Thursday, 28 September 2017

ಇಂಪ್ರೆಶನೆನ್ ಉಂಟರ್ ವಾಸರ್(ಜರ್ಮನ್)


IMDb: Impressionen unter Wasser




ನೇರವಾಗಿ ಹೇಳಬೇಕೆಂದರೆ ಇದೊಂದು ಸಮುದ್ರ ಜೀವಿಗಳ ಡಾಕ್ಯುಮೆಂಟರಿ. ಇದನ್ನು ನಿರ್ದೇಶಿಸಿದ್ದು ಲೆನಿ ರಿಫೆಂಷ್ಟಾಲ್. ಹತ್ತರಲ್ಲಿ ಹನ್ನೊಂದಾಗಬಹುದಾಗಿದ್ದ ಈ ಡಾಕ್ಯುಮೆಂಟರಿ ವಿಶೇಷ ಎನಿಸುವುದು, ಇದರ ನಿರ್ದೇಶಕಿಯ ಬಗ್ಗೆ ತಿಳಿದಾಗ ಮಾತ್ರ. ಈ ಚಿತ್ರ ಬಂದದ್ದು 2002ರಲ್ಲಿ ಮತ್ತು ಆಗ ನಿರ್ದೇಶಕಿಯ ವಯಸ್ಸು ‘ಕೇವಲ’ 100 ವರ್ಷ. ತನ್ನ ಕೊನೆಯ ಮೂವತ್ತು ವರ್ಷಗಳ ಕಾಲ ಇಳಿ ವಯಸ್ಸಿನಲ್ಲಿ ತಾನೇ ನೀರಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿ ನಿರ್ದೇಶಿಸಿ ಸೆರೆ ಹಿಡಿದ ಚಿತ್ರವಿದು. ಇದಷ್ಟೇ ಈಕೆಯ ಪರಿಚಯವಲ್ಲ. ಈಕೆ ನಾಜಿ ಜರ್ಮನಿಯನ್ನು ದ್ವೇಷಿಸಿದವರ ಕೆಂಗಣ್ಣಿಗೆ ಗುರಿಯಾದ ನಿರ್ದೇಶಕಿ. ಏಕೆಂದರೆ, ಈಕೆ ಹಿಟ್ಲರ್ ಗಾಗಿ ಅವನನ್ನು ವಿಜೃಂಭಿಸಿ ‘ಟ್ರಯಂಫ್ ಆಫ್ ದಿ ವಿಲ್’ ಮತ್ತು ಇತರೆ ನಾಜಿ ಜರ್ಮನಿಯ ಪ್ರಚಾರ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದಾಕೆ. ಈ ಕಾರಣಗಳಿಗಾಗಿ ಆಕೆಯನ್ನು ಎರಡನೇ ವಿಶ್ವ ಯುದ್ಧದ ನಂತರ ಹೀಗಳೆದವರು ಬಹಳ. ಆದರೆ ಆಕೆ ಮಾತ್ರ ತನಗೆ ಸಿಕ್ಕ ಅವಕಾಶಗಳನ್ನು ಸಿದ್ಧಾಂತಗಳ ಪರಿವೆಯಿಲ್ಲದೆ ಚೆನ್ನಾಗಿ ಉಪಯೋಗಿಸಿಕೊಳ್ಳಬೇಕು ಎಂದು ಚಿತ್ರ ನಿರ್ದೇಶಿಸಿದವಳು.

 ಚಿತ್ರದ ಮೊದಲಿಗೆ ಆಕೆ ಜರ್ಮನ್ ಭಾಷೆಯಲ್ಲಿ ಚಿತ್ರ ಯಾವುದೇ ವೈಜ್ಞಾನಿಕ ಡಾಕ್ಯುಮೆಂಟರಿಯಾಗಿರದೆ ಕೇವಲ ಒಂದು ಸಮುದ್ರದಾಳದ ಸುಂದರ ಲೋಕದ ಅನಾವರಣವಷ್ಟೇ ಎಂದು ತಿಳಿಹೇಳುತ್ತ ತಾನು ತೆಗೆದ ಈ ಚಿತ್ರ ಕೋರಲ್ ರೀಫ್ ಗಳು ಇನ್ನೂ ಆರೋಗ್ಯ ಸ್ಥಿತಿಯಲ್ಲಿದ್ದಾಗಲೇ ತೆಗೆದದ್ದು ಎಂದು ಪರೋಕ್ಷವಾಗಿ ಅವುಗಳ ಸಂತತಿ ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ತೋರುತ್ತಾಳೆ. ನಿಮಗೆ ಜರ್ಮನ್ ಗೊತ್ತಿಲ್ಲದಿದ್ದರೆ ಈ ಚಿತ್ರದಲ್ಲಿ ನೀವು ಈ ಚಿತ್ರದ ಮೊದಲಿನಲ್ಲಿ ಆಕೆಯ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಇಂಗ್ಲಿಶ್ ಸಬ್ ಟೈಟಲ್ ಗಳ ಸಹಾಯ ಪಡೆಯಬೇಕು. ಆದರೂ ನಿರ್ದೇಶಕಿಯ ಚಿತ್ರದ ಮೊದಲಿನ ಪರಿಚಯ ಬಿಟ್ಟರೆ ಉಳಿದ ಚಿತ್ರ ಮೌನ. ಹಿನ್ನಲೆ ಸಂಗೀತದದೊಂದಿಗೆ ಸಮುದ್ರದಾಳದ ವರ್ಣಮಯ ಲೋಕ, ಮೀನುಗಳು, ಹವಳಗಳು ಅವುಗಳ ಮೂಲ ವಾಸಸ್ಥಾನದಲ್ಲಿ ಅದ್ಭುತವಾಗಿ ಸೆರೆಹಿಡಿದಿರುವುದನ್ನು ನೋಡಬಹುದು.

ಚಿತ್ರ ವೀಕ್ಷಿಸಲು ಲಿಂಕ್: Impressionen unter Wasser- Youtube link 

Tuesday, 19 September 2017

ಡಾ.ಸ್ಟ್ರೇಂಜ್ ಲವ್ ಆರ್: ಹೌ ಐ ಲರ್ನ್ದ್ ಟು ಸ್ಟಾಪ್ ವರಿಯಿಂಗ್ ಅಂಡ್ ಲವ್ ದಿ ಬಾಂಬ್


IMDb: http://www.imdb.com/title/tt0057012/?ref_=nv_sr_4


 ಹೆಸರು ಉದ್ದ ಆಯ್ತಲ್ವಾ? ಸ್ಟಾನ್ಲಿ ಕೂಬ್ರಿಕ್ ನಿರ್ದೇಶನದಲ್ಲಿ ಮೂಡಿಬಂದ ಅನೇಕ ಅದ್ಭುತ ಸಿನೆಮಾಗಳಲ್ಲಿ ಇದೂ ಒಂದು. 50-60ರ ದಶಕದಲ್ಲಿ ಬಹು ಚರ್ಚಿತ ವಿಷಯ ಅಮೇರಿಕಾ ಮತ್ತು ಯು.ಎಸ್.ಎಸ್.ಆರ್ ನ ನಡುವಿನ ಶೀತಲ ಸಮರ. ಕಾಮ್ಯುನಿಸಮ್ ಮತ್ತು ಕ್ಯಾಪಿಟಲಿಸಮ್ ನಡುವಿನ ಪೈಪೋಟಿಯಲ್ಲಿ ಜಗತ್ತಿನ ದೇಶಗಳೆಲ್ಲವನ್ನು ಸೆಳೆಯುವುದಕ್ಕಾಗಿ ಈ ಎರಡೂ ದೇಶಗಳು ತಮ್ಮ ಪ್ರಯತ್ನವನ್ನು ನಡೆಸಿದ್ದ ಕಾಲವದು. ಇದರ ಕರಾಳ ಮುಖ ಅವತರಿಸಿಕೊಂಡಿದ್ದು ಎರಡನೇ ವಿಶ್ವ ಯುದ್ಧದ ಕೊನೆಯಲ್ಲಿ ಅಮೇರಿಕಾ ಸಿಡಿಸಿದ ಅಣುಬಾಂಬ್. ಶೀತಲ ಸಮರದಲ್ಲಿ ಬದ್ಧ ವೈರಿಗಳಾಗಿ ಗುರುತಿಸಿಕೊಂಡ ಎರಡೂ ದೇಶಗಳು(US and USSR) ತಮ್ಮವೇ ಆಧುನಿಕ ಹೆಚ್ಚು ನಾಶಮಾಡಬಲ್ಲ ಬಾಂಬ್ ತಯಾರಿಸಿ ಪರೀಕ್ಷಿಸಲು ನಿಂತವು. ಹೀಗೆ ಈ ಎರಡೂ ದೇಶಗಳ ನಡುವೆ ಇದ್ದ ಪೈಪೋಟಿ ಯಾವುದೇ ಕ್ಷಣದಲ್ಲಾದರೂ ಯುದ್ಧಕ್ಕೆ ತಿರುಗಬಹುದು ಅಂತೆಣಿಸಿ ಎರಡೂ ದೇಶಗಳು ಹೀಗೆ ಯುದ್ಧ ಆದರೆ ತಕ್ಕ ಪ್ರತ್ಯುತ್ತರ ಕೊಡಲು ಅನೇಕ ಭದ್ರತಾ ಕ್ರಮಗಳನ್ನು ಅನುಸರಿಸಿದ್ದವು. ಅವುಗಳಲ್ಲಿ ಅಣುಬಾಂಬ್ ಉಡಾವಣೆಯೂ ಒಂದು. ಎಲ್ಲಿಯ ತನಕ ವಿವೇಕವಿರುವ ಜನಗಳು ಒಂದು ದೇಶದ ನೇತೃತ್ವ ವಹಿಸಿರುತ್ತಾರೋ ಅಲ್ಲಿಯ ಇಂತಹ ಅಕಾರಣ ಯುದ್ಧಗಳ ಸಂಭವ ಬಹಳ ಕಡಿಮೆ. ಆದರೆ ಇಂತಹ ಪೈಪೋಟಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ ವಿವೇಚನೆಯಿಲ್ಲದ ನಾಯಕರು ದೇಶದ ಭದ್ರತೆಯ ಚುಕ್ಕಾಣಿ ಹಿಡಿದರೆ ಏನಾಗಬಹುದು? ಅದೇ ಈ ಕಥೆಯ ಮೂಲ ವಸ್ತು.

 ರಾಜಕಾರಣಿಗಳ ಒಣ ಮಾತುಗಳು, ಹುರುಳಿಲ್ಲದ ದೇಶಪ್ರೇಮದಿಂದ ಬೇಸತ್ತ ಒಬ್ಬ ಅಮೇರಿಕಾದ ನ್ಯೂಕ್ಲಿಯರ್ ಬಾಂಬರ್ ಇರುವ ಏರ್ ಫೋರ್ಸ್ ಬೇಸ್ ನ ಕಮ್ಯಾಂಡರ್ ಜನರಲ್ ರಿಪ್ಪರ್ ರಾಷ್ಟ್ರಾಧ್ಯಕ್ಷರಿಂದ ಅಂಗೀಕಾರವಾಗಿದ್ದ USSR ಮೇಲಿನ ನ್ಯೂಕ್ಲಿಯರ್ ಪ್ರತಿದಾಳಿಯ ಪ್ಲಾನ್ಅನ್ನು ಚಾಲ್ತಿಗೊಳಿಸಿ ಎಲ್ಲ ಬಾಂಬರ್ ಪ್ಲೇನ್ ಗಳಿಗೆ ಆದೇಶ ಕಳಿಸಿ ಬೇಸ್ ಅನ್ನು ಎಲ್ಲ ಹೊರಗಿನ ಸಂಪರ್ಕದಿಂದ ಮುಕ್ತಮಾಡಿಬಿಡುತ್ತಾನೆ.

 ಇತ್ತ ಹಾಗೆ ಆದೇಶ ಪಡೆದ ಒಂದು ಬಾಂಬರ್ ಪ್ಲೇನ್ ನ ಪೈಲಟ್ ಗಳು ಈ ಆದೇಶದಿಂದ ಆಶ್ಚರ್ಯಗೊಂಡರೂ ಪಾಪಿ ರೂಸ್ಕಿಗಳಿಗೆ ಬುದ್ಧಿ ಕಲಿಸುವ ಹೊತ್ತು ಬಂತು ಎಂದು ಹೆಮ್ಮೆಯಿಂದ ಬೀಗುತ್ತಾರೆ. ಅದರಲ್ಲೂ ಆ ಪ್ಲೇನ್ ನ ಮುಖ್ಯ ಕಮ್ಯಾಂಡರ್ ತುಂಬಾ ಉತ್ಸಾಹಗೊಂಡು ದೇಶದೆಡೆಗಿನ ಪ್ರೇಮವನ್ನು ಸಾಬೀತು ಮಾಡುವ ಕಾಲ ಬಂತೆಂದು ಸಂತಸಗೊಳ್ಳುತ್ತಾನೆ. ಆದೇಶದ ಪ್ರಕಾರ ಪ್ಲೇನ್ ನ ರೇಡಿಯೋ ಬಂದ್ ಮಾಡಿ ಗುಪ್ತ ಪದದ ಮೇಲೆ ಕಾರ್ಯನಿರ್ವಹಿಸುವ ಗುಪ್ತ ರೇಡಿಯೋವನ್ನು ಚಾಲ್ತಿಗೊಳಿಸುತ್ತಾನೆ. ಇದರರ್ಥ ಪ್ಲಾನ್ ಪ್ರಕಾರದ ಗುಪ್ತ ಪದವಿಲ್ಲದ ಯಾವುದೇ ಸಂದೇಶಗಳು ಬಂದರೂ ಅದನ್ನು ಮಾನ್ಯಮಾಡುವಂತಿಲ್ಲ ಎಂದು.

 ಆದೇಶ ಕಳಿಸಿದ ನಂತರ ಜನರಲ್ ರಿಪ್ಪರ್ ತನ್ನ ಕಾರ್ಯನಿರ್ವಹಣಾಧಿಕಾರಿ ಮ್ಯಾಂಡ್ರೇಕ್ ಗೆ ಬೇಸ್ ನ ಎಲ್ಲ ಸೈನಿಕರಿಂದ ಅವರ ಖಾಸಗಿ ರೇಡಿಯೋಗಳನ್ನು ವಶಪಡಿಸಿಕೊಳ್ಳಲು ಹೇಳಿರುತ್ತಾನೆ. ಹೀಗೆ ರೇಡಿಯೋ ಒಂದನ್ನು ಮ್ಯಾಂಡ್ರೇಕ್ ತರುತ್ತಿದ್ದಾಗ ರೇಡಿಯೋದಲ್ಲಿ ಇನ್ನೂ ಮನರಂಜನಾ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುವುದನ್ನೂ ಮತ್ತು ರಷ್ಯಾ ಯಾವುದೇ ದಾಳಿ ನಡೆಸಿರುವುದರ ಬಗ್ಗೆ ಸುದ್ದಿ ಇಲ್ಲದಿರುವುದು ಕೇಳಿ ಗಾಬರಿಗೊಂಡು ಇದರ ಬಗ್ಗೆ ಸ್ಪಷ್ಟನೆ ಕೇಳಲು ಜನರಲ್ ರಿಪ್ಪರ್ ಬಳಿಗೆ ಹೋಗುತ್ತಾನೆ. ಆಗ ಜನರಲ್ ರಿಪ್ಪರ್ ಈತನನ್ನು ತನ್ನ ಕೋಣೆಯಲ್ಲಿ ಬಂಧಿಸಿ ವಿಷಯವೆಲ್ಲವನ್ನೂ ನಿಧಾನವಾಗಿ ಹೇಳತೊಡಗುತ್ತಾನೆ. “ಕಾಮ್ಯುನಿಸ್ಟ್ ಪಿತೂರಿಯ ದಾಳಿಗೆ ಸಿಲುಕದಂತೆ ದೇಶವನ್ನು ಉಳಿಸಬೇಕೆಂದರೆ ದೇಶವನ್ನು ರಾಜಕಾರಣಿಗಳ ಕೈಗೆ ಕೊಡಬಾರದು ಏಕೆಂದರೆ ಅವರಿಗೆ ಭದ್ರತೆಯ ವಿಷಯದಲ್ಲಿ ಯಾವುದೇ ತರಬೇತಿಯಿರುವಿದಿಲ್ಲ” ಎಂದು ರಾಜಕಾರಣಿಗಳ ಬಗೆಗಿನ ತನ್ನ ತಿರಸ್ಕಾರ ಭಾವ ವ್ಯಕ್ತಪಡಿಸುತ್ತಾ ವಿವರಿಸುತ್ತಾ ಹೋಗುತ್ತಾನೆ.

 ರೇಡಿಯೋದ ಮೂಲಕ ಕಳಿಸಿದ ಆದೇಶದ ಬಗ್ಗೆ ಅರಿತ ಸರ್ಕಾರ ಯಾವುದೇ ಆಕ್ರಮಣವಿಲ್ಲದೆ ಹೀಗೆ ದಾಳಿಗೆ ಆದೇಶ ನೀಡಲಾಗಿದೆ ಎಂದು ತಿಳಿದು ಗಾಬರಿಗೊಂಡು ಪೆಂಟಗಾನ್ ನಲ್ಲಿ ತುರ್ತು ಭದ್ರತಾ ಸಭೆ ಕರೆಯುತ್ತದೆ. ದಾಳಿಗೆ ಹೋಗಿರುವ ಪ್ಲೇನ್ ಗಳು ದಾಳಿ ಮಾಡಲು ಇನ್ನೂ ಎಷ್ಟು ಸಮಯ ಇದೆ, ಅವುಗಳನ್ನು ಹೇಗೆ ಮರಳಿ ಕರೆಯುವುದು ಎಂದೆಲ್ಲ ಚರ್ಚಿಸಲು ರಾಷ್ಟ್ರಾಧ್ಯಕ್ಷರು ಭದ್ರತೆಗೆ ಸಂಬಂಧಪಟ್ಟ ಎಲ್ಲ ಜನರಲ್, ಅಧಿಕಾರಿಗಳನ್ನು ಕೇಳುತ್ತಾ ಹೋಗುತ್ತಾರೆ. ಜನರಲ್ ಟರ್ಜಿಡ್ಸನ್ ಎಂಬ ಜನರಲ್ ಗುಪ್ತಪದವಿಲ್ಲದೆ ಹೇಗೆ ಇದು ಕಷ್ಟ ಸಾಧ್ಯ ಎಂದು ವಿವರಿಸುತ್ತ ದಾಳಿಯನ್ನು ತಡೆಯುವುದರ ಬದಲು ರಷ್ಯಾದ ಪ್ರತಿದಾಳಿಗೆ ಹೇಗೆ ತಯಾರಾಗುವುದು ಎಂದು ಯೋಚಿಸೋಣ ಎಂದು ಸಲಹೆ ನೀಡುತ್ತಾರೆ. ಶಾಂತವಾಗಿರುವ ಪರಿಸ್ಥಿತಿಯನ್ನು ಹಾಳುಮಾಡಿದ, ಜಗತ್ತನ್ನು ವಿಶ್ವಯುದ್ಧಕ್ಕೆ ದೂಡಿದ ನಾಯಕ ಎಂದು ತನಗೆ ಹಣೆಪಟ್ಟಿ ಬರುತ್ತದೆ ಎಂದು ರಾಷ್ಟ್ರಾಧ್ಯಕ್ಷ ಇದಕ್ಕೆ ನಿರಾಕರಿಸಿ ಬಹಳ ಚರ್ಚೆಯ ನಂತರ ರಷ್ಯಾದ ರಾಯಭಾರಿಯನ್ನು ವಾರ್ ರೂಮಿಗೇ ಕರೆತಂದು ರಷ್ಯಾದ ಅಧ್ಯಕ್ಷರ ಜೊತೆ ನೇರ ಚರ್ಚೆ ನಡೆಸುವುದು ಎಂದು ಜನರಲ್ ಟರ್ಜಿಡ್ಸನ್ ನ ತೀವ್ರ ವಿರೋಧದ ನಡುವೆ ನಿರ್ಧರಿಸುತ್ತಾನೆ. ದಾಳಿಯ ಬಗ್ಗೆ ತಿಳಿದ ರಷ್ಯಾದ ಅಧ್ಯಕ್ಷ ಕೂಡ ಸಿಟ್ಟು ಮತ್ತು ಗಾಬರಿ ವ್ಯಕ್ತಪಡಿಸುತ್ತಾ ಅಕಸ್ಮಾತ್ ಆ ಪ್ಲೇನ್ ಗಳು ದಾಳಿ ಮಾಡಿದ್ದೇ ಆದರೆ ರಷ್ಯಾದಲ್ಲಿರುವ ಪ್ರತಿದಾಳಿಗೆಂದು ಇಟ್ಟಿರುವ ಡೂಮ್ಸ್ ಡೆ ಮೆಷಿನ್ (ಪ್ರಳಯದ ಯಂತ್ರ) ಸ್ವಯಂ ಚಾಲಿತಗೊಂಡು ಇಡೀ ಭೂಮಿಯನ್ನೇ ನಿರ್ನಾಮ ಮಾಡುತ್ತದೆ ಎಂದು ತಿಳಿಸುತ್ತಾನೆ. ಅದನ್ನು ತಡೆಯಬೇಕಾದರೆ ಹೇಗಾದರೂ ಮಾಡಿ ದಾಳಿಗೆ ಹೋಗಿರುವ ಪ್ಲೇನ್ ಗಳನ್ನು ಮರಳಿ ಕರೆಯುವುದೊಂದೇ ಉಳಿದಿರುವ ಮಾರ್ಗ ಎಂದು ತಿಳಿಸುತ್ತಾನೆ. ಅಮೇರಿಕಾ ಅಧ್ಯಕ್ಷ ಜನರಲ್ ರಿಪ್ಪರ್ ನ ಬೇಸ್ ಮೇಲೆ ಹತ್ತಿರದ ಬೇರೊಂದು ಆರ್ಮಿ ಬೇಸ್ ನಿಂದ ಸೇನೆ ಕಳಿಸಿ ಜನರಲ್ ರಿಪ್ಪರ್ ನನ್ನು ಸೆರೆ ಹಿಡಿದು ಆ ಗುಪ್ತ ಕೋಡ್ ಗಳನ್ನು ತರಲು ಆದೇಶಿಸುತ್ತಾನೆ.


 ತನ್ನನ್ನು ಸೆರೆ ಹಿಡಿಯಲು ಬಂದ ಸೇನೆ ಕಾಮ್ಯುನಿಸ್ಟ್ ಸೇನೆಯಾಗಿದ್ದು ನಮ್ಮವರಂತೆಯೇ ಬಟ್ಟೆ ಧರಿಸಿದ್ದಾರೆ, ಅದರಿಂದ ಗೊಂದಲಗೊಳ್ಳದೆ ಬಂದವರ ಮೇಲೆ ದಾಳಿ ಮಾಡಿ ಎಂದು ಜನರಲ್ ರಿಪ್ಪರ್ ತನ್ನ ಬೇಸ್ ನ ಸೈನಿಕರಿಗೆ ಸ್ಪೀಕರ್ ಮೂಲಕ ತನ್ನ ರೂಮಿನಿಂದಲೇ ಆದೇಶಿಸುತ್ತಾನೆ. ಆದರೆ ದಾಳಿಗೆ ಸರಿಯಾಗಿ ಉತ್ತರಿಸಲಾಗದೆ ತನ್ನ ಸೈನಿಕರು ನಿಧಾನವಾಗಿ ಶರಣಾಗುತ್ತಿದ್ದಾರೆಂದು ತಿಳಿದ ಕೂಡಲೆ ಬಾತ್ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡು ಗುಪ್ತ ಕೋಡ್ ತನ್ನಲ್ಲಿಯೇ ಉಳಿಸಿಕೊಂಡು ಸಾಯುತ್ತಾನೆ. ಇದನ್ನೆಲ್ಲಾ ಮೂಕನಂತೆ ನೋಡುತ್ತಿದ್ದ ಮ್ಯಾಂಡ್ರೇಕ್ ಜನರಲ್ ಸತ್ತಿರುವುದನ್ನು ಗಮನಿಸಿ ಜನರಲ್ ಜೊತೆಗಿನ ಸಂಭಾಷಣೆಯನ್ನು ಸೂಕ್ಷ್ಮವಾಗಿ ಮೆಲುಕು ಹಾಕಿ ಗುಪ್ತ ಕೋಡನ್ನು ಅಂದಾಜಿಸುತ್ತಾನೆ. ಇದರ ನಂತರ ಆ ಕೋಡನ್ನು ಅಧ್ಯಕ್ಷರ ಕಚೇರಿಗೆ ಫೋನ್ ಮೂಲಕ ತಲುಪಿಸುತ್ತಾನೆ.

 ಎಲ್ಲಾ ಪ್ಲೇನ್ ಗಳನ್ನು ಮರಳಿ ಕರೆಯಲು ಸಫಲರಾಗುವ ಅಮೇರಿಕಾ ಸೇನೆ ಒಂದು ಪ್ಲೇನ್ ಮಾತ್ರ ರಷ್ಯಾದ ದಾಳಿಗೆ ಗುಪ್ತ ರೇಡಿಯೋ ಕೆಟ್ಟು ರಷ್ಯಾದ ಕಡೆ ಸಾಗುತ್ತಿದೆ ಎಂದು ತಿಳಿದು ರಷ್ಯನ್ನರಿಗೇ ಅದನ್ನು ಹೊಡೆದುರುಳಿಸಲು ತಿಳಿಸುತ್ತಾರೆ. ಈ ಮೊದಲು ಹೇಳಿದ ಪ್ಲೇನ್ ಅದು. ಗುಂಡಿನ ದಾಳಿಗೆ ಪ್ಲೇನ್ ನ ಕೆಲವು ಸ್ವಯಂಚಾಲಿತ ವ್ಯವಸ್ಥೆ ಕೆಟ್ಟಿರುವುದನ್ನು ಮನಗಂಡ ಪ್ಲೇನ್ ನ ಕಮ್ಯಾಂಡರ್ ಅದನ್ನು ತಾನೇ ರಿಪೇರಿ ಮಾಡಿ ಬಾಂಬ್ ಗಳನ್ನು ಬೀಳುವಂತೆ ಮಾಡಲು ಹೋಗಿ ಬಾಂಬಿನ ಜೊತೆ ಕೆಳಗೆ ಬೀಳುತ್ತಾನೆ. ಆ ಬಾಂಬ್ ಸ್ಫೋಟಗೊಂಡು ಅಣು ಯುದ್ಧಕ್ಕೆ ನಾಂದಿ ಹಾಡುತ್ತದೆ.

 ಎಲ್ಲ ಕೈ ಮೀರಿದ ನಂತರ ವಾರ್ ರೂಮಿನಲ್ಲಿ ಅಮೇರಿಕಾ ಅಧ್ಯಕ್ಷರ ಸಲಹೆಗಾರ, ವಿಶ್ವ ಯುದ್ಧದ ನಂತರ ಅಮೆರಿಕಾಗೆ ವಲಸೆ ಬಂದ ಒಬ್ಬ ಜರ್ಮನ್ ವಿಜ್ಞಾನಿ ಡಾ||ಸ್ಟ್ರೇಂಜ್ ಲವ್ ಈ ದಾಳಿಯ ನಂತರ ಮಾನವ ಸಂಕುಲವನ್ನು ಹೇಗೆ ಇದೆಲ್ಲದರ ನಂತರ ಮುಂದುವರೆಸುವುದು ಎಂದು ಬಣ್ಣಿಸುತ್ತಾ ಹೋಗುತ್ತಾನೆ. ಆ ವಿಜ್ಞಾನಿಯು ಮಾತನಾಡುತ್ತ ಹೇಗೆ ಸಾವಿರಾರು ಅಡಿಗಳ ಆಳದ ಗಣಿಗಳಲ್ಲಿ ವಿಕಿರಣಗಳು ತಲುಪಲಾರವು ಮತ್ತು ಸುಮಾರು ೧೦೦ ವರ್ಷಗಳವರೆಗೂ ದಾಳಿಯಲ್ಲಿ ಬದುಕುಳಿದ ಜನರೆಲ್ಲರೂ ಅಲ್ಲಿಯೇ ವಾಸಮಾಡಬೇಕಾಗಿಬರಬಹುದು ಎಂದು ಹೇಳುತ್ತಾ ತಮ್ಮ ಪೀಳಿಗೆ ಮುಂದುವರೆಸಲು ವಿವಿಧ ಕ್ಷೇತ್ರಗಳಿಂದ ಜನರನ್ನು ಆಯ್ಕೆ ಮಾಡಿಕೊಂಡು ಮನುಷ್ಯ ಸಂಕುಲ ಮುಂದುವರೆಸುವುದು ಹೇಗೆ ಎಂದು ವಿವರಿಸುತ್ತಾ ಹೋಗುತ್ತಾನೆ. ಹಾಗೆಯೇ ಅಲ್ಲಿದ್ದವರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಉತ್ತರಿಸುತ್ತಾ ಮೆಲ್ಲಗೆ ಗಾಲಿ ಕುರ್ಚಿಯಿಂದ ಮೇಲೆದ್ದು “ಮೈನ್ ಫ್ಯುರರ್, ನಾನು ನಡೆಯಬಲ್ಲೆ” ಎಂದು ಉದ್ಗಾರವೆತ್ತುತ್ತಾನೆ. ಅಲ್ಲಿಗೆ ಸಿನಿಮಾ ಹಲವಾರು ಅಣು ಬಾಂಬ್ ಸ್ಫೋಟಗೊಳ್ಳುವುದರ ಚಿತ್ರಗಳೊಂದಿಗೆ ಕೊನೆಗೊಳ್ಳುತ್ತದೆ. ಆ ವಿಜ್ಞಾನಿಯ ಕೊನೆಯ ಉದ್ಗಾರ ಹಲವಾರು ಅರ್ಥಗಳಿಗೆ ಎಡೆಮಾಡಿಕೊಡುತ್ತದೆ. ಅದೆಲ್ಲ ನೋಡುವವರ ದೃಷ್ಟಿಕೋನಕ್ಕೆ ಬಿಟ್ಟದ್ದು.

 ಅಮೇರಿಕಾ ರಾಷ್ಟ್ರಾಧ್ಯಕ್ಷ, ಮ್ಯಾಂಡ್ರೇಕ್ ಮತ್ತು ಡಾ|| ಸ್ಟ್ರೇಂಜ್ ಲವ್ ಪಾತ್ರಗಳನ್ನು ಪೀಟರ್ ಸೆಲ್ಲರ್ಸ್ ಅದ್ಭುತವಾಗಿ ಮಾಡಿದ್ದಾರೆ. ಮೂರೂ ಪಾತ್ರಗಳಿಗೂ ಬೇರೆಯದೇ ಮಾತಿನ ಶೈಲಿಯಿದ್ದು(accent) ಅದನ್ನು ಯಾವುದೇ ತಪ್ಪುಗಳಿಲ್ಲದೆ ಸೊಗಸಾಗಿ ಅಭಿನಯಿಸಿದ್ದಾರೆ.

 ಸಿನಿಮಾ ಅಂತ್ಯದವರೆಗೂ ನಗೆಯಲ್ಲೇ ತೇಲಿಸುತ್ತ ಅತ್ಯಂತ ಗಂಭೀರ ವಿಷಯವನ್ನು ನಿರ್ದೇಶಕ ಬಹಳ ಸೂಕ್ಷವಾಗಿ ಹೇಳಿದ್ದಾರೆ. Mutually Assured Destruction (MAD) ಎನ್ನುವುದು ಪರಸ್ಪರ ವಿನಾಶವನ್ನು ಖಾತ್ರಿಪಡಿಸುವ ಒಂದು ಒಪ್ಪಂದ. ನಾವು ನಾಶವಾದರೆ, ನಮ್ಮೊಂದಿಗೆ ನಿಮ್ಮನ್ನೂ ಒಯ್ಯುತ್ತೇವೆ ಎನ್ನುವ ಒಂದು ಬೆದರಿಕೆ. ಇದನ್ನು ನಿರ್ದೇಶಕ ಚಿತ್ರದ ಒಟ್ಟು ಘಟನಾವಳಿಗಳು, Mutually Assured Destruction ನ ಸಂಕ್ಷಿಪ್ತ ರೂಪ MAD ಅಂದರೆ ಹುಚ್ಚು ಎನ್ನುವ ರೀತಿ ಬಿಂಬಿಸಿದ್ದಾರೆ. ಹಾಗೆ ನೋಡಿದರೆ ದೇಶದ ಭದ್ರತೆ, ಸುರಕ್ಷತೆ ಎಲ್ಲದರ ಆಚೆ ನೋಡಿದರೆ ಇವೆಲ್ಲಾ ಹುಚ್ಚುತನವೇ ಅನ್ನಿಸುತ್ತದೆ. 

-ವಿಶ್ವನಾಥ್

Sunday, 17 September 2017

Paduvaarahalli Pandavaru -English subtitle (ಪಡುವಾರಹಳ್ಳಿ ಪಾಂಡವರು- ಇಂಗ್ಲಿಶ್ ಸಬ್ ಟೈಟಲ್)



ಗೆಳೆಯರೆ,

 ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ಎರಡನೆಯದು. "ಪಡುವಾರಹಳ್ಳಿ ಪಾಂಡವರು" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ ಇದನ್ನು ಹಂಚಿಕೊಳ್ಳಬಹುದು.
ಡೌನ್ಲೋಡ್ ಲಿಂಕ್ :  Paduvaarahalli Pandavaru.srt


Friday, 10 February 2017

ಫೆಂಟಾಸ್ಟಿಕ್ ಮಿ. ಫಾಕ್ಸ್


IMDb: http://www.imdb.com/title/tt0432283/?ref_=nv_sr_1



     ಒಂದು ಸ್ಟಾಪ್ ಮೋಶನ್ ಅನಿಮೇಷನ್ ಚಿತ್ರವನ್ನ ಗಟ್ಟಿ ಕಥೆಯೊಂದಿಗೆ ಹೇಗೆ ಸುಂದರವಾಗಿ ಮಾಡಬಹುದು ಎಂಬುದಕ್ಕೆ ಈ ಚಿತ್ರ ಒಳ್ಳೆಯ ಉದಾಹರಣೆ. ಇದು ನೋಡಲಿಕ್ಕೆ ಮಕ್ಕಳ ಚಿತ್ರದಂತೆ ಕಂಡರೂ ಕೆಲವು ಸೂಕ್ಷ್ಮಗಳು ಮಕ್ಕಳ ಗಮನಕ್ಕೆ ಬರದೇ ಹೋಗಬಹುದು.
     ಈ ಚಿತ್ರ ನಮ್ಮಲ್ಲಿ ಕೆಲವರಿಗೆ ಹೇಗೆ ತಾವು ಇಷ್ಟಪಟ್ಟು ಮಾಡುವ ಕೆಲಸವನ್ನು ಅತಿರೇಕಕ್ಕೆ ಒಯ್ದು ಅದರ ಉತ್ತುಂಗದಲ್ಲಿ ನಿಲ್ಲಬೇಕು ಎನ್ನುವ ಆಸೆ ಇರುತ್ತದೋ ಹಾಗೆಯೇ ಆಸೆ ಇರುವ ಮಿ. ಫಾಕ್ಸ್ (ಜಾರ್ಜ್ ಕ್ಲ್ಯೂನಿ) ಎಂಬ ನರಿಯ ಕಥೆ. ತಾನೊಂದು ನರಿಯಾಗಿದ್ದು ಬೇಟೆ ಆಡಿ ತಿನ್ನಬೇಕು ಎನ್ನುವುದು ಅದರ ಧರ್ಮ. ಹಾಗೆಯೇ ಇದ್ದರೆ ಅದರಲ್ಲಿ ವಿಶೇಷತೆ ಏನೂ ಇಲ್ಲ. ಆದರೆ ಇಲ್ಲಿ ನರಿಗೆ ತಾನು ಮನುಷ್ಯರು ಕೂಡಿಟ್ಟ ಪ್ರಾಣಿಗಳನ್ನು ಹೊಂಚು ಹಾಕಿ ತಿನ್ನುವುದು ರೋಮಾಂಚನದ ಸಂಗತಿ. ಮನುಷ್ಯರು ಮಾಡಿಟ್ಟ ಬೋನುಗಳನ್ನು ಉಪಾಯದಿಂದ ತಪ್ಪಿಸಿ ಕೋಳಿ ಇತ್ಯಾದಿ ಪಕ್ಷಿಗಳನ್ನು ಹಿಡಿಯುವುದು ಏನೋ ಸಾಧನೆ ಮಾಡಿದಂತೆ.
    ಹೀಗೆ ತನ್ನ ಹೆಂಡತಿಯೊಂದಿಗೆ ಒಮ್ಮೆ ಒಂದು ತೋಟಕ್ಕೆ ಬೇಟೆ ಆಡಲು ಹೋದಾಗ ಅತಿಯಾದ ಬುದ್ಧಿವಂತಿಕೆ ತೋರಿಸಲು ಹೋಗಿ ಎರಡೂ ನರಿಗಳು ಬೋನಿಗೆ ಬೀಳುತ್ತವೆ. ಆಗ ಫೆಲಿಸಿಟಿ (ಹೆಣ್ಣು ನರಿ ಪಾತ್ರದಲ್ಲಿ ಮೆರಿಲ್ ಸ್ಟ್ರೀಪ್) ತಾನು ಗರ್ಭಿಣಿ ಎನ್ನುವುದನ್ನು ಫಾಕ್ಸ್ ಗೆ ಹೇಳಿದ್ದನ್ನು ಕೇಳಿ ಫಾಕ್ಸ್ ಗೆ ಖುಷಿಯಾದರೂ, ಹೀಗೆ ಕಳ್ಳತನದಿಂದ ಬೇಟೆಯಾಡಿ ಬದುಕುವುದು ಜೀವಕ್ಕೆ ಅಪಾಯ ಎಂದೂ, ತಮ್ಮ ಮಕ್ಕಳಿಗೋಸ್ಕರ ಇನ್ನು ಮುಂದೆಂದೂ ಹೀಗೆ ಮಾಡುವುದು ನಿಲ್ಲಿಸಬೇಕೆಂದು ಫಾಕ್ಸ್ ನಿಂದ  ಮಾತು ಪಡೆಯುತ್ತಾಳೆ.

    ಜೀವನದಲ್ಲಿ ಯಾವ thrill ಇಲ್ಲದೆಯೂ ಜೀವನ ಸಪ್ಪೆಯಾದಂತೆ ಫಾಕ್ಸ್ ಪ್ರಾಣಿಗಳ ನ್ಯೂಸ್ ಪೇಪರ್ ಗೆ ಅಂಕಣ ಬರೆಯುತ್ತ ಕಾಲ ಕಳೆಯುತ್ತಿರುತ್ತಾನೆ. ಒಂದೊಮ್ಮೆ ತಾವು ಬದುಕುತ್ತಿರುವ ಮನೆ ಸಣ್ಣದೆಂದೂ ದೊಡ್ಡದೊಂದು ಮನೆಗೆ ಹೋಗೋಬೇಕೆಂದು ನಿರ್ಧರಿಸಿ ಸಾಲ ಮಾಡಿ ಒಂದು ದೊಡ್ಡ ಮರದಲ್ಲಿ ಮನೆ ಮಾಡುತ್ತಾನೆ. ಆ ಮನೆಯಿಂದ ಮೂರು ಜನ ರೈತರ ತೋಟಗಳು ಚೆನ್ನಾಗಿ ನೋಡಬಹುದಾಗಿದ್ದು ಫಾಕ್ಸ್ ಗೆ ಕೊನೆಯಬಾರಿಗೆ ತನ್ನ ಬೇಟೆ ಆಡುವ ಚಟವನ್ನು ಈ ಮೂವರು ರೈತರ ತೋಟದಿಂದ ಕದ್ದು ತೀರಿಸಿಕೊಳ್ಳಬೇಕೆಂದು ಆಸೆ ಹುಟ್ಟುತ್ತದೆ. ಆದರೆ ಮನೆ ಕೊಳ್ಳುವ ಮುಂಚೆಯೇ ಈ ಮೂವರು ರೈತರು ಎಷ್ಟು ಕ್ರೂರಿಗಳು ಎನ್ನುವುದನ್ನು ಫಾಕ್ಸ್ ನ ಲಾಯರ್ ಹೇಳಿರುತ್ತಾನೆ. ಅವನ ಮಾತನ್ನು ಕಡೆಗಣಿಸಿ ಫಾಕ್ಸ್ ಈ ರೈತರ ತೋಟಕ್ಕೆ ನುಗ್ಗುವ ಹೊಂಚು ಹಾಕುತ್ತಾನೆ.

   ಇದರ ಮಧ್ಯೆ ಫಾಕ್ಸ್ ನ ಮಗ ಆಶ್ (ಜೇಸನ್ ಶ್ವಾರ್ಟ್ಜ್ ಮನ್ ) ತಾನು ಎಲ್ಲರಿಗಿಂತ ಭಿನ್ನ ಎಂದು ತೋರಿಸಲು ತನ್ನ ಕುಟುಂಬದ ಗಮನ ಸೆಳೆಯಲು ವಿಚಿತ್ರವಾಗಿ ಏನಾದರೂ ಮಾಡುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಒಬ್ಬ ಬುದ್ಧಿವಂತ, ಒಳ್ಳೆಯ ಸ್ಪರ್ದಾಳು, ಅವನಿಗಿಂತ ಚೆನ್ನಾಗಿರುವ ಹುಡುಗನೊಬ್ಬ ಮನೆಗೆ ಬಂದರೆ ಆಶ್ ಗೆ ಏನಾಗಬಹುದು. ಹೀಗೆ ಬರುವವನೇ ಕ್ರಿಸ್ಟೋಫೆರ್ಸನ್. ಆಶ್ ನ ಮಾವನ ಮಗ. ಆಶ್ ಗೆ ಇವನ ಮೇಲೆ ಎಲ್ಲಿಲ್ಲದ ಕೋಪ. ಸ್ಕೂಲಿನಲ್ಲೂ ಎಲ್ಲರು ಕ್ರಿಸ್ಟೋಫೆರ್ಸನ್ ನನ್ನೇ ಹೊಗಳುವುದೂ ಅವನ ಸಿಟ್ಟಿಗೆ ಮತ್ತೊಂದು ಕಾರಣ.
    ಫಾಕ್ಸ್ ಮೊದಲು Walt Boggis ನ ತೋಟಕ್ಕೆ ನುಗ್ಗಿ ಕೋಳಿಗಳನ್ನು ಕದಿಯುತ್ತಾನೆ. ನಂತರ Nate Bunceನ ತೋಟಕ್ಕೆ ನುಗ್ಗಿ ಬಾತುಕೋಳಿ ಕದಿಯುತ್ತಾನೆ. ಮನೆಯಲ್ಲಿ ಇದ್ದಕಿದ್ದಂತೆ ಹೀಗೆ ಶೇಖರಣೆಗೊಳ್ಳುತ್ತಿದ್ದ ಕೋಳಿಗಳನ್ನು ನೋಡಿ ಹೆಂಡತಿಗೆ ಆಶ್ಚರ್ಯವಾದರೂ ಆಕೆ ಕೇಳದೆ ಸುಮ್ಮನಿರುತ್ತಾಳೆ. ಮೂರನೆ ಬಾರಿಗೆ Frank Beanನ ತೋಟಕ್ಕೆ ನುಗ್ಗಿ ಅವನ ದಾಸ್ತಾನಿನಲ್ಲಿದ್ದ ರುಚಿಯಾದ ಆಪಲ್ ಸೈಡರ್ ಕದಿಯುತ್ತಾನೆ. ಈ ಬಾರಿ ಹೆಂಡತಿಗೆ ಮಾಲು ಸಮೇತ ಸಿಕ್ಕಿಬೀಳುತ್ತಾನೆ. ಆಗ ಹೆಂಡತಿ ದೊಡ್ಡ ಜಗಳವಾಡಿ ಗೋಳಾಡಿದರೂ ಆಕೆಗೆ ಫಾಕ್ಸ್ ಸಮಾಧಾನ ಮಾಡಿ ಸುಮ್ಮನಾಗುತ್ತಾನೆ.
    ಅತ್ತ ಕೇವಲ ಒಂದು ನರಿಯಿಂದ ಮೋಸ ಹೋದೆವಲ್ಲ ಎಂದು ಸಿಟ್ಟುಗೊಂಡ ಮೂವರೂ ರೈತರು ಒಟ್ಟಿಗೆ ಸೇರಿ ಫಾಕ್ಸ್ ನ ಕೊಲ್ಲಲು ಅದರ ಮರದ ಬಳಿಗೆ ಬರುತ್ತಾರೆ. ಆದರೆ ಅದೃಷ್ಟವಶಾತ್ ಫಾಕ್ಸ್ ಅವರ ಗುಂಡಿಗೆ ಕೇವಲ ಬಾಲ ಕಳೆದುಕೊಳ್ಳುತ್ತಾನೆ. ಇದರಿಂದ ಗಾಬರಿಗೊಂಡ ಕುಟುಂಬ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವಷ್ಟರಲ್ಲಿ ಆ ಮೂವರು ರೈತರೂ ಆ ಮರವನ್ನೇ ಕೆಡವಲು ನಿಲ್ಲುತ್ತಾರೆ. ತಮ್ಮ ಬಳಿ ಇರುವ ಅಗೆಯುವ ಎಲ್ಲ ಮೆಷಿನುಗಳನ್ನು ತರಿಸಿ ಅಗೆಸುತ್ತಾರೆ, ಇದರಿಂದ ಮನೆ ಕಳೆದುಕೊಂಡ ಫಾಕ್ಸ್ ಗೆ ತನ್ನ ತಪ್ಪು ಅರಿವಾಗುತ್ತದೆ. ಆದರೆ ಕಾಲ ಮಿಂಚಿಯಾಗಿದೆ. ಆ ರೈತರು ಸುತ್ತ ಮುತ್ತ ಇದ್ದ ಎಲ್ಲ ಪ್ರಾಣಿಗಳಿಗೂ ತೊಂದರೆ ಕೊಡಲು ಪ್ರಾರಂಭಿಸಿದಾಗ ಆ ಎಲ್ಲ ಪ್ರಾಣಿಗಳೂ ಫಾಕ್ಸ್ ನನ್ನ ದೂಷಿಸುತ್ತಾರೆ. ಫಾಕ್ಸ್ ಕಡೆಗೆ ತಲೆ ಓಡಿಸಿ ಎಲ್ಲರನ್ನೂ ಕರೆದುಕೊಂಡು ಆ ಮೂವರು ರೈತರ ಉಗ್ರಾಣಗಳಿಗೆ ಬಿಲ ಕೊರೆದು ಇದ್ದದ್ದನ್ನೆಲ್ಲ ದೋಚುತ್ತಾನೆ.

    ಆಶ್ ಇವೆಲ್ಲದರ ಮಧ್ಯೆ ಕ್ರಿಸ್ಟೋಫೆರ್ಸನ್ ನ ಜೊತೆ ಸ್ನೇಹ ಬೆಳೆಸಿ ಈಗ ತನ್ನ ತಂದೆ ತಾಯಿಗೆ ತಾನು ಎಷ್ಟು ಧೈರ್ಯಶಾಲಿ ಎಂದು ತೋರಿಸಲು ತನ್ನ ಅಪ್ಪನ ತುಂಡಾದ ಬಾಲದಲ್ಲಿ ಟೈ ಮಾಡಿಕೊಂಡು ಓಡಾಡುತ್ತಿದ್ದ ರೈತನ ಮನೆಗೇ ನುಗ್ಗಿ ಆ ಟೈ ಕದಿಯಲು ಹೋಗಿ ರೈತನ ಹೆಂಡತಿಗೆ ಸಿಕ್ಕಿಬೀಳುತ್ತಾರೆ. ಆದರೆ ಇಬ್ಬರಲ್ಲಿ ಆಶ್ ತಪ್ಪಿಸಿಕೊಂಡರೂ ಕ್ರಿಸ್ಟೋಫೆರ್ಸನ್ ನನ್ನು ರೈತರು ಒತ್ತೆಯಾಳಾಗಿಟ್ಟುಕೊಂಡು ಫಾಕ್ಸ್ ಗೆ ಶರಣಾಗಲು ಒಂದು ಪತ್ರ ಕಳಿಸುತ್ತಾರೆ. ಇದರ ನಂತರ ಕ್ರಿಸ್ಟೋಫೆರ್ಸನ್ ನನ್ನ ಬಿಡಿಸಿ ತರಲು ನಡೆಯುವ ಪ್ರಾಣಿ ಮತ್ತು ಮನುಷ್ಯರ ಯುದ್ಧ ತುಂಬಾ ಹಾಸ್ಯಭರಿತವಾಗಿದೆ. ಕಡೆಗೆ ಫಾಕ್ಸ್ ಎಲ್ಲರನ್ನು ಒಟ್ಟು ಮಾಡಿ ಸುಖವಾಗಿ ಬಾಲವಿಲ್ಲದೆ ಜೀವನ ನಡೆಸುತ್ತಾನೆ ಎನ್ನುವಲ್ಲಿಗೆ ಕಥೆ ಮುಗಿಯುತ್ತದೆ.

    ಒಮ್ಮೊಮ್ಮೆ ಕೇವಲ ನಮ್ಮೊಬ್ಬರ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹೋಗಿ ಇತರರನ್ನು ತೊಂದರೆಗೆ ಸಿಕ್ಕಿಸಬಾರದು ಎಂಬುದು ನೀತಿಯಾದರೂ ಈ ಸಿನಿಮಾದಲ್ಲಿ ಇರುವ ಹಾಸ್ಯದಲ್ಲಿ ಎಲ್ಲವನ್ನೂ ಮರೆಯುತ್ತೀರಿ. Wes Anderson ಈ ಚಿತ್ರವನ್ನು ನಿರ್ದೇಶಿಸಿದ್ದು ಚಿತ್ರದ ಒಂದೊಂದು ಫ್ರೇಮ್ನಲ್ಲೂ ಅವರ ಸೂಕ್ಷ್ಮ ಕೆಲಸ ಮತ್ತು ಪರ್ಫೆಕ್ಷನ್ ಎದ್ದು ಕಾಣುತ್ತದೆ. ಇವರ ಎಲ್ಲ ಸಿನಿಮಾಗಳಲ್ಲೂ ಒಂದು ಬಣ್ಣವನ್ನು ಪ್ರಧಾನವಾಗಿಟ್ಟುಕೊಂಡು ಮಾಡುತ್ತಾರೆ ಮತ್ತು ಬಹುತೇಕ ಫ್ರೇಮಿನಲ್ಲಿ symmetry ಇರುತ್ತದೆ.

- ವಿಶ್ವನಾಥ್


























Tuesday, 7 February 2017

ಭೂತಯ್ಯನ‌ ಮಗ‌ ಅಯ್ಯು- ಇಂಗ್ಲಿಷ್ ಸಬ್ ಟೈಟಲ್



ಗೆಳೆಯರೆ,

 ಕನ್ನಡದಲ್ಲಿ ಮೂಡಿ ಬಂದ ಅನೇಕ ಸಿನಿಮಾಗಳು ಬೇರೆ ಭಾಷೆಯ ಜನರೊಟ್ಟಿಗೆ ಹಂಚಿಕೊಳ್ಳಲು ಅವರಿಗೆ ಭಾಷೆ ತೊಡಕಾದ ಅನೇಕ ಸಂದರ್ಭಗಳು ನಿಮಗೆ ಅನುಭವವಾಗಿರಬಹುದು. ಚಲನಚಿತ್ರಗಳನ್ನು ನನ್ನಂತೆಯೇ ಇಷ್ಟಪಟ್ಟು ನೋಡುವ ನನ್ನ ಸ್ನೇಹಿತರೊಬ್ಬರಿಗೆ ನಾನು ತುಂಬಾ ಇಷ್ಟ ಪಡುವ ಚಿತ್ರಗಳಲ್ಲೊಂದಾದ " ಭೂತಯ್ಯನ ಮಗ ಅಯ್ಯು " ತೋರಿಸಲು ಇಂಗ್ಲಿಷ್ ಸಬ್ ಟೈಟಲ್ ಬರೆದೆ. ಅವರಂತೆಯೇ ಕನ್ನಡ ಬಾರದವರಿಗೆ ಮತ್ತು ಕನ್ನಡ ಕಲಿಯುತ್ತಿರುವ ಅನೇಕರಿಗೆ ಸಹಾಯವಾಗಲೆಂದು ನಾನು ಮಾಡಿದ ಸಬ್ ಟೈಟಲ್ ಅನ್ನು ಇಲ್ಲಿ ಶೇರ್ ಮಾಡಿದ್ದೇನೆ.

ಫೈಲ್ ವಿವರ:
extension: .srt
fps: 29.97

ಡೌನ್ಲೋಡ್ ಲಿಂಕ್ : http://www.4shared.com/office/MpxV_Nbdba/Bhootayyana_Maga_Ayyu.html



Monday, 6 February 2017

ಗುಡ್ ಮಾರ್ನಿಂಗ್ ವಿಯೆಟ್ನಾಮ್


IMDb : http://www.imdb.com/title/tt0093105/?ref_=nv_sr_1



   ನಮಸ್ಕಾರ. ಈ ನನ್ನ ಬ್ಲಾಗ್, ನಾನು ನೋಡಿರುವ ಚಲನಚಿತ್ರಗಳ ಬಗ್ಗೆ ಪರಿಚಯ ಮಾಡಿಕೊಡುವ ಪ್ರಯತ್ನ. ನಾನು ಯಾರೂ ನೋಡದಿರುವ ಚಿತ್ರವನ್ನೇನೂ ನೋಡದಿದ್ದರೂ ಸದಭಿರುಚಿಯ ಚಲನಚಿತ್ರಗಳನ್ನು ಬಹಳ ಇಷ್ಟ ಪಟ್ಟು ನೋಡುವ ಮಂದಿಗೆ ನನ್ನ ಬುಟ್ಟಿಯಲ್ಲಿ ಶೇಖರಿಸಿರುವ ಚಿತ್ರಗಳ ಮಾಲೆಯನ್ನು ಹಂಚಿಕೊಳ್ಳುವ ಒಂದು ವಿನಮ್ರ ಪ್ರಯತ್ನ.

   ನನ್ನ ಮೊದಲ ಬ್ಲಾಗ್ ನಲ್ಲಿ ನನ್ನ ನೆಚ್ಚಿನ ನಟ ರಾಬಿನ್ ವಿಲಿಯಮ್ಸ್ (Robin Williams) ನ ಚಿತ್ರವಾದ "ಗುಡ್ ಮಾರ್ನಿಂಗ್ ವಿಯೆಟ್ನಾಂ " ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ.  ೧೯೮೭ರಲ್ಲಿ ತೆರೆಕಂಡ ಈ ಸಿನಿಮಾ ವಿಯೆಟ್ನಾಂ ಯುಧ್ಧ ಕಾಲದಲ್ಲಿ ಸೈನಿಕರನ್ನು ಹುರಿದುಂಬಿಸಲು ಬರುವ ಒಬ್ಬ ರೇಡಿಯೋ ಜಾಕಿಯ ಕುರಿತಾದ ಕಥೆ.
  
   ವಿಯೆಟ್ನಾಂ ಯುಧ್ಧದ ಭೀಕರತೆ ಕಂಡು ಬೇಸತ್ತು ಹೋಗಿದ್ದ ಸೈನಿಕರಲ್ಲಿ ಕೊಂಚ ಉತ್ಸಾಹ ಮೂಡಿಸಲು ಅಲ್ಲಿ ನಿಯೋಜನೆಗೊಂಡಿದ್ದ ಒಬ್ಬ ಜನರಲ್ ತಾನು ಬೇರೆಲ್ಲೊ ಕೇಳಿದ ರೇಡಿಯೋ ಕಾರ್ಯಕ್ರಮ ತುಂಬಾ ಹಾಸ್ಯಭರಿತವಾದದ್ದು ಎಂದೆನಿಸಿ ಆ ಕಾರ್ಯಕ್ರಮದ ರೇಡಿಯೋ ಜಾಕಿಯನ್ನು ವಿಯೆಟ್ನಾಂಗೆ ಕರೆಸುತ್ತಾನೆ. ಹಾಗೆ ಬರುವವನೇ ಆರ್. ಜೆ  ಏಡ್ರಿಯನ್ ಕ್ರಾನವರ್ (Adrian Cronauer).

   ಏಡ್ರಿಯನ್ ವಿಯೆಟ್ನಾಂಗೆ ಆಗಮಿಸಿದಾಗ ಅಲ್ಲಿನ ಉಷ್ಣ ವಾತಾವರಣಕ್ಕೇ ಸುಸ್ತು ಹೊಡೆದಾಗ ಅವನ ಸಹಾಯಕನಾಗಿ ನಿಯೋಜನೆಗೊಂಡಿದ್ದ ಎಡ್ವರ್ಡ್ ಗಾರ್ಲಿಕ್ ( ಆತನ ಪಾತ್ರದಲ್ಲಿ ಫಾರೆಸ್ಟ್ ವಿಟ್ಟೇಕರ್ ) ನಿಧಾನವಾಗಿ ಅಲ್ಲಿನ ಸಂಸ್ಕೃತಿ , ಏಡ್ರಿಯನ್ ಮರೆತೇಹೋದಂತಿದ್ದ ಮಿಲಿಟರಿ ಶಿಸ್ತು, ಕಾರ್ಯಕ್ರಮ ನಡೆಸುವ ಕ್ರಮ ಮತ್ತು ಆತನ ಹಿರಿಯ ಅಧಿಕಾರಿಗಳು  ಎಲ್ಲವನ್ನು ಪರಿಚಯಿಸುತ್ತಾನೆ.

   ಮಿಲಿಟರಿ ಜಾಯಮಾನಕ್ಕೇ ಸೇರದವನಂತೆ ತುಂಬಾ ಹಾಸ್ಯಭರಿತವಾಗಿ ವಿವಾದಿತ ವಿಷಯಗಳನ್ನೂ ಒಳಗೊಂಡಂತೆ ಕಾರ್ಯಕ್ರಮ ನಡೆಸುತ್ತ ಎಲ್ಲ ಸೈನಿಕರ ಪ್ರಶಂಸೆ ಗಳಿಸುತ್ತಾನೆ. ಅವನ ಈ ನಡವಳಿಕೆ ಹಿರಿಯ ಅಧಿಕಾರಿಗಳಿಗೆ ಇಷ್ಟವಾಗದೆ ಜನರಲ್ ಬಳಿ ದೂರು ಹೇಳಿದರೂ ಜನರಲ್ ಅದನ್ನೆಲ್ಲಾ ತಳ್ಳಿಹಾಕುತ್ತ ಅವನಿಗೆ ಬೆಂಬಲ ಕೊಡಲು ಮುಂದಾಗುತ್ತಾನೆ.

 ಇದೆಲ್ಲರದರ ಮಧ್ಯೆ ಏಡ್ರಿಯನ್ ಹಿಂದೆ ತಾನು ನೋಡಿದ ಒಂದು ವಿಯೆಟ್ನಾಂ ಹುಡುಗಿಯನ್ನು ಮತ್ತೆ ನೋಡಿ ಆಕೆ ಹೋಗುತ್ತಿದ್ದ ಇಂಗ್ಲಿಷ್ ಕ್ಲಾಸ್ ರೂಮಿನವರೆಗೂ ಹಿಂಬಾಲಿಸುತ್ತ ಬರುತ್ತಾನೆ. ಅಲ್ಲಿ ಪಾಠ ಹೇಳಿಕೊಡುತ್ತಿದ್ದ ಒಬ್ಬ ಅಮೇರಿಕನ್ ಸೈನಿಕನನ್ನು ಪುಸಲಾಯಿಸಿ ತಾನೇ ಪಾಠ ಮಾಡಲು ನಿಲ್ಲುತ್ತಾನೆ. ಆಕೆಗೆ ಸನಿಹವಾಗಲು ಆಕೆಯ ತಮ್ಮನೊಂದಿಗೆ ಸ್ನೇಹ ಬೆಳೆಸುತ್ತಾನೆ. ಹೀಗೇ ಏಡ್ರಿಯನ್ ನ ಜೀವನ ಸಾಗುತ್ತಿರುವಾಗ ತಾನು ಸದಾ ಕುಡಿಯುತ್ತಿದ್ದ ಬಾರ್ ನಲ್ಲಿ ಸ್ಪೋಟವಾಗಿ ಅದರಿಂದ ಕೂದಲೆಳೆಯಲ್ಲಿ ತಪ್ಪಿಸಿಕೊಳ್ಳುತ್ತಾನೆ. ಇದರಿಂದ ವಿಚಲಿತನಾದ ಆದ ತನ್ನ ರೇಡಿಯೋ ಕಾರ್ಯಕ್ರಮದಲ್ಲಿ ಇದರ ಬಗ್ಗೆ ಪ್ರಸ್ತಾಪಿಸಿ ಅಮಾನತುಗೊಳ್ಳುತ್ತಾನೆ. ಅಮಾನತಾದ ಅವಧಿಯಲ್ಲಿ ವಿಯೆಟ್ನಾಂ ಹುಡುಗಿಯ ಬಗ್ಗೆ ತಿಳಿಯಲು ಆಕೆಯ ತಮ್ಮನೊಟ್ಟಿಗೆ ಅವರ ಹಳ್ಳಿಗೆ ತೆರಳುತ್ತಾನೆ. ಅಲ್ಲಿ ವಿಯೆಟ್ನಾಂ ನ ಹಳ್ಳಿಯ ಜೀವನ ಕಂಡು ಅವರೊಟ್ಟಿಗೆ ಆನಂದಿಸುತ್ತಾ ಇರುವಾಗ ಅವನ ಮತ್ತು ಆ ಹುಡುಗಿಯ ನಡುವೆ ಸ್ನೇಹವೂ ಕೂಡ ಸಾಧ್ಯವಿಲ್ಲ ಎಂದು ಆ ಹುಡುಗಿ ಹೇಳಿದಾಗ ಏಡ್ರಿಯನ್ ಗೆ ಆಕೆ ಹೇಳುತ್ತಿದ್ದುದು ನಿಜವೆನಿಸಿ ಮರಳುತ್ತಾನೆ.

  ಅತ್ತ ಅವನ ಕಾರ್ಯಕ್ರಮ ವಂಚಿತರಾದ ಅನೇಕ ಸೈನಿಕರು ಆತನ ಬದಲಿಗೆ ಕಾರ್ಯಕ್ರಮ ನಡೆಸಿಕೊಡುತ್ತಿದವನಿಂದ ಬೇಸರಗೊಂಡು ಏಡ್ರಿಯನ್ ನ ಕಾರ್ಯಕ್ರಮ ಕೋರಿ ಪತ್ರಗಳನ್ನು ಬರೆಯುತ್ತಾರೆ. ಇದನ್ನು ನೋಡಿದ ಜನರಲ್ ಏಡ್ರಿಯನ್ ಮಾಡಿದ ತಪ್ಪು ತುಂಬಾ ಸಣ್ಣದು ಎಂದೆನಿಸಿ ಆತನಿಗೆ ಮತ್ತೆ ಕಾರ್ಯಕ್ರಮ ನಡೆಸಲು ಅಪ್ಪಣೆ ಕೊಡುತ್ತಾನೆ. ಆದರೆ ಇದರಿಂದ ಅವಮಾನ ಅನುಭವಿಸಿದ ಆತನ ಹಿರಿಯ ಅಧಿಕಾರಿ ಆತ ಫೀಲ್ಡ್ ನಲ್ಲಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿ ಅಪ್ಪಣೆ ಕೋರಿದಾಗ ಬೇಕೆಂದೇ ಸುರಕ್ಷಿತವಲ್ಲದ ಜಾಗಕ್ಕೆ ಹೋಗಲು ಅಪ್ಪಣೆ ಕೊಡುತ್ತಾನೆ. ಹೀಗೆ ಗೊತ್ತಿಲ್ಲದೇ ಹೋದ ಎಡ್ರಿಯನ್ ಮತ್ತು ಎಡ್ವರ್ಡ್ ಲ್ಯಾಂಡ್ ಮೈನ್ ಗೆ ಸಿಕ್ಕಿ ಜೀಪು ಕಳೆದುಕೊಳ್ಳುತ್ತಾರೆ. ಕಾಡಿನಲ್ಲಿ ನಡೆಯುತ್ತಾ ವಿಯೆಟ್ ಕಾಂಗ್ (viet cong) ನವರಿಗೆ ಸಿಕ್ಕಿಬೀಳುತ್ತಾರೆ. ಇಷ್ಟರಲ್ಲಿ ಅಂದು ಕ್ಲಾಸಿಗೆ ಏಡ್ರಿಯನ್ ಬರದಿದ್ದನ್ನು ನೋಡಿ ಗಾಬರಿಗೊಂಡ ವಿಯೆಟ್ನಾಂ ಹುಡುಗ ಏಡ್ರಿಯನ್ ನ ಬೇಸ್ ಗೆ ಹೋಗಿ ವಿಚಾರಿಸಿದಾಗ ಆತ ಹೋಗಿರುವ ಜಾಗದ ಬಗ್ಗೆ ಸುಳಿವು ಸಿಕ್ಕಿ ಅವರು ಹೋದ ಕಡೆಗೆ ದೌಡಾಯಿಸುತ್ತಾನೆ. ಹೇಗೋ ಹೋದ ಅವರಿಬ್ಬರನ್ನು ಬದುಕಿಸಿ ಕರೆತರುತ್ತಾನೆ.

  ಆದರೆ ಇಷ್ಟು ಮಾಹಿತಿ ಸಿಕ್ಕ ಆತನ ಹಿರಿಯ ಅಧಿಕಾರಿ ಏಡ್ರಿಯನ್ ಒಡನಾಟದಲ್ಲಿ ಇರುವ ಆ ಹುಡುಗ ವಿಯೆಟ್ ಕಾಂಗ್ ಗೆ ಸೇರಿದವ ಎಂಬ ವಿಷಯ ಕಲೆ ಹಾಕಿ ಏಡ್ರಿಯನ್ ನಂತಹ ಶತ್ರುಗಳ ಜೊತೆ ಒಡನಾಟ ಇರುವವನಿಗೆ ಮತ್ತೆ ಅಲ್ಲಿ ಕಾರ್ಯಕ್ರಮ ನಡೆಸಲು ಅಪ್ಪಣೆ ನೀಡದಂತೆ ಜನರಲ್ ಗೆ ದೂರು ನೀಡುತ್ತಾನೆ. ಆ ಹುಡುಗ ವಿಯೆಟ್ ಕಾಂಗ್ ಗೆ ಸೇರಿದವ ಎಂದು ಗೊತ್ತಾದ ಏಡ್ರಿಯನ್ ಗೂ ಸಿಟ್ಟು ಬಂದು ಆತನನ್ನು ಹುಡುಕಿ ಆತನೊಟ್ಟಿಗೆ ಆತ ಮಾಡಿದ ಮೋಸದ ಬಗ್ಗೆ ಮಾತನಾಡಲು ಹೋದಾಗ ಆ ಹುಡುಗ ಹೇಳುವ ಮಾತುಗಳೂ ಸತ್ಯ ಎನಿಸಿ ಯುದ್ಧದ ಬಗ್ಗೆ ಬೇಸರಗೊಂಡು ಕೊನೆಯ ಬಾರಿ ತನ್ನ ಇಂಗ್ಲಿಷ್ ಕ್ಲಾಸ್ ವಿದ್ಯಾರ್ಥಿಗಳ ಜೊತೆ ಒಂದು ಬೇಸ್ ಬಾಲ್ ಆಟವಾಡಿ, ತನ್ನ ಅಭಿಮಾನಿಗಳಿಗಾಗಿ ಒಂದು ಕಡೆಯ ಕಾರ್ಯಕ್ರಮ ರೆಕಾರ್ಡ್ ಮಾಡಿಟ್ಟು ಆ ಊರಿನಿಂದ ಹೊರಡುತ್ತಾನೆ.

  ಹಾಸ್ಯ ಚಿತ್ರ ಮತ್ತು ಯುಧ್ಧ ಸಂಬಂಧಿತ ಚಿತ್ರಗಳ ಸಾಲಿಗೆ ಸೇರುವ ಈ ಚಿತ್ರದಲ್ಲಿ ರಾಬಿನ್ ವಿಲಿಯಮ್ಸ್ ಅಭಿನಯ ಅಮೋಘವಾಗಿದೆ.


  - ವಿಶ್ವನಾಥ್