ಕೆನ್(Ken) ಎಂಬ ಇಬ್ಬರು ಲಂಡನ್ನಿನ ಸುಪಾರಿ ಹಂತಕರು ಆಗಷ್ಟೇ ಒಂದು ಕೆಲಸ ಮುಗಿಸಿ ತನ್ನ ಬಾಸ್ ಹ್ಯಾರಿ(Harry) ಹೇಳಿದಂತೆ, ಆತ ಮುಂದಿನ ನಡೆ ತಿಳಿಸುವ ತನಕ ಬೆಲ್ಜಿಯಂ ದೇಶದ ಬ್ರುಜ್ ಎಂಬ ನಗರಕ್ಕೆ ತಲೆಮರೆಸಿಕೊಂಡಿರಲು ಬರುತ್ತಾರೆ. ರೇ ಯುವಕನಾಗಿದ್ದು, ಬ್ರುಜ್ ನ ನಿಧಾನ ಗತಿ ಆತನಿಗೆ ಊರಿಗೆ ಕಾಲಿಡುತ್ತಲೇ ಕಿರಿಕಿರಿಯುಂಟು ಮಾಡುತ್ತದೆ. ಆದರೆ ಅನುಭವಿ ಕೆನ್ ಮಾತ್ರ ಅಲ್ಲಿ ನೋಡಲು ಸಾಕಷ್ಟು ಹಳೆಯ ಐತಿಹಾಸಿಕ ಸ್ಥಳಗಳಿದ್ದು ಅವನ್ನು ನೋಡುತ್ತಾ ಮುಂದಿನ ಸೂಚನೆ ಬರುವವರೆಗೂ ಕಾಲ ಕಳೆಯಬಹುದು ಎಂದು ಹೇಳುತ್ತಾನೆ. ರೇಗೆ ಲಂಡನ್ನಿನ ಆ ಗಿಜಿಗುಡುವ, ಬಿಡುವಿಲ್ಲದ ಜನಜಂಗುಳಿ, ಸದಾ ಎಲ್ಲಾದರೂ ನಡೆಯುತ್ತಿರುವ ಪಾರ್ಟಿಗಳು, ಪಬ್ ಗಳನ್ನು ಬಿಟ್ಟಿರಲು ಇಷ್ಟವಿಲ್ಲ. ಇದರ ನಡುವೆ ಅವನ ಬಾಸ್ ಹ್ಯಾರಿಯ ಕರೆಗೂ ಕಾಯಬೇಕು. ಏಕೆಂದರೆ ಆತ ಕರೆ ಮಾಡಿದಾಗ ಯಾರೂ ಉತ್ತರಿಸದಿದ್ದರೆ ಹ್ಯಾರಿಗೆ ಕೋಪ ಬಂದು ಏನಾದರೂ ಮಾಡಬಹುದು ಎಂಬ ಭಯವೂ ಇತ್ತು. ಎರಡು ವಾರಗಳ ಕಾಲ ಈ ನಗರದಲ್ಲಿ ಕೆನ್ ನಂತಹ ಬೋರಿಂಗ್ ಮನುಷ್ಯನ ಜೊತೆ ಒಂದು ಸಾಧಾರಣ ಹೋಟೆಲ್ಲಿನಲ್ಲಿ ಕಾಲ ಕಳೆಯಬೇಕಲ್ಲ ಎಂದು ರೇ ದೂರುತ್ತಿದ್ದಾಗ ಕೆನ್ ಇದೆಲ್ಲ ರೇ ಕೆಲಸದಲ್ಲಿ ಮಾಡಿದ ಎಡವಟ್ಟಿನ ಪರಿಣಾಮ ಎಂದು ನೆನಪಿಸುತ್ತಾನೆ. ಆದರೆ ಕೆನ್, ರೇ ಈ ನಗರವನ್ನು ಒಮ್ಮೆ ನಿಧಾನಿಸಿ ನೋಡಿದರೆ ಅದರಲ್ಲಿನ ಸೌಂದರ್ಯವನ್ನು ಆಸ್ವಾದಿಸಬಹುದು ಎಂದು ಹೇಳುತ್ತಾನೆ. ಹೀಗೆ ಊರನ್ನು ಸುತ್ತಿ ಸಂಜೆ ಪಬ್ ಗೆ ಹೋಗಿ ಕುಡಿದು ಅಲ್ಲಿಂದ ಹೊಟೆಲ್ಲಿಗೆ ಬರುತ್ತಿದ್ದಾಗ ಯಾವುದೊ ಸಿನೆಮಾ ಚಿತ್ರೀಕರಣ ನಡೆಯುತ್ತಿರುತ್ತದೆ. ಅದನ್ನು ನೋಡುತ್ತಲೇ ರೇ ಕಣ್ಣರಳಿಸಿ ಕೆನ್ ನನ್ನು ಅತ್ತ ಕರೆದೊಯ್ಯುತ್ತಾನೆ. ಅಲ್ಲಿ ಒಬ್ಬ ಕುಳ್ಳನನ್ನು ಕುರಿತು ಏನೋ ಚಿತ್ರೀಕರಿಸುತ್ತಿರುತ್ತಾರೆ. ಆದರೆ ರೇ ಇದರ ನಡುವೆ ಒಂದು ಸುಂದರ ಹುಡುಗಿಯನ್ನು ನೋಡಿ ಆಕೆಯ ಬಳಿ ಹೋಗುವ ಮನಸುಮಾಡಿದಾಗ, ಕೆನ್ ಹೊತ್ತಾಯಿತು ಹೋಗುವ ಎಂದು ಕರೆಯುತ್ತಾನೆ. ಅದಕ್ಕೊಪ್ಪದ ರೇ ತಾನು ತಡವಾಗಿ ಬರುವುದಾಗಿ ಕೆನ್ ಗೆ ಹೊಟೆಲ್ಲಿಗೆ ಮರಳಲು ಹೇಳುತ್ತಾನೆ. ರೇ ನಿಧಾನವಾಗಿ ಚಿತ್ರೀಕರಣಕ್ಕೆ ಕಾವಲು ನಿಂತವರನ್ನು ತಪ್ಪಿಸಿ ಒಳ ಬಂದು ಆ ಹುಡುಗಿಯ ಬಳಿ ಮಾತಿಗೆ ನಿಲ್ಲುತ್ತಾನೆ. ತನ್ನನ್ನು ತಾನು ಪರಿಚಯಿಸಿಕೊಂಡು ಆಕೆಯ ಹೆಸರು ಕ್ಲೊಇ(Chloe) ಎಂದು ತಿಳಿದುಕೊಳ್ಳುತ್ತಾನೆ. ಹಾಗೇ ಮಾತನಾಡುತ್ತ ಮುಂದಿನ ರಾತ್ರಿ ತನ್ನೊಡನೆ ಊಟಕ್ಕೆ ಬರಲು ಆಹ್ವಾನಿಸುತ್ತಾನೆ. ಒಡನೆ ಒಪ್ಪದಿದ್ದರೂ ಆಕೆ ತನ್ನ ಫೋನ್ ನಂಬರ್ ಕೊಟ್ಟು ಹೋಗುತ್ತಾಳೆ.

  ಅತ್ತ ಹೊಟೆಲ್ಲಿಗೆ ಮರಳಿದ ಕೆನ್ ಗೆ ಹೊಟೆಲ್ ಒಡತಿ ಒಂದು ರೀತಿ ಸಿಟ್ಟಿನ ಮುಖಮಾಡಿಕೊಂಡು ಆತನಿಗಾಗಿ ಹ್ಯಾರಿಯಿಂದ ಬಂದ ಸಂದೇಶವನ್ನು ಕೊಡುತ್ತಾಳೆ. ಆ ಸಂದೇಶವನ್ನು ಓದಿದ ಕೆನ್ ಗೆ ಆಕೆ ಏಕೆ ಹಾಗೆ ಸಿಟ್ಟಿನ ಮುಖಮಾಡಿಕೊಂಡಿದ್ದಳು ಎಂದು ಅರ್ಥವಾಗುತ್ತದೆ. ಹ್ಯಾರಿ ತಾನು ಕರೆಮಾಡಿದಾಗ ಯಾರೂ ಇರದದ್ದಕ್ಕೆ ಬಯ್ದಿರುತ್ತಾನೆ. ಎರಡನೆಯದಾಗಿ ಆ ಹೊಟೆಲ್ಲಿನಲ್ಲಿ ಸಂದೇಶ ಬಿಡಲು ವಾಯ್ಸ್ ಮೇಲ್ ಇಲ್ಲವೆಂದೂ ತನ್ನ ಸಂದೇಶವನ್ನು ಓರ್ವ ರಿಸೆಪ್ಶನಿಸ್ಟ್ ಬಳಿ ಬಿಡಬೇಕಾಗಿ ಬಂದದ್ದಕ್ಕೆ ಸಿಟ್ಟುಮಾಡಿಕೊಂಡಿರುತ್ತಾನೆ. ಮೂರನೆಯದಾಗಿ, ಮರುದಿನ ತಾನು ಕರೆಮಾಡುವುದಾಗಿಯೂ, ಕರೆ ಸ್ವೀಕರಿಸಲು ಯಾರೂ ಇರದಿದ್ದರೆ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಎಚ್ಚರಿಸಿ ಸಂದೇಶದಲ್ಲಿ ತಿಳಿಸಿರುತ್ತಾನೆ. ಆತ ಸಂದೇಶದಲ್ಲಿ ಬಳಸಿದ ಒರಟು ಭಾಷೆಯಲ್ಲೇ ಹೊಟೆಲ್ ಒಡತಿ ಮರೀ(Marie) ಬರೆದುಕೊಂಡು ಕೆನ್ ಗೆ ಕೊಟ್ಟಿರುತ್ತಾಳೆ. ಅದನ್ನು ಓದಿದ ಕೆನ್ ಗೆ ಆಕೆ ಹ್ಯಾರಿಯ ಆ ಭಾಷೆ ಕೇಳಿ ಸಿಟ್ಟುಮಾಡಿಕೊಂಡಿರುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ. ಆ ಸಂದೇಶ ಅಡಿಯಲ್ಲಿ ಮರೀ ತಾನು ಹೊಟೆಲ್ ರಿಸೆಪ್ಶನಿಸ್ಟ್ ಅಲ್ಲವೆಂದೂ, ತನ್ನ ಪತಿಯೊಡನೆ ಈ ಹೊಟೆಲ್ಲಿನ ಸಹ ಒಡತಿಯೆಂದು ಬರೆದಿರುತ್ತಾಳೆ. ತನ್ನ ಕೋಣೆಗೆ ಕೆನ್ ಮರಳಿ ನಿದ್ರಿಸುತ್ತಾನೆ. ಆದರೆ ತಡವಾಗಿ ಬಂದ ರೇ ಸುಮ್ಮನೆ ಬಂದು ಮಲಗುವುದು ಬಿಟ್ಟು ಹಲ್ಲು ಉಜ್ಜುತ್ತ ತಾನು ಮರುದಿನ ಕ್ಲೊಇ ಜೊತೆ ಹೊರಹೋಗುವುದಾಗಿ ಕತೆ ಹೇಳುತ್ತಾ ಕೆನ್ ನಿದ್ದೆ ಹಾಳು ಮಾಡುತ್ತಾನೆ.

  ಮರುದಿನ ಬೆಳಗಿನ ತಿಂಡಿಗೆ ಕೂತಾಗ, ಕೆನ್ ಮರೀಯನ್ನು ಕರೆದು ಹ್ಯಾರಿಯ ಒರಟು ಮಾತಿಗಾಗಿ ಕ್ಷಮೆ ಕೇಳುತ್ತಾನೆ. ರೇ ಕೆಳಗಿಳಿದು ಬಂದಮೇಲೆ ಕೆನ್ ಆತನಿಗೆ ಹಿಂದಿನ ದಿನ ಹ್ಯಾರಿಯಿಂದ ಬಂದ ಸಂದೇಶವನ್ನು ಓದಿ ಹೇಳುತ್ತಾನೆ. ಅದಕ್ಕೆ ರೇ ಆತನ ಕರೆ ಸ್ವೀಕರಿಸಲು ಯಾರಾದರು ಒಬ್ಬರಿದ್ದರೆ ಸಾಲದೇ, ತಾನು ರಾತ್ರಿ ಕ್ಲೊಇ ಜೊತೆ ಊಟಕ್ಕೆ ಹೋಗುವುದಾಗಿ ಹಿಂದಿನ ರಾತ್ರಿಯೇ ಹೇಳಿದ್ದಾಗಿ ಕೆನ್ ಗೆ ಹೇಳುತ್ತಾನೆ. ಅದಕ್ಕೆ ಕೆನ್ ರೇನನ್ನು ಸಂಜೆಗೆ ಬಿಡಬೇಕಾದರೆ ತನ್ನೊಡನೆ ಊರು ಸುತ್ತಲು ಕರೆದಲ್ಲಿಗೆ ಬರಬೇಕೆಂದು ಷರತ್ತು ಹಾಕುತ್ತಾನೆ. ಅದಕ್ಕೆ ಒಪ್ಪಿ ರೇ ಕೆನ್ ಜೊತೆ ಬ್ರುಜ್ ನ ಪ್ರವಾಸಿ ಸ್ಥಳಗಳಿಗೆ ಹೋಗುತ್ತಾರೆ. ಬೆಸಿಲಿಕಾ ಆಫ್ ದಿ ಹೋಲಿ ಬ್ಲಡ್ ಗೆ ಹೋದಾಗ ಕೆನ್ ರೇಗೆ ಅಲ್ಲಿನ ವಿಶೇಷತೆ ವಿವರಿಸುತ್ತಾನೆ. ಹೋಲಿ ಕ್ರುಸೇಡ್ ನ ಸಮಯದಲ್ಲಿ ಫ್ಲೆಮಿಶ್ ನೈಟ್ ಒಬ್ಬ ಜೆರುಸಲೇಮ್ ನಿಂದ ಜೀಸಸ್ ನ ರಕ್ತದ ಕೆಲ ಹನಿಗಳನ್ನು ತಂದಿದ್ದು ಆ ಹನಿಗಳನ್ನು ಅಲ್ಲಿ ಒಂದು ಬಟ್ಟಲಲ್ಲಿ ಇಟ್ಟಿರುವುದಾಗಿ ಹೇಳುತ್ತಾನೆ. ಜಗತ್ತಿನಲ್ಲಿ ಕೊಲಾಹಲವಾದಾಗಲೆಲ್ಲ ಆ ಒಣಗಿದ ರಕ್ತದ ಹನಿಗಳು ಮತ್ತೆ ದ್ರವ್ಯ ಸ್ಥಿತಿಗೆ ತಲುಪುತ್ತವೆ ಎಂಬ ಪ್ರತೀತಿಯಿದೆ ಎಂದು ಹೇಳುತ್ತಾನೆ. ಆದರೆ ಇದರ ಬಗ್ಗೆ ಆಸಕ್ತಿ ತೋರದ ರೇ ಬಗ್ಗೆ ಕೆನ್ ಸಿಟ್ಟು ಮಾಡಿಕೊಳ್ಳುತ್ತಾನೆ. ರೇ ಹೊರಬಂದು ಪಬ್ಲಿಕ್ ಬೆಂಚ್ ಮೇಲೆ ಕೂತು ತಾನು ಬ್ರುಜ್ ಗೆ ಬರಲು ಕಾರಣವಾದ ಆ ಕೊಲೆಯ ಬಗ್ಗೆ ಯೋಚಿಸುತ್ತ ಕೂರುತ್ತಾನೆ. ಚರ್ಚ್ ನಲ್ಲಿ ಪಾದ್ರಿಯೊಬ್ಬರನ್ನು ಕೊಲ್ಲಲು ಹೋದಾಗ ಆತನನ್ನು ಹಿಂಬಾಲಿಸುತ್ತಾ ಗುಂಡು ಹಾರಿಸಿದಾಗ ಒಂದು ಗುಂಡು ಅಲ್ಲೇ ರೇ ಕಣ್ಣಿಗೆ ಕಾಣದೆ ನಿಂತಿದ್ದ ಚಿಕ್ಕ ಹುಡುಗನ ತಲೆಗೆ ತಗುಲಿ ಆ ಹುಡುಗ ಪಾದ್ರಿಯ ಜೊತೆ ಸಾಯುತ್ತಾನೆ. ಇದನ್ನು ನೋಡಿ ನಡೆದದ್ದನ್ನು ನಂಬಲಾಗದೆ ಅಲ್ಲೇ ನಿಂತಿದ್ದ ರೇನನ್ನು ಕೆನ್ ಪೊಲೀಸರು ಬರುವ ಮುನ್ನ ಅಲ್ಲಿಂದ ಕರೆದೊಯ್ದಿರುತ್ತಾನೆ. ಅಂದಿನಿಂದ ಆ ಹುಡುಗನ ಸಾವಿಗೆ ತಾನು ಕಾರಣನಾದೆನಲ್ಲ ಎಂದು ಪಾಪಪ್ರಜ್ಞೆಯಿಂದ ಕೊರಗುತ್ತಿರುತ್ತಾನೆ. ಕೆನ್ ಬಂದು ಆರ್ಟ್ ಮ್ಯೂಸಿಯಂಗೆ ಕರೆದೊಯ್ದು ಅಲ್ಲಿ ಬೈಬಲ್ ಕುರಿತಾದ ಚಿತ್ರಗಳನ್ನು ರೇಗೆ ತೋರಿಸುತ್ತಾ ಹೋಗುತ್ತಾನೆ. ಒಂದು ಚಿತ್ರದ ಮುಂದೆ ನಿಂತು ಅದು ಯಾವುದರ ಬಗ್ಗೆ ಬರೆಯಾಲಾಗಿದೆ ಎಂದು ರೇ ಕೇಳಿದಾಗ ಕೆನ್ ಅದು ಜಡ್ಜ್ ಮೆಂಟ್ ದಿನದ ಕುರಿತಾಗಿದ್ದು, ಮನುಷ್ಯನ ಭೂಮಿಯ ಕಡೆ ದಿನ ಕಳೆದ ಬಳಿಕ ಅವನು ಹೋಗುವ ಸ್ಥಳಗಳ ಬಗ್ಗೆ ಚಿತ್ರಿಸಲಾಗಿದೆ ಎಂದು ವಿವರಿಸುತ್ತಾನೆ. ಇದನ್ನೆಲ್ಲಾ ನೀನು ನಂಬುತ್ತಿಯಾ ಎಂದು ರೇ ಕೇಳಿದಾಗ ಕೆನ್ ತನಗೆ ಗೊತ್ತಿಲ್ಲವೆಂದೂ, ಚಿಕ್ಕವರಿದ್ದಾಗಿನಿಂದಲೂ ಒಳ್ಳೆಯದು ಕೆಟ್ಟದ್ದರ ಬಗ್ಗೆ ಕೊಟ್ಟ ಕಲ್ಪನೆಯೇ ಈಗಲೂ ಇದೆ ಎಂದು ಹೇಳುತ್ತಾನೆ. ಅದರ ಆಧಾರದ ಮೇಲೆ ತಾನು ಒಳ್ಳೆಯ ಜೀವನ ನಡೆಸಲು ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಾನೆ. ಆದರೂ ತಾನು ಮಾಡುವ ಕೆಲಸದ ಬಗ್ಗೆ ಮರೆತಿಲ್ಲವೆಂದೂ, ಕೆಲಸದುದ್ದಕ್ಕೂ ಕೆಟ್ಟ ಜನಗಳನ್ನೇ ಕೊಲ್ಲುತ್ತಾ ಬಂದಿದ್ದರೂ ಒಮ್ಮೆ ಯಾರನ್ನೋ ಕೊಲ್ಲಲು ಹೋದಾಗ ಆತನನ್ನು ಉಳಿಸಲು ಬಂದ ಆತನ ಸಹೋದರನನ್ನೂ ಕೊಲ್ಲಬೇಕಾಗಿ ಬಂದದ್ದರ ಬಗ್ಗೆ ನೆನೆದು ತನ್ನಿಂದಾದ ಪಾಪದ ಬಗ್ಗೆ ರೇಗೆ ಹೇಳುತ್ತಾನೆ. ಇದನ್ನು ಕೇಳಿ ರೇ ತಾನು ಆ ಪುಟ್ಟ ಹುಡುಗನನ್ನು ಕೊಂದಿದ್ದರ ಬಗ್ಗೆ ಮತ್ತೆ ನೆನೆದು ತಾನೊಬ್ಬ ಆತನನ್ನು ಕೊಲ್ಲದಿದ್ದರೆ ಆ ಹುಡುಗ ಏನಾಗುತ್ತಿದ್ದನೋ ಎಂದು ಹೇಳುತ್ತಾನೆ. ಈಗ ಆ ಪಾಪವನ್ನು ತಾನು ಬದುಕಿರುವವರೆಗೂ ಹೊರಬೇಕು ಎಂದೂ ಅದನ್ನು ಕಳೆದುಕೊಳ್ಳಲು ಸಾವೊಂದೇ ದಾರಿ ಎಂದು ಹೇಳುತ್ತಾನೆ. ಅದಕ್ಕೆ ಕೆನ್ ಅವನನ್ನು ತಡೆದು ಅಂತಹ ಯೋಚನೆ ಮಾಡುವುದರಿಂದ ಪ್ರಯೋಜನವಿಲ್ಲವೆಂದು ಸಮಾಧಾನಪಡಿಸುತ್ತಾನೆ.

  ಹೊಟೆಲ್ಲಿಗೆ ಮರಳಿದ ನಂತರ ರೇ ಸಂಜೆಯ ಡಿನ್ನರ್ ಗೆ ತಯಾರಾಗುತ್ತಾನೆ. ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿಕೊಳ್ಳುತ್ತಿದ್ದಾಗ, ಮುಖದಲ್ಲಿ ಪಾಪಪ್ರಜ್ಞೆಯ ಸಣ್ಣ ಎಳೆ ಕಾಣಿಸಿಕೊಂಡು ತಾನು ಅನುಭವಿಸುತ್ತಿರುವ ಈ ಸುಖಕ್ಕೆ ತಾನು ಯೋಗ್ಯನೇ ಎಂದು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ. ನಂತರ ಡಿನ್ನರ್ ಗೆ ತೆರಳುತ್ತಾನೆ. ಹೊಟೆಲ್ಲಿನಲ್ಲಿ ಕ್ಲೊಇ ಜೊತೆ ಮಾತನಾಡುತ್ತ ಆಕೆ ಬಿಡುತ್ತಿದ್ದ ಸಿಗರೆಟ್ ಹೊಗೆಯ ಕಾರಣ ಪಕ್ಕದ ಟೇಬಲ್ಲಿನವನ ಜೊತೆ ಜಗಳವಾಗಿ ಅವನ ಮುಖಕ್ಕೆ ಹೊಡೆದು ರೇ ಕ್ಲೊಇ ಕರೆದುಕೊಂಡು ಅಲ್ಲಿಂದ ಹೊರನಡೆಯುತ್ತಾನೆ.

  ಅತ್ತ ಹ್ಯಾರಿಯ ಕರೆಗಾಗಿ ಕೆನ್ ಕಾಯುತ್ತ ಕುಳಿತಿರುತ್ತಾನೆ. ಹ್ಯಾರಿ ಕರೆ ಮಾಡಿ ರೇ ಅಲ್ಲಿದ್ದರೆ ಒಂದರ್ಧ ಘಂಟೆ ಹೊರಕಳಿಸಲು ಕೆನ್ ಗೆ ಹೇಳುತ್ತಾನೆ. ರೇ ಅಲ್ಲಿನ ವಾತಾವರಣ ಇಷ್ಟಪಟ್ಟನೆ ಎಂದು ಕೇಳಿದಾಗ, ಕೆನ್ ತನಗೆ ಅನಿಸಿದ್ದನ್ನು ರೇ ಹೇಳಿದ್ದು ಎಂದು “ನನಗೆ ಗೊತ್ತು ನಾನು ಎಚ್ಚರವಿದ್ದೇನೆ ಎಂದು. ಆದರೂ ಎಲ್ಲಾ ಕನಸಿನಂತೆ ಕಾಣುತ್ತಿದೆ” ಎಂದು ಹ್ಯಾರಿಗೆ ಹೇಳುತ್ತಾನೆ. ನಂತರ ಹ್ಯಾರಿ ಬ್ರುಜ್ ನಲ್ಲಿ ಒಂದು ಕೆಲಸವಿದ್ದು, ತಾನು ಹೇಳುವ ಒಂದು ಜಾಗಕ್ಕೆ ಹೋಗಿ ಗನ್ ಪಡೆದುಕೊಳ್ಳಲು ಹೇಳುತ್ತಾನೆ. ಯಾವ ಕೆಲಸ ಎಂದು ಕೆನ್ ಕೇಳಿದಾಗ ಸಿಟ್ಟಾಗುವ ಹ್ಯಾರಿ ರೇ ಒಳ್ಳೆ ಹುಡುಗನಾಗಿದ್ದರೂ ಚರ್ಚ್ ನಲ್ಲಿ ಆ ಚಿಕ್ಕ ಹುಡುಗನನ್ನು ಕೊಂದದ್ದು ಸರಿಯಲ್ಲವೆಂದು ಅದರ ಜಾಡು ಹತ್ತಿ ಪೊಲೀಸರು ತಮ್ಮ ಬಳಿ ಬಾರದಂತೆ ಮಾಡಬೇಕಾದರೆ ರೇನನ್ನು ಕೊಲ್ಲಲೇಬೇಕು ಎಂದು ಹ್ಯಾರಿ ಹೇಳುತ್ತಾನೆ. ಹಾಗಾಗಿಯೇ ರೇ ಸಾಯುವ ಮುನ್ನ ಸಂತೋಷಪಡಲಿ ಎಂದು ಬ್ರುಜ್ ಗೆ ಕಳಿಸಿದ್ದಾಗಿ ಹ್ಯಾರಿ ಹೇಳುತ್ತಾನೆ. ಇದನ್ನು ಕೇಳಿದ ಕೆನ್ ಅವಾಕ್ಕಾಗಿ ನಿಲ್ಲುತ್ತಾನೆ. ಕೆಲಸ ಮುಗಿದ ಮೇಲೆ ಮಧ್ಯಾಹ್ನ ತನಗೆ ಕರೆ ಮಾಡುವಂತೆ ಹ್ಯಾರಿ ಹೇಳುತ್ತಾನೆ. ಕರೆ ಮುಗಿಸುವ ಮುನ್ನ ರೇ ಬ್ರುಜ್ ಬಗ್ಗೆ ಹೇಳಿದ್ದನ್ನು ಮತ್ತೆ ಹೇಳುವಂತೆ ಕೆನ್ ಗೆ ಹೇಳುತ್ತಾನೆ. ಅದಕ್ಕೆ ಕೆನ್, “ನನಗೆ ಗೊತ್ತು ನಾನು ಎಚ್ಚರವಿದ್ದೇನೆ ಎಂದು. ಆದರೂ ಎಲ್ಲಾ ಕನಸಿನಂತೆ ಕಾಣುತ್ತಿದೆ” ಎಂದು ಉತ್ತರಿಸುತ್ತಾನೆ. ಆದರೆ ಈ ಬಾರಿ ಅದನ್ನು ಹೇಳಿದಾಗ ಅದರ ಅರ್ಥ ಬೇರೆಯದೇ ಆಗಿರುತ್ತದೆ. ಏನೂ ಮಾಡಲು ತೋಚದೆ ಕೆನ್ ಪಬ್ ಗೆ ಬಂದು ಕೂತು ಕುಡಿಯಲು ತೊಡಗುತ್ತಾನೆ. ರೇ ಕ್ಲೊಇ ಜೊತೆ ಆಕೆಯ ಮನೆಗೆ ಹೋದಾಗ ಅಲ್ಲಿಗೆ ಹಠಾತ್ತನೆ ಬರುವ ಆಕೆಯ ಪಾರ್ಟ್ನರ್ ರೇ ನನ್ನು ಕ್ಲೊಇ ಜೊತೆ ನೋಡಿ ಗನ್ ತೋರಿಸಿ ಹೆದರಿಸುತ್ತಾನೆ. ಆಗ ಕ್ಲೊಇ ರೇಗೆ ಹೆದರದಂತೆ ಧೈರ್ಯ ಹೇಳಿ ತಾವಿಬ್ಬರೂ ಬ್ರುಜ್ ಗೆ ಬರುವ ಪ್ರವಾಸಿಗರನ್ನು ಹೀಗೇ ದೋಚುವುದಾಗಿ ಹೇಳುತ್ತಾಳೆ. ಆದರೆ ರೇಗೆ ಹಾಗೇನೂ ಮಾಡುವುದಿಲ್ಲ ಎಂದು ಹೇಳಿ ತನ್ನ ಪಾರ್ಟ್ನರ್ ಎರಿಕ್ ಗೆ ಗನ್ ಕೆಳಗಿಳಿಸಲು ಹೇಳುತ್ತಾಳೆ. ಆದರೆ ಆಕೆಯ ಮಾತು ಕೇಳದೆ ರೇಗೆ ಗನ್ ತೋರಿಸಿದಾಗ ರೇ ಅವನ ಗನ್ ಕಸಿದುಕೊಂಡು ಅವನ ಕಣ್ಣಿಗೆ ಹೊಡೆಯುತ್ತಾನೆ. ಗನ್ನಿನಲ್ಲಿ ನಕಲಿ ಗುಂಡು(blank) ಇದ್ದ ಕಾರಣ ಎರಿಕ್ ಕಣ್ಣಿಗೆ ಮಾತ್ರ ಗಾಯವಾಗಿ ಅಲ್ಲೇ ಒದ್ದಾಡುತ್ತಾ ಬೀಳುತ್ತಾನೆ. ಕ್ಲೊಇ ಅವನ ಒದ್ದಾಟ ನೋಡಲಾರದೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವುದಾಗಿ ರೇಗೆ ಹೇಳಿ ಅಲ್ಲಿಂದ ಹೋಗುತ್ತಾಳೆ. ನಡೆದ್ದಿದ್ದರ ಬಗ್ಗೆ ಬೇಸರ ಮಾಡಿಕೊಳ್ಳದಂತೆಯೂ ತನಗೆ ಮತ್ತೆ ಕರೆ ಮಾಡುವಂತೆ ರೇಗೆ ಹೇಳಿ ಹೋಗುತ್ತಾಳೆ. ರೇ ಅವರಿಬ್ಬರೂ ಹೋದ ನಂತರ ಕ್ಲೊಇ ಬಚ್ಚಿಟ್ಟಿದ್ದ ಹೆರೊಯಿನ್, ಕೊಕೇನ್ ಮತ್ತು ಅಸಲಿ ಗುಂಡುಗಳನ್ನು ತೆಗೆದುಕೊಂಡು ಅಲ್ಲಿಂದ ಕೆನ್ ಇದ್ದ ಪಬ್ ಗೆ ಬರುತ್ತಾನೆ. ರೇ ಬಳಿ ಕೊಕೇನ್ ಇದ್ದದ್ದನ್ನು ಕಂಡು ಕೆನ್ ತನಗೂ ಸ್ವಲ್ಪ ಕೊಡುವಂತೆ ಕೇಳಿ ಅದನ್ನು ಸೇವಿಸಿಬರಲು ಹೋಗುತ್ತಾನೆ. ಅಷ್ಟರಲ್ಲಿ ರೇ ಅಲ್ಲೇ ಕೂತಿದ್ದ ಚಿತ್ರೀಕರಣದ ವೇಳೆ ಕಂಡ ಆ ಕುಳ್ಳನನ್ನು ಕಂಡು ಅವನಿಗೂ ತನ್ನ ಬಳಿ ಇರುವ ಮಾದಕ ವಸ್ತುವಿನ ಬಗ್ಗೆ ತಿಳಿಸಿ ಆತನ ರೂಮಿಗೆ ಎಲ್ಲರೂ ಹೋಗುತ್ತಾರೆ. ಮತ್ತೆ ರೇ, ಕೆನ್ ಇಬ್ಬರೂ ಅಲ್ಲಿ ಜಗಳ ಮಾಡಿಕೊಂಡು ಬಂದು ತಮ್ಮ ರೂಮು ಸೇರುತ್ತಾರೆ.

  ಮಾರನೆ ದಿನ ಬೆಳಗ್ಗೆಯೇ ಎದ್ದು ಕೆನ್ ಹ್ಯಾರಿ ಹೇಳಿದ ಜಾಗಕ್ಕೆ ಗನ್ ತರಲು ಹೋಗುತ್ತಾನೆ. ಇತ್ತ ರೇ ಮತ್ತೆ ಸತ್ತ ಆ ಹುಡುಗನನ್ನು ನೆನೆದು ಹಾಸಿಗೆಯಲ್ಲೇ ಅಳುತ್ತ ಮಲಗಿರುತ್ತಾನೆ. ಯೂರಿ ಎಂಬ ವ್ಯಕ್ತಿ ಕೆನ್ ಗೆ ಗನ್ ಕೊಟ್ಟು ಅಲ್ಲಿ ಪಾರ್ಕ್ ನಲ್ಲಿ ಯಾವುದಾದರೂ ಸಂದಿಗಳೊಂದರಲ್ಲಿ ರೇನನ್ನು ಕೊಂದರೆ ಯಾರಿಗೂ ತಿಳಿಯುವುದಿಲ್ಲ ಎಂದು ಹೇಳುತ್ತಾನೆ. ಸರಿ ಎಂದು ಹೇಳಿ ಕೆನ್ ಮತ್ತೆ ಹೊಟೆಲ್ಲಿಗೆ ಬರುತ್ತಾನೆ. ಹೊಟೆಲ್ ಒಡತಿ ಕೆನ್ ನನ್ನು ಕರೆದು ಆತನ ಗೆಳೆಯ ಹೊರಗೆ ಪಾರ್ಕ್ ಕಡೆಗೆ ಹೋದನೆಂದೂ ಯಾಕೋ ವಿಚಲಿತಗೊಂಡಂತಿದ್ದ ಎಂದು ಹೇಳುತ್ತಾಳೆ. ವಿವರಣೆ ಕೇಳಿದಾಗ ರೇ ತನ್ನ ಹುಟ್ಟಲಿರುವ ಮಗುವಿನ ಬಗ್ಗೆ ಕೇಳಿ ತನ್ನ ಬಳಿ ಇದ್ದ 200ಯುರೊಗಳನ್ನು ಮಗುವಿಗಾಗಿ ಕೊಟ್ಟು ಹೊರಟು ಹೋದನೆಂದು ಹೇಳುತ್ತಾಳೆ. ತನಗೆ ಆತ ಕೊಟ್ಟ ದುಡ್ಡನ್ನು ಕೆನ್ ಗೆ ಕೊಟ್ಟು ರೇಗೆ ಅದನ್ನು ಮರಳಿಸುವಂತೆ ಕೇಳಿಕೊಳ್ಳುತ್ತಾಳೆ. ಕೆನ್ ಏನೂ ಮಾತನಾಡದೆ ದುಡ್ಡನ್ನು ಪಡೆದು ರೇ ಹುಡುಕಿ ಪಾರ್ಕ್ ಕಡೆಗೆ ಹೋಗುತ್ತಾನೆ. ಅಲ್ಲಿ ಮರೆಯಲ್ಲಿ ನಿಂತು ರೇ ಒಬ್ಬನೇ ಇರುವುದನ್ನು ಖಚಿತಪಡಿಸಿಕೊಂಡು ಗನ್ ಹೊರತೆಗೆದು ಮನದಲ್ಲೇ ತನ್ನನ್ನು ಕ್ಷಮಿಸುವಂತೆ ರೇನನ್ನು ಕೇಳಿಕೊಂಡು ನಿಧಾನವಾಗಿ ರೇನತ್ತ ಹೆಜ್ಜೆ ಇಡುತ್ತ ನಡೆಯುತ್ತಾನೆ. ನಡೆಯುತ್ತಾ ನಡೆಯುತ್ತಾ ರೇ ಹತ್ತಿರವಾಗುತ್ತಿದ್ದಂತೆ ಮೆಲ್ಲಗೆ ಕೈ ಮುಂದೆ ಮಾಡಿ ರೇ ತಲೆಗೆ ಗುರಿಯಿಡುತ್ತಾನೆ. ಅಷ್ಟರಲ್ಲಿ ರೇ ತಾನೇ ಒಂದು ಗನ್ ಹೊರತೆಗೆದು ತನ್ನ ತಲೆಗೆ ಇರಿಸಿಕೊಂಡು ಗುಂಡು ಹಾರಿಸಿಕೊಳ್ಳುವುದರಲ್ಲಿದ್ದಾಗ ಕೆನ್ ಕೂಗಿ ಆತನನ್ನು ತಡೆಯುತ್ತಾನೆ. ಗಾಬರಿಗೊಂಡ ರೇ ಎದ್ದು ಹಿಂತಿರುಗಿ ನೋಡಿದಾಗ ಕೆನ್ ಕೈಯಲ್ಲಿ ಗನ್ ಹಿಡಿದು ನಿಂತಿರುತ್ತಾನೆ. ಕೆನ್ ಇಲ್ಲೇನು ಮಾಡುತ್ತಿದ್ದೀಯೆಂದು ರೇ ಕೇಳಿದಾಗ  ತಾನು ಅಲ್ಲೇ ಮರೆಯಲ್ಲಿ ನಿಂತಿದ್ದಾಗಿಯೂ, ರೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನೋಡಿ ತಡೆಯಲು ಬಂದೆನೆಂದು ಹೇಳುತ್ತಾನೆ. ಆದರೆ ಕೆನ್ ಕೈಯಲ್ಲಿ ಗನ್ ಇದ್ದದ್ದು ನೋಡಿ ಇದೇಕೆ ನಿನ್ನ ಕೈಯಲ್ಲಿ ಗನ್ ಇದೆಯೆಂದು ಪ್ರಶ್ನೆ ಕೇಳಿದರೂ ಥಟ್ಟನೆ ಎಲ್ಲ ಅರ್ಥವಾದಂತೆ ಕೆನ್ ಹೀಗೇಕೆ ಮಾಡಿದೆಯೆಂದು ಕೇಳುತ್ತಾನೆ. ಸುಮ್ಮನೆ ಬಿಟ್ಟಿದ್ದರೆ ತಾನೇ ಸಾಯುತ್ತಿದ್ದೆನಲ್ಲ ಎಂದು ಹೇಳುತ್ತಾನೆ. ಅದಕ್ಕೆ ಕೆನ್ ಆತನನ್ನು ಸಾಯಲು ಬಿಡುವುದಿಲ್ಲ ಎಂದು ಹೇಳಿದಾಗ ರೇ ಆತ್ಮಹತ್ಯೆ ಮಾಡಿಕೊಳ್ಳಲು ಬಿಡದೆ ಕೊಲ್ಲಲು ಬಂದದ್ದು ಎಂತಹ ನ್ಯಾಯ ಎಂದು ಪ್ರಶ್ನಿಸುತ್ತಾನೆ. ನಿಧಾನವಾಗಿ ವಿವರಿಸುವುದಾಗಿ ಆತನನ್ನು ಕೂರಿಸಿಕೊಂಡು ಕೆನ್ ರೇಗೆ ಎಲ್ಲ ಹೇಳುತ್ತಾನೆ. ತಾನು ರೇನನ್ನು ಕೊಲ್ಲದೆ ದುಡ್ಡು ಕೊಟ್ಟು ಎಲ್ಲಿಗಾದರೂ ದೂರ ಕಳಿಸುವುದಾಗಿ ಹೇಳುತ್ತಾನೆ. ಅದಕ್ಕೆ ರೇ ಮತ್ತೆ ಹುಡುಗನನ್ನು ನೆನೆದು ಅದೊಂದು ಕೆಲಸ ಮಾಡದೇ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಅಳತೊಡಗುತ್ತಾನೆ. ತನಗೆ ಸಾಯುವುದು ಬಿಟ್ಟು ಬೇರೆ ಮಾರ್ಗವಿಲ್ಲವೆಂದು ರೇ ಹೇಳಿದಾಗ, ಕೆನ್ ಆತ ಸತ್ತು ಏನೂ ಪ್ರಯೋಜನವಿಲ್ಲವೆಂದೂ, ಇಲ್ಲೇ ಇದ್ದು ಈ ಕೆಲಸ ಬಿಟ್ಟು ಏನಾದರೂ ಒಳ್ಳೆಯದನ್ನು ಮಾಡುವಂತೆ ಹೇಳಿ ಸಮಾಧಾನಪಡಿಸುತ್ತಾನೆ. ನಂತರ ಒಂದು ಟ್ರೇನ್ ಹತ್ತಿಸಿ ಕಳಿಸುತ್ತಾನೆ.

  ಅತ್ತ ರೇ ಟ್ರೇನ್ ಹತ್ತಿ ಹೋಗುತ್ತಿದ್ದಂತೆ ಕೆನ್, ಹ್ಯಾರಿಗೆ ಕರೆ ಮಾಡಿ ತಾನು ರೇನನ್ನು ಮುಗಿಸದೆ ಉಳಿಸಿ ಕಳಿಸಿದೆನೆಂದು ಹೇಳುತ್ತಾನೆ. ತಾನು ಇದರ ಪರಿಣಾಮ ಎದುರಿಸಲು ಸಿದ್ಧನಾಗಿದ್ದು ತನ್ನ ಹೊಟೆಲ್ ರೂಮಿನಲ್ಲಿ ಕಾಯುವುದಾಗಿ ಹೇಳಿ ಕರೆ ಕಟ್ ಮಾಡುತ್ತಾನೆ. ಇದರಿಂದ ಕುಪಿತನಾಗುವ ಹ್ಯಾರಿ ಬಾಯಿಗೆ ಬಂದಂತೆ ಬಯ್ದು ತನ್ನ ಹೆಂಡತಿ ಮಕ್ಕಳಿಗೆ ತಾನು ಒಂದು ಕೆಲಸದ ನಿಮಿತ್ತ ಬ್ರುಜ್ ಗೆ ಹೋಗಬೇಕಾಗಿದೆ ಎಂದು ಹೇಳಿ ಅಲ್ಲಿಂದ ಹೊರಡುತ್ತಾನೆ. ಇತ್ತ ಕೆನ್ ತನ್ನ ಕೋಣೆಯಲ್ಲಿ ತನಗಾಗಿ ಬರುತ್ತಿರುವ ಹ್ಯಾರಿಗಾಗಿ ಕಾಯುತ್ತ ಸಿದ್ಧನಾಗುತ್ತಾನೆ. ಎಲ್ಲದಕ್ಕೂ ವಿದಾಯ ಹೇಳಿ ನಿರಾಳವಾದಂತೆ ರೇ ಟ್ರೇನ್ ನಲ್ಲಿ ಕೂತಿದ್ದಾಗ, ಊರು ಬಿಟ್ಟು ಕೊಂಚ ದೂರ ಸಾಗಿದ ಮೇಲೆ ಟ್ರೇನ್ ನಿಲ್ಲುತ್ತದೆ. ಏಕೆಂದು ರೇ ನೋಡುತ್ತಿದ್ದಂತೆ ಒಬ್ಬ ಪೋಲಿಸಿನವ ಬಂದು ರೇನನ್ನು ಪ್ರಶ್ನಿಸಿ ಹಿಂದಿನ ರಾತ್ರಿ ಮಾಡಿಕೊಂಡ ಜಗಳದ ಬಗ್ಗೆ ಆತನನ್ನು ಬಂಧಿಸುತ್ತಿರುವುದಾಗಿ ಹೇಳಿ ಮರಳಿ ಬ್ರುಜ್ ಗೆ ಕರೆದೊಯ್ಯುತ್ತಾನೆ. ಹ್ಯಾರಿ ಬ್ರುಜ್ ತಲುಪಿ ಯೂರಿ ಬಳಿ ಹೋಗಿ ಗನ್ ಪಡೆಯುತ್ತಾನೆ. ಆಗ ಹಿಂದಿನ ರಾತ್ರಿ ರೇ ನಿಂದ ಗುಂಡು ಹಾರಿಸಿಕೊಂಡು ಕಣ್ಣು ಕಳೆದುಕೊಂಡ ಎರಿಕ್ ಅಲ್ಲೇ ಇದ್ದು ನಡೆದದ್ದನ್ನು ಹ್ಯಾರಿಗೆ ವಿವರಿಸುತ್ತಾನೆ. ಹ್ಯಾರಿಗಾಗಿ ರೇನನ್ನು ಹುಡುಕುವುದಾಗಿ ಹೇಳುತ್ತಾನೆ. ಅಲ್ಲಿಂದ ಹೊರಡುವ ಹ್ಯಾರಿ ಕೆನ್ ಇದ್ದಲ್ಲಿಗೆ ಬಂದು ಆತನನ್ನು ಭೇಟಿಯಾಗುತ್ತಾನೆ. ತನ್ನ ಆಣತಿಯನ್ನು ಮೀರಿ ರೇನನ್ನು ಬಿಟ್ಟು ಕಳಿಸಿದ್ದಕ್ಕೆ ಕೆನ್ ಗೆ ಬಯ್ಯುತ್ತಾನೆ. ಆದರೆ ಕೆನ್ ರೇ ಒಳ್ಳೆಯ ಹುಡುಗನೆಂದು, ಆತ ಬದಲಾಗಬಲ್ಲ ಎಂದು ಹೇಳುತ್ತಾನೆ. ಅದಕ್ಕೊಪ್ಪದ ಹ್ಯಾರಿ ಚಿಕ್ಕ ಹುಡುಗನನ್ನು ಕೊಂದ ಕೂಡಲೆ ಆ ತಪ್ಪಿಗೆ ಪ್ರಾಯಶ್ಚಿತ್ತವಾಗಿ ತಾನೂ ಅಲ್ಲೇ ಗುಂಡು ಹೊಡೆದುಕೊಂಡು ರೇ ಸಾಯಬೇಕಿತ್ತು ಆದರೆ ಅವನು ಹಾಗೆ ಮಾಡಲಿಲ್ಲ, ಹಾಗಾಗಿ ಅವನು ಸಾಯಬೇಕಿದ್ದುದೇ ಸರಿ ಎಂದು ವಾದಿಸುತ್ತಾನೆ. ಕೊನೆಗೆ ಕೆನ್ ಈಗ ಅದರ ಬಗ್ಗೆ ಮಾತಾಡಿ ಪ್ರಯೋಜನವಿಲ್ಲವೆಂದು ಹೇಳಿ ಹ್ಯಾರಿಗೆ ಬಂದ ಕೆಲಸ ಮುಗಿಸಲು ಹೇಳುತ್ತಾನೆ. ನಂತರ ಇಬ್ಬರೂ ಅಲ್ಲಿಯೇ ಹತ್ತಿರ ಇದ್ದ ಗೋಪುರವೊಂದಕ್ಕೆ ಹೋಗುತ್ತಾರೆ. ಇತ್ತ ರೇನನ್ನು ಜೈಲಿನಿಂದ ಜಾಮೀನು ಕೊಟ್ಟು ಕ್ಲೊಇ ಬಿಡಿಸಿಕೊಂಡು ಹ್ಯಾರಿ, ಕೆನ್ ಇದ್ದ ಗೋಪುರದ ಕೆಳಗೆ ಒಂದು ರೆಸ್ಟಾರೆಂಟ್ ಗೆ ಬಂದು ಕೂರುತ್ತಾರೆ. ಗೋಪುರದಲ್ಲಿ ಹ್ಯಾರಿ ಕೆನ್ ನನ್ನು ಮುಗಿಸಲು ಗನ್ ಎತ್ತುತ್ತಿದ್ದಂತೆ, ಕೆನ್ ತನ್ನ ಗನ್ ಕೆಳಗಿರಿಸಿ ಹ್ಯಾರಿಯ ಮೇಲೆ ತನಗೆ ಗೌರವವಿದ್ದು ತಾನು ಮಾತ್ರ ಏನೂ ಮಾಡದೆ ಸುಮ್ಮನೆ ನಿಲ್ಲುವುದಾಗಿ ಹೇಳಿ ನಿಲ್ಲುತ್ತಾನೆ. ಇದನ್ನು ನೋಡಿ ಹ್ಯಾರಿ ವಿಚಲಿತನಾಗಿ ಕೆನ್ ನನ್ನು ಸಾಯಿಸದೇ ಅವನು ಅಲ್ಲಿಯ ತನಕ ತನಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬರಿ ಅವನ ಕಾಲಿಗೆ ಗುಂಡು ಹೊಡೆಯುತ್ತಾನೆ. ಕೆಳಗೆ ರೇ ಮತ್ತು ಕ್ಲೊಇ ಕೂತಿದ್ದಾಗ ಕುಳ್ಳ ಮತ್ತೆ ಸ್ಕೂಲ್ ಸಮವಸ್ತ್ರದಲ್ಲಿ ಅವರ ಬಳಿ ಬಂದಾಗ ಇಬ್ಬರೂ ಅವನನ್ನು ನೋಡಿ ನಗುತ್ತಾರೆ. ಚಿತ್ರದ ದೃಶ್ಯವೊಂದಕ್ಕಾಗಿ ಈ ಬಟ್ಟೆ ಧರಿಸಿದ್ದೇನೆ ಎಂದು ಆ ಕುಳ್ಳ ವಿವರಿಸಿ ಅವರ ಬಳಿ ಇನ್ನೊಂದಿಷ್ಟು ಮಾತನಾಡಿ ಹೊರಡುತ್ತಾನೆ. ಅವನು ಅತ್ತ ಹೋಗುತ್ತಿದ್ದಂತೆ ಎರಿಕ್ ಇವರಿಬ್ಬರನ್ನೂ ನೋಡಿ ಹ್ಯಾರಿಗೆ ಎಚ್ಚರಿಸಲು ಗೋಪುರದ ಕಡೆ ಹೋಗುತ್ತಾನೆ. ನಿಧಾನವಾಗಿ ಮೆಟ್ಟಿಲು ಇಳಿದು ಬರುತ್ತಿದ್ದ ಹ್ಯಾರಿ, ಕೆನ್ ಎರಿಕ್ ಕೂಗಿ ರೇ ಬಗ್ಗೆ ಹೇಳುತ್ತಿದ್ದಂತೆ, ಹೊಡೆದಾಡಿ ಕಡೆಗೆ ಹ್ಯಾರಿ ಕೆನ್ ಮೇಲೆ ಮತ್ತೊಂದು ಗುಂಡು ಹಾರಿಸಿ ಕ್ಷಮೆ ಕೇಳಿ ಮೆಟ್ಟಿಲು ಇಳಿಯತೊಡಗುತ್ತಾನೆ. ಹ್ಯಾರಿಯನ್ನು ಹೇಗಾದರೂ ತಡೆಯಬೇಕು, ಆಗದಿದ್ದರೆ ತಾನು ಸತ್ತಾದರೂ ಸರಿ ರೇಗೆ ಎಚ್ಚರಿಸಬೇಕು ಎಂದು ಕೆನ್ ಮತ್ತೆ ಮೆಟ್ಟಿಲು ಹತ್ತಿ ಗೋಪುರದ ಮೇಲಿಂದ ತಾನು ಅಷ್ಟು ಇಷ್ಟ ಪಟ್ಟ ಆ ನಗರವನ್ನು ಕಡೆಯ ಬಾರಿ ನೋಡಿ ಕಣ್ತುಂಬಿಸಿಕೊಂಡು ಹಾರುತ್ತಾನೆ. ಹಾರುವ ಮುನ್ನ ಕೆಳಗೆ ಯಾರೂ ಇರಬಾರದು ಎಂದು ಮೊದಲು ಕೆಳಗೆ ಚಿಲ್ಲರೆ ಬೀಳಿಸಿ ಜನರನ್ನು ಎಚ್ಚರಿಸಿ ಹಾರುತ್ತಾನೆ. ಆತ ಬಿದ್ದ ತಕ್ಷಣ ಅದನ್ನು ನೋಡಿದ ರೇ ಅತ್ತ ಬಂದು ನೋಡಿದಾಗ ಕೆನ್ ಕೊನೆಯುಸಿರೆಳೆಯುತ್ತ ರೇಗೆ ಅಲ್ಲಿಂದ ತಪ್ಪಿಸಿಕೊಂಡು ಓಡುವಂತೆ ಹೇಳುತ್ತಾನೆ. ಅಷ್ಟರಲ್ಲೇ ಕೆಳಗೆ ಬರುವ ಹ್ಯಾರಿ ಕೆಳಗೆ ಕೆನ್ ಸತ್ತುಬಿದ್ದಿರುವುದನ್ನು ನೋಡಿ ದುಃಖಿತನಾದರೂ ರೇನನ್ನು ಅಟ್ಟಿಸಿಕೊಂಡು ಓಡುತ್ತಾನೆ. ಅಲ್ಲಿಂದ ರೇ ಈ ಮುನ್ನ ತಾನಿದ್ದ ಹೊಟೆಲ್ಲಿಗೆ ಬರುತ್ತಾನೆ. ಅವನಿದ್ದ ಹೊಟೆಲ್ ವಿಳಾಸ ಗೊತ್ತಿದ್ದ ಹ್ಯಾರಿ ಅವನನ್ನು ಹುಡುಕಿ ಅಲ್ಲಿಗೆ ಬರುತ್ತಾನೆ. ಆದರೆ ಗಾಬರಿಯಿಂದ ಓಡಿಬಂದ ರೇ ಮರೀ ಬಳಿ ಕೀಲಿಕೈ ಪಡೆದು ತನ್ನ ರೂಮಿಗೆ ಹೋಗಿ ಅಡಗಿಕೊಳ್ಳುತ್ತಾನೆ. ನಂತರ ಅವನನ್ನು ಅಟ್ಟಿಸಿಕೊಂಡು ಬಂದ ಹ್ಯಾರಿಯನ್ನು ನೋಡಿ ಮರೀ ರೇ ರೂಮಿಗೆ ಹೋಗಲು ಬಿಡುವುದಿಲ್ಲ. ಗರ್ಭಿಣಿ ಹೆಂಗಸನ್ನು ಕೊಲ್ಲುವಷ್ಟು ಕ್ರೂರಿ ತಾನಲ್ಲ, ಹಾಗಾಗಿ ದಾರಿ ಬಿಡುವಂತೆ ಹ್ಯಾರಿ ಗದರಿಸುತ್ತಾನೆ. ಅಷ್ಟರಲ್ಲಿ ರೇ, ಹ್ಯಾರಿ ಅಲ್ಲಿಗೆ ಬಂದದ್ದು ಗೊತ್ತಾಗಿ ಹ್ಯಾರಿಗೆ ಅಲ್ಲಿ ಶೂಟ್ ಮಾಡಿ ಮರೀಗೆ ಹಿಂಸೆ ಮಾಡುವುದರ ಬದಲು ತಾನು ಕಿಟಕಿಯಿಂದ ಹೊಟೆಲ್ ಹಿಂದಿನ ಕಾಲುವೆಯಲ್ಲಿ ಬೀಳಲು ಪ್ರಯತ್ನಿಸುವುದಾಗಿಯೂ, ತಾನು ಅಷ್ಟರಲ್ಲಿ ಬೇಕಾದರೆ ಹೊಟೆಲ್ ಸುತ್ತಿ ಬಂದು ತನ್ನನ್ನು ಶೂಟ್ ಮಾಡಬಹುದು ಎಂದು ಹೇಳುತ್ತಾನೆ. ಅದಕ್ಕೊಪ್ಪುವ ಹ್ಯಾರಿ ಮೂರು ಎಣಿಸಿ ಇಬ್ಬರೂ ಅಲ್ಲಿಂದ ಓಡುತ್ತಾರೆ. ರೇ ಕಿಟಕಿಯಿಂದ ನೇರ ಕಾಲುವೆಯಲ್ಲಿ ಹೋಗುತ್ತಿದ್ದ ದೋಣಿಗೆ ಹಾರುತ್ತಾನೆ. ಹಾರುವಾಗ ಗನ್ ಕೈ ಜಾರಿ ಕೆಳಗೆ ಬೀಳುತ್ತದೆ. ಅಷ್ಟರಲ್ಲಿ ಅತ್ತ ಧಾವಿಸುವ ಹ್ಯಾರಿ ರೇ ಮೇಲೆ ಗುರಿಯಿಟ್ಟು ಗುಂಡು ಹಾರಿಸುತ್ತಾನೆ. ಗುಂಡು ನೇರ ರೇನ ಹೊಟ್ಟೆ ಸೀಳುತ್ತದೆ. ರೇ ಮತ್ತೆ ದೋಣಿಯಿಂದ ಇಳಿದು ಎದ್ದು ಬಿದ್ದು ಹ್ಯಾರಿಯಿಂದ ದೂರ ಹೋಗಲು ಪ್ರಯತ್ನಿಸುತ್ತಾನೆ. ಹೀಗೆ ಹೋಗುತ್ತಾ ಹೋಗುತ್ತಾ ಕುಳ್ಳನ ಚಿತ್ರ ಚಿತ್ರೀಕರಣ ನಡೆಯುತ್ತಿದ್ದ ಜಾಗಕ್ಕೆ ಬರುತ್ತಾನೆ. ಅಲ್ಲಿ ರೇ ಹೀಗೆ ಗುಂಡೇಟು ತಿಂದು ಒದ್ದಾಡುತ್ತ ಬರುತ್ತಿದ್ದನ್ನು ಗಮನಿಸುವ ಕುಳ್ಳ ಅವನ ಕಡೆ ನಡೆಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸುವ ಹ್ಯಾರಿ ಮತ್ತೆ ರೇ ಬೆನ್ನಿಗೆ ಗುರಿಯಿಟ್ಟು ನಿಲ್ಲುತ್ತಾನೆ. ರೇ ಶಾಲಾ ಸಮವಸ್ತ್ರ ಧರಿಸಿದ್ದ ಕುಳ್ಳನನ್ನು ನೋಡಿ “ಲಿಟ್ಟಲ್ ಬಾಯ್” ಎಂದು ಕೂಗುತ್ತಾನೆ. ಅದಕ್ಕೆ ಹಿಂದೆ ನಿಂತಿದ್ದ ಹ್ಯಾರಿ “ಹೌದು, ಲಿಟ್ಟಲ್ ಬಾಯ್” ಎಂದು ಹೇಳಿ ಮತ್ತೆ ರೇಗೆ ಗುಂಡು ಹೊಡೆಯುತ್ತಾನೆ. ಗುಂಡೇಟು ತಿಂದು ರೇ ಬಿದ್ದಾಗಲೇ ಹ್ಯಾರಿಗೆ ತಾನು ಒಂದು ಚಿಕ್ಕ ಹುಡುಗನಿಗೆ ಗುಂಡು ಹೊಡೆದಿದ್ದೇನೆಂದು ಗೊತ್ತಾಗುವುದು. ಆಗ ಹ್ಯಾರಿಗೆ ರೇ ಇಷ್ಟು ದಿನ ಅನುಭವಿಸಿದ ಪಾಪ ಪ್ರಜ್ಞೆಯ ಅರಿವು ಆಗುತ್ತದೆ. ರೇ ಇದ್ದ ಸಂದರ್ಭದಲ್ಲಿ ತಾನಿದ್ದಿದ್ದರೆ ತಾನು ಗುಂಡು ಹೊಡೆದುಕೊಂಡು ಅಲ್ಲೇ ಸಾಯುತ್ತಿದ್ದೆ ಎಂದು ತಾನು ಹಿಂದೆ ಹೇಳಿದಂತೆ ಈಗ ಹ್ಯಾರಿ ತನ್ನ ಬಾಯಿಗೆ ಗನ್ ಹಿಡಿದು ನಿಲ್ಲುತ್ತಾನೆ. ಅಷ್ಟರಲ್ಲಿ ರೇ ಹ್ಯಾರಿಯನ್ನು ಅದು ಚಿಕ್ಕ ಹುಡುಗನಲ್ಲ ಕುಬ್ಜ ವಯಸ್ಕ ಎಂದು ಎಚ್ಚರಿಸಲು ಪ್ರಯತ್ನಿಸಿದರೂ ಹ್ಯಾರಿ ತಾನು ತನ್ನ ಸಿದ್ಧಾಂತಗಳಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿ ಬಾಯಿಗೆ ಗುಂಡು ಹೊಡೆದುಕೊಂದು ಅಲ್ಲೇ ಸತ್ತುಬೀಳುತ್ತಾನೆ. ಅಲ್ಲಿಗೆ ಧಾವಿಸುವ ಪ್ಯಾರ ಮೆಡಿಕ್ಸ್ ನವರು ರೇನನ್ನು ಹೊತ್ತು ಅಂಬುಲೆನ್ಸ್ ನಲ್ಲಿ ಮಲಗಿಸಿ ಆಸ್ಪತ್ರೆಯ ಕಡೆಗೆ ಒಯ್ಯುತ್ತಾರೆ. ಆಗ ರೇ ತನ್ನ ಮನದಲ್ಲಿ “ಲಂಡನ್ನಿಗೆ ಮರಳಿ ಅಲ್ಲಿ ಓರ್ವ ಚರ್ಚ್ ಮದರ್ ನ ಬಳಿ ಮಾಡಿದ್ದೆಲ್ಲವನ್ನೂ ಹೇಳಿಕೊಂಡು ಆಕೆ ಕೊಡುವ ಶಿಕ್ಷೆ ಏನಾದರೂ ಸರಿಯೇ, ಜೈಲು, ಸಾವು ಏನಾದರು ಸರಿಯೇ ಅನುಭವಿಸಲು ಸಿದ್ಧ” ಎಂದುಕೊಳ್ಳುತ್ತಾನೆ. “ಏಕೆಂದರೆ ಕನಿಷ್ಠ ಪಕ್ಷ ಜೈಲಿನಲ್ಲಾಗಲಿ, ಸಾವಿನಲ್ಲಾಗಲಿ ನಾನು ಬ್ರುಜ್ ನಲ್ಲಿ ಇರುವುದಿಲ್ಲ. ಈಗ ಅನಿಸುತ್ತೆ, ನರಕ ಎಂದರೆ ಬ್ರುಜ್ ನಂತಹ ಜಾಗದಲ್ಲಿ ಅನಂತ ಕಾಲ ಕಳೆಯುವುದು ಎಂದು. ಈಗ ನಾನು ಸಾಯಬಾರದು ಎಂದು ಆಶಿಸುತ್ತೇನೆ. ಈಗ ನಾನು ಸಾಯಬಾರದು ಎಂದು ಆಶಿಸುತ್ತೇನೆ.” ಅಲ್ಲಿಗೆ ಚಿತ್ರ ಕೊನೆಗೊಳ್ಳುತ್ತದೆ. ಸಾವಿಗೆ ಹತ್ತಿರ ಬಂದಾಗ ಪ್ರಾಯಶ್ಚಿತ್ತ ಮಾಡಿಕೊಳ್ಳದೆ ತಾನು ಹೀಗೆ ಸತ್ತರೆ ಬ್ರುಜ್ ನಂತಹ ಪರ್ಗಟೊರಿಯಲ್ಲೇ ಕಾಲ ಕಳೆಯಬೇಕಾದೀತು ಎಂದೂ, ರೇ ಕಡೆಗೂ ಕೆನ್ ತನಗಾಗಿ ಒದಗಿಸಿಕೊಟ್ಟ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನಿರ್ಧರಿಸುತ್ತಾನೆ. ಆದರೆ ರೇ ಉಳಿಯುತ್ತಾನೋ ಅಥವಾ ಸಾಯುತ್ತಾನೋ ಎಂಬುದು ಚಿತ್ರದ ಕೊನೆಯಲ್ಲಿ ಪ್ರಶ್ನೆಯಾಗಿಯೇ ಉಳಿಯುತ್ತದೆ. ಬಹುಶಃ ನಿರ್ದೇಶಕ ವೀಕ್ಷಕರು ತಮ್ಮ ಮನಸ್ಥಿತಿಗೆ ತಕ್ಕಂತೆ ರೇನನ್ನು ಕಾಣುವಂತೆ ಹಾಗೆ ಪ್ರಶ್ನೆಯಾಗಿಯೇ ಉಳಿಸಿದ್ದಾರೆ ಎಂದು ನನಗನ್ನಿಸುತ್ತದೆ.

  ಈ ಚಿತ್ರದಲ್ಲಿ ರೇ, ಕೆನ್ ಮತ್ತು ಹ್ಯಾರಿಯ ಪಾತ್ರ ಸೃಷ್ಟಿ ತುಂಬಾ ಸ್ವಾರಸ್ಯಕರವಾಗಿದೆ. ಪರ್ಗಟೊರಿ ತಲುಪಿದ ಆತ್ಮ(ರೇ) ಸ್ವರ್ಗಕ್ಕೋ ನರಕಕ್ಕೋ ಎಂದು ನಿರ್ಧರಿಸಲು ಏಂಜೆಲ್(ಕೆನ್) ಮತ್ತು ಡೀಮೆನ್(ಹ್ಯಾರಿ) ಹೊಡೆದಾಡುತ್ತಿರುತ್ತಾರೆ. ಬ್ರುಜ್ ನಗರವೇ ಆ ಪರ್ಗಟೊರಿ. ರೇ ತನ್ನ ಪಾಪದಿಂದ ಮುಕ್ತನಾಗಲು, ಪ್ರಾಯಶ್ಚಿತ್ತ ಪಡೆಯಲು ಅವಕಾಶ ಕಲ್ಪಿಸುವ ಕೆನ್, ಮಾಡಿದ ತಪ್ಪಿಗೆ ಶಿಕ್ಷೆಯಾಗಲೇಬೇಕು ಎನ್ನುವ ಹ್ಯಾರಿ. ನಿರ್ದೇಶಕ ಈ ಕಲ್ಪನೆಯನ್ನು ಚಿತ್ರದಲ್ಲಿ ನವಿರಾದ ಹಾಸ್ಯದೊಂದಿಗೆ ಅನಾವರಣಗೊಳಿಸಿದ್ದಾರೆ. ನಾನು ಮೇಲೆ ಎಲ್ಲೂ ಹಾಸ್ಯದ ಬಗ್ಗೆ ವಿವರಿಸದೇ ಹೋದರೂ ಚಿತ್ರ ಡಾರ್ಕ್ ಕಾಮಿಡಿ ವರ್ಗ ಸೇರುವಂತದ್ದು. ರೇ ಪಾತ್ರದಲ್ಲಿ ಕಾಲಿನ್ ಫ್ಯಾರೆಲ್(Colin Farrell), ಕೆನ್ ಪಾತ್ರದಲ್ಲಿ ಬ್ರೆಂಡನ್ ಗ್ಲೀಸನ್(Brendon Gleeson) ಮತ್ತು ಹ್ಯಾರಿಯ ಪಾತ್ರದಲ್ಲಿ ರಾಲ್ಫ್ ಫಿಯೆನ್(Ralph Fiennes) ಸೊಗಸಾಗಿ ನಟಿಸಿದ್ದಾರೆ.

-ವಿಶ್ವನಾಥ್

Sunday, 15 July 2018

ಬ್ಲ್ಯಾಕ್ಆ್ಯಡರ್ ಗೋಸ್ ಫೋರ್ಥ್ (ಸೀಸನ್ 4)








 ಈ ಬಾರಿ ಒಂದು ಚಲನಚಿತ್ರದ ಬದಲಿಗೆ ಟಿವಿ ಸೀರಯಲ್ ಬಗ್ಗೆ ಬರೆಯುತ್ತಿದ್ದೇನೆ. ನನ್ನ ಬ್ಲಾಗ್ ಅನ್ನು ಚಲನಚಿತ್ರಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದುಕೊಂಡಿದ್ದೆನಾದರೂ ಕೆಲವು ಟಿವಿ ಕಾರ್ಯಕ್ರಮಗಳ ಬಗ್ಗೆ ಹೇಳಲೇ ಬೇಕು ಎನಿಸಿದ್ದರಿಂದ ನನಗೆ ಇಷ್ಟವಾದ ಮತ್ತು ಹಾಸ್ಯ ಧಾರಾವಾಹಿಗಳಲ್ಲಿ ಸದಾ ಎತ್ತರದ ಸ್ಥಾನದಲ್ಲಿ ನಿಲ್ಲುವ ಕೆಲವು ಶೋಗಳ ಬಗ್ಗೆಯೂ ಹಂಚಿಕೊಳ್ಳುತ್ತಿದ್ದೇನೆ.

 ಹಾಸ್ಯ ಟಿವಿ ಧಾರಾವಾಹಿಗಳಲ್ಲಿ ಇತ್ತೀಚೆಗೆ ನಾನು ಕಂಡಂತೆ ಕಥೆ ಮತ್ತು ಸಂಭಾಷಣೆಗಳಲ್ಲಿನ ಗಟ್ಟಿತನ ಹಿಂದೆ ಇದ್ದಷ್ಟು ಈಗಿಲ್ಲ ಅನಿಸುತ್ತದೆ. ಹಿಂದೆ ಕೆಲವು ಸಂಚಿಕೆಗಳು ಮಾತ್ರ ಪ್ರಸಾರವಾದರೂ ಎಷ್ಟೋ ವರ್ಷಗಳ ವರೆಗೆ ನೆನಪು ಇಟ್ಟುಕೊಳ್ಳಬೇಕೆನಿಸುವಷ್ಟು ಚೆನ್ನಾಗಿರುತ್ತಿದ್ದವು. ಆದರೆ ಈಗ ಸಂಚಿಕೆಗಳ ಸಂಖ್ಯೆ ಹೆಚ್ಚಾಗಿ ಕಥೆ ಮತ್ತು ಸಂಭಾಷಣೆ ಪೇಲವವಾಗಿ ಕಾಣುತ್ತಿವೆ. ಅಪಹಾಸ್ಯದ ಗೆರೆ ದಾಟದೆ ಎಲ್ಲರನ್ನೂ ಗೇಲಿ ಮಾಡುವಂತ ಹಾಸ್ಯ ಕಾರ್ಯಕ್ರಮಗಳು ಅಷ್ಟಾಗಿ ಮೂಡಿಬರುತ್ತಿಲ್ಲ. ನನಗೆ ಬಹಳ ಇಷ್ಟವಾದ ಹಾಸ್ಯ ಕಾರ್ಯಕ್ರಮಗಳೆಲ್ಲವೂ 70ರ ದಶಕದಿಂದ 90ರ ದಶಕದವರೆಗೆ ಮೂಡಿಬಂದಂತವು. ಮೊಂಟಿ ಪೈಥಾನ್ಸ್ ಫ್ಲೈಯಿಂಗ್ ಸರ್ಕಸ್, ಬ್ಲ್ಯಾಕ್ಆ್ಯಡರ್, ಯೆಸ್ ಮಿನಿಸ್ಟರ್, ದಿ ಸ್ಕೆಚ್ ಶೋ, ದಿ ಟೂ ರೋನ್ನೀಸ್, ಎ ಬಿಟ್ ಆಫ್ ಫ್ರೈ ಅಂಡ್ ಲಾರಿ, ಜೀವ್ಸ್ ಅಂಡ್ ವೂಸ್ಟರ್, ಮೈಂಡ್ ಯುವರ್ ಲಾಂಗ್ವೇಜ್, ಫಾಲ್ಟಿ ಟವರ್ಸ್ ಮತ್ತು ಒಂದು ಹಂತದ ವರೆಗೆ ದಿ ಸಿಂಪ್ಸಂಸ್. ಭಾರತದ ಮಟ್ಟಿಗೆ ನೋಡುವುದಾದರೆ, ಫ್ಲಾಪ್ ಶೋ, ಫುಲ್ ಟೆನ್ಶನ್, ನುಕ್ಕಡ್, ಶ್ರೀಮಾನ್ ಶ್ರೀಮತಿ, ಸಾರಾಭಾಯಿ vs ಸಾರಾಭಾಯಿ, ಅಡಚಣೆಗಾಗಿ ಕ್ಷಮಿಸಿ, ದಶಾವತಾರ, ಜಬಾನ್ ಸಂಭಾಲ್ಕೆ(ಮೈಂಡ್ ಯುವರ್ ಲಾಂಗ್ವೇಜ್ ನ ಹಿಂದಿ ಅವತರಣಿಕೆ), ಆಫಿಸ್ ಆಫಿಸ್, ದೇಖ್ ಭಾಯಿ ದೇಖ್ ಮತ್ತು ಇನ್ನೂ ಅನೇಕ.
 
 ಇಂತಹ ದೊಡ್ಡ ಪಟ್ಟಿಯಲ್ಲಿ ನನಗೆ ಬಹಳ ಇಷ್ಟವಾದ ಟಿವಿ ಧಾರಾವಾಹಿ ಬ್ಲ್ಯಾಕ್ಆ್ಯಡರ್. ನಾಲ್ಕು ಸೀಸನ್ ಗಳ ವರೆಗೆ ಪ್ರಸಾರವಾದ ಈ ಧಾರಾವಾಹಿ ಒಂದೊಂದು ಸೀಸನ್ ನಲ್ಲಿ ಕೇವಲ ಆರು ಸಂಚಿಕೆಗಳನ್ನು ಹೊಂದಿದ್ದವು. ಈ ಧಾರಾವಾಹಿಯ ಮುಖ್ಯ ಆಕರ್ಷಣೆ ಮಿ.ಬೀನ್ ಖ್ಯಾತಿಯ ರೋವನ್ ಆಟ್ಕಿಂಸನ್. ಆಕ್ಸ್ಫರ್ಡ್ ನಲ್ಲಿ ಓದುತ್ತಿದ್ದಾಗ ಆದ ಸ್ನೇಹಿತ ಬೆನ್ ಎಲ್ಟನ್ ಜೊತೆಗೂಡಿ ನಂತರ ಬಿಬಿಸಿಗೆ ನಿರ್ಮಿಸಿದ ಧಾರಾವಾಹಿಯಿದು. ಈ ಧಾರಾವಾಹಿ ಬ್ಲ್ಯಾಕ್ಆ್ಯಡರ್(ರೋವನ್ ಆಟ್ಕಿಂಸನ್) ಎಂಬ ಕುತಂತ್ರ ಬುದ್ಧಿಯ ಕಾಲ್ಪನಿಕ ವ್ಯಕ್ತಿಯ ಬಗ್ಗೆ ಇದೆ. ಜೀವನದಲ್ಲಿ ಹೆಚ್ಚು ಕಷ್ಟಪಡದೆ ಬೇಕಾದ್ದನ್ನು ಪಡೆಯಬೇಕು ಎನ್ನುವ ನಿಲುವಿನ ವ್ಯಕ್ತಿ. ಅದಕ್ಕಾಗಿ ಆತ ಮಾಡುವ ಪ್ರಯಾಸಗಳು, ಕೈಗೂಡದೆ ತೊಂದರೆಗೆ ಸಿಕ್ಕಿಹಾಕಿಕೊಂಡಾಗ ಪಡುವ ಪಾಡು, ಅದರಿಂದ ಹೊರಬರಲು ಆತ ಅನುಸರಿಸುವ ಮಾರ್ಗ ಎಲ್ಲವೂ ಹಾಸ್ಯಮಯವಾಗಿವೆ. ನಾಲ್ಕು ಸೀಸನ್ ಗಳಲ್ಲಿ ಬ್ಲ್ಯಾಕ್ಆ್ಯಡರ್ ಎಂಬ ಅದೇ ವ್ಯಕ್ತಿ ಬೇರೆ ಬೇರೆ ಕಾಲಮಾನಗಳಲ್ಲಿ ಉದ್ಭವಿಸುತ್ತಾನೆ. ಮೊದಲ ಸೀಸನ್ ಮಿಡೀವಲ್ ಏಜ್ ಬ್ಲ್ಯಾಕ್ಆ್ಯಡರ್ ಬಗ್ಗೆ ಇದ್ದರೆ, ಎರಡನೇ ಸೀಸನ್ ಎಲಿಜಬೆತ್ ಕಾಲದ ಬಗ್ಗೆ, ಮೂರನೇ ಸೀಸನ್ ಹದಿನೆಂಟನೆ ಶತಮಾನದ ಕಾಲವಾದರೆ, ನಾಲ್ಕನೇ ಸೀಸನ್ ಮೊದಲ ವಿಶ್ವಯುದ್ಧದ ಟ್ರೆಂಚ್ ವಾರ್ ಬಗ್ಗೆ ಇದೆ. ಈ ಎಲ್ಲ ಕಾಲಮಾನಗಳಲ್ಲಿ ಬ್ಲ್ಯಾಕ್ಆ್ಯಡರ್ ಹೇಗೆ ಜೀವನ ನಡೆಸುತ್ತಾನೆ ಎಂಬುದೇ ಕಥೆಯ ಸ್ವಾರಸ್ಯ. ಇವನ ಜೊತೆಗೆ ಜಗತ್ತಿನ ಅತಿ ದೊಡ್ಡ ಪೆದ್ದ ಬಾಲ್ಡ್ರಿಕ್(ಟೋನಿ ರಾಬಿನ್ಸನ್). ನಾಲ್ಕು ಸೀಸನ್ ಗಳೂ ಚೆನ್ನಾಗಿದ್ದರೂ, ನಾಲ್ಕನೆಯದು ಎಲ್ಲ ಸೀಸನ್ ಗಳಿಗಿಂತ ತುಂಬಾ ಚೆನ್ನಾಗಿದೆ ಎಂಬುದು ನನ್ನ ಅಭಿಪ್ರಾಯ.

  ಒಂದನೇ ವಿಶ್ವಯುದ್ಧದ ಅವಧಿಯಲ್ಲಿ ಟ್ರೆಂಚ್ ವಾರಫೇರ್ ನಡೆಯುತ್ತಿದ್ದಾಗ, ಎಲ್ಲರಂತೆ ಟ್ರೆಂಚ್ ನಲ್ಲಿ ಕ್ಯಾಪ್ಟನ್ ಬ್ಲ್ಯಾಕ್ಆ್ಯಡರ್, ಲೆಫ್ಟಿನೆಂಟ್ ಜಾರ್ಜ್ ಮತ್ತು ಪ್ರೈವೇಟ್ ಬಾಲ್ಡ್ರಿಕ್ ಒಂದು ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಬ್ಲ್ಯಾಕ್ಆ್ಯಡರ್ ಗೆ ಯಾವುದೋ ಜನರಲ್ ನ ಅಹಂ ತೀರಿಸಲಿಕ್ಕಾಗಿ ತಾನ್ಯಾಕೆ ಸುಮ್ಮನೆ ಯುದ್ಧದಲ್ಲಿ ಜೀವ ಕಳೆದುಕೊಳ್ಳಬೇಕು ಎನ್ನುವ ಧೋರಣೆ. ಹಾಗಾಗಿಯೇ ಅಲ್ಲಿಂದ ಸುರಕ್ಷಿತ ಜಾಗಕ್ಕೆ ಹೋಗಲು ಅವಕಾಶಕ್ಕಾಗಿ ಸದಾ ಕಾಯುತ್ತಿರುತ್ತಾನೆ. ಪ್ರಾಣಕೊಟ್ಟಾದರೂ ಬ್ರಿಟನ್ ದೇಶದ ವಿಜಯ ಪತಾಕೆ ಹಾರಿಸುತ್ತೇನೆ ಎನ್ನುವುದು ಮುಗ್ಧ ಲೆಫ್ಟಿನೆಂಟ್ ಜಾರ್ಜ್(ಹ್ಯೂ ಲಾರಿ) ನಿರ್ಧಾರ. ತಾನು ಯಾರ ಪರವಾಗಿ ಯುದ್ಧ ಮಾಡುತ್ತಿದ್ದೇನೆ ಎಂಬುದಷ್ಟೇ ಗೊತ್ತಿರುವ ಪ್ರೈವೇಟ್ ಬಾಲ್ಡ್ರಿಕ್ ಉಳಿದಿಬ್ಬರ ಯಾವ ಆಲೋಚನೆಗಳಿಗೂ ತಲೆಕೆಡಿಸಿಕೊಳ್ಳದೆ, ಇವರೆಲ್ಲರಿಗೂ ಊಟಕ್ಕೆ ಸಾಮಾನು ಹೊಂಚುವುದಷ್ಟೇ ತನ್ನ ಕೆಲಸ ಮಾಡಿಕೊಂಡಿರುತ್ತಾನೆ. ಆ ಊಟವೋ ದೇವರೇ ಮೆಚ್ಚಬೇಕು. ಕಳಿಸಿದ ರೇಶನ್ ಎಲ್ಲ ಖಾಲಿಯಾದ ಮೇಲೆ ಮೇಲಾಧಿಕಾರಿಗಳಿಗೆ ಏನಾದರೂ ತಿನ್ನಲು ಮಾಡಲೇಬೇಕು ಎಂದು ಓಡಾಡುವ ಇಲಿಗಳನ್ನಾದರೂ ಹಿಡಿದು ಅಡಿಗೆ ಮಾಡುವ ಭೂಪ. ತನ್ನ ಬುದ್ಧಿವಂತಿಕೆಯಲ್ಲಿ ಕೊರತೆಯಿದ್ದರೂ ಬಾಲ್ಡ್ರಿಕ್ ಬ್ಲ್ಯಾಕ್ಆ್ಯಡರ್ ಕಷ್ಟದಲ್ಲಿ ಸಿಲುಕಿಕೊಂಡಾಗ ಸಲಹೆ ಕೊಡುವುದು ಮಾತ್ರ ಬಿಡುವುದಿಲ್ಲ. ಹಾಗೆ ಸಲಹೆ ಕೊಡಲು ಬಂದಾಗಲೆಲ್ಲ ಅವನದು ಒಂದೇ ಮಾತು, “ಸರ್, ಐ ಹ್ಯಾವ್ ಎ ಕನ್ನಿಂಗ್ ಪ್ಲಾನ್”. ಇವರಿಗೆ ಕಾಲಕಾಲಕ್ಕೆ ಪ್ರಾಣಕ್ಕೆ ಕುತ್ತುತರುವಂತ ಆಪರೇಶನ್ ಗಳಿಗೆ ಕಳಿಸುವ ಸದಾ ರಾಜಾಥಿತ್ಯದಲ್ಲಿ ಮೆರೆಯುವ ಜನರಲ್ ಮೆಲ್ಚೆಟ್ (ಸ್ಟೀಫೆನ್ ಫ್ರೈ). ಅವನ ಸಹಾಯಕ ಮತ್ತು ಅವನಿಗೆ ಸಲಾಂ ಹೊಡೆಯುತ್ತಲೇ ಬದುಕುವ ಕ್ಯಾಪ್ಟನ್ ಡಾರ್ಲಿಂಗ್(ಟಿಮ್ ಮೆಕ್ ಇನ್ನರ್ನಿ). ಹೇಗಾದರೂ ಮಾಡಿ ಬ್ಲ್ಯಾಕ್ಆ್ಯಡರ್ ಗೆ ಸದಾ ತೊಂದರೆ ಕೊಡುವುದು, ಇಲ್ಲವೇ ಅವನನ್ನು ಜನರಲ್ ಕಣ್ಣಲ್ಲಿ ಸಣ್ಣವನನ್ನಾಗಿಸಲು ಹೊಂಚುಹಾಕುತ್ತಿರುತ್ತಾನೆ.

 ಈ ಟಿವಿ ಸೀರಿಸ್ ನ ಆಕರ್ಷಣೆ ಸಂಭಾಷಣೆ. ಒಂದೊಂದು ಜೋಕ್ ಗಳು ಬಹಳ ಕಾಲ ನೆನಪಿನಲ್ಲಿರುವಂತವು. ಉದಾಹರಣೆಗೆ,
Lt. George: Oh, sir, if we should happen to tread on a mine, what do we do?
Cap. Blackadder: Well, normal procedure, Lieutenant, is to jump up 200 feet into the air and scatter yourself over a wide area.
ಲೆ. ಜಾರ್ಜ್ ಒಮ್ಮೆ ತಾವು ಲ್ಯಾಂಡ್ ಮೈನ್ ಮೇಲೆ ಕಾಲಿಟ್ಟರೆ ಏನು ಮಾಡಬೇಕು ಎಂದು ಬ್ಲ್ಯಾಕ್ಆ್ಯಡರ್ ಗೆ ಕೇಳಿದಾಗ, ಸುಮ್ಮನೆ 200 ಅಡಿ ಮೇಲಕ್ಕೆ ಹಾರಿ ತನ್ನನ್ನು ತಾನು ಚದುರಿಸಿಕೊಳ್ಳಬೇಕು ಎಂದು ಹೇಳುತ್ತಾನೆ. ಮತ್ತು ಇದರಲ್ಲಿ ಮಾಡಲಾಗುವ ಇನ್ಸಲ್ಟ್ ಗಳೂ ಕೂಡ ನಗೆತರಿಸುವನ್ತದ್ದು. ನಿನ್ನ ತಲೆಯಲ್ಲಿ ಏನೂ ಇಲ್ಲ ಎನ್ನುವುದನ್ನು ಒಬ್ಬರಿಗೆ ಹೇಗೆ ಬೈಯ್ಯಬಹುದು? ಬ್ಲ್ಯಾಕ್ಆ್ಯಡರ್ ಹೀಗೆ ಬಯ್ಯುತ್ತಾನೆ,” If a hungry cannibal cracked your head open, there wouldn’t be enough inside to cover a small water biscuit”- ನಿನ್ನ ತಲೆಯಲ್ಲಿರುವ ಸರಕು ಒಂದು ಬಿಸ್ಕೆಟ್ ಮಾಡಲೂ ಸಾಕಾಗದು.

  ಹೀಗೆ ಅನೇಕ ಜೋಕ್ ಗಳು ಈ ಧಾರಾವಾಹಿಯ ತುಂಬಾ ತುಂಬಿಕೊಂಡಿವೆ. ಆದರೆ ಇದೆಲ್ಲದನ್ನು ಮೀರಿಸುವಂತ ಒಂದು ಸಂಗತಿ ಧಾರಾವಾಹಿಯ ಕೊನೆಯ ದೃಶ್ಯ. ಟ್ರೆಂಚ್ ಬಿಟ್ಟು ಯುದ್ಧಕ್ಕೆ ನುಗ್ಗಲು ಆದೇಶ ಬಂದ ನಂತರ ಬ್ಲ್ಯಾಕ್ಆ್ಯಡರ್ ಮತ್ತು ಉಳಿದೆಲ್ಲರೂ ಅಲ್ಲಿಯ ತನಕ ಏನೇ ಹಾಸ್ಯ ಮಾಡಿದರೂ ಯುದ್ಧದಲ್ಲಿ ಎಲ್ಲರಿಗೂ ಆಗುವ ಭಯವನ್ನು ಬಹಳ ಹೃದಯಸ್ಪರ್ಶಿಯಾಗಿ ತೋರಿಸಿದ್ದಾರೆ. ಆದೇಶಕ್ಕೆ ತಲೆಬಾಗಿ ಎಲ್ಲರೂ ಮೆಷಿನ್ ಗನ್ ಗಳ ಗುಂಡಿಗೆ ಎದೆಯೊಡ್ಡಿ ನುಗ್ಗುತ್ತಿದ್ದಂತೆ, ಚಿತ್ರ ನಿಧಾನವಾಗಿ ಯುದ್ಧಭೂಮಿಯಿಂದ ಹೂಗಿಡಗಳುಳ್ಳ ಒಂದು ದೊಡ್ಡ ಮೈದಾನಾವಾಗಿ ಪರಿವರ್ತನೆಯಾಗುತ್ತದೆ. ಅಂದರೆ ಇಂದು ನಾವು ಕಾಣುತ್ತಿರುವ ಈ ಸುಂದರ ನೋಟಕ್ಕೆ ಅನೇಕ ಜನರು ಜೀವ ತೆತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳುವುದರೊಂದಿಗೆ ಧಾರಾವಾಹಿ ಮುಗಿಯುತ್ತದೆ. ಹಾಸ್ಯ ಧಾರಾವಾಹಿಗಳು ಅನೇಕ ಮಾಡಲಾಗಿದ್ದರೂ, ಹೀಗೆ ಯುದ್ಧದ ಬಗ್ಗೆ ಗೇಲಿ ಮಾಡುತ್ತ ಸೈನಿಕರ ಗಡಿಯಲ್ಲಿನ ಜೀವನದ ಬಗ್ಗೆ ತೋರಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ನನಗೆ ಈ ಸಿರೀಸ್ ಬಹಳ ಅಚ್ಚುಮೆಚ್ಚು.
ಧಾರಾವಾಹಿಯ ಕೊನೆಯ ದೃಶ್ಯ - https://www.youtube.com/watch?v=vH3-Gt7mgyM


-ವಿಶ್ವನಾಥ್

Saturday, 30 June 2018

ಹೊಟೆಲ್ ರವಾಂಡ(Hotel Rwanda)


IMDb:  https://www.imdb.com/title/tt0395169/?ref_=nv_sr_1


  ಆಫ್ರಿಕಾ ಎಂದ ಕೂಡಲೆ ನಮಗೆ ಥಟ್ಟನೆ ನೆನಪಾಗುವುದು ಎರಡು. ಕಾಡಿನ ಸಫಾರಿ ಮತ್ತು ಅಲ್ಲಿನ ಜನರ ಬಡತನ, ಹಸಿವು. ಅಂತಾರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನೋಡುವ ಹವ್ಯಾಸ ಉಳ್ಳವರಿಗೆ ಅಲ್ಲಿನ ಕೆಲವು ಆಂತರಿಕ ಸಮಸ್ಯೆಗಳ ಬಗ್ಗೆ ಸ್ಥೂಲವಾಗಿ ಒಂದು ಚಿತ್ರಣವೂ ಇರಬಹುದು. ಪಾಶ್ಚಿಮಾತ್ಯ ದೇಶಗಳಲ್ಲಿ ನಡೆಯುವ ಚಿಕ್ಕ ಪುಟ್ಟ ಘಟನೆಗಳು ಅಬ್ಬರದಿಂದ ವರದಿಯಾಗುವಂತೆ, ಆಫ್ರಿಕಾದ ದೇಶಗಳ ಬಗ್ಗೆಯೂ ವರದಿ ಆದರೆ ಎಷ್ಟೋ ಜೀವಹಾನಿ ತಪ್ಪಿಸಬಹುದು. ಆದರೆ ಅದೊಂದು ಶಾಪಗ್ರಸ್ತ ನಾಡು ಎನಿಸುತ್ತದೆ. ಅಲ್ಲಿರುವ ಜನರು ಮನುಷ್ಯರೇ ಅಲ್ಲವೇನೋ ಎಂಬ ಉದಾಸೀನದ ಭಾವನೆ ಹೊರಗಿನ ಜಗತ್ತಿಗೆ ಮೇಲ್ನೋಟಕ್ಕಲ್ಲದಿದ್ದರೂ ಇದ್ದೇ ಇದೆ. ಯಾರೂ ಅಲ್ಲಿನ ದೇಶಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸುವುದಿಲ್ಲ.

  ಜಗತ್ತಿನ, ಅದರಲ್ಲೂ ವಿಶ್ವಸಂಸ್ಥೆಯ ನಿರ್ಲಕ್ಷ್ಯದಿಂದ, ತಪ್ಪಿಸಬಹುದಾಗಿದ್ದಂತ ಒಂದು ದುರಂತ 1994ರಲ್ಲಿ ನಡೆದೇ ಹೋಯಿತು. ಆಫ್ರಿಕಾದಲ್ಲಿ ಉಗಾಂಡದ ದಕ್ಷಿಣಕ್ಕೆ ಇರುವ ಈ ಪುಟ್ಟ ದೇಶದಲ್ಲಿ 1994ರಲ್ಲಿ ನಡೆದ ಜನಾಂಗೀಯ ಘರ್ಷಣೆಯಿಂದ ಸುಮಾರು 8 ಲಕ್ಷ ಜನರ ಬಲಿಯಾಯಿತು. ರವಾಂಡದಲ್ಲಿ ಎರಡು ಪಂಗಡಗಳು- ಹುಟು ಮತ್ತು ತೂಟ್ಸಿ(Hutu and Tutsi). ಐತಿಹಾಸಿಕವಾಗಿ ತೂಟ್ಸಿ ಜನಗಳು ಅಲ್ಪಸಂಖ್ಯಾತರಾಗಿದ್ದರೂ, ಆಳುವ ಪಂಗಡವಾಗಿತ್ತು. ಹುಟು ಜನರು ಬಹುಸಂಖ್ಯಾತರಾಗಿದ್ದು ರೈತರು, ಕೂಲಿ ಕಾರ್ಮಿಕರು ಮತ್ತು ಇತರೆ ಆರ್ಥಿಕವಾಗಿ ದುರ್ಬಲ ಜನರನ್ನು ಒಳಗೊಂಡಿತ್ತು. ಈ ಇಬ್ಬರ ನಡುವಿನ ವ್ಯತ್ಯಾಸ ಕೇವಲ ಆಳುವವರು ಮತ್ತು ಆಳಲ್ಪಡುವವರು ಎಂದಷ್ಟೇ ಆಗಿತ್ತು. ಹಾಗಾಗಿ ಯಾರಾದರೂ ಹುಟುವೊಬ್ಬ ಆರ್ಥಿಕವಾಗಿ ಬೆಳೆದರೆ ಅವನು ನಿಧಾನವಾಗಿ ಸಾಮಾಜಿಕ ಸ್ಥಾನಮಾನ ಗಳಿಸುತ್ತ ತೂಟ್ಸಿ ಗುಂಪಿಗೆ ಸೇರಿಕೊಳ್ಳುತ್ತಿದ್ದ. ಇಷ್ಟು ಸರಳವಾಗಿದ್ದ ಈ ಒಂದು ವ್ಯತ್ಯಾಸವನ್ನು ಜಟಿಲಗೊಳಿಸಿದ್ದು, ಜರ್ಮನ್ ಮತ್ತು ಬೆಲ್ಜಿಯನ್ ರಾಜಾಡಳಿತ. ಸ್ವಾತಂತ್ರ್ಯ ಪೂರ್ವದಲ್ಲಿ ರವಾಂಡ ಬೆಲ್ಜಿಯಂ ದೇಶದ ವಸಾಹತಾಗಿತ್ತು. ಮೊದಲನೆ ವಿಶ್ವಯುದ್ಧ ಮುಗಿದ ಮೇಲೆ ವರ್ಸೆಯ ಒಪ್ಪಂದದಂತೆ(Treaty of Versaille), ಜರ್ಮನಿಯ ಆಡಳಿತದಲ್ಲಿದ್ದ ರವಾಂಡ-ಉರುಂಡಿ(Rwanda-Urundi) ಎಂಬ ವಸಾಹತನ್ನು ಬೆಲ್ಜಿಯಂ ದೇಶಕ್ಕೆ ಒಪ್ಪಿಸಲಾಗುತ್ತದೆ. ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಮತ್ತು ಹೆಚ್ಚಿನ ಜನರ ಮೇಲೆ ನಿಯಂತ್ರಣ ಕಾಯ್ದುಕೊಳ್ಳಲು ಬೆಲ್ಜಿಯನ್ ರಾಜಾಡಳಿತ ತೂಟ್ಸಿ ರಾಜಮನೆತನಗಳಿಗೆ ಮಣೆಹಾಕಿ ಅವರಿಗೆ ಪಾಶ್ಚಾತ್ಯ ಶಿಕ್ಷಣ, ಉಡುಗೆ-ತೊಡುಗೆ ಎಲ್ಲವನ್ನೂ ಕೊಟ್ಟಿತು. ಇದು ಸಾಲದೆಂಬಂತೆ 1926ರಲ್ಲಿ ಹುಟು ಮತ್ತು ತೂಟ್ಸಿ ಜನಗಳನ್ನು ಗುರುತಿಸಲು ಗುರುತಿನ ಚೀಟಿಗಳನ್ನು ವಿತರಿಸಲು ಆರಂಭಿಸಿತು. ಬೆಲ್ಜಿಯನ್ ರಾಜಾಡಳಿತ ಒಬ್ಬನನ್ನು ಹುಟು ಅಥವಾ ತೂತ್ಸಿಯೆಂದು ದೃಢಪಡಿಸಲು ಮೂಗಿನ ಅಳತೆ, ಮುಖದ ಉದ್ದ ಹೀಗೆ ಏನೇನೋ ಮಾನದಂಡಗಳನ್ನು ತಂದಿತು. ಈ ಒಂದು ಘಟನೆ ಅಲ್ಲಿಯ ತನಕ ಎರಡೂ ಗುಂಪುಗಳ ನಡುವೆ ಇದ್ದ ಸರಳ ಆರ್ಥಿಕ ವ್ಯತ್ಯಾಸವನ್ನು ಸಂಕೀರ್ಣಗೊಳಿಸಿ ಅವರ ನಡುವೆ ಇದ್ದ ಗೆರೆಯನ್ನು ಗೋಡೆಯಾಗಿ ಬದಲಿಸಿತು. ಇದರಿಂದ ಹುಟುಗಳಿಗೆ ತೂಟ್ಸಿ ರಾಜಮನೆತನಗಳ ಮೇಲಿದ್ದ ಸಿಟ್ಟು, ಅಸಹನೆ ಜನಾಂಗಿಯ ದ್ವೇಷಕ್ಕೆ ತಿರುಗಿ ತಲೆತಲಾಂತರಗಳವರೆಗೂ ಮುಂದುವರೆಯುವಂತೆ ಮಾಡಿತು. ಸ್ವಾತಂತ್ರ್ಯ ಸಿಕ್ಕ ನಂತರ(1961-62) ರವಾಂಡ ಮತ್ತು ಬುರುಂಡಿ ಎಂದು ಎರಡು ದೇಶಗಳಾಗಿ, ರವಾಂಡದಲ್ಲಿ ಹುಟು ಕ್ರಾಂತಿಯಾಗಿ ಹುಟು ಬಹುಸಂಖ್ಯಾತ ಆಡಳಿತ ಸ್ಥಾಪಿತವಾಯಿತು ಮತ್ತು ಬುರುಂಡಿಯಲ್ಲಿ ತೂಟ್ಸಿ ಆಡಳಿತ ಉಳಿಯಿತು. ಸ್ವಾತಂತ್ರ್ಯಾನಂತರ ಹಲವಾರು ತೂಟ್ಸಿಗಳು(ಹೆಚ್ಚಾಗಿ ರಾಜಮನೆತನದವರು ಮತ್ತು ಇತರ ಪ್ರಭಾವಿ ಕುಟುಂಬಗಳು) ರವಾಂಡ ದೇಶವನ್ನು ತೊರೆದು ಉಗಾಂಡ ದೇಶ ಸೇರಿ ಅಲ್ಲಿಂದ ಮತ್ತೆ ರವಾಂಡದ ಮೇಲೆ ನಿಯಂತ್ರಣ ಪಡೆಯಲು ಹೋರಾಟ ಮುಂದುವರೆಸುತ್ತಾರೆ. 

ರವಾಂಡ ದೇಶದಲ್ಲಿ ಕೊಡಲಾಗುತ್ತಿದ್ದ ಗುರುತಿನ ಚೀಟಿ

  ಸುಮಾರು ಮೂವತ್ತು ವರ್ಷಗಳ ಕಾಲ ಈ ಎರಡೂ ಗುಂಪುಗಳ ನಡುವೆ ಸಂಘರ್ಷ ಆಗುತ್ತಲೇ ಇರುತ್ತದೆ. 90ರ ದಶಕದ ಹೊತ್ತಿಗೆ ತೂಟ್ಸಿ ಗುಂಪಿನ ರವಾಂಡನ್ ಪೇಟ್ರಿಯಾಟಿಕ್ ಫ್ರಂಟ್(FPR- Front Patriotique Rwandais/ Rwandan Patriotic Front) ರವಾಂಡ ದೇಶದ ಮೇಳೆ ದಾಳಿ ಮಾಡಿ ಉತ್ತರದ ಕೆಲವು ಭಾಗಗಳನ್ನು ವಶಪಡಿಸಿಕೊಳ್ಳುತ್ತಾರೆ. ಫ್ರೆಂಚ್ ಮತ್ತು ಜೈರಿಯನ್(ಈಗಿನ ಕಾಂಗೋ) ಪಡೆಗಳ ಸಹಾಯದೊಂದಿಗೆ ರವಾಂಡ ಸರ್ಕಾರ ಮತ್ತು RPF ನಡುವೆ ಕದನ ವಿರಾಮ ಘೋಷಣೆಯಾಗುತ್ತದೆ. ಅಲ್ಲಿಂದ 93ರವರೆಗೆ ರವಾಂಡ ಅಧ್ಯಕ್ಷ ಜುವೆನಿಲ್ ಹಬ್ಯಾರಿಮಾನ ತೂಟ್ಸಿ RPF ಬಂಡುಕೋರರನ್ನು ಹತ್ತಿಕ್ಕಲು ಇಂಟರ್ ಹಾಮ್ವೆ(Interhamve- “Those who stand together”) ಎಂಬ ಸಶಸ್ತ್ರ ನಾಗರೀಕ ಪಡೆಯನ್ನು ಸೃಷ್ಟಿಸಿ ತರಬೇತಿ ಕೊಡುತ್ತಾನೆ. ಇದರ ಜೊತೆಜೊತೆಯಲ್ಲೇ ರವಾಂಡದಲ್ಲಿ ಬಹುಪಕ್ಷೀಯ(ಹುಟು-ತೂಟ್ಸಿ ಒಳಗೊಂಡ) ಸರ್ಕಾರದ ಸೃಷ್ಟಿಯನ್ನು ತಡೆಯುತ್ತಾನೆ. ಫೆಬ್ರವರಿ 93ರ ಅವಧಿಗೆ RPF ಪಡೆ ರಾಜಧಾನಿ ಕಿಗಾಲಿಯ ಹೊರವಲಯಕ್ಕೆ ತಲುಪಿದಾಗ ಹಲವಾರು ತಿಂಗಳ ಮಾತುಕತೆ ನಡೆಸಿ ಆಗಸ್ಟ್ 93ರಲ್ಲಿ ಅಧ್ಯಕ್ಷ ಹಬ್ಯಾರಿಮಾನ ಮತ್ತು RPF ನಡುವೆ ಶಾಂತಿ ಒಪ್ಪಂದ ಸಹಿ ಹಾಕಲಾಗುತ್ತದೆ. ಇದರನ್ವಯ ರವಾಂಡದಿಂದ ವಲಸೆ ಹೋಗಿದ್ದ ಜನರಿಗೆ(ಹುಟು ಮತ್ತು ತೂಟ್ಸಿ) ಮರಳಿ ಬರಲು ಅವಕಾಶ ಮಾಡಿಕೊಡಲಾಗುತ್ತದೆ. ಇದೆಲ್ಲವನ್ನೂ ವಿಶ್ವಸಂಸ್ಥೆಯ ಪಡೆಗಳ ಕಣ್ಗಾವಲಿನಲ್ಲಿ ಮಾಡಲಾಗುತ್ತದೆ. ಇಷ್ಟಾದರೂ ಹಬ್ಯಾರಿಮಾನ ಬಹುಪಕ್ಷೀಯ ಸರ್ಕಾರ ರಚನೆಯಾಗುವುದನ್ನು ಮಾರ್ಚ್ 94ರವರೆಗೆ ತಡೆಯುತ್ತಾನೆ. ಇನ್ನೇನು ಅಂತರ್ಯುದ್ಧ ಆರಂಭವಾಗುತ್ತದೆ ಎಂದು ಸೂಚನೆ ಸಿಕ್ಕ ಹಲವಾರು ಮಾನವ ಹಕ್ಕು ಹೋರಾಟಗಾರರು ರವಾಂಡ ಬಿಟ್ಟು ವಲಸೆ ಹೋಗುತ್ತಾರೆ. ಏಪ್ರಿಲ್ 6, 1994ರಲ್ಲಿ ಕಿಗಾಲಿ ಏರ್ಪೋರ್ಟ್ ನ ಬಳಿ ಹಬ್ಯಾರಿಮಾನ ಮತ್ತು ಬುರುಂಡಿಯ ಅಧ್ಯಕ್ಷ ಸಿಪ್ರಿಯೆನ್ ಎಂಟಾರ್ಯಮಿರ(Cyprien Ntaryamira) ಇದ್ದ ವಿಮಾನವನ್ನು ಹೊಡೆದುರುಳಿಸಲಾಗುತ್ತದೆ. ಈ ಒಂದು ಘಟನೆಯಿಂದ ಮದ್ದಿನ ರಾಶಿಗೆ ಕಿಡಿ ಹಾರಿಸಿದಂತಾಗುತ್ತದೆ. ವಿಮಾನದ ಮೇಲೆ ದಾಳಿ ಮಾಡಿದವರು ಯಾರು ಎಂದು ತಿಳಿಯದಿದ್ದರೂ, ಒಂದು ಗುಂಪು ಇನ್ನೊಂದನ್ನು ದೂಷಿಸಿ ಯುದ್ಧ ಪ್ರಾರಂಭವಾಗಲು ಅವಕಾಶ ಮಾಡಿಕೊಡುತ್ತದೆ. ತೂಟ್ಸಿ ಮತ್ತು ಮಧ್ಯಮಾರ್ಗಗಾಮಿ(moderate) ಹುಟುಗಳನ್ನು ಕೊಲ್ಲಲು ರೇಡಿಯೋದಲ್ಲಿ ಹುಟು ತೀವ್ರವಾದಿಗಳು ಜನಗಳಿಗೆ ಸಂದೇಶ ಕೊಡುತ್ತಾರೆ. ಏಪ್ರಿಲ್ 7, 1994ರಿಂದ ರವಾಂಡದಲ್ಲಿ ಜನಾಂಗಿಯ ಅಂತರ್ಯುದ್ಧ ಪ್ರಾರಂಭವಾಗುತ್ತದೆ. ಇಂಟರ್ ಹಾಮ್ವೆ ಮತ್ತು ರವಾಂಡ ಸಶಸ್ತ್ರ ಪಡೆ(FAR- Forces armées rwandaises/ Rwandan Armed Forces) ಸೇರಿ ರೋಡ್ ಬ್ಲಾಕ್ ಗಳನ್ನು ನಿರ್ಮಿಸಿ ಮನೆ ಮನೆಗೂ ಹೋಗಿ ತೂಟ್ಸಿ ಮತ್ತು ಮಧ್ಯಮಾರ್ಗಗಾಮಿ ಹುಟುಗಳನ್ನು ಕೊಲ್ಲಲು ಪ್ರಾರಂಭಿಸುತ್ತಾರೆ. ಇಲ್ಲಿ ಶುರುವಾಗುವುದೇ ಹೊಟೆಲ್ ರವಾಂಡ ಸಿನೆಮಾದ ಕಥೆ. 


  ಈ ಸಿನೆಮಾದ ಬಗ್ಗೆ ನನಗೆ ಇಷ್ಟವಾದ ವಿಷಯವೆಂದರೆ, ಹಾಲಿವುಡ್ ನವರು ಆಫ್ರಿಕಾದ ಒಂದು ಪುಟ್ಟ ದೇಶದ ಸಮಸ್ಯೆಯೊಂದರ ಬಗ್ಗೆ ಇಷ್ಟು ದೊಡ್ಡ ಸಿನೆಮಾ ಮಾಡಿ, ಈ ದೇಶದ ಬಗ್ಗೆಯೇ ಗೊತ್ತಿರದ ಜನಗಳಿಗೆ(ನನ್ನನ್ನೂ ಒಳಗೊಂಡಂತೆ) ಈ ಜನಾಂಗೀಯ ಘರ್ಷಣೆಯ ಪರಿಚಯ ಮಾಡಿಸಿದ್ದು. ಈ ಚಿತ್ರ ಹೊಟೆಲ್ ಮಿ ಕೊಲ್ಲೀನ್(Hotel Mille Colline) ನ ಮ್ಯಾನೇಜರ್ ಆಗಿದ್ದ ಪಾಲ್ ರುಸೆಸಬಗಿನ(Paul Rusesabagina) ಬರೆದಿರುವ “An Ordinary Man” ಪುಸ್ತಕದ ಮೇಲೆ ಆಧರಿಸಿದೆ. ಸ್ವತಃ ತಾನು ಹುಟುವಾಗಿದ್ದರೂ ಆಶ್ರಯ ಬೇಡಿ ಬಂದ ಸುಮಾರು 1268 ತೂಟ್ಸಿ ಮತ್ತು ಇತರ ಜನಗಳಿಗೆ ಪಾಲ್ ಹೊಟೆಲ್ ನಲ್ಲಿ ಬಚ್ಚಿಟ್ಟು ಕಾಪಾಡಿದ ಕಥೆ. ಹಾಲಿವುಡ್ ನ ‘ಸಹಜ’ ಶೈಲಿಯಲ್ಲಿ ಒಬ್ಬ ನಾಯಕನನ್ನು ಸೃಷ್ಟಿಸಿ(ಪಾಲ್ ರುಸೆಸಬಗಿನ ಪಾತ್ರದಲ್ಲಿ ಡಾನ್ ಕೀಡಲ್), ಆತ ಅಸಾಧ್ಯ ಪರಿಸ್ಥಿತಿಗಳಲ್ಲೂ ಎಲ್ಲವನ್ನು ಮೀರಿ ಗೆದ್ದು ಬರುವಂತೆ ಚಿತ್ರಿಸಲಾಗಿದೆ. ಹಾಗಾಗಿ ನೈಜತೆಯನ್ನು ನಿಖರವಾಗಿ ತೋರಿಸುವಲ್ಲಿ ಸ್ವಲ್ಪ ಎಡವಿರಬಹುದು(eg., ಪಾಲ್ ಈ ಗಲಭೆ ಆರಂಭವಾದನಂತರ ಹೊಟೆಲ್ ಮಿ ಕೊಲ್ಲೀನ್ ಗೆ ಸೇರಿಕೊಳ್ಳುವುದು. ಆದರೆ ಚಿತ್ರದಲ್ಲಿ ಆತ ಗಲಭೆಗೂ ಮುಂಚಿನಿಂದಲೇ ಅಲ್ಲಿ ಕೆಲಸ ಮಾಡುತ್ತಿರುತ್ತಾನೆ ಎಂದು ತೋರಿಸಲಾಗಿದೆ.) ಮತ್ತು ಈ ಚಿತ್ರ ಕೇವಲ ಪಾಲ್ ನ ದೃಷ್ಟಿಕೋನದಿಂದಷ್ಟೇ ಚಿತ್ರಿಸಿಲಾಗಿರುವುದರಿಂದ ಈ ಸಂಘರ್ಷದಲ್ಲಿ ಪಾಲ್ ನ ಹೊರತಾಗಿ ಬೇರೆಯವರ ಅನುಭವ ಹೇಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಅಸ್ಪಷ್ಟತೆಯನ್ನು ಗೊಂದಲಮಯವಾಗಿಸುವ, ಪಾಲ್ ನ ಕಥೆಯ ಸಂಪೂರ್ಣ ವಿರುದ್ಧದ ದೃಷ್ಟಿಕೋನದ, ಅದೇ ಹೊಟೆಲ್ ನಲ್ಲಿ ಆಶ್ರಯ ಪಡೆದ ತೂಟ್ಸಿಯೊಬ್ಬನ ಪುಸ್ತಕವೂ ಉಂಟು(Inside The Hotel Rwanda – Edouard Kayihura). ಮತ್ತು ವಿಶ್ವಸಂಸ್ಥೆಯ ಪರವಾಗಿ ನಿಯೋಜಿತಗೊಂಡ, ರವಾಂಡದ ಅಂತರ್ಯುದ್ಧದ ಅವಧಿಯಲ್ಲಿ ಎಲ್ಲವನ್ನೂ ಅಸಹಾಯಕರಾಗಿ ನಿಂತು ನೋಡಿದ, ಕೆನೆಡಾದ ಜನರಲ್ ರೋಮಿಯೋ ಡಲೈರ್(Lt.Gen. Romeo Dallaire) ರ ಪುಸ್ತಕ “Shake Hands With The Devil” ಕೂಡ ಈ ಘಟನೆಯ ಮೇಲೆ ಅವರದೇ ದೃಷ್ಟಿಕೋನದಿಂದ ಬೆಳಕು ಚೆಲ್ಲುತ್ತದೆ. ಅದೇನೇ ಇದ್ದರೂ ಜನಾಂಗೀಯ ಯುದ್ಧ ನಡೆದದ್ದು ಮತ್ತು ಅದರ ಬಗ್ಗೆ ಸರಿಯಾದ ಸಮಯದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ವಿಶ್ವಸಂಸ್ಥೆ ವಿಫಲವಾಗಿದ್ದು ಮಾತ್ರ ನಿಜ. ಇದಿಷ್ಟನ್ನು ಈ ಚಿತ್ರ ಎತ್ತಿ ತೋರಿಸುವಲ್ಲಿ ಯಶಸ್ವಿಯಾಗಿದೆ. 


  ಚಿತ್ರ RTLM ರೇಡಿಯೋದಲ್ಲಿ ತೂಟ್ಸಿಗಳನ್ನು ದೇಶ ಬಿಟ್ಟು ಕಳಿಸಬೇಕು ಎನ್ನುವ ಸಂದೇಶ ಬಿತ್ತರವಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ನಿಧಾನವಾಗಿ ದೃಶ್ಯ 1994ರ ಕಿಗಾಲಿಯ ರಸ್ತೆಗಳ ದೃಶ್ಯದೊಂದಿಗೆ ತೆರೆದುಕೊಳ್ಳುತ್ತದೆ. ನಮ್ಮ ಭಾರತದ ಮಾರುಕಟ್ಟೆ ಬೀದಿಗಳಲ್ಲಿ ಇರುವಂತೆಯೇ ಇಕ್ಕಟ್ಟು, ಟ್ರಾಫಿಕ್ಕು. ಪಾಲ್ ತನ್ನ ಸಹಾಯಕ ದೂಬೆನೊಂದಿಗೆ ಕಿಗಾಲಿ ಏರ್ಪೋರ್ಟ್ ಗೆ ತೆರಳಿ ಅಲ್ಲಿ ತನ್ನ ಹೊಟೆಲ್ಲಿಗಾಗಿ ಬಂದಂತ ಕೆಲವು ವಸ್ತುಗಳನ್ನು ತರಲು ಹೊರಟಿರುತ್ತಾನೆ. ಏರ್ಪೋರ್ಟ್ ತಲುಪುತ್ತಿದ್ದಂತೆ ಅಲ್ಲಿನ ಕಾವಲುಪಡೆಯ ಅಧಿಕಾರಿ ಪಾಲ್ ನತ್ತ ತಿರುಗಿ ನಗುತ್ತಲೇ, ಪಾಲ್ ಅವನಿಗೆ ಸ್ವಲ್ಪ ಹಣ ಕೊಟ್ಟು ಮೆಚ್ಚಿಸುತ್ತ ಮುಂದೆ ಸಾಗುತ್ತಾನೆ. ಮತ್ತೆ ವಿಮಾನದಿಂದ ಸಾಮಾನು ಇಳಿಸಿಕೊಟ್ಟವನಿಗೂ ಕೈ ಬೆಚ್ಚಗೆ ಮಾಡಿ ದೂಬೆನೊಂದಿಗೆ ಹೊರಡುತ್ತಾನೆ. ಕಾರಿನಲ್ಲಿ ತಾನು ಕ್ಯೂಬಾದಿಂದ ತರಿಸಿದ ಸಿಗಾರ್ ಗಳಿಗೆ ಒಂದಕ್ಕೆ 10000 ಫ್ರಾಂಕ್ ಗಳ ಬೆಲೆಯಿದ್ದು ಆದರೆ ತನಗೆ ಅವು ಇನ್ನೂ ಬೆಳೆಬಾಳುವಂತವು ಎಂದಾಗ ಪಾಲ್ ಸಹಾಯಕ ಬೆರಗಾಗಿ ಯಾಕೆ ಎಂದು ಕೇಳುತ್ತಾನೆ. ಶ್ರೀಮಂತರಿಗೆ ಸುಮ್ಮನೆ 10000 ಫ್ರಾಂಕ್ ಬೆಲೆಬಾಳುವ ಸಿಗಾರ್ ಎಂದರೆ ಅವರಿಗೆ ಅದು ದೊಡ್ದದೆನಿಸುವುದಿಲ್ಲ. ಆದರೆ ಅದೇ ಆ ಸಿಗಾರ್ ಜಗತ್ತಿನ ಅತ್ಯುತ್ತಮ ಕೊಹಿಬಾ ಸಿಗಾರ್ ಎಂದು ಹೇಳಿ ಕೊಟ್ಟರೆ ಮೆಚ್ಚಿ ಅದನ್ನು ಸೇದುತ್ತಾರೆ. ಆಗ ಅದನ್ನು ತಮ್ಮ ಸ್ಟೈಲ್ ಎನ್ನುವಂತೆ ಶ್ರೀಮಂತರು ಭಾವಿಸಿ ಬಳಸುತ್ತಾರೆ ಎಂದು ಪಾಲ್ ತನ್ನ ಹೊಟೆಲ್ ವ್ಯಾಪಾರದ ಚತುರತೆಯನ್ನು ತೋರಿಕೊಳ್ಳುತ್ತಾನೆ. ಅಲ್ಲಿಂದ ಇಬ್ಬರೂ ತಮ್ಮ ಹೊಟೆಲ್ಲಿಗೆ ಬೇಕಾದ ಇನ್ನಷ್ಟು ಸಾಮಾನು ತರಲು ವ್ಯಾಪಾರಿ ಜಾರ್ಜ್ ರುಟಗಾಂಡ ಬಳಿಗೆ ಹೋಗುತ್ತಾರೆ. ಜಾರ್ಜ್ ಮಾತನಾಡುತ್ತ ಪಾಲ್ ಗೆ ಪಾಲಿಟಿಕ್ಸ್ ಸೇರಲು ಅದು ಒಳ್ಳೆಯ ಕಾಲವೆಂದೂ, ಪಾಲ್ ಗೂ ಅವನೊಡನೆ ಇಂಟರ್ ಹಾಮ್ವೆಯ ಪ್ರಚಾರ ಮೆರವಣಿಗೆಗಳಿಗೆ ಬರಬೇಕು ಎಂದು ಹೇಳುತ್ತಾನೆ. ಅದಕ್ಕೆ ಪಾಲ್ ತನಗೆ ಹೊಟೆಲಿನಲ್ಲಿ ಬಹಳ ಕೆಲಸವಿದ್ದು ಇಂತಹ ವಿಷಯಗಳಿಗೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ಜಾರ್ಜ್ ನ ಸಲಹೆಯನ್ನು ಸೂಕ್ಷ್ಮವಾಗಿ ತಳ್ಳಿಹಾಕುತ್ತಾನೆ. ಹೊಟೆಲ್ಲಿಗೆ ಬೇಕಾದ ಬಿಯರ್ ಅನ್ನು ಗಾಡಿಗೆ ಲೋಡ್ ಮಾಡಲು ಹುಡುಗರೆಲ್ಲ ಕೆಲಸ ಮಾಡುತ್ತಿದ್ದಾಗ ಒಬ್ಬ ಒಂದು ದೊಡ್ಡ ಡಬ್ಬ ಬೀಳಿಸಿ ಅದರಲ್ಲಿ ಇದ್ದ ಮಚ್ಚುಗಳೆಲ್ಲ ಹೊರೆಗೆ ಬೀಳುತ್ತದೆ. ಅದನ್ನು ನೋಡಿ ಗಾಬರಿಯಾದರೂ ತೋರಿಕೊಳ್ಳದ ಪಾಲ್ ಇದೆಲ್ಲ ಏನು ಎಂಬಂತೆ ಜಾರ್ಜ್ ಕಡೆಗೆ ನೋಡಿದಾಗ, ಜಾರ್ಜ್ ಇವನ್ನು ಚೀನಾದಿಂದ ಬಹಳ ಕಡಿಮೆ ದರಕ್ಕೆ ತರಿಸಿದ್ದು, ಇವನ್ನು ಮುಂದಾಗಲಿರುವ ಕ್ರಾಂತಿಯಲ್ಲಿ ಬಳಸುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅಲ್ಲಿಂದ ಹೊರಟ ಮೇಲೆ ದೂಬೆ ಜಾರ್ಜ್ ಒಬ್ಬ ಕೆಟ್ಟ ಮನುಷ್ಯ ಎಂದಾಗ ಪಾಲ್ ಇಂತವರು ಬಹಳ ದಿನ ಹೀಗೆ ಮುಂದುವರೆಯಲು ಸಾಧ್ಯವಿಲ್ಲ, ಇವೆಲ್ಲಕ್ಕೂ ಒಂದು ಮುಕ್ತಾಯ ಬೇಗ ಬರಲಿದೆ ಎಂದು ಹೇಳಿ ಏನಿದ್ದರೂ ಅವನೊಡನೆ ನಮ್ಮದು ವ್ಯಾಪರವಷ್ಟೇ ಎಂದು ಹೇಳುತ್ತಾನೆ. ಬೀದಿಯಲ್ಲಿ ಇಂಟರ್ ಹಾಮ್ವೆ ಮೆರವಣಿಗೆ ನೋಡಿ ದೂಬೆ ಗಾಬರಿಗೊಂಡು ಆ ಮೆರವಣಿಗೆಯಲ್ಲಿ ತನ್ನ ಅಕ್ಕ ಪಕ್ಕದ ಮನೆಯವರೂ ಇದ್ದು ಅವರಿಗೆ ತಾನು ಒಬ್ಬ ತೂಟ್ಸಿ ಎಂದು ಗೊತ್ತು, ಹಾಗಾಗಿ ತನಗೆ ಏನಾದರೂ ಮಾಡಿಯಾರು ಎಂದು ಹೆದರಿ ಕಾರಿನಲ್ಲೇ ಅಡಗಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ಪಾಲ್ ಅವನಿಗೆ ಧೈರ್ಯ ಹೇಳಿ ಬಚ್ಚಿಟ್ಟು ಕೊಂಡರೆ ಅವರಿಗೆ ಅನುಮಾನ ಬರುತ್ತದೆ, ಹಾಗಾಗಿ ಸುಮ್ಮನೆ ಅವರತ್ತ ನಗುತ್ತ ಕೂರು, ಅವರೆಲ್ಲ ಹೊರಟುಹೋಗುತ್ತಾರೆ ಎಂದು ಸಮಾಧಾನ ಹೇಳಿ ಮೆರವಣಿಗೆ ಮುಗಿದ ಮೇಲೆ ಅಲ್ಲಿಂದ ಹೊರಟು ಹೊಟೆಲ್ ತಲುಪುತ್ತಾರೆ. ಅಲ್ಲಿ ಪಾಲ್ ಹೊಟೆಲ್ ಗೆ ಬಂದ ಜನರಲ್ ಬಿಜಿಮನ್ಗು ಮತ್ತು ವಿಶ್ವಸಂಸ್ಥೆಯ ಕರ್ನಲ್ ಆಲಿವರ್(ಜನರಲ್ ರೋಮಿಯೋ ಡಲೈರ್ ರನ್ನು ಕರ್ನಲ್ ಆಲಿವರ್ ಎಂಬ ಕಾಲ್ಪನಿಕ ಪಾತ್ರದಲ್ಲಿ ತೋರಿಸಲಾಗಿದೆ) ಅವರನ್ನು ವಿಚಾರಿಸಿಕೊಂಡು ಜನರಲ್ ಬಿಜಿಮನ್ಗುಗಾಗಿ ಎರಡು ಸ್ಕಾಚ್ ಬಾಟಲಿಗಳನ್ನು ತೆಗೆದಿಟ್ಟು ಮನೆಗೆ ತೆರಳುತ್ತಾನೆ. 


  ಮನೆಗೆ ಬಂದು ತನ್ನ ಹೆಂಡತಿ, ಮಕ್ಕಳು ಮತ್ತು ಮನೆಗೆ ಬಂದಿದ್ದ ಹೆಂಡತಿಯ ತಮ್ಮನ ಕುಟುಂಬ ಎಲ್ಲರನ್ನೂ ಮಾತನಾಡಿಸುತ್ತಾನೆ. ರಾತ್ರಿ ಊಟ ಮುಗಿದ ನಂತರ ಪಾಲ್ ತನ್ನ ಹೆಂಡತಿ ತಾತಿಯಾನ ಮತ್ತು ಆಕೆಯ ಸಹೋದರ ಮತ್ತು ಆತನ ಹೆಂಡತಿಯ ಜೊತೆ ಕುಳಿತಿದ್ದಾಗ ಪಾಲ್ ನ ಮಗ ಬಂದು ಹೊರಗೆ ಸೈನಿಕರು ಬಂದಿದ್ದಾರೆ ಎಂದು ಭಯದಿಂದ ಬಂದು ಹೇಳುತ್ತಾನೆ. ಎಲ್ಲರೂ ಗಾಬರಿಗೊಂಡು ಹೋಗಿ ಮೆಲ್ಲಗೆ ಗೇಟ್ ತೆರೆದು ಹೊರಗೆ ನಡೆಯುತ್ತಿರುವುದನ್ನು ಇಣುಕಿ ನೋಡುತ್ತಾರೆ. ಎದುರು ಮನೆಯ ವಿಕ್ಟರ್ ಒಬ್ಬ ತೂಟ್ಸಿಯಾಗಿದ್ದು, ತೂಟ್ಸಿ ಬಂಡುಕೋರರಿಗೆ ಗೂಢಚಾರಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಅವನನ್ನು ಮನೆಯಿಂದ ಹೊರಗೆಳೆದು ಸೈನಿಕರು ಹೊಡೆಯುತ್ತಿರುತ್ತಾರೆ. ಇದನ್ನು ನೋಡಿ ಎಲ್ಲರೂ ಗಾಬರಿಯಾಗಿ ಒಳಬಂದು ಸೇರಿಕೊಳ್ಳುತ್ತಾರೆ. ವಿಕ್ಟರ್ ನನ್ನು ತನಗೆ ಗೊತ್ತಿರುವ ಆರ್ಮಿಯ ಅಧಿಕಾರಿಗಳ ಸಹಾಯ ಕೇಳಿ ಬಿಡಿಸಲಾಗುವುದಿಲ್ಲವೇ ಎಂದು ಹೆಂಡತಿ ಕೇಳಿದಾಗ ಪಾಲ್ ಇಂತಹ ವಿಷಯಗಳಲ್ಲಿ ತಾನು ಅಸಹಾಯಕ ಎಂದು ಹೇಳುತ್ತಾನೆ. ತಾನು ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳನ್ನು ಮೆಚ್ಚಿಸುವುದು ನಾಳೆ ತನ್ನ ಕುಟುಂಬಕ್ಕೆ ಏನಾದರೂ ತೊಂದರೆಯಾದರೆ ಅವರ ಸಹಾಯ ಕೇಳಲು. ಬೇರೆಯವರಿಗಾಗಿ ಸಹಾಯ ಕೇಳಿದರೆ ನನ್ನ ಕುಟುಂಬಕ್ಕೆ ನಾಳೆ ಸಹಾಯ ಸಿಗದಿರಬಹುದು. ತನಗೆ ತನ್ನ ಕುಟುಂಬದ ಸುರಕ್ಷತೆ ಬಹಳ ಮುಖ್ಯ ಎಂದು ಹೆಂಡತಿಯನ್ನು ಸಮಾಧಾನಪಡಿಸುತ್ತಾನೆ. 


  ಎರಡೂ ಗುಂಪುಗಳ ನಡುವೆ ಶಾಂತಿ ಏರ್ಪಟ್ಟಿದ್ದು, ಈ ಶಾಂತಿ ಒಪ್ಪಂದವನ್ನು ಅಧ್ಯಕ್ಷ ಹಬ್ಯಾರಿಮಾನ ತಾನ್ಜೆನಿಯ ದೇಶದಲ್ಲಿ ಸಹಿ ಹಾಕುತ್ತಿದ್ದಾರೆ ಎಂದು ಕರ್ನಲ್ ಆಲಿವರ್ ಮಿ ಕೊಲ್ಲೀನ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಹೇಳುತ್ತಾರೆ. ವಿಶ್ವಸಂಸ್ಥೆಯ ಪರಿಶ್ರಮದಿಂದ ರವಾಂಡದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಎಂದು ಹೇಳುತ್ತಾರೆ. ತೂಟ್ಸಿಗಳನ್ನು ಹತ್ಯೆ ಮಾಡಲಾಗುತ್ತದೆ ಎಂಬ ವದಂತಿಗಳಿಗೆ ಹೆದರಿ ಪಾಲ್ ಹೆಂಡತಿಯ ಸಹೋದರ ಥಾಮಸ್ ಮತ್ತು ಆತನ ಹೆಂಡತಿ ಪಾಲ್ ಗೆ ತಾವು ಊರು ಬಿಟ್ಟು ಹೋಗುತ್ತಿರುವುದಾಗಿಯೂ, ತಮ್ಮೊಡನೆ ಪಾಲ್ ತನ್ನ ಹೆಂಡತಿ ತಾತಿಯಾನಳನ್ನೂ ಕಳಿಸುವಂತೆ ಕೇಳಿಕೊಳ್ಳುತ್ತಾರೆ. ಹುಟುವಾದ ಪಾಲ್ ಗೆ ಏನೂ ಆಗದು ಆದರೆ ತೂಟ್ಸಿಗಳಾದ ತಮಗೆ ಏನಾದರು ಅಪಾಯ ಆಗಬಹುದು ಎಂದು ಹೇಳಿದಾಗ ಅದನ್ನೆಲ್ಲ ಅಲ್ಲಗಳೆದು ಪಾಲ್ ಈಗ ವಿಶ್ವಸಂಸ್ಥೆ ಮತ್ತು ವಿಶ್ವ ಪತ್ರಿಕಾ ಸಮೂಹ ನೋಡುತ್ತಿರುವಾಗ ಇಂತಹ ಘಟನೆಗಳು ಆಗುವುದಿಲ್ಲ ಎಂದು ಸಮಾಧಾನ ಹೇಳಿ ಅವರನ್ನು ಊರು ಬಿಡದಂತೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಒಪ್ಪಿ ಅವರಿಬ್ಬರೂ ಮನೆಗೆ ತೆರಳುತ್ತಾರೆ. ರಾತ್ರಿ ಕೆಲಸ ಮುಗಿಸಿ ವಿದ್ಯುತ್ ಇಲ್ಲದೆ ಕತ್ತಲೆಯಾಗಿದ್ದ ರಸ್ತೆಯಲ್ಲಿ ಮನೆಗೆ ಬರುವಾಗ ರೇಡಿಯೋ ಸಂಪೂರ್ಣ ಮೌನವಾಗಿದ್ದು ಕೆಲವು ಹುಟು ತೀವ್ರವಾದಿಗಳು ಎಲ್ಲರಿಗೂ ಮನೆಯೊಳಗಡೆಯೇ ಇರುವಂತೆ ಮೈಕ್ ನಲ್ಲಿ ಕೂಗುತ್ತ ಹೋಗುತ್ತಿರುತ್ತಾರೆ ಮತ್ತು ಕೆಲವು ಮನೆಗೆ ಬೆಂಕಿ ಹಾಕಲಾಗಿರುತ್ತದೆ. ಹೆದರಿ ಪಾಲ್ ಮನೆ ಸೇರಿ ಮೆಲ್ಲಗೆ ತನ್ನ ಟಾರ್ಚ್ ತೆಗೆದು ಮನೆಯೊಳಗೆ ನಡೆದು ನೋಡಿದಾಗ ಒಂದು ಕೋಣೆಯಲ್ಲಿ ಹೆಂಡತಿಯ ಜೊತೆ ಅಕ್ಕ ಪಕ್ಕದ ಮನೆಯವರೆಲ್ಲರೂ ಸೇರಿ ಮೂಲೆಯಲ್ಲಿ ಕುಳಿತಿರುತ್ತಾರೆ. ಯಾಕೆ ಹೀಗೆ ಎಲ್ಲಾ ಕುಳಿತಿದ್ದೀರಿ ಎಂದು ಪಾಲ್ ಕೇಳಿದಾಗ ನ್ಯೂಸ್ ನಲ್ಲಿ ಯಾರೋ ಅಧ್ಯಕ್ಷರ ವಿಮಾನ ಹೊಡೆದುರುಳಿಸಿದರು ಎಂದು ಪ್ರಸಾರವಾಯಿತು ಎಂದಾಗ ಎಲ್ಲ ಹೆದರಿ ಇಲ್ಲಿ ಸೇರಿದೆವು ಎಂದು ಹೇಳುತ್ತಾರೆ. ಎಲ್ಲರನ್ನೂ ಹೊರೆಗಿನ ಕೋಣೆಯಲ್ಲಿ ಕೂರಲು ಹೇಳಿ ಪಾಲ್ ಹೆಂಡತಿಗೆ ಯಾಕೆ ಇವರೆಲ್ಲ ಹೀಗೆ ನನ್ನ ಬಳಿ ಓಡಿಬರುತ್ತಾರೆ ಎಂದು ಕೇಳಿದಾಗ ಆಕೆ ಇವರೆಲ್ಲ ನಂಬುವ ಏಕೈಕ ಹುಟು ನೀನೊಬ್ಬನೇ ಎಂದು ಹೇಳಿ ಸಮಾಧಾನಪಡಿಸುತ್ತಾಳೆ. ಮಾರನೆ ದಿನ ಆರ್ಮಿಯ ಕೆಲ ಸೈನಿಕರು ಒಬ್ಬ ಕ್ಯಾಪ್ಟನ್ ನೇತೃತ್ವದಲ್ಲಿ ಪಾಲ್ ಮನೆಗೆ ಬಂದು ಒಳಗಿದ್ದವರೆನ್ನೆಲ್ಲ ಹೊರಗೆ ಕರೆದಾಗ, ಎಲ್ಲರೂ ಇನ್ನೂ ತಮ್ಮ ಕಥೆ ಮುಗಿದೇಹೋಯಿತು ಎಂದು ಹೆದರುತ್ತಾರೆ. ಆಗ ಪಾಲ್ ಹೊರ ಬಂದು ಆ ಕ್ಯಾಪ್ಟನ್ ನನ್ನು ಏನೆಂದು ವಿಚಾರಿಸಿದಾಗ, ಪಾಲ್ ನ ಗುರುತಿನ ಚೀಟಿ ನೋಡಿ ಆತ ಈ ಮುಂಚೆ ಹೊಟೆಲ್ ಡಿಪ್ಲೋಮ್ಯಾಟ್ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ತನಗೆ ಅಲ್ಲಿನ ಸೇಫ್ ನಲ್ಲಿ ಇಟ್ಟಿರುವ ಎಲ್ಲಾ ರೂಮ್ ಕೀಲಿಕೈ ತೆಗೆದುಕೊಡಲು ತನ್ನೊಡನೆ ಬರುವಂತೆ ಹೇಳುತ್ತಾನೆ. ಅದಕ್ಕೆ ಪಾಲ್ ತನ್ನ ಕುಟುಂಬ ಬಿಟ್ಟು ಬರಲು ಸಾಧ್ಯವಿಲ್ಲ ಎಂದಾಗ ಅವರನ್ನೂ ಒಂದು ಕಾರಿನಲ್ಲಿ ಕರೆತರಲು ಅಪ್ಪಣೆ ಕೊಡುತ್ತಾನೆ. ಹೊಟೆಲ್ ನಲ್ಲಿ ತನಗೆ ಬೇಕಾದ್ದು ಸಿಕ್ಕ ನಂತರ ಕ್ಯಾಪ್ಟನ್ ಪಾಲ್ ಜೊತೆಗೆ ಬಂದವರಲ್ಲಿ ತೂಟ್ಸಿಗಳು ಇದ್ದಾರೆಂದೂ, ಪಾಲ್ ಅವರಿಗೆ ಆಶ್ರಯ ಕೊಟ್ಟು ದೇಶದ್ರೋಹದ ಕೆಲಸ ಮಾಡುತ್ತಿದ್ದಾನೆಂದು ಹೊಡೆಯುತ್ತಾನೆ. ಪಾಲ್ ಏನೇನೋ ಹೇಳಿ ಕಡೆಗೆ ಅವರನ್ನೆಲ್ಲ ಉಳಿಸಿದರೆ ದುಡ್ಡು ಕೊಡುವುದಾಗಿ ಹೇಳಿ, ಹೇಳಿದಂತೆ ದುಡ್ಡು ಕೊಟ್ಟು ಅವರನ್ನೆಲ್ಲ ಬಿಡಿಸಿಕೊಂಡು ಹೊಟೆಲ್ ಮಿ ಕೊಲ್ಲೀನ್ ಗೆ ಕರೆದೊಯ್ಯುತ್ತಾನೆ. ತನಗೆ ಇಷ್ಟವಿಲ್ಲದಿದ್ದರೂ ಹೆಂಡತಿ ಇವರನ್ನೆಲ್ಲ ತನ್ನೊಡನೆ ಕರೆದುಕೊಂಡು ಬಂದಳಲ್ಲ ಎಂದು ಪಾಲ್ ಕಣ್ ಸಂಜ್ಞೆಯಲ್ಲೇ ಹೆಂಡತಿಗೆ ಬಯ್ಯುತ್ತಾನೆ.


  ಹೊಟೆಲ್ ತಲುಪಿ ತನ್ನ ಕುಟುಂಬಕ್ಕೆ ಮತ್ತು ಜೊತೆಗೆ ಬಂದ ನೆರೆಹೊರೆಯವರಿಗೆ ರೂಮುಗಳನ್ನು ಕೊಡಿಸಿ ಹೊಟೆಲ್ ಕೆಲಸದಲ್ಲಿ ತೊಡಗಿಕೊಳ್ಳುತ್ತಾನೆ. ಒಬ್ಬ ಕೆಲಸಗಾರ ಗ್ರೆಗ್ವಾರ್ (Gregoire), ಹೊಟೆಲ್ ಉಸ್ತುವಾರಿ ವಹಿಸಿದ್ದ ಯುರೋಪಿಯನ್ ಮ್ಯಾನೇಜರ್ ಬೇರೊಂದು ಹೊಟೆಲ್ ನೋಡಿಕೊಳ್ಳಲು ಹೋದನಂತರ ಎಲ್ಲ ಕೆಲಸ ಬಿಟ್ಟು ಪ್ರೆಸಿಡೆನ್ಶಿಯಲ್ ಸ್ವೀಟ್ ಗೆ ಹೋಗಿ ಸೇರಿಕೊಂಡಿರುತ್ತಾನೆ. ಇದನ್ನು ತಿಳಿದ ಪಾಲ್ ವಿಚಾರಿಸಲು ಹೋದಾಗ ಗ್ರೆಗ್ವಾರ್ ಪಾಲ್ ಹೊಟೆಲಿನಲ್ಲಿ ತೂಟ್ಸಿ ‘ಜಿರಳೆ’ಗಳನ್ನ ಬಚ್ಚಿಟ್ಟಿರುವುದನ್ನ ಹೊರಗೆ ಹೇಳಬೇಕಾಗುತ್ತದೆ ಎಂದ ಮೇಲೆ ಪಾಲ್ ಸುಮ್ಮನೆ ವಾಪಸ್ಸಾಗುತ್ತಾನೆ. ಇಷ್ಟರಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಮೇಡಂ ಆರ್ಚರ್ ಒಂದು ಅನಾಥಾಶ್ರಮದಿಂದ ಕೆಲವು ಮಕ್ಕಳನ್ನು ಕರೆತಂದು ಪಾಲ್ ಸುಪರ್ದಿಗೆ ಒಪ್ಪಿಸಿ ಅವರನ್ನು ನೋಡಿಕೊಳ್ಳುವಂತೆ ಕೇಳಿಕೊಳ್ಳುತ್ತಾಳೆ. ಇನ್ನೂ ಹತ್ತಾರು ಮಕ್ಕಳಿದ್ದು, ಅವರನ್ನು ಕರೆತರಲು ಮತ್ತೆ ಹೋಗುತ್ತಿರುವುದಾಗಿ ಹೇಳುತ್ತಾಳೆ. ಆಗ ಪಾಲ್ ಆಕೆಗೆ ಸಾಧ್ಯವಾದರೆ, ದಾರಿಯಲ್ಲಿ ಹಾಗೆ ತನ್ನ ಭಾಮೈದ ಥಾಮಸ್ ಮತ್ತು ಅವನ ಕುಟುಂಬದ ಬಗ್ಗೆ ವಿಚಾರಿಸಿ ಅವರು ಸಿಕ್ಕರೆ ತನ್ನೊಡನೆ ಕರೆತರಲು ಕೇಳಿಕೊಳ್ಳುತ್ತಾನೆ. ಪಾಲ್ ಮಕ್ಕಳನ್ನೆಲ್ಲ ಒಂದು ಕೋಣೆಯಲ್ಲಿರಿಸಿ ಅವರಿಗೆ ಸ್ನಾನಮಾಡಿಸಿ ಉಪಚರಿಸಲು ಕೆಲವು ಕೆಲಸಗಾರರನ್ನು ನೇಮಿಸುತ್ತಾನೆ. 

  ಹೊರಗೆ ಕರ್ನಲ್ ಆಲಿವರ್ ನ ಇಂಟರ್ವ್ಯೂ ಮಾಡಿದ ನಂತರ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಜ್ಯಾಕ್ ದಗ್ಲಿಶ್ (Joaquin Phoenix) ಹೊಟೆಲ್ ಹೊರಗೆ ಹೋಗಿ ರೆಕಾರ್ಡ್ ಮಾಡಿಕೊಂಡು ಬರುವ ಎಂದು ತನ್ನ ರಿಪೋರ್ಟರ್ ಸಹೋದ್ಯೋಗಿಯನ್ನು ಕೇಳಿದಾಗ ಆತ, ಹೊರಗೆ ಬಹಳ ಅಪಾಯಕಾರಿಯಾಗಿದ್ದು ವಿಶ್ವಸಂಸ್ಥೆಯವರು ಹೊರಗೆ ಸುರಕ್ಷಿತ ಎಂದು ಹೇಳುವವರೆಗೂ ಹೋಗುವುದು ಬೇಡ ಎಂದು ಹೇಳುತ್ತಾನೆ. ಆದರೆ ಇದನ್ನು ಕೇಳದ ಜ್ಯಾಕ್ ತನ್ನ ಸಹಾಯಕನೊಂದಿಗೆ ಹೊಟೆಲ್ ಹೊರಗೆ ಹೋಗಿ ಅಲ್ಲಿ ನಡೆಯುತ್ತಿದ್ದ ಹಿಂಸಾಚಾರವನ್ನು ರೆಕಾರ್ಡ್ ಮಾಡಿತರಲು ಹೋಗುತ್ತಾನೆ. ಪಾಲ್ ಕರ್ನಲ್ ಆಲಿವರ್ ಗೆ ಹೊಟೆಲಿಗೆ ಈಗ ಬಂದಿರುವ ನಿರಾಶ್ರಿತರನ್ನೆಲ್ಲ ಕರೆದುಕೊಂಡು ತನ್ನ ನಿರಾಶ್ರಿತರ ಶಿಬಿರಗಳಿಗೆ ಕರೆದೊಯ್ಯುವಂತೆ ಕೇಳಿಕೊಳ್ಳುತ್ತಾನೆ. ಆದರೆ ಅದಕ್ಕೊಪ್ಪದ ಕರ್ನಲ್ ಅಲ್ಲಿ ಎಲ್ಲೂ ಜಾಗವಿಲ್ಲವೆಂದೂ, ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ನಿರಾಶ್ರಿತರನ್ನು ಕರೆದೊಯ್ಯುವುದಾಗಿ ಭರವಸೆ ಕೊಡುತ್ತಾನೆ. ಕೆಲಸ ಮಾಡದೆ ಸುಮ್ಮನೆ ಕಾಲಹರಣ ಮಾಡುತ್ತಿದ್ದ ಕೆಲಸಗಾರರಿಗೆ ಹೋಗಿ ಕೆಲಸ ಮಾಡಲು ಪಾಲ್ ದಬಾಯಿಸಿದಾಗ ಯಾರೂ ಆತನನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆಗ ಪಾಲ್ ಬೆಲ್ಜಿಯಂನಲ್ಲಿದ್ದ ಹೊಟೆಲ್ ಮುಖ್ಯಸ್ಥರಿಗೆ ಕರೆ ಮಾಡಿ ಸಧ್ಯದ ಪರಿಸ್ಥಿತಿಯನ್ನೆಲ್ಲಾ ವಿವರಿಸಿ ಹೊಟೆಲ್ ಜವಾಬ್ದಾರಿ ತನಗೊಪ್ಪಿಸಿರುವುದಕ್ಕೆ ಒಂದು ಅಧಿಪತ್ರ ಕಳಿಸಿಕೊಡಲು ಕೇಳಿಕೊಳ್ಳುತ್ತಾನೆ. ಈ ಗಲಭೆ ಉಂಟಾಗಿರುವುದಕ್ಕೆ ಹೊಟೆಲ್ ಮಂಡಳಿ ಹೊಟೆಲನ್ನು ತಾತ್ಕಾಲಿಕವಾಗಿ ಮುಚ್ಚಿಬಿಡಲು ಯೋಚಿಸಿತ್ತಿರುವುದಾಗಿ ಹೊಟೆಲ್ ಮುಖ್ಯಸ್ಥ ಹೇಳಿದಾಗ, ಪಾಲ್ ಅವರಿಗೆ ಹಾಗೆ ಮಾಡುವುದು ಹೊಟೆಲ್ ಹೆಸರಿಗೆ ಧಕ್ಕೆ ತರುವುದು ಎಂದು ಹೇಳಿ ಹೊಟೆಲ್ ಮುಚ್ಚದಿರಲು ಕೇಳಿಕೊಳ್ಳುತ್ತಾನೆ. ಪಾಲ್ ಮಾತನ್ನು ಒಪ್ಪಿ ಹೊಟೆಲ್ ಮುಖ್ಯಸ್ಥ ಅವನಿಗೆ ಮತ್ತೇನಾದರೂ ಬೇಕಿದ್ದಲ್ಲಿ ಕರೆ ಮಾಡುವಂತೆ ಹೇಳುತ್ತಾರೆ. ಪಾಲ್ ಪಡೆದ ಅಧಿಪತ್ರ ನೋಡಿದ ನಂತರ ಎಲ್ಲರೂ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. 

  ಒಂದು ದಿನ ಇದ್ದಕ್ಕಿದ್ದಂತೆ ಮತ್ತೊಂದಿಷ್ಟು ನಿರಾಶ್ರಿತರು ಗುಂಡೇಟು ತಪ್ಪಿಸಿಕೊಂಡು ವಿಶ್ವಸಂಸ್ಥೆಯ ಯೋಧರ ಸಹಾಯದೊಂದಿಗೆ ಹೊಟೆಲ್ ಮಿ ಕೊಲ್ಲೀನ್ ಗೆ ಓಡಿಬರುತ್ತಾರೆ. ಈಗಾಗಲೇ ಹೊಟೆಲ್ ತುಂಬಿಹೋಗಿದ್ದು, ಇವರನ್ನು ಇಟ್ಟುಕೊಳ್ಳುವುದು ಕಷ್ಟ ಎಂದು ಪಾಲ್ ಕರ್ನಲ್ ಗೆ ಹೇಳಿದಾಗ, ಹುಟು ತೀವ್ರವಾದಿಗಳು ಪ್ರೈಮ್ ಮಿನಿಸ್ಟರ್ ಜೊತೆಗೆ ಹತ್ತು ಬೆಲ್ಜಿಯನ್ ಸೈನಿಕರನ್ನೂ ಕೊಂದಿದ್ದಾರೆಂದು ಕರ್ನಲ್ ಹೇಳುತ್ತಾನೆ. ಹಾಗಾಗಿ ಇದನ್ನು ಹತ್ತಿಕ್ಕಲು ಹಲವು ದೇಶಗಳ ಒಂದು ಪಡೆ ರಚನೆಯಾಗುತ್ತಿದ್ದು, ಅವರು ಬರುವ ತನಕ ಈ ನಿರಾಶ್ರಿತರನ್ನು ಕಾಪಾಡಲು ಪಾಲ್ ಗೆ ಕರ್ನಲ್ ಕೇಳಿಕೊಳ್ಳುತ್ತಾನೆ. ಪಾಲ್ ಭೇಟಿಯಾಗಲು ಬಂದ ಮೇಡಂ ಆರ್ಚರ್ ಪಾಲ್ ಹೇಳಿದ ಮನೆಯಲ್ಲಿ ಯಾರೂ ಇಲ್ಲವೆಂದು, ಪಕ್ಕದ ಮನೆಯ ಹೆಂಗಸೊಬ್ಬಳು ಅವರಿಬ್ಬರ ಮಕ್ಕಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿರುವುದಾಗಿ ಹೇಳುತ್ತಾಳೆ. ಅವರನ್ನು ಹೇಗಾದರೂ ಹೊಟೆಲಿಗೆ ಕರೆತರಲು ಸಾಧ್ಯವೇ ಎಂದು ಕೇಳಿದಾಗ, ಮೇಡಂ ಆರ್ಚರ್, ಎಲ್ಲ ಕಡೆ ಇಂಟರ್ ಹಾಮ್ವೆ ರೋಡ್ ಬ್ಲಾಕ್ ನಿರ್ಮಿಸಿದ್ದು ಅವರನ್ನು ಕರೆತರುವುದು ತುಂಬಾ ಕಷ್ಟವಾಗಿದೆ ಎಂದು ಹೇಳುತ್ತಾಳೆ. ತಾನು ಎರಡನೇ ಬಾರಿ ಅನಾಥಾಶ್ರಮದಿಂದ ಮಕ್ಕಳನ್ನು ಕರೆತರಲು ಹೋದಾಗ ಅಲ್ಲಿಗೆ ಆಗಲೇ ಬಂದಿದ್ದ ಇಂಟರ್ ಹಾಮ್ವೆ ಗುಂಪು ಮಕ್ಕಳನ್ನೂ ಕೊಲ್ಲಲು ಪ್ರಾರಂಭಿಸಿದ್ದರಲ್ಲದೆ, ತನ್ನನ್ನು ಅಲ್ಲಿಯೇ ತಡೆದು ಆ ಕೊಲೆಯನ್ನು ನೋಡುವಂತೆ ಮಾಡಿದರು ಎಂದು ಅಳುತ್ತಾಳೆ. 

  ಹತ್ತು ಜನ ಬೆಲ್ಜಿಯನ್ ಸೈನಿಕರು ಸಾಯುವಷ್ಟು ಪರಿಸ್ಥಿತಿ ಹದಗೆಟ್ಟಿದೆ ಎಂದು ತಿಳಿದು, ಪಾಶ್ಚಾತ್ಯ ದೇಶಗಳ ಒಕ್ಕೂಟ ಒಂದು ಪಡೆಯನ್ನು ಕಳಿಸಿದ್ದು ನೋಡಿ ಎಲ್ಲರೂ ಸಂತೋಷಪಡುತ್ತಾರೆ. ಆದರೆ ಆ ಸಂತೋಷ ಕೇವಲ ಅಲ್ಪಕಾಲ ಮಾತ್ರ, ಏಕೆಂದರೆ ಅವರು ಬಂದದ್ದು, ರವಾಂಡದಲ್ಲಿ ನೆಲೆಸಿದ್ದ ಬಿಳಿಯರನ್ನೆಲ್ಲ ಆ ದೇಶದಿಂದ ಸುರಕ್ಷಿತವಾಗಿ ಮರಳಿ ಕರೆದೊಯ್ಯಲು ಮಾತ್ರ. ಇದನ್ನು ತಿಳಿದ ಪಾಲ್ ಅಲ್ಲಿಯ ತನಕ ತನ್ನನ್ನು ತಮ್ಮೊಳಗೊಬ್ಬ ಎಂದು ಬಿಳಿಯರು ಹೇಳುತಿದ್ದನ್ನು ಕೇಳಿ ತಾನು ತನ್ನತನವನ್ನೇ ಮರೆತು ಅವರಂತೆಯೇ ತಾನೂ ಎಂದು ತಿಳಿದಿದ್ದೆನಲ್ಲ ಎಂದು ಬೇಸರಪಟ್ಟುಕೊಳ್ಳುತ್ತಾನೆ. ಕರ್ನಲ್ ಆಲಿವರ್ ಕೂಡ ತೀವ್ರ ಬೇಸರದಿಂದ ಹೇಗೆ ಪಾಶ್ಚಾತ್ಯ ದೇಶಗಳು ಆಫ್ರಿಕನ್ನರನ್ನು ಧೂಳಿಗಿಂತ ಕಡೆಯಾಗಿ ಕಾಣುತ್ತಾರೆ ಎಂದು ಪಾಲ್ ನ ಬಳಿ ತನ್ನ ಅಸಹಾಯಕತೆ ತೋಡಿಕೊಳ್ಳುತ್ತಾನೆ. ಬಿಳಿಯರೆಲ್ಲ ದೇಶ ಬಿಟ್ಟು ಹೋಗುತ್ತಿದ್ದಂತೆ, ಆರ್ಮಿಯ ಸೈನಿಕರು ಮತ್ತೆ ಹೊಟೆಲಿಗೆ ಬಂದು ಅಲ್ಲಿ ನೆಲೆಸಿರುವ ತೂಟ್ಸಿ ಜಿರಲೆಗಳ ಹೆಸರು ಕೊಡುವಂತೆಯೂ, ಇಲ್ಲದಿದ್ದರೆ ಎಲ್ಲರನ್ನೂ ಕೊಲ್ಲುವುದಾಗಿ ಪಾಲ್ ಗೆ ಹೆದರಿಸುತ್ತಾರೆ. ಆದರೆ ಅವರನ್ನು ಹೇಗೋ ಪುಸಲಾಯಿಸಿ, ಸ್ವಲ್ಪ ಸಮಯ ಕೇಳಿ ತನ್ನ ಹೊಟೆಲ್ ಮುಖ್ಯಸ್ಥನಿಗೆ ಕರೆ ಮಾಡಿ ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಹೊಟೆಲ್ ಮುಖ್ಯಸ್ಥ ತನ್ನ ಪ್ರಭಾವ ಬಳಸಿ ಆರ್ಮಿಯ ಸೈನಿಕರು ಅಲ್ಲಿಂದ ಹೊರಡುವಂತೆ ಮಾಡುತ್ತಾನೆ. ಪಾಲ್ ತನ್ನ ಹೊಟೆಲಿನಲ್ಲಿ ಇದ್ದ ಎಲ್ಲ ಪ್ರಭಾವಿ ನಿರಾಶ್ರಿತ ವ್ಯಕ್ತಿಗಳಿಗೆ ತಮಗೆ ಬೇರೆ ದೇಶದಲ್ಲಿ ಗೊತ್ತಿರುವ ಎಲ್ಲರಿಗೂ ಕರೆ ಮಾಡಿ ತಮ್ಮನ್ನು ಕಾಪಾಡಲು ಸಹಾಯ ಕೇಳಲು ಹೇಳುತ್ತಾನೆ. ಪಾಲ್ ಭೇಟಿಯಾಗಲು ಬಂದ ಜನರಲ್ ಬಿಜಿಮನ್ಗುವಿಗೆ ಉಪಚರಿಸಿ ಹೊಟೆಲ್ ಕಾವಲಿಗೆ ಕೆಲವು ಪೋಲಿಸ್ ಪೇದೆಗಳನ್ನು ನಿಯೋಜಿಸುವಂತೆ ಕೇಳುತ್ತಾನೆ. ಬೆಲ್ಜಿಯನ್ ಆಸ್ತಿಗಳನ್ನು ಕಾಪಾಡುವುದರಲ್ಲಿ ಸಹಾಯ ಮಾಡಿದವರಿಗೆ ಹೊಟೆಲ್ ಮ್ಯಾನೇಜ್ಮೆಂಟ್ ಬಹುಮಾನ ಕೊಡುವುದಾಗಿಯೂ ಪಾಲ್ ಬಿಜಿಮನ್ಗುವಿಗೆ ಹೇಳುತ್ತಾನೆ. ತಾನು ಅಮೇರಿಕ ರಾಜತಾಂತ್ರಿಕ ಮತ್ತು ಕರ್ನಲ್ ನಡುವೆ ನಡೆದ ಸಂಭಾಷಣೆಯ ರಹಸ್ಯ ಮಾಹಿತಿ ಕೊಡುವವನಂತೆ ಪಾಲ್ ಬಿಜಿಮನ್ಗುವಿಗೆ ಅಮೆರಿಕಾದ ಸ್ಯಾಟಲೈಟ್ ಗಳು ಆತನನ್ನು ಗಮನಿಸುತ್ತಿದ್ದು, ಹುಷಾರಾಗಿರಲು ಹೇಳುತ್ತಾನೆ. ಇದನ್ನ ನಂಬುವ ಬಿಜಿಮನ್ಗು ಅದಕ್ಕಾಗಿ ಪಾಲ್ ಗೆ ಧನ್ಯವಾದ ಹೇಳಿ ಪಾಲ್ ಕೋರಿಕೆಯಂತೆ ಹೊಟೆಲ್ ಕೆಲಸಗಾರ ಗ್ರೆಗ್ವಾರ್ ಗೆ ಚಳಿ ಬಿಡಿಸಿ ಕೆಲಸಕ್ಕೆ ಮರಳಲು ಕಳುಹಿಸಿ ಹೊರಡುತ್ತಾನೆ. ಪಾಲ್ ಹೊಟೆಲಿಗೆ ಬೇಕಾದ ಸಾಮಾನು ತರಲು ಮತ್ತೆ ಜಾರ್ಜ್ ಬಳಿ ಹೋದಾಗ ಜಾರ್ಜ್ ಪಾಲ್ ಗೆ ಈ ವ್ಯವಹಾರ ಕೇವಲ ಪಾಲ್ ಹೊಟೆಲಿನಲ್ಲಿ ಇರುವ ತೂಟ್ಸಿಗಳ ದುಡ್ಡು ಖಾಲಿಯಾಗುವವರೆಗೂ ಮಾತ್ರ ಎಂದು ಹೇಳುತ್ತಾನೆ. ಆನಂತರ ಕೊಬ್ಬಿದ ಕುರಿಯನ್ನು ಕೊಚ್ಚುವಂತೆ ಅವರನ್ನೆಲ್ಲ ಸಾಯಿಸಲು ಇಂಟರ್ ಹಾಮ್ವೆ ಬರುವುದಾಗಿ ಜಾರ್ಜ್ ಹೇಳುತ್ತಾನೆ. ತನಗೆ ಹೊಟೆಲಿನಲ್ಲಿರುವ ಕೆಲವು ದೇಶದ್ರೋಹಿಗಳನ್ನು ಹಿಡಿದುಕೊಡುವುದಾದರೆ ಪಾಲ್ ಗೆ ತನಗೆ ಬೇಕಾದ ಕೆಲವರನ್ನು ಉಳಿಸಿಕೊಳ್ಳಲು ಬಿಡುವುದಾಗಿ ಜಾರ್ಜ್ ಹೇಳುತ್ತಾನೆ. ಅದಕ್ಕೆ ನಯವಾಗಿ ಪಾಲ್ ನಿರಾಕರಿಸಿ ಹೊರಡುತ್ತಾನೆ. ಜಾರ್ಜ್ ಪಾಲ್ ಗೆ ಹೊಟೆಲಿಗೆ ಹಿಂದಿರುಗಿಹೋಗಲು ನದಿ ಪಕ್ಕದ ದಾರಿ ಸುರಕ್ಷಿತವಾಗಿದ್ದು ಆ ಮಾರ್ಗವಾಗಿ ಹೊಟೆಲ್ ತಲುಪುವಂತೆ ಹೇಳುತ್ತಾನೆ. ಅದರಂತೆ ಬೆಳಗಿನ ಮಂಜಿನಲ್ಲಿ ಪಾಲ್ ಗ್ರೆಗ್ವಾರ್ ಜೊತೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಕಾರು ಎಲ್ಲೋ ಕಾಡು ದಾರಿ ಹಿಡಿದಂತೆ ಅಡ್ಡಾದಿಡ್ಡಿ ಚಲಿಸತೊಡಗುತ್ತದೆ. ಮಂಜಿನಲ್ಲಿ ದಾರಿ ಕಾಣದೆ ನದಿಯೊಳಕ್ಕೆ ಕಾರು ಹೊರಟಿದೆಯೇ ಎಂದು ನೋಡಲು ಕಾರು ನಿಲ್ಲಿಸಿ ಕೆಳಗಿಳಿದು ನೋಡಿದಾಗ, ಕಾರು ದಾರಿಯಲ್ಲೇ ಬರುತ್ತಿದ್ದು, ಅಲ್ಲಿ ಬಿದ್ದಿದ್ದ ಹೆಣಗಳ ಮೇಲೆ ಕಾರು ಚಲಿಸಿ ಹೀಗಾಯಿತು ಎಂದು ತಿಳಿದಾಗ ಪಾಲ್ ಗೆ ಹೊಟ್ಟೆ ಕಿವುಚಿದಂತಾಗುತ್ತದೆ. ನೋಡಿದ್ದನ್ನು ಯಾರಿಗೂ ಹೇಳದಂತೆ ಗ್ರೆಗ್ವಾರ್ ಗೆ ತಾಕೀತು ಮಾಡಿ ಹೊಟೆಲ್ ತಲುಪಿ ಕೋಣೆಯಲ್ಲಿ ಒಬ್ಬನೇ ಕುಳಿತು ಅಳತೊಡಗುತ್ತಾನೆ. 

  ಈ ಹಿಂದೆ ಹೊಟೆಲಿನಲ್ಲಿ ಇದ್ದ ಪ್ರಭಾವಿ ನಿರಾಶ್ರಿತರು ಮಾಡಿದ ಕರೆಗಳು ಫಲಿಸಿ, ಅನೇಕರಿಗೆ ರವಾಂಡ ಬಿಟ್ಟು ತೆರಳಲು ವೀಸಾ ಸಿಕ್ಕಿ ಕರ್ನಲ್ ಆಲಿವರ್ ಅವರನ್ನೆಲ್ಲ ಕರೆದೊಯ್ಯಲು ಬರುತ್ತಾನೆ. ಇದರಲ್ಲಿ ಪಾಲ್ ಕುಟುಂಬವೂ ಸೇರಿರುತ್ತದೆ. ವೀಸಾ ಸಿಕ್ಕವರನ್ನು ಲಾರಿಗಳಿಗೆ ಹತ್ತಿಸಿ ಪಾಲ್ ತಾನೂ ತನ್ನ ಕುಟುಂಬದವರೊಡನೆ ಹೋಗುವುದು ಬಿಟ್ಟು, ಹೆಂಡತಿ ಮಕ್ಕಳನ್ನು ಮಾತ್ರ ಕಳಿಸಿ, ಹೊಟೆಲಿನಲ್ಲಿ ಉಳಿದುಕೊಂಡ ಇತರರ ಜೊತೆ ಉಳಿದುಕೊಳ್ಳುತ್ತಾನೆ. ಇದೆಲ್ಲ ನಡೆಯುತ್ತಿರುವಾಗಲೇ ಗ್ರೆಗ್ವಾರ್ ಹೊರ ಹೋಗಿ ಇಂಟರ್ ಹಾಮ್ವೆ ಸದಸ್ಯರಿಗೆ ಹೀಗೆ ವಿಶ್ವಸಂಸ್ಥೆಯ ಲಾರಿಗಳಲ್ಲಿ ಕೆಲವು ತೂಟ್ಸಿಗಳನ್ನು ಏರ್ಪೋರ್ಟ್ ಗೆ ಕರೆದೊಯ್ಯಲಾಗುತ್ತಿದೆ ಎಂದು ಸುದ್ದಿ ಮುಟ್ಟಿಸುತ್ತಾನೆ. ಇಂಟರ್ ಹಾಮ್ವೆ ಈ ಸುದ್ದಿಯನ್ನು ರೇಡಿಯೋದಲ್ಲಿ ಬಿತ್ತರಿಸಿ ಆ ಗಾಡಿಗಳನ್ನು ತಡೆದು ಅವರನ್ನೆಲ್ಲ ಸಾಯಿಸುವಂತೆ ಸಂದೇಶ ಕೊಡುತ್ತದೆ. ಇದೇ ಸುದ್ದಿಯನ್ನು ಪಾಲ್ ಕೇಳಿಸಿಕೊಂಡು ತಕ್ಷಣವೇ ಜನರಲ್ ಬಿಜಿಮನ್ಗುವಿಗೆ ಕರೆ ಮಾಡಿ ಅವರನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾನೆ. ಅಷ್ಟರಲ್ಲಿ ವಿಶ್ವಸಂಸ್ಥೆಯ ಗಾಡಿಗಳನ್ನು ಇಂಟರ್ ಹಾಮ್ವೆ ಸದಸ್ಯರು ಮುತ್ತಿಕೊಂಡು ಒಳಗಿದ್ದ ತೂಟ್ಸಿಗಳನ್ನು ಹೊಡೆಯಲು ಪ್ರಾರಂಭಿಸುತ್ತಾರೆ. ಸ್ವಲ್ಪ ಸಮಯದ ನಂತರ ಅಲ್ಲಿಗೆ ತಲುಪುವ ಆರ್ಮಿಯ ಸೈನಿಕರು ಪರಿಸ್ಥಿತಿಯನ್ನು ಹತೋಟಿಗೆ ತಂದು ಗಾಡಿಗಳನ್ನು ಮತ್ತೆ ಹೊಟೆಲಿಗೆ ತೆಗೆದುಕೊಂಡು ಹೋಗುವಂತೆ ಹೇಳುತ್ತಾರೆ. ಬೇರೆ ಮಾರ್ಗ ಕಾಣದೆ ಕರ್ನಲ್ ಆಲಿವರ್ ಮತ್ತೆ ಹೊಟೆಲಿಗೆ ಅವರನ್ನು ಕರೆದೊಯ್ಯುತ್ತಾನೆ. ಸುರಕ್ಷಿತವಾಗಿ ಮರಳಿದ ಹೆಂಡತಿ ಮಕ್ಕಳನ್ನು ನೋಡಿ ಪಾಲ್ ಸಮಾಧಾನವಾದರೂ, ದಿನವೂ ಆಗುತಿದ್ದ ಈ ದಾಳಿಗಳನ್ನು ತಡೆಯಲು ಕೆಲವು ಪೋಲಿಸರನ್ನು ನಿಯೋಜಿಸಲು ಜನರಲ್ ಬಿಜಿಮನ್ಗುವಿಗೆ ಪಾಲ್ ಕೇಳಿಕೊಳ್ಳುತ್ತಾನೆ. ಆದರೆ ಲಂಚದ ರುಚಿ ಹತ್ತಿದ್ದ ಬಿಜಿಮನ್ಗು ಪಾಲ್ ತನಗೆ ಬೇಕಾದ್ದು ಕೊಡುವವರೆಗೂ ಏನೂ ಮಾಡುವುದಿಲ್ಲ ಎಂದು ಹೇಳಿ ಪಾಲ್ ನೊಡನೆ ದಿಪ್ಲೋಮ್ಯಾಟ್ ಹೊಟೆಲಿಗೆ ಹೋಗಿ ಅಲ್ಲಿನ ಸೇಫ್ ನಲ್ಲಿದ್ದ ಹಲವಾರು ದುಬಾರಿ ಮದ್ಯಗಳನ್ನು ಬಿಜಿಮನ್ಗು ಪಾಲ್ ನಿಂದ ಪಡೆಯುತ್ತಾನೆ. ಆದರೆ ಬಿಜಿಮನ್ಗು ಪಾಲ್ ಮರಳಿ ಹೊಟೆಲಿಗೆ ಹೋಗದಿರುವುದೇ ಒಳಿತೆಂದು ಹೇಳುತ್ತಾನೆ. ತಾವು ಅಲ್ಲಿಗೆ ತಲುಪುವುದರಲ್ಲಿ ಇಂಟರ್ ಹಾಮ್ವೆ ಅಲ್ಲಿರುವ ಜನರನ್ನೆಲ್ಲ ಕೊಂದುಹಾಕಿರುತ್ತಾರೆ ಎಂದು ಹೇಳುತ್ತಾನೆ ಮತ್ತು ತನ್ನೊಡನೆ ಗಿಟರಾಮದಲ್ಲಿನ ಆರ್ಮಿ ಹೆಡ್ ಕ್ವಾರ್ಟರ್ಸ್ ಗೆ ಬರುವಂತೆ ಹೇಳುತ್ತಾನೆ. ಅದಕ್ಕೊಪ್ಪದ ಪಾಲ್ ತನ್ನ ಜೊತೆ ಬಂದು ಅವರನ್ನೆಲ್ಲ ರಕ್ಷಿಸಲು ಸಹಾಯ ಮಾಡದಿದ್ದರೆ, ಬಿಜಿಮನ್ಗು ಒಬ್ಬ ವಾರ್ ಕ್ರಿಮಿನಲ್ ಎಂದೂ ಆದ ಹತ್ಯಾಕಾಂಡಕ್ಕೆಲ್ಲ ಅವನೇ ಕಾರಣಕರ್ತ ಎಂದು ಅಮೆರಿಕನ್ನರಿಗೆ ಹೇಳುವುದಾಗಿ ಹೆದರಿಸಿ ಬಿಜಿಮನ್ಗುವನ್ನು ಹೊಟೆಲಿಗೆ ಕರೆದೊಯ್ಯುತ್ತಾನೆ. ಇಷ್ಟವಿಲ್ಲದಿದ್ದರೂ ಪಾಲ್ ನ ಈ ಬೆದರಿಕೆಗೆ ಮಣಿದು ಬಿಜಿಮನ್ಗು ಹೊಟೆಲಿಗೆ ಬಂದು ಅಲ್ಲಿದ್ದ ಇಂಟರ್ ಹಾಮ್ವೆ ದಾಳಿಕೋರರನ್ನು ಓಡಿಸುತ್ತಾನೆ. 

  ಕಡೆಗೂ ಎಲ್ಲರನ್ನು ಒಟ್ಟುಮಾಡಿ ಹೊಟೆಲಿಗೆ ಬೀಗ ಹಾಕಿ ಪಾಲ್, ಕರ್ನಲ್ ಆಲಿವರ್ ಸಹಾಯದೊಂದಿಗೆ ಮತ್ತೆ ವಿಶ್ವಸಂಸ್ಥೆಯ ಲಾರಿ ಹತ್ತಿ ಎಲ್ಲರೊಡನೆ ನಿರಾಶ್ರಿತ ಶಿಬಿರ ತಲುಪುತ್ತಾನೆ. ಮತ್ತೆ ದಾರಿಯಲ್ಲಿ ಇಂಟರ್ ಹಾಮ್ವೆ ಎದುರಾದರೂ ಅಲ್ಲಿಗಾಗಲೇ ಧಾವಿಸಿದ್ದ ತೂಟ್ಸಿ ಬಂಡುಕೋರ ಪಡೆಯ ನೆರವಿನಿಂದ ಎಲ್ಲರೂ ಸುರಕ್ಷಿತವಾಗಿ ಶಿಬಿರ ಸೇರುತ್ತಾರೆ. ಕರ್ನಲ್ ಆಲಿವರ್, ಹೊಟೆಲಿನ ಎಲ್ಲರಿಗೂ ತಾನ್ಜೆನಿಯ ತಲುಪಲು ಶಿಬಿರದ ಇನ್ನೊಂದು ತುದಿಯಲ್ಲಿ ಬಸ್ಸುಗಳನ್ನು ಏರ್ಪಾಡು ಮಾಡಿರುವುದಾಗಿ ಪಾಲ್ ಗೆ ಹೇಳಿ ತನ್ನ ಕೆಲಸಗಳಿಗೆ ಮರಳುತ್ತಾನೆ. ಪಾಲ್ ಮತ್ತು ಆತನ ಹೆಂಡತಿ, ಭಾಮೈದ ಥಾಮಸನ ಕುಟುಂಬಕ್ಕಾಗಿ ಹುಡುಕಾಡಿದರೂ ಯಾರೂ ಸಿಗದೇ ಬಸ್ಸು ಹತ್ತಿ ಕೂರುತ್ತಾರೆ. ಅಷ್ಟರಲ್ಲಿ ಹೊಟೆಲ್ ಮಿ ಕೊಲ್ಲೀನ್ ನ ನಿರಾಶ್ರಿತರು ಅಲ್ಲಿಗೆ ಬಂದಿರುವುದನ್ನು ತಿಳಿದ ಮೇಡಂ ಆರ್ಚರ್ ಓಡಿ ಹೋಗಿ ಹೊರಟಿದ್ದ ಬಸ್ಸು ನಿಲ್ಲಿಸಿ ಪಾಲ್ ನನ್ನು ಕರೆತಂದು ಶಿಬಿರದಲ್ಲಿದ್ದ ಥಾಮಸನ ಮಕ್ಕಳನ್ನು ಹುಡುಕಿಕೊಡುತ್ತಾಳೆ. ಅಲ್ಲಿಗೆ ಎಲ್ಲರೂ ಒಂದಾಗಿ ಹೊಸ ಜೀವನ ಕಟ್ಟಿಕೊಳ್ಳಲು ತಾನ್ಜೆನಿಯ ಕಡೆಗೆ ಹೊರಡುತ್ತಾರೆ. 

  ಸರಿಯಾದ ಸಮಯದಲ್ಲಿ ವಿಶ್ವಸಂಸ್ಥೆ ಈ ಘರ್ಷಣೆಯನ್ನು “ಜೆನೊಸೈಡ್” ಎಂದು ಕರೆದಿದ್ದರೆ, ವಿಶ್ವಸಂಸ್ಥೆಗೆ ನಿಯಮಗಳ ಪ್ರಕಾರ ಶಾಂತಿ ಕಾಪಾಡಲು ಪಡೆಗಳನ್ನು ಕಳಿಸಲೇಬೇಕಾಗಿತ್ತು. ಆದರೆ ಯಾವ ಪಾಶ್ಚಾತ್ಯ ದೇಶಕ್ಕೂ ಇದರಲ್ಲಿ ಆಸಕ್ತಿಯಿರಲ್ಲಿಲ್ಲವಾದ್ದರಿಂದ ಮತ್ತು ಅಮೆರಿಕಾಗೆ ಸೋಮಾಲಿಯಾದಲ್ಲಿ ಅಷ್ಟು ಹೊತ್ತಿಗೆ ಸಾಕಷ್ಟು ಪೆಟ್ಟುಬಿದ್ದಿದ್ದರಿಂದ, ಶಾಂತಿ ಪಡೆಗಳನ್ನು ಕಳಿಸುವಲ್ಲಿ ಸಾಕಷ್ಟು ತಡ ಮಾಡಿದರು. ಅದನ್ನು “ಜೆನೊಸೈಡ್” ಎಂದು ಕರೆಯುವಷ್ಟರಲ್ಲಿ ಸಾಕಷ್ಟು ಅನಾಹುತ ಆಗಿಹೋಗಿತ್ತು. ಈಗಲೂ ಈ ಜಗಳ ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಲೇ ಇದೆ.




1. ಶೇಕ್ ಹ್ಯಾಂಡ್ಸ್ ವಿತ್ ದಿ ಡೆವಿಲ್ (ರೋಮಿಯೋ ಡಲೈರ್ ನ ಅನುಭವದ ಡಾಕ್ಯುಮೆಂಟರಿ) - https://www.youtube.com/watch?v=9CAOnJrxmKk

2. ಹುಟು ಮತ್ತು ತೂಟ್ಸಿ ನಡುವಿನ ವ್ಯತ್ಯಾಸದ ಬಗ್ಗೆ ಪತ್ರಿಕಾ ವರದಿ - https://www.independent.co.uk/news/world/guide-to-the-zaire-crisis-the-difference-between-a-hutu-and-a-tutsi-1352558.html

3. ರವಾಂಡದ ಇತಿಹಾಸದ ಮಹತ್ವದ ದಿನಗಳು - https://www.pbs.org/wgbh/pages/frontline/shows/rwanda/etc/cron.html




-ವಿಶ್ವನಾಥ್

Friday, 1 June 2018

ಇಕಿರು (ಜಪಾನ್)







  ನಮ್ಮ ಜೀವನ ಪರಿಪೂರ್ಣ ಎನ್ನಿಸುವುದು ಯಾವಾಗ? ಸಂಪತ್ತು ಗಳಿಸಿದಾಗ, ಕೀರ್ತಿ ಸಂಪಾದಿಸಿದಾಗ ಅಥವಾ ಬೇರಿನ್ನಾವುದಾದರೂ ವಸ್ತುವನ್ನು ಗಳಿಸಿದಾಗಲೋ? ಏನು ಗಳಿಸಿದರೂ ನಮಗೆ ಜೀವನದ ಕ್ಷಣಗಳನ್ನು ಅನುಭವಿಸಲು ಬರದಿದ್ದರೆ, ಜೀವನ ಎಷ್ಟು ದೀರ್ಘವಾಗಿದ್ದರೂ, ಎಷ್ಟು ಆರೋಗ್ಯಪುರ್ಣವಾಗಿದ್ದರೂ ವ್ಯರ್ಥವೇ. ಇಂದು ನಾ ಜೀವನದ ಬಗೆಗಿನ ದೃಷ್ಟಿಕೋನದ ಬಗ್ಗೆ ಇರುವ ಚಿತ್ರ ಅಕಿರಾ ಕುರೋಸಾವಾ ನಿರ್ದೇಶಿಸಿರುವ “ಇಕಿರು”. ಜಪಾನ್ ನ ಚಿತ್ರಗಳು ಹಾಲಿವುಡ್ ನಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಗಳಿಸಲು ಕಾರಣರೆಂದೇ ಹೇಳಬಹುದಾದ ನಿರ್ದೇಶಕ ಅಕಿರಾ ಕುರೋಸಾವಾ. ಅವರ ಚಿತ್ರದಲ್ಲಿನ ಕ್ಯಾಮೆರಾ ಕೆಲಸ, ದೃಶ್ಯವನ್ನು ಎಷ್ಟು ಚೆನ್ನಾಗಿ ಕಟ್ಟಿಕೊಡುತ್ತವೆ ಎಂದರೆ, ಕೆಲವು ಚಿತ್ರಗಳ ದೃಶ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲವೆನ್ನುವಷ್ಟು. ಅದರಲ್ಲೂ ಅವರ ಸಮುರಾಯ್ ಚಿತ್ರಗಳು ಚಿತ್ರ ವೀಕ್ಷಕರ ಅಚ್ಚುಮೆಚ್ಚು. ಅವರ ಇನ್ನಿತರ ಪ್ರಖ್ಯಾತ ಚಿತ್ರಗಳು, “ಶಿಚಿನಿನ್ ನೊ ಸಮುರಾಯ್”, ”ರಾಶೋಮಾನ್”, “ಯೊಜಿಂಬೊ”, “ರಾನ್” ಮತ್ತು ಇನ್ನೂ ಹಲವಾರು. ಜಪಾನಿ ಚಿತ್ರಗಳನ್ನು ನೋಡಬಯಸುವವರು ಅಕಿರಾ ಚಿತ್ರಗಳಿಂದ ಪ್ರಾರಂಭಿಸುವುದು ಒಳ್ಳೆಯದು.

  ಚಿತ್ರದ ಪ್ರಾರಂಭದಲ್ಲೇ ನಿರ್ದೇಶಕ ನಮಗೆ ಚಿತ್ರದ ಮುಖ್ಯ ಪಾತ್ರಧಾರಿ ಕಾಂಜಿ ವಾಟನಾಬೆಗೆ ಹೊಟ್ಟೆಯ ಕ್ಯಾನ್ಸರ್ ಇರುವುದರ ಬಗ್ಗೆ ತಿಳಿಸುತ್ತಾನೆ. ಆದರೆ ಅದು ಇನ್ನೂ ಆತನಿಗೆ ತಿಳಿದಿಲ್ಲವಷ್ಟೇ. ಕಾಂಜಿ ಸರ್ಕಾರಿ ಸಾರ್ವಜನಿಕ ವ್ಯವಹಾರಗಳ ಕಚೇರಿಯಲ್ಲಿ ಕೆಲಸಮಾಡುವ ಒಬ್ಬ ಅಧಿಕಾರಿ. ಯಾವ ಅಡಚಣೆಯೂ ಇಲ್ಲದೆ ಯಾರ ಸಂಗವೂ ಸೇರದೆ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಾ ದಿನವೂ ಆತ ಕಚೇರಿಯಲ್ಲಿ ಕಾಲ ಕಳೆಯುತ್ತಿರುತ್ತಾನೆ. ಹೀಗೆ ಕೆಲಸ ಮಾಡುತ್ತಿದ್ದ ಒಂದು ದಿನ, ಒಂದು ಕಾಲೋನಿಯ ಹೆಂಗಸರೆಲ್ಲ ಈತನ ಕಚೇರಿಗೆ ಬಂದು ತಮ್ಮ ಮನೆಗಳ ಬಳಿ ಆಗಿರುವ ಚರಂಡಿಯ ಗುಂಡಿಯಲ್ಲಿ ನೀರು ತುಂಬಿ ಓಡಾಡುವವರಿಗೂ ತೊಂದರೆಯಾಗಿ, ಕಾಲೋನಿಯಲ್ಲಿ ಸೊಳ್ಳೆಗಳ ಕಾಟವೂ ಜಾಸ್ತಿಯಾಗಿದ್ದರ ಬಗ್ಗೆ ದೂರು ಕೊಟ್ಟು ಆ ಗುಂಡಿಯನ್ನು ಮುಚ್ಚಿಕೊಡಲು ಕೇಳಿಕೊಳ್ಳಲು ಬಂದಿರುತ್ತಾರೆ. ಆ ಗುಂಡಿಯನ್ನು ಮುಚ್ಚಿ ಸಮ ಮಾಡಿದರೆ ಅಲ್ಲಿ ಒಂದು ಒಳ್ಳೆಯ ಮಕ್ಕಳ ಆಟದ ಮೈದಾನ/ ಉದ್ಯಾನವನವಾಗಬಹುದು ಎಂದು ಕೇಳಿಕೊಳ್ಳುತ್ತಾರೆ.  ಇವರ ದೂರು ಕೇಳಿದ ಒಬ್ಬ ಗುಮಾಸ್ತ ಕಾಂಜಿಯ ಬಳಿ ಬಂದು ಇದು ಯಾವ ಇಲಾಖೆಗೆ ಸಂಬಂಧಿಸಿದ್ದು ಎಂದು ಕೇಳಿ ಆ ಹೆಂಗಸರನ್ನು ಆ ಇಲಾಖೆಗೇ ದೂರು ಕೊಡಲು ಕಳುಹಿಸುತ್ತಾನೆ. ಕಾಂಜಿ ಗುಮಾಸ್ತನಿಗೆ ನಿರ್ದೇಶನ ಕೊಟ್ಟು ಮತ್ತೆ ತನ್ನ ಕಡತಗಳಲ್ಲಿ ಮುಳುಗಿಹೋಗುತ್ತಾನೆ. ಆಗ ಆತನ ಕಿರಿಯ ಸಹೋದ್ಯೋಗಿಯೊಬ್ಬಳು ಜೋರಾಗಿ ಯಾವುದೊ ವಿಷಯಕ್ಕೆ ನಗಲು ಪ್ರಾರಂಭಿಸುತ್ತಾಳೆ. ಏಕೆ ಹೀಗೆ ನಗುತ್ತಿರುವುದಾಗಿ ಇನ್ನೊಬ್ಬ ಸಹೋದ್ಯೋಗಿ ಕೇಳಿದಾಗ ಆಕೆ ತಾನು ಓದಿದ ಒಂದು ಜೋಕನ್ನು ಎಲ್ಲರಿಗೂ ಓದಿ ಹೇಳುತ್ತಾಳೆ-
ಒಬ್ಬ- ಏಕೆ ನೀನು ಕಚೇರಿಗೆ ಎಂದೂ ರಜಾ ಹಾಕುವುದಿಲ್ಲ? ನಿನ್ನ ಕಚೇರಿ ನೀನಿಲ್ಲದೆ ನಡೆಯುವುದೇ ಇಲ್ಲವೇ?
ಇನ್ನೊಬ್ಬ- ಇಲ್ಲ ನಾನು ಒಂದು ದಿನ ರಜಾ ಹಾಕಿದರೆ, ನಾನಿಲ್ಲದೆಯೂ ಕಚೇರಿ ನಡೆಯಬಹುದು ಎಂದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ರಜಾ ಹಾಕುವುದಿಲ್ಲ.
ಇದನ್ನು ಕೇಳಿಯೂ ಕಾಂಜಿ ಏನೂ ಪರಿಣಾಮ ಬೀರದವನಂತೆ ಮತ್ತೆ ಕೆಲಸದಲ್ಲಿ ಮಗ್ನನಾಗುತ್ತಾನೆ.

  ಇತ್ತ ಆ ಮಹಿಳೆಯರ ಗುಂಪು ಗುಮಾಸ್ತ ಹೇಳಿದ ಇಲಾಖೆಗೆ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಾಗ, ಅವರನ್ನು ಅಲ್ಲಿಂದ ಮತ್ತೆ ಇನ್ನೊಂದು ಇಲಾಖೆಗೆ ಕಳುಹಿಸಲಾಗುತ್ತದೆ. ಮತ್ತೆ ಅಲ್ಲಿಂದ ಇನ್ನೊಂದಕ್ಕೆ. ಹೀಗೆ ಅನೇಕ ಇಲಾಖೆಗಳನ್ನು ಸುತ್ತಾಡಿಕೊಂಡು ಕಡೆಗೆ ಉಪ ಮೇಯರ್ ಬಳಿಗೆ ಹೋದಾಗ ಆತ ಮತ್ತೆ ಅವರನ್ನು ಸಾರ್ವಜನಿಕ ವ್ಯವಹಾರಗಳ ಕಚೇರಿಗೆ ಕಳುಹಿಸುತ್ತಾನೆ. ಆ ಮಹಿಳೆಯರ ಗುಂಪು ಮತ್ತೆ ಕಾಂಜಿಯ ಕಚೇರಿಗೆ ಬಂದು ಕೇಳಿಕೊಂಡಾಗ ಮತ್ತೆ ಇನ್ನೊಂದು ಇಲಾಖೆಗೆ ಹೋಗುವಂತೆ ಗುಮಾಸ್ತ ಉತ್ತರ ಕೊಟ್ಟಾಗ, ಅವರೆಲ್ಲ ಸಿಟ್ಟಿಗೆದ್ದು ಆತನನ್ನು ಬಯ್ದು ಇನ್ನು ಆ ಕಚೇರಿಗೇ ತಾವು ಬರುವುದಿಲ್ಲವೆಂದು ಹೇಳಿ ಹೊರಡಲು ಮುಂದಾದಾಗ ಗುಮಾಸ್ತ ಅವರೆಲ್ಲ ಸಿಟ್ಟಾಗಿದ್ದನ್ನು ನೋಡಿ ಹೆದರಿ ಓಡಿಬಂದು ಸಮಾಧಾನಮಾಡಿ ತಮ್ಮ ದೂರನ್ನು ಲಿಖಿತ ರೂಪದಲ್ಲಿ ಕೊಡುವಂತೆಯೂ ತಮ್ಮ ಮೇಲಾಧಿಕಾರಿ ಕಾಂಜಿ ರಜೆಯಿಂದ ಮರಳಿ ಬಂದ ನಂತರ ಅದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿಯೂ ಹೇಳಿ ಕಳುಹಿಸುತ್ತಾನೆ. ಎಂದೂ ರಜೆ ತೆಗೆದುಕೊಳ್ಳದ ಕಾಂಜಿ ಹೀಗೆ ಯಾಕೆ ರಜೆ ಮೇಲೆ ತೆರಳಿದ್ದಾನೆ ಎಂದು ಕಚೇರಿಯ ಎಲ್ಲ ಸಹೋದ್ಯೋಗಿಗಳು ಚರ್ಚಿಸಿದ್ದೇ ಚರ್ಚಿಸಿದ್ದು. ಆತನಿಗೆ ಏನಾದರೂ ಆದರೆ ಮುಂದೆ ಯಾರು ಇಲಾಖೆಯ ಮುಖ್ಯಸ್ತರು ಆಗಬಹುದು ಎಂದು ಎಲ್ಲ ಚರ್ಚಿಸುತ್ತ ಕೂರುತ್ತಾರೆ.

  ರಜೆ ಮೇಲಿದ್ದ ಕಾಂಜಿ ಆಸ್ಪತ್ರೆಯಲ್ಲಿ ತನ್ನ ಹೊಟ್ಟೆ ನೋವಿನ ಮರ್ಮ ತಿಳಿಯಲು ಬಂದಿರುತ್ತಾನೆ. ತನಗೆ ಹೊಟ್ಟೆಯ ಕ್ಯಾನ್ಸರ್ ಆಗಿರುವುದಾಗಿಯೂ ತನ್ನ ಬಳಿ ಬಹಳ ಸಮಯ ಇಲ್ಲವೆಂದು ತಿಳಿದು ಜರ್ಜರಿತನಾಗುತ್ತಾನೆ. ಇದನ್ನು ಅರಗಿಸಿಕೊಳ್ಳಲಾಗದೆ ಇದಕ್ಕಿದ್ದಂತೆ ತಾನು ಈ ಜಗತ್ತಿನಲ್ಲಿ ಒಬ್ಬಂಟಿಗ ಎಂಬ ಭಾವನೆ ಆವರಿಸಿಕೊಳ್ಳುತ್ತದೆ. ಯಾವುದೇ ಅಡೆತಡೆಯಿಲ್ಲದೆ ಸಾಗುತ್ತಿದ್ದ ತನ್ನ ಜೀವನದ ಹಾದಿಯಲ್ಲಿ ಈ ಸಂಗತಿ ಒಂದು ದೊಡ್ಡ ಗೋಡೆಯಂತೆ ಎದ್ದುನಿಲ್ಲುತ್ತದೆ. ಆಗ ತನ್ನ ಅಲ್ಲಿಯತನಕದ ಜೀವನವನ್ನು ಅವಲೋಕಿಸುತ್ತ ಹೋಗುತ್ತಾನೆ. ಮನೆಗೆ ಬಂದಾಗ ಮಗ ಸೊಸೆ ತಾವು ಕಟ್ಟಿಕೊಳ್ಳಲು ಬಯಸಿರುವ ಹೊಸ ಮನೆಯ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆಯೇ ವಿನಾ ಈತನ ಬಗ್ಗೆ ಅಷ್ಟು ಗಮನಹರಿಸುವುದಿಲ್ಲ. ಹಾಗೂ ಕೇಳಿದಾಗ ಕಾಂಜಿಯೂ ಈ ಹೊಸ ಸಂಗತಿಯ ಬಗ್ಗೆ ಏನೂ ಹೇಳುವುದಿಲ್ಲ. ಮನೆಯಲ್ಲಿ ಒಬ್ಬನೇ ಕುಳಿತು ತಾನು ಮಗ ಮಿತ್ಸುಒ ಮೇಲೆ ತೋರಿದ ಪ್ರೀತಿ, ತಾಯಿ ಸತ್ತ ಮೇಲೆ ಮತ್ತೆ ಮದುವೆಯಾಗದೆ ಅವನಿಗಾಗಿ ಮಾಡಿದ ತ್ಯಾಗಗಳನ್ನು ನೆನೆಯುತ್ತ ಮಗನನ್ನು ಮನದಲ್ಲೇ, “ಮಿತ್ಸುಒ, ಮಿತ್ಸುಒ” ಎಂದು ಕೂಗಿ ಕರೆಯುತ್ತಾನೆ. ಆ ಕೂಗಿಗೆ ಮಗ ಓಗೊಡದದ್ದನ್ನು ನೋಡಿ ಬೇಸರಗೊಂಡು ಬಂದು ಹಾಸಿಗೆಯಲ್ಲಿ ಅಳುತ್ತ ಮಲಗುತ್ತಾನೆ.

  ರಜೆ ಮೇಲೆ ತೆರಳಿ ಐದು ದಿನವಾದರೂ ಕಾಂಜಿ ಬಾರದಿದ್ದನ್ನು ಗಮನಿಸಿ ಕಚೇರಿಯ ಒಬ್ಬ ಸಹೋದ್ಯೋಗಿ ಅವನ ಮನೆಯಲ್ಲಿ ವಿಚಾರಿಸಲು ಬಂದಾಗಲೇ ಅವನ ಮಗ ಸೊಸೆಗೆ ತಿಳಿಯುವುದು, ಕಾಂಜಿ ಕಚೇರಿಗೆ ಎಂದು ಹೇಳಿ ಬೇರೆಲ್ಲಿಯೋ ಹೋಗುತ್ತಿದ್ದಾನೆ ಎಂದು. ಇದು ಸಾಲದೆಂಬಂತೆ ಕಾಂಜಿ ತನ್ನ ಖಾತೆಯಿಂದ ೫೦೦೦೦ ಯೆನ್ ಗಳನ್ನು ಹಿಂತೆಗೆದುಕೊಂಡಿದ್ದು ಮಗನನ್ನು ಸ್ವಲ್ಪ ವಿಚಲಿತಗೊಳಿಸುತ್ತದೆ. ತಂದೆಯ ನಿವೃತ್ತಿಯ ಹಣದಿಂದ ಒಂದು ಮನೆಯನ್ನು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದ ಮಿತ್ಸುಒ ತನ್ನ ತಂದೆ ಹೀಗೆ ಮನಸೋ ಇಚ್ಛೆ ತನ್ನ ದುಡ್ಡನ್ನು ಖರ್ಚು ಮಾಡಿದರೆ ಹೇಗೆ ಎಂದು ಆತಂಕಗೊಳ್ಳುತ್ತಾನೆ. ತನ್ನ ತಂದೆಯ ಬಗ್ಗೆ ತಿಳಿಯಲು ತನ್ನ ಅಂಕಲ್ ಬಳಿ ಬಂದಾಗಲೂ ಹೆಚ್ಚೇನೂ ತಿಳಿಯುವುದಿಲ್ಲ. ಇತ್ತ ಕಾಂಜಿ ಒಂದು ರಾತ್ರಿ ಬೇಸರದಿಂದ ಒಂದು ಸಾಕೆ(ಹೆಂಡದ) ಅಂಗಡಿಯಲ್ಲಿ ಕೂತು ಒಬ್ಬನೇ ಕುಡಿಯುತ್ತ ಕೂತಿದ್ದಾಗ ಒಬ್ಬ ಪತ್ರಕರ್ತನ ಜೊತೆ ಸ್ನೇಹವಾಗುತ್ತದೆ. ಅವನಿಗೆ ತನ್ನ ನೋವನ್ನೆಲ್ಲ ಹೇಳಿಕೊಂಡು ಜೀವನದಲ್ಲಿ ಅಲ್ಲಿಯ ತನಕ ತಾನು ಏನೂ ಮಾಡಿಲ್ಲವೆಂದೂ ಹಾಗಾಗಿ ತನ್ನ ನೋವನ್ನು ಸ್ವಲ್ಪ ಕಾಲವಾದರೂ ಮರೆಯಲು ಅಲ್ಲಿ ಕುಡಿಯುತ್ತಿರುವುದಾಗಿ ಹೇಳುತ್ತಾನೆ. ತನ್ನ ಬಳಿ ೫೦೦೦೦ಯೆನ್ ಇರುವುದಾಗಿಯೂ ಅದನ್ನು ಹೇಗೆ ಖರ್ಚು ಮಾಡಬೇಕೆಂದೇ ತಿಳಿಯುತ್ತಿಲ್ಲ ಎಂದು ಆ ಪತ್ರಕರ್ತನ ಬಳಿ ಹೇಳಿಕೊಳ್ಳುತ್ತಾನೆ. ಆಗ ಆ ಪತ್ರಕರ್ತನಿಗೆ ಕಾಂಜಿಯ ಮೇಲೆ ಮರುಕ ಹುಟ್ಟಿ ತನ್ನ ದುಡ್ಡಿನಲ್ಲೇ ಕಾಂಜಿಯನ್ನು ಊರಿನ ಜೂಜು ಅಡ್ಡೆ, ಕ್ಲಬ್, ಪಬ್, ಬಾರ್ ಮತ್ತು ಇನ್ನೂ ಅನೇಕ ಮೋಜಿನ ತಾಣಗಳಿಗೆ ಕರೆದೊಯ್ಯುತ್ತಾನೆ. ಇಷ್ಟೆಲ್ಲಾ ಮಾಡಿದರೂ ಇಡಿಯ ಜೀವನದಲ್ಲಿ ಪಡದ ಸಂತೋಷ ಈ ಒಂದು ರಾತ್ರಿಯ ಮೋಜು ಸರಿತೂಗದು ಎಂದು ನೆನೆದು ಮತ್ತೆ ದುಃಖಿಸುತ್ತ ಕೂರುತ್ತಾನೆ. ಆಗ ಆತ ಹಾಡುವ ಹಾಡು “ಜೀವನ ಚಿಕ್ಕದು” ಎನ್ನುವ ಹಾಡು ಬಹಳ ಮನಮುಟ್ಟುವಂತಿದೆ. ಇದೆಲ್ಲ ಅನುಭವಿಸಿ ಮಾರನೆಯ ದಿನ ಬೆಳಗ್ಗೆ ರಸ್ತೆಯಲ್ಲಿ ಒಬ್ಬನೇ ಸುಮ್ಮನೆ ನಡೆದು ಹೋಗುತ್ತಿರುವಾಗ ಕಚೇರಿಯ ಹುಡುಗಿ ಈತನನ್ನು ಕಂಡು ಓಡಿಬಂದು ಭೇಟಿಯಾಗುತ್ತಾಳೆ. ದಿನವೂ ಒಂದೇ ಬಗೆಯ ಕೆಲಸ ಮಾಡಿ ಬೇಸರವಾಗಿದೆ ಎಂದು ನೌಕರಿ ಬಿಡುತ್ತಿರುವುದಾಗಿ,  ತನ್ನ ರಾಜಿನಾಮೆ ಪತ್ರಕ್ಕೆ ಮುದ್ರೆ ಒತ್ತಿಸಿಕೊಂಡು ಹೋಗಲು ಕಾಂಜಿಯನ್ನು ಹುಡುಕಿ ಬಂದದ್ದಾಗಿ ಹೇಳುತ್ತಾಳೆ. ರಾಜಿನಾಮೆಗೆ ಮುದ್ರೆ ಹಾಕಿಕೊಡುವುದಾಗಿ ಹೇಳಿ ಕಾಂಜಿ ಆಕೆಯನ್ನು ಮನೆಗೆ ಕರೆದೊಯ್ಯುತ್ತಾನೆ. ಇತ್ತ ಕಾಂಜಿಯ ಮನೆಯಲ್ಲಿ ರಾತ್ರಿಯೆಲ್ಲ ಹೊರಗೆ ಇದ್ದ ಅಪ್ಪನನ್ನು ಅದರ ಬಗ್ಗೆ ಹೇಗೆ ವಿಚಾರಿಸುವುದು ಎಂದು ಮಗ, ಸೊಸೆ ಯೋಚಿಸುತ್ತಿರುವಾಗಲೇ, ಕಾಂಜಿ ಒಂದು ಹುಡುಗಿಯನ್ನು ಮನೆಗೆ ಕರೆತಂದದ್ದು ಇಬ್ಬರಿಗೂ ಆಶ್ಚರ್ಯಗೊಳಿಸುತ್ತದೆ.

  ಕಾಂಜಿ ಆ ಹುಡುಗಿಯನ್ನು ಕರೆದುಕೊಂಡು ಮತ್ತೆ ಹೊರನಡೆದು ಆಕೆಯ ಹರಿದ ಕಾಲುಚೀಲಗಳನ್ನು ನೋಡಿ ಹೊಸ ಜೊತೆಯೊಂದನ್ನು ಆಕೆಗೆ ಕೊಡಿಸುತ್ತಾನೆ. ಆಗ ಆಕೆಯ ಅರಳುವ ನಗು ನೋಡಿ ಕಾಂಜಿ ಆಕೆಯ ಸಂತೋಷದ ಸೋಂಕು ತಗುಲಿದಂತೆ ತಾನೂ ನಗಲು ಪ್ರಾರಂಭಿಸುತ್ತಾನೆ. ಆಕೆಯನ್ನು ತನ್ನೊಡನೆ ಹೋಟೆಲ್ ಗೆ ಕರೆದೊಯ್ದು ಆಕೆಗೆ ಇಷ್ಟವಾದ ತಿಂಡಿಯನ್ನೆಲ್ಲ ಕೊಡಿಸುತ್ತಾನೆ. ಈ ಮುಂಚೆ ಆಕೆ ಕಚೇರಿಯಲ್ಲಿ ಎಲ್ಲರಿಗೂ ಒಂದು ಅಡ್ಡಹೆಸರಿಟ್ಟಂತೆ ತನಗೆ “ಮಮ್ಮಿ”(ಅಥವಾ ಬೆದರು ಬೊಂಬೆ) ಎಂದು ಕರೆದಿದ್ದಕ್ಕೆ, ತಾನು ತನ್ನ ಮಗನ ಒಳಿತಿಗಾಗಿ ದುಡಿಯುತ್ತ ಸಂತೋಷಪಡುವುದನ್ನು ಮರೆತೆ ಹಾಗಾಗಿ ಹೀಗಿದ್ದೇನೆ ಎಂದು ವಿವರಿಸಲು ಮುಂದಾಗುತ್ತಾನೆ. ಆಗ ಆ ಹುಡುಗಿ ಕಾಂಜಿ ತನ್ನ ಸ್ಥಿತಿಗೆ ಮಗನನ್ನು ದೂಷಿಸುವುದು ಸರಿಯಲ್ಲ ಎಂದು ಹೇಳುತ್ತಾಳೆ. ಅಷ್ಟಕ್ಕೇ ಸುಮ್ಮನಾಗುವ ಕಾಂಜಿ ಆಕೆ ಹೇಳಿದ್ದೂ ಸತ್ಯ ಎಂದು ತಿಳಿದು ಮನೆಗೆ ಮರಳಿ ತನ್ನ ನೋವನ್ನೆಲ್ಲ ಮಗನ ಬಳಿ ಹೇಳಿಕೊಳ್ಳಲು ಮುಂದಾಗುತ್ತಾನೆ. ಆಗ ಮಗ ಮಧ್ಯದಲ್ಲೇ ತಡೆದು ಕಾಂಜಿಯ ಈ ಹೊಸ ವರ್ತನೆ ತಮ್ಮ ಮರ್ಯಾದೆ ಕಳಿಯುತ್ತಿದೆಯೆಂದು, ಈ ವಯಸ್ಸಿನಲ್ಲಿ ಕಾಂಜಿ ಒಂದು ಹುಡುಗಿಯ ಜೊತೆ ತಿರುಗುವುದು ಮತ್ತು ಆ ಹುಡುಗಿ ಆತನ ದುಡ್ಡನ್ನೆಲ್ಲ ಖರ್ಚುಮಾಡಿಸುತ್ತಿರುವುದು ಅಷ್ಟು ಚೆನ್ನಾಗಿಲ್ಲ ಎಂದು ತನ್ನ ಆಕ್ಷೇಪ ವ್ಯಕ್ತಪಡಿಸುತ್ತಾನೆ. ಇದನ್ನು ಕೇಳಿದ ಕಾಂಜಿ ಏನು ಹೇಳಲೂ ತಿಳಿಯದೆ ಸುಮ್ಮನೆ ತನ್ನ ಕೋಣೆ ಸೇರುತ್ತಾನೆ. ಅತ್ತ ಎರಡು ವಾರವಾದರೂ ಕೆಲಸಕ್ಕೆ ಕಾಂಜಿ ಬರದಿದ್ದನ್ನು ನೋಡಿ ಜನ ಆತನ ಬಗ್ಗೆ ತಮಗೆ ಬೇಕಾದಂತೆ ಕತೆ ಹುಟ್ಟಿಸಿಕೊಂಡು ಮಾತಾಡಲು ಪ್ರಾರಂಭಿಸುತ್ತಾರೆ.

  ಕಾಂಜಿ ಇದ್ಯಾವುದಕ್ಕೂ ಗಮನ ಕೊಡದೆ ಮತ್ತೆ ಆ ಹುಡುಗಿಯ, ಆಕೆ ಈಗ ಕೆಲಸ ಮಾಡುತ್ತಿದ್ದ, ಬೊಂಬೆ ತಯಾರಿಕಾ ಕಾರ್ಖಾನೆಯ ಬಳಿ ಹೋಗಿ ತನ್ನೊಡನೆ ಕಾಲ ಕಳೆಯಲು ಕೇಳಿಕೊಳ್ಳುತ್ತಾನೆ. ಆದರೆ ಆಕೆ ಇದ್ದ ಕೆಲಸ ಬಿಟ್ಟು ಹೀಗೆ ಸುತ್ತಿದರೆ ಹೊಟ್ಟೆಪಾಡು ನಡೆಯಬೇಕಲ್ಲ ಎಂದು ನಿರಾಕರಿಸಿರುತ್ತಾಳೆ. ಆದರೆ ಕಾಂಜಿಯ ಒತ್ತಡಕ್ಕೆ ಮಣಿದು ಆತನೊಡನೆ ಸಂಜೆ ಬರುವುದಕ್ಕೆ ಒಪ್ಪಿಕೊಳ್ಳುತ್ತಾಳೆ. ಹೊಟೆಲ್ಲೊಂದರಲ್ಲಿ ಮಾತನಾಡುತ್ತ ಆ ಹುಡುಗಿ ಕಾಂಜಿ ಯಾಕೆ ಹೀಗೆ ತನಗೆ ಉಪಚಾರ ಮಾಡುತ್ತಿದ್ದಾನೆ ಎಂದು ಕೇಳಿದಾಗ ಕಾಂಜಿ ತನ್ನ ಭಾವನೆಯನ್ನು ಬಗೆಬಗೆಯಾಗಿ ಹೇಳಲು ಪ್ರಯತ್ನಿಸಿ ಕಡೆಗೆ ತನ್ನ ಕ್ಯಾನ್ಸರ್ ಬಗ್ಗೆ ತಿಳಿಸುತ್ತಾನೆ. ತನಗೆ ಆ ಹುಡುಗಿಯಂತೆ ಒಂದು ದಿನವಾದರೂ ಸಂತೋಷದಿಂದ ಜೀವಿಸಬೇಕು ಎಂಬ ಆಸೆ ಎಂದು ಹೇಳಿಕೊಳ್ಳುತ್ತಾನೆ. ಆಕೆಯ ಆ ನಗು ಸಂತೋಷ ತನಗೆ ಅಸೂಯೆ ಹುಟ್ಟಿಸುತ್ತಿದೆಯೆಂದು, ತಾನೂ ಹಾಗಿರಲು ಏನು ಮಾಡಬೇಕು ಎಂದು ಕೇಳಿದಾಗ, ಆ ಹುಡುಗಿ ತಾನು ವಿಶೇಷವಾಗಿ ಏನೂ ಮಾಡುತ್ತಿಲ್ಲವೆಂದು ಆದರೆ ತಾನು ಮಾಡುವ ಬೊಂಬೆಯ ಕೆಲಸ ಬಹಳ ಸಂತೋಷ ಕೊಡುತ್ತದೆ, ಆತನೂ ಹಾಗೇನಾದರೂ ಮಾಡಬಾರದೇಕೆ ಎಂದು ಕೇಳುತ್ತಾಳೆ. ಅದು ಸರಿ ಎನಿಸಿದರೂ ತನ್ನ ಕಚೇರಿಯಲ್ಲಿ ಹಾಗೆ ಮಾಡಲು ಏನೂ ಸಾಧ್ಯವಿಲ್ಲವೆಂದು ಬೇಸರಪಟ್ಟುಕೊಳ್ಳುತ್ತಾನೆ. ಆದರೆ ಇದ್ದಕ್ಕಿದ್ದಂತೆ ಮಿಂಚು ಹರಿದಂತೆ ಏನೋ ಯೋಚಿಸಿ ಇನ್ನೂ ಕಾಲ ಮಿಂಚಿಲ್ಲ, ತಾನು ಕಚೇರಿಯಲ್ಲಿ ಏನಾದರೂ ಮಾಡಲು ಸಾಧ್ಯವಿದೆ ಎಂದು ಯೋಚಿಸಿ ಹೊಸ ಮನುಷ್ಯನಾದಂತೆ ಅಲ್ಲಿಂದ ಹೊರಡಲು ಮುಂದಾಗುತ್ತಾನೆ. ಆಗ ಹೊಟೆಲಿನಲ್ಲಿ ಹುಟ್ಟುಹಬ್ಬದ ಸ್ನೇಹಕೂಟವನ್ನು ಆಚರಿಸುತ್ತಿದ್ದ ಯಾರೋ “ಹ್ಯಾಪಿ ಬರ್ತ್ ಡೇ ಟು ಯೂ” ಎಂದು ಹಾಡಿದಾಗ ಕಾಂಜಿಯ ಮರುಜನ್ಮವನ್ನು ನೋಡಿಯೇ ಹಾಡಿದಂತೆ ಭಾಸವಾಗುತ್ತದೆ. ಮಾರನೆ ದಿನವೇ ಮಹಿಳೆಯರ ಗುಂಪು ಕೊಟ್ಟಿದ್ದ ದೂರಿನ ಮೇಲೆ ಕ್ರಮ ತೆಗೆದುಕೊಂಡು ಅವರಿಗೆ ಪರಿಹಾರ ಮಾಡಿಕೊಡಲು ಮುಂದಾಗುತ್ತಾನೆ. ಇದಾದ ಐದು ತಿಂಗಳ ನಂತರ ಕಾಂಜಿ ತನ್ನ ಖಾಯಿಲೆಗೆ ಬಲಿಯಾಗುತ್ತಾನೆ.

  ಸತ್ತ ನಂತರ ಆತನ ಸ್ಮರಣಾರ್ಥ ಮನೆಯಲ್ಲಿ ಏರ್ಪಡಿಸಿದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಕಚೇರಿಯ ಎಲ್ಲ ಸಹೋದ್ಯೋಗಿಗಳು ಬಂದಿರುತ್ತಾರೆ. ಅಲ್ಲಿಗೆ ಡೆಪ್ಯುಟಿ ಮೇಯರ್ ಕೂಡ ಬಂದಿರುತ್ತಾರೆ. ಡೆಪ್ಯುಟಿ ಮೇಯರ್ ಅಲ್ಲಿಗೆ ಬಂದಿದ್ದಾರೆ ಎಂದು ತಿಳಿದ ಕೆಲ ಪತ್ರಕರ್ತರು ಅಲ್ಲಿಗೇ ಬಂದು ಅವರನ್ನು ಕೆಲ ಪ್ರಶ್ನೆ ಕೇಳಲು ಮುಂದಾಗುತ್ತಾರೆ. ಪತ್ರಕರ್ತರು, ಡೆಪ್ಯುಟಿ ಮೇಯರ್ ಉದ್ಯಾನವನದ ಉದ್ಘಾಟನೆ ಮಾಡಿದಾಗ ಅದೇಕೆ ಕಾಂಜಿ ವಾಟನಾಬೆಯ ಕೊಡುಗೆಯ ಬಗ್ಗೆ ಹೇಳಲಿಲ್ಲ ಎಂದು ಪ್ರಶ್ನಿಸುತ್ತಾರೆ. ಆಗ ಉಪ ಮೇಯರ್, ಕಾಂಜಿ ಸರ್ಕಾರವೆಂಬ ದೊಡ್ಡ ಯಂತ್ರದಲ್ಲಿ ಒಂದು ಚಿಕ್ಕ ಭಾಗವಾಗಿ ಮಾತ್ರ ಇದರಲ್ಲಿ ಕೆಲಸ ಮಾಡಿದ್ದು, ಎಲ್ಲಾ ಕೀರ್ತಿ ಅವರೊಬ್ಬರಿಗೇ ಸಲ್ಲುವುದು ನ್ಯಾಯವಲ್ಲ ಎನ್ನುತ್ತಾರೆ. ಆಗ ಪತ್ರಕರ್ತರು ಸಾರ್ವಜನಿಕ ಅಭಿಪ್ರಾಯ ಬೇರೆಯೇ ಇದ್ದು, ಮೊದಲಿನಿಂದಲೂ ಆ ಉದ್ಯಾನವನ ಪೂರ್ತಿ ನಿರ್ಮಾಣವಾಗುವವರೆಗೂ ಕಾಂಜಿ ಬಹಳ ಕಾಳಜಿ ವಹಿಸಿದ್ದಾರೆಂದೂ, ಅವರ ಕೆಲಸದ ಕೀರ್ತಿಯನ್ನೆಲ್ಲಾ ಉಪ ಮೇಯರ್ ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬುದಾಗಿದೆ ಎಂದು ಹೇಳುತ್ತಾರೆ. ತಾವು ನಿರ್ಮಿಸಿದ ಉದ್ಯಾನವನದಲ್ಲೇ ಕಾಂಜಿ ಸತ್ತಿದ್ದು ವ್ಯವಸ್ಥೆಯ ವಿರುದ್ಧದ ಅವರ ಮೌನ ಪ್ರತಿಭಟನೆಯ ಪ್ರತೀಕ ಎಂದು ಮಾತಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದಾಗ ಉಪ ಮೇಯರ್ ಅವನ್ನೆಲ್ಲ ಅಲ್ಲಗಳೆದು ಅವರ ಸಾವಿಗೆ ಯಾರೂ ನೇರವಾಗೂ ಅಥವಾ ಪರೋಕ್ಷವಾಗೂ ಕಾರಣರಲ್ಲ, ಅವರು ಸತ್ತಿದ್ದು ಹೊಟ್ಟೆಯ ಕ್ಯಾನ್ಸರ್ ನಿಂದ ಎಂದು ಹೇಳಿದಾಗ ಎಲ್ಲರೂ ಆಶ್ಚರ್ಯಗೊಳ್ಳುತ್ತಾರೆ. ತನ್ನ ಮೇಲೆ ಅಷ್ಟು ಅನುಮಾನವಿದ್ದರೆ ಅವರ ಸಾವಿನ ಬಗ್ಗೆ ದಾಖಲೆ ಕೊಟ್ಟ ಆಸ್ಪತ್ರೆಯಲ್ಲೇ ಕೇಳಬಹುದು ಎಂದು ಹೇಳಿ ಕಳಿಸುತ್ತಾನೆ. ಒಳಗೆ ಬಂದು ಕುಳಿತ ನಂತರ ಪತ್ರಕರ್ತರ ಈ ಅಭಿಪ್ರಾಯದಿಂದ ಸಿಟ್ಟಾಗಿದ್ದ ಉಪ ಮೇಯರ್ ತನ್ನನ್ನು ಸಮರ್ಥಿಸಿಕೊಳ್ಳುವಂತೆ ಮತ್ತೆ ಹೊರಗೆ ಹೇಳಿದ್ದನ್ನೇ ಹೇಳಿ ಈ ಕಾರ್ಯ, ಕಾಂಜಿ ಒಬ್ಬರಿಂದ ಆಗುವಂತದ್ದು ಅಲ್ಲವೆಂದು ಹೇಳುತ್ತಾರೆ. ಅದಕ್ಕೆ ಎಲ್ಲರೂ ಸುಮ್ಮನೆ ಹೌದೆಂದು ತಲೆ ಆಡಿಸುತ್ತಾರೆ. ಅಷ್ಟರಲ್ಲಿ ಉದ್ಯಾನವನದ ಅರ್ಜಿ ಕೊಟ್ಟ ಕುರೋಎ ಕಾಲೋನಿಯ ಹೆಂಗಸರು ಅಳುತ್ತಾ ಬಂದು ತಮ್ಮ ಶ್ರದ್ಧಾಂಜಲಿ ಅರ್ಪಿಸಿ ಉಪಮೇಯರ್ ಕಡೆ ತಿರುಗಿಯೂ ನೋಡದೆ ಹೊರಟು ಹೋಗುತ್ತಾರೆ. ಇದರಿಂದ ಇರುಸುಮುರುಸುಗೊಳ್ಳುವ ಉಪಮೇಯರ್ ಸ್ವಲ್ಪ ಸಮಯದ ನಂತರ ಹೊತ್ತಾಯಿತೆಂದು ಎದ್ದು ಹೊರಟುಹೋಗುತ್ತಾನೆ. ಉಪಮೇಯರ್ ಹೋದ ನಂತರ ಕಚೇರಿಯ ಎಲ್ಲ ಸಹೋದ್ಯೋಗಿಗಳು ಈ ಕಾರ್ಯದಲ್ಲಿ ಕಾಂಜಿಯ ಕೊಡುಗೆ ಎಷ್ಟು ಎಂದು ಚರ್ಚಿಸಲು ಪ್ರಾರಂಭಿಸುತ್ತಾರೆ. ಕೆಲವರು ಅದು ಚುನಾವಣೆ ಹತ್ತಿರವಾಯಿತೆಂದು ಮತ್ತು ಅಲ್ಲಿ ಒಂದು ಹೋಟೆಲ್ ನಿರ್ಮಿಸಬಹುದೆಂದು ಅನ್ನಿಸಿದ್ದರಿಂದ ನಗರಾಡಳಿತ ಇದಕ್ಕೆ ಸಮ್ಮತಿಸಿತು, ಇಲ್ಲದಿದ್ದರೆ ಹೇಗೆ ಸಾಧ್ಯವಾಗುತ್ತಿತ್ತು? ಎಂದು ಪ್ರಶ್ನಿಸುತ್ತಾರೆ. ಹಾಗಾದರೆ ವೃತ್ತಿಜೀವನದ ಕೊನೆಯಲ್ಲಿ ಅವರಲ್ಲಿ ಆದ ಈ ಬದಲಾವಣೆಗೆ ಕಾರಣ ಏನು ಎಂದು ಯೋಚಿಸುತ್ತಾರೆ. ಅವರಿಗೆ ಮುಂಚಿತವಾಗೇ ಹೊಟ್ಟೆಯ ಕ್ಯಾನ್ಸರ್ ಬಗ್ಗೆ ಗೊತ್ತಿತ್ತೇ ಎಂದು ಮಗನನ್ನು ಕೇಳಿದಾಗ ಆತ ಹಾಗೇನಾದರೂ ಇದ್ದಿದ್ದರೆ ತನ್ನ ತಂದೆ ಹೇಳುತ್ತಿದ್ದರು ಎಂದು ಹೇಳುತ್ತಾನೆ. ಅದಕ್ಕೆ ಕಾಂಜಿಯ ಸಹೋದರ ಆತ ತನ್ನ ಇಳಿ ವಯಸ್ಸಿನಲ್ಲಿ ಒಂದು ಹೆಂಗಸಿನ ಸಂಬಂಧ ಮಾಡಿರಬೇಕು, ಹಾಗಾಗಿಯೇ ಈ ರೀತಿ ವರ್ತಿಸಿದ್ದ, ಒಂದು ಹೆಣ್ಣಿನ ಸಂಗ ಒಬ್ಬ ವಯಸ್ಸಾದ ಮನುಷ್ಯನಲ್ಲೂ ಉತ್ಸಾಹ ತುಂಬುತ್ತದೆ ಎಂದು ನಗೆಯಾಡುತ್ತಾನೆ. ಎಲ್ಲರೂ ಅದಕ್ಕೆ ನಗುತ್ತಲೇ ಸಮ್ಮತಿಸುತ್ತಾರೆ. ಆದರೂ ಕಾಂಜಿ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಈ ಉದ್ಯಾನವನದ ವಿಚಾರವಾಗಿ ಕಾಡಿದ್ದು ಬೇಡಿದ್ದು ಮತ್ತು ಅವರ ವಿಚಿತ್ರ ಸಂಕಲ್ಪ ನೋಡಿದರೆ ಬೇರೇನೋ ಇದ್ದಿರಲೇಬೇಕು ಎಂದು ಮತ್ತೆ ಚರ್ಚಿಸತೊಡಗುತ್ತಾರೆ. ಕಾಂಜಿ ಇದರಲ್ಲಿ ವಿಶೇಷ ಕಾಳಜಿ ವಹಿಸಿದ್ದರಿಂದಲೇ ಈ ಕಾರ್ಯವಾಯಿತೆಂದು ಹೇಳುವ ಒಬ್ಬನ ಮಾತಿಗೆ ಇನ್ನೊಬ್ಬ ಆತನನ್ನು ಅಲ್ಲಗಳೆಯುತ್ತಾನೆ. ಚುನಾವಣೆ ಇದ್ದದ್ದರಿಂದ ಮತ್ತು ಆ ಹೋಟೆಲ್ ಮಾಲೀಕರ ಒತ್ತಡದಿಂದ ಉಪ ಮೇಯರ್ ಅದನ್ನು ಆಗಲು ಬಿಟ್ಟದ್ದು ಎಂದಾಗ ಕಾಂಜಿಯ ಕಚೇರಿಯ ಉಪ ಮುಖ್ಯಸ್ಥ ಒನೋ ಅವನನ್ನು ತಡೆದು ಕಾಂಜಿ ಈ ಹಿಂದೆ ನಗರ ಪಾಲಿಕೆ ಕಚೇರಿಯಲ್ಲಿ ಯಾವ ಅಧಿಕಾರಿಯೂ ತೋರಿಲ್ಲದಷ್ಟು ಧೈರ್ಯ ತೋರಿಸಿ ಉಪ ಮೇಯರ್ ಮೇಲೆ ಒತ್ತಡ ತಂದರು ಮತ್ತು ಹೋಟೆಲ್ ಮಾಲಿಕರಿಗೆ ಅಲ್ಲಿ ಹೋಟೆಲ್ ಗಳಾಗುವುದು ಬೇಡವಾಗಿದ್ದರಿಂದ ಕಾಂಜಿಯ ಮೇಲೆ ಹಲ್ಲೆಗೂ ಮುಂದಾಗಿದ್ದರು ಎಂದು ಒಮ್ಮೆ ಆದದ್ದನ್ನೆಲ್ಲಾ ನೆನಪಿಸಿಕೊಳ್ಳುತ್ತಾನೆ. ಆಗ ಮತ್ತೆ ಎಲ್ಲರೂ ಹಾಗಾದರೆ ಕಾಂಜಿ ಹೀಗೆ ಮಾಡಲು ಏನು ಕಾರಣ ಎಂದು ಗೊಂದಲಗೊಳ್ಳುತ್ತಾರೆ. ಆಗ ಇದ್ದಕ್ಕಿದ್ದಂತೆ ಒನೋ ನೆನಪಿಸಿಕೊಳ್ಳುತ್ತಾನೆ- ಒಮ್ಮೆ ಹೀಗೆ ಉದ್ಯಾನವನದ ಅರ್ಜಿಯ ಬಗ್ಗೆ ಕೇಳಿಕೊಳ್ಳಲು ಹೋಗಿ ವಾಪಸ್ಸಾಗುತ್ತಿದ್ದಾಗ ಒನೋ ಅವರೆಲ್ಲರ ವರ್ತನೆಯಿಂದ ನಿಮಗೆ ಸಿಟ್ಟು ಬರುವುದಿಲ್ಲವೇ? ಎಂದು ಕೇಳಿದಾಗ ಕಾಂಜಿ ಅವರ ಜೊತೆ ದ್ವೇಷ ಕಟ್ಟಿಕೊಳ್ಳುವಷ್ಟು ಸಮಯ ನನ್ನ ಬಳಿ ಇಲ್ಲ ಎಂದು ಉತ್ತರಿಸುತ್ತಾನೆ. ಇದನ್ನು ಹೇಳಿ ಕಾಂಜಿಗೆ ತನ್ನ ಹೊಟ್ಟೆಯ ಕ್ಯಾನ್ಸರ್ ಬಗ್ಗೆ ತಿಳಿದಿರಲೇಬೇಕು ಎಂದು ಹೇಳುತ್ತಾನೆ. ಅದಕ್ಕೆ ಸಮ್ಮತಿಸುವ ಎಲ್ಲರೂ ತಾವು ಆ ಸ್ಥಾನದಲ್ಲಿದ್ದಿದ್ದರೆ ಹಾಗೇ ಮಾಡುತ್ತಿದ್ದೆವು ಎಂದು ಹೇಳುತ್ತಾರೆ. ಅದಕ್ಕೆ ಆಕ್ಷೇಪ ಎತ್ತುವ ಒಹಾರ, ತಮ್ಮನ್ನು ತಾವು ಕಾಂಜಿಗೆ ಹೋಲಿಸಿಕೊಳ್ಳಲು ತಮಗೆ ಆ ಯೋಗ್ಯತೆಯಿಲ್ಲ, ಕೆಲಸ ಮಾಡುವ ನೆಪ ಹೇಳಿ ಜನರ ಸಮಯ ಹಾಳು ಮಾಡುವ ತಾವೆಲ್ಲ ಸಮಾಜದ ಕೆಟ್ಟ ಹುಳುಗಳು ಎಂದು ಅಬ್ಬರಿಸುತ್ತಾನೆ. ಅವನ ಮಾತಿಗೆ ಮೊದಲು ಸಿಟ್ಟಾದರೂ, ಎಲ್ಲರೂ ಅದಕ್ಕೆ ಮತ್ತೆ ಸಮ್ಮತಿಸಿ ಹೇಗೆ ತಾವೆಲ್ಲ ಒಂದು ಸಣ್ಣ ಕೆಲಸಕ್ಕೂ ಎಷ್ಟೆಲ್ಲಾ ದಾಖಲೆ ಸೃಷ್ಟಿಸಿ ಕಡತಗಳ ಸುಳಿ ಸೃಷ್ಟಿಸುತ್ತಿದ್ದೇವೆ ಎಂದು ತಮ್ಮನ್ನು ತಾವು ಹಳಿದುಕೊಳ್ಳುತ್ತಾರೆ.

  ಅಷ್ಟರಲ್ಲಿ ಅಲ್ಲಿಗೆ ಒಬ್ಬ ಪೋಲಿಸ್ ಪೇದೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಬರುತ್ತಾನೆ. ಆತ ಅವರೆಲ್ಲರ ಜೊತೆ ಹಿಂದಿನ ರಾತ್ರಿ ಉದ್ಯಾನವನದಲ್ಲಿ ನಡೆದ ಘಟನೆ ಹಂಚಿಕೊಳ್ಳುತ್ತಾನೆ, “ಸುಮಾರು ಹನ್ನೊಂದು ಗಂಟೆಗೆ ಮಂಜು ಬೀಳುತ್ತಿದ್ದ ರಾತ್ರಿಯಲ್ಲಿ ಗಸ್ತು ತಿರುಗುತ್ತ ಆ ಉದ್ಯಾನವನಕ್ಕೆ ಬಂದಾಗ ಯಾರೋ ಜೋಕಾಲಿಯ ಮೇಲೆ ಕುಳಿತಿದ್ದು ಕಾಣಿಸಿತು. ಯಾರೆಂದು ನೋಡಿದಾಗ ಕಾಂಜಿ ವಾಟನಾಬೆ. ಅವರು ಅಷ್ಟು ಸಂತೋಷದಿಂದ ಇದ್ದದ್ದು ನೋಡಿ ಅವರನ್ನು ಅಲ್ಲಿಯೇ ಕುಳಿತುಕೊಳ್ಳಲು ಬಿಟ್ಟುಬಿಟ್ಟೆ. ಅವರು ಹಾಡುತ್ತಿದ್ದ ಆ ಹಾಡು ಮನದ ಆಳಕ್ಕೆ ತಲುಪುವಂತಿತ್ತು.” ಎಂದು ಆ ಪೇದೆ ನಡೆದ್ದನ್ನೆಲ್ಲಾ ಹಂಚಿಕೊಳ್ಳುತ್ತಾನೆ. ಎಲ್ಲರೂ ಇದನ್ನು ಕೇಳಿ ಆಶ್ಚರ್ಯಗೊಳ್ಳುತ್ತಾರೆ.  ಎಲ್ಲರ ಕಲ್ಪನೆಯೂ ಅವರ ಕೊನೆ ಕ್ಷಣದ ಕಡೆಗೆ ತಿರುಗಿದಾಗ, ಕಾಂಜಿ ಅಲ್ಲಿ ಜೋಕಾಲಿಯಲ್ಲಿ ಕುಳಿತು ನೆಮ್ಮದಿಯಿಂದ, ತೃಪ್ತಿಯಿಂದ “ಜೀವನ ಚಿಕ್ಕದು” ಹಾಡು ಹಾಡುತ್ತಿರುವಂತೆ ಕಾಣಿಸುತ್ತದೆ. ಆಗ ದುಃಖತಪ್ತನಾಗುವ ಮಗ ಅಳುತ್ತ ಕೋಣೆಯೊಂದಕ್ಕೆ ಹೋದಾಗ ಅವನ ಹಿಂಬಾಲಿಸುವ ಹೆಂಡತಿಗೆ, ತನ್ನ ತಂದೆ ಹಿಂದಿನ ದಿನ ಮೆಟ್ಟಿಲುಗಳ ಕೆಳಗೆ ತನಗಾಗಿ ನಿವೃತ್ತಿ ವೇತನದ ಎಲ್ಲ ಅರ್ಜಿಗಳು ಮತ್ತು ಮುದ್ರೆಗಳನ್ನು ಸಿದ್ಧಪಡಿಸಿ ಇಟ್ಟೇ ಉದ್ಯಾನವನಕ್ಕೆ ಹೋಗಿದ್ದರು ಎಂದು ಹೇಳುತ್ತಾನೆ. ಸಾಕಷ್ಟು ಕುಡಿದು ಮತ್ತೇರಿದ್ದ ಕಾಂಜಿಯ ಸಹೋದ್ಯೋಗಿಗಳು ತಾವೂ ಇನ್ನುಮುಂದೆ ಕಾಂಜಿಯಂತೆ ಬದುಕುತ್ತೇವೆ, ಅವರ ಸಾವು ವ್ಯರ್ಥವಾಗಲು ಬಿಡುವುದಿಲ್ಲ ಎಂದು ಉದ್ಗಾರವೆತ್ತಿ ಹೊರಡುತ್ತಾರೆ. ಮಾರನೆ ದಿನ ಕಾಂಜಿಯ ಸ್ಥಾನಕ್ಕೆ ಬಡ್ತಿ ಹೊಂದಿದ ಒನೋ ಈಗ ಕಾಂಜಿಯ ಕುರ್ಚಿಯಲ್ಲಿ ಕುಳಿತು ಕಡತಗಳನ್ನು ನೋಡುತ್ತಿರುತ್ತಾನೆ. ಒಬ್ಬ ಗುಮಾಸ್ತ ಬಂದು ಒಡೆದು ಹೋದ ಚರಂಡಿಯ ಕೊಳವೆಯ ಬಗ್ಗೆ ಯಾರೋ ದೂರು ತಂದಿರುವ ಬಗ್ಗೆ ಹೇಳಿದಾಗ ಅವರನ್ನು ಅಭಿಯಾಂತ್ರಿಕ(ಎಂಜಿನಿಯರಿಂಗ್) ವಿಭಾಗಕ್ಕೆ ಕಳುಹಿಸಲು ಹೇಳುತ್ತಾನೆ. ಇದನ್ನು ನೋಡಿದ ಇನ್ನೊಬ್ಬ ಗುಮಾಸ್ತ ಎದ್ದು ನಿಂತು ಹಿಂದಿನ ದಿನ ಅಷ್ಟು ಅಬ್ಬರಿಸಿದಿರಲ್ಲ, ಇದೇನಾ ನಿಮ್ಮ ಬದ್ಧತೆ ಎಂದು ಕೇಳುವಂತೆ ಒನೋ ಮತ್ತು ಉಳಿದೆಲ್ಲರತ್ತ ನೋಡುತ್ತಾನೆ. ಆದರೆ ತಾವೇ ರಚಿಸಿಕೊಂಡ ಈ ವ್ಯವಸ್ಥೆಯ ವ್ಯೂಹದಲ್ಲಿ ತಾವು ಅಸಹಾಯಕರು ಮತ್ತು ಎಲ್ಲರೂ ಕಾಂಜಿಯಂತಾಗಲು ಸಾಧ್ಯವಿಲ್ಲ ಎಂದು ಆತನಿಗನ್ನಿಸಿ ಸುಮ್ಮನೆ ಕೂರುತ್ತಾನೆ. ಸಂಜೆ ಅದೇ ಗುಮಾಸ್ತ ಕೆಲಸ ಮುಗಿದ ಮೇಲೆ ಕಾಂಜಿ ನಿರ್ಮಿಸಿದ ಆ ಉದ್ಯಾನವನದ ಬಳಿ ಹೋಗಿ ಅಲ್ಲಿ ಈಗ ಮಕ್ಕಳು ಆಡುತ್ತಿದ್ದನ್ನು ನೋಡಿ ಕಾಂಜಿಯ ಕೆಲಸದಿಂದ ಪ್ರೇರಣೆ ಪಡೆದವನಂತೆ ಮುಂದೆ ಸಾಗುತ್ತಾನೆ.

  ನಾವು ಜೀವನದಲ್ಲಿ ಏನೆಲ್ಲ ಮಾಡಬೇಕು ಎಂದುಕೊಳ್ಳುತ್ತೇವೆ. ಆದರೆ ಮುಂದೆ ಜೀವನದಲ್ಲಿ ಎಲ್ಲವೂ ತಿಳಿಗೊಂಡಾಗ ಮಾಡೋಣ ಎಂದು ಅದನ್ನೆಲ್ಲಾ ತಳ್ಳುತ್ತಾ, ಮುಂದಕ್ಕೆ ಹಾಕುತ್ತ ಸಾಗುತ್ತೇವೆ. ಆದರೆ ನಾವು ಗಮನಿಸದ ಒಂದು ವಿಷಯ ಕಾಂಜಿಯ ಜೀವನದಲ್ಲಿ ಬಂದಂತೆ ಸಾವು ಹೇಳಿ ಬರುವುದಿಲ್ಲ.

  ಅಂದಹಾಗೆ “ಇಕಿರು” ಎಂದರೆ ಜಪಾನಿ ಭಾಷೆಯಲ್ಲಿ “ಬದುಕುವುದು” ಎಂದರ್ಥ.

ಕಾಂಜಿ ಹಾಡುವ ಹಾಡು: https://www.youtube.com/watch?v=rDjmDHiSTm8

-ವಿಶ್ವನಾಥ್